ಇದು ಚಿಲ್ಲರೆ ಸಮಸ್ಯೆ ಅಲ್ಲ
ಯೂಟ್ಯೂಬ್ನಲ್ಲಿ ಹಾಕಿರುವ ಪ್ರಶಸ್ತಿ ವಿಜೇತ ಚಿತ್ರವೊಂದರ ಪ್ರೊಮೋ ನೋಡಿದ...

ರಾಜ್ಯಪ್ರಶಸ್ತಿಯಾದರೇನು ಶಿವಾ,
ರಾಷ್ಟ್ರಪ್ರಶಸ್ತಿಯಾದರೇನು ಶಿವಾ!
ಯೂಟ್ಯೂಬ್ನಲ್ಲಿ ಹಾಕಿರುವ ಪ್ರಶಸ್ತಿ ವಿಜೇತ ಚಿತ್ರವೊಂದರ ಪ್ರೊಮೋ ವಿಡಿಯೋ ನೋಡಿದ ಸಿನಿಮಾಪ್ರೇಮಿಗಳೊಬ್ಬರ (ಬಹುಶಃ ಅನಿವಾಸಿ ಭಾರತೀಯರು) ಕಾಮೆಂಟ್ ಹೀಗಿದೆ... 'ಡಿವಿಡಿ ಏನಾದ್ರೂ ಬಿಟ್ಟಿದೀರಾ?, ಇಂಡಿಯಾದಲ್ಲಿ ಇಲ್ಲದೇ ಇರೋರು ಹೇಗೆ ನೋಡೋದು?'.
ಪಾಪ ಅವರಿಗೇನು ಗೊತ್ತು, ಇಂಥ ಚಿತ್ರಗಳು ಇಂಡಿಯಾದಲ್ಲಿ ಇರೋರಿಗೂ ನೋಡೋಕೆ ಸಿಗೊಲ್ಲ ಎಂದು...
ಸಾಮಾನ್ಯವಾಗಿ ಸಿನಿಮಾ ಒಂದು ಬಿಡುಗಡೆಯಾಗಿ ಪ್ರದರ್ಶನಗೊಂಡು ಗೆಲುವು ಅಥವಾ ಸೋಲನ್ನು ಕಂಡಮೇಲೆ, ಪ್ರಶಸ್ತಿ ಆಯ್ಕೆಯ ಸಮಯದಲ್ಲಿ, ಆಯ್ಕೆ ಸಮಿತಿ, ಈ ವರ್ಷ ಇಂಥದೊಂದು ಚಿತ್ರ ಬಿಡುಗಡೆಯಾಗಿದೆ ಎಂದು ಗಮನಿಸಿ ಅದಕ್ಕೆ ಪ್ರಶಸ್ತಿ ಕೊಟ್ಟರೆ ಅದು ಇಂಥ ಪ್ರಶಸ್ತಿಗಳ ಸಾರ್ಥಕ್ಯ. ಆದರೆ ಇಲ್ಲಿ ಆಗುವುದೇ ಬೇರೆ, ಒಂದು ಸಿನಿಮಾ ಯಾರಿಗೂ ಗೊತ್ತಾಗದಂತೆ ತಯಾರಾಗುತ್ತದೆ.
ಅದು ಜನಸಾಮಾನ್ಯರ ವೀಕ್ಷಣೆಗೆ ಬಿಡುಗಡೆಯಾಗುವ ಮಾತು ಹಾಗಿರಲಿ. ಈ ಚಿತ್ರವನ್ನು ಮಾಧ್ಯಮದವರಿಗೂ ತೋರಿಸದಂತೆ ಎಚ್ಚರವಹಿಸಿ, ತಮ್ಮ ಆಪ್ತವಲಯದಲ್ಲೇ ಸಿನಿಮಾ ನೋಡಿ ಆನಂದಿಸಿ, ಅದನ್ನು ಪ್ರಶಸ್ತಿ ಸಮಿತಿಗೆ ಕಳಿಸಿ, ಅಲ್ಲಿಂದ ಪ್ರಶಸ್ತಿ ದಕ್ಕಿಸಿಕೊಂಡು ನಂತರ ಬಂದು, 'ನೋಡಿ ನಮ್ಮ ಸಿನಿಮಾಕ್ಕೆ ಪ್ರಶಸ್ತಿ ಸಿಕ್ಕಿದೆ, ಹಾಗಾಗಿ ಇದನ್ನು ನೀವು ಒಳ್ಳೆಯ ಸಿನಿಮಾ ಎಂದು ಒಪ್ಪಿಕೊಳ್ಳಬೇಕು' ಎಂಬ ನಿರ್ದೇಶನ ನೀಡಲಾಗುತ್ತದೆ. ಈ ವರ್ಷದ ರಾಷ್ಟ್ರಪ್ರಶಸ್ತಿಯೂ ಕೂಡ ಅಂಥದ್ದೇ ಒಂದು ಚಿತ್ರಕ್ಕೆ ಲಭಿಸಿದೆ.
ಅದರ ಜೊತೆಗೆ, ಈ ಪ್ರಶಸ್ತಿ ಪ್ರತಿವರ್ಷದಂತೆ ಈ ಬಾರಿಯೂ ಒಂದಷ್ಟು ಅಸಮಾಧಾನಗಳನ್ನು ಹುಟ್ಟುಹಾಕಿದೆ.
ಅದು ರಾಜ್ಯಪ್ರಶಸ್ತಿಯೇ ಆಗಲಿ, ರಾಷ್ಟ್ರಪ್ರಶಸ್ತಿಯೇ ಆಗಿರಲಿ, ಪ್ರಶಸ್ತಿ ಪ್ರದಾನ ಸಮಾಚಾರ ಎಂದರೆ ಅಲ್ಲಿ ವಿವಾದಗಳೇ ಪ್ರಧಾನ ಎಂಬುದು ಚಿತ್ರರಂಗದ ಸಿನಿಕರ ಮಾತು. ಅದು ಈ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ರಾಷ್ಟ್ರಪ್ರಶಸ್ತಿಗಳ ವಿಷಯದಲ್ಲೂ ಮುಂದುವರಿದು ಈ ವಿವಾದಗಳ ಸಂಪ್ರದಾಯವನ್ನು ಎತ್ತಿಹಿಡಿದಿದೆ.
ರಾಜ್ಯಪ್ರಶಸ್ತಿಯ ವಿಷಯದಲ್ಲೇ ಹಲವಾರು ಅಸಮಾಧಾನದ ವಿಷಯಗಳ ಬಗ್ಗೆ ಮಾತುಕತೆ ನಡೆಯುತ್ತಿರುವ ವೇಳೆ ಈಗ ಆ ಚರ್ಚೆ ರಾಷ್ಟ್ರಮಟ್ಟಕ್ಕೇರಿದೆ ಎನ್ನಬಹುದು. ಕನ್ನಡದ ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ಸಂಕಷ್ಟದಲ್ಲಿರುವ ಚಿಲ್ಲರೆ ಅಂಗಡಿ ವ್ಯಾಪಾರಿಗಳ ಬಗೆಗಿನ, ಪಿ.ಶೇಷಾದ್ರಿ ನಿರ್ದೇಶನದ 'ಭಾರತ್ ಸ್ಟೋರ್ಸ್' ಚಿತ್ರಕ್ಕೆ ಈ ಬಾರಿಯ ರಾಷ್ಟ್ರಪ್ರಶಸ್ತಿ ದೊರೆತಿದೆ. ಆದರೆ ಈ ಪ್ರಶಸ್ತಿಯ ಆಯ್ಕೆಯ ನಂತರ ವ್ಯಕ್ತವಾಗುತ್ತಿರುವ ವಿರೋಧವನ್ನು ಮಾತ್ರ 'ಚಿಲ್ಲರೆ ಸಮಸ್ಯೆ' ಎಂದು ಪರಿಗಣಿಸುವುದು ಕಷ್ಟ.
ಈ ವರ್ಷದ ರಾಷ್ಟ್ರಪ್ರಶಸ್ತಿಯ ಕೊನೆಯ ಸುತ್ತಿನಲ್ಲಿ ಕನ್ನಡ ಚಿತ್ರಗಳ ಮೌಲ್ಯವನ್ನು ನಿರ್ಧರಿಸಿದ್ದು ನಿರ್ದೇಶಕ ಕೆಎನ್ಟಿ ಶಾಸ್ತ್ರಿ ಅವರು. ಹಾಗೆ ನೋಡಿದರೆ ಅಂತಿಮ ಸುತ್ತಿನ ತೀರ್ಪುಗಾರರಾಗಿ ಶಾಸ್ತ್ರಿ ಅವರು ಸೇರಿಕೊಂಡಿದ್ದು ಕೂಡ ಅಂತಿಮ ಕ್ಷಣದಲ್ಲೇ. ಇದಕ್ಕೂ ಮುಂಚೆ ಈ ಸ್ಥಾನದಲ್ಲಿದ್ದ 'ಕನ್ನಡ' ಚಿತ್ರಗಳ ನಿರ್ದೇಶಕ ಸಿ.ವಿ. ಶಿವಶಂಕರ್ ಅವರ ಆರೋಗ್ಯ ಹದಗೆಟ್ಟ ಕಾರಣ ಶಾಸ್ತ್ರಿಗಳು ಈ ಜಾಗಕ್ಕೆ ಬಂದಿದ್ದಾರೆ. ಆದರೆ ಶಾಸ್ತ್ರಿ ಅವರಿಂದ ಆರೋಗ್ಯಕರ ಪ್ರಶಸ್ತಿಗಳ ಆಯ್ಕೆ ಆಗಿದೆಯೇ ಎಂಬುದು ಈಗ ಎದ್ದಿರುವ ಪ್ರಶ್ನೆ.
ಭಾರತ್ ಸ್ಟೋರ್ಸ್ ಚಿತ್ರಕ್ಕೆ ಪ್ರಶಸ್ತಿ ಮತ್ತು ಅದರಲ್ಲಿನ ದತ್ತಣ್ಣ ಅವರ ಅಭಿನಯಕ್ಕಾಗಿ ವಿಶೇಷ ಪ್ರಮಾಣ ಪತ್ರ ಇವೆರಡು ಈ ವರ್ಷದ ರಾಷ್ಟ್ರಪ್ರಶಸ್ತಿಯಲ್ಲಿ ಕನ್ನಡಿಗರಿಗೆ ದಕ್ಕಿರುವ ಆಸ್ತಿಗಳು. ಪ್ರಶಸ್ತಿ ನಿರ್ಧರಿಸಿದ ಶಾಸ್ತ್ರಿ ಅವರ ಒಂದು ಹೇಳಿಕೆ ಹೀಗಿದೆ 'ಈ ವರ್ಷದ ಕನ್ನಡ ಚಿತ್ರಗಳಲ್ಲಿ ಪ್ರಶಸ್ತಿಗೆ ಅರ್ಹ ಎನಿಸಿಕೊಂಡ ಸರಿಯಾದ ಚಿತ್ರಗಳೇ ಇರಲಿಲ್ಲ'!
ಈ ಬಾರಿಯ ರಾಷ್ಟ್ರಪ್ರಶಸ್ತಿಯ ಸುತ್ತಿನಲ್ಲಿದ್ದ ಹಲವು ಭರವಸೆಯ ಹೊಸ ಮುಖಗಳ ಹೊಸ ಚಿತ್ರಗಳ ಪಟ್ಟಿಯನ್ನು ನೋಡಿ, 'ವಾಟ್ಸ್ ಇನ್ ಸ್ಟೋರ್' ಎಂದು ಕಾದು ಕುಳಿತವರಿಗೆ ಸಿಕ್ಕಿದ್ದು ಕೇವಲ 'ಭಾರತ್ ಸ್ಟೋರ್ಸ್'. ಆದರೆ ಪ್ರಶಸ್ತಿ ಸುತ್ತಿನಲ್ಲಿದ್ದ 'ಎದೆಗಾರಿಕೆ', 'ಕಳವು', 'ತಲ್ಲಣ', 'ಕಾರಣಿಕ ಶಿಶು' ಮುಂತಾದ ಅನೇಕ ಚಿತ್ರಗಳ ಬಗ್ಗೆ ಒಳ್ಳೆಯ ಮಾತುಗಳೇ ಕೇಳಿಬಂದಿದ್ದವು. ಸ್ವತಃ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಭಾರತ್ ಸ್ಟೋರ್ಸ್ ಗಿಂತಬೇರೊಂದು ಚಿತ್ರದ ಬಗ್ಗೆ ಒಲವು ಹೊಂದಿದ್ದರು ಎನ್ನುವ ಮಾತುಗಳೂ ಕೇಳಿಬಂದಿವೆ. ಹಾಗಿದ್ದೂ ಶಾಸ್ತ್ರಿ ಅವರಿಗೆ ಕೇವಲ ಬಸಂತ್ಕುಮಾರ್ ಪಾಟೀಲರ 'ಭಾರತ್ ಸ್ಟೋರ್ಸ್' ಬಿಟ್ಟು ಇನ್ಯಾವ ಚಿತ್ರಗಳೂ ಯೋಗ್ಯವಾಗಿಲ್ಲ ಎನಿಸಿರುವುದು ನಿಜಕ್ಕೂ ಪಾಟೀಸವಾಲು ಹಾಕಬಹುದಾದ ಚರ್ಚೆಯ ವಿಷಯ. ಹೀಗಾಗಿ, ಎಲ್ಲರೂ ಈ ಬಾರಿ ಕನ್ನಡ ಚಿತ್ರಗಳಿಗೆ ಹಲವು ಪ್ರಶಸ್ತಿಗಳನ್ನು ನಿರೀಕ್ಷಿಸುತ್ತಿದೆವು ಎಂದು ಹೇಳಿರುವಾಗ ಶಾಸ್ತ್ರಿ ಅವರ 'ಪ್ರಶಸ್ತಿಗೆ ಯೋಗ್ಯವಾದ ಚಿತ್ರಗಳೇ ಇರಲಿಲ್ಲ' ಎಂಬ ಹೇಳಿಕೆಗೆ ಈಗ ವಿರೋಧ ವ್ಯಕ್ತವಾಗುತ್ತಿದೆ.
ಅಲ್ಲದೆ 'ಭಾರತ್ ಸ್ಟೋರ್ಸ್' ಚಿತ್ರ ದತ್ತಣ್ಣ ಅವರ ಅಭಿನಯಕ್ಕಾಗಿ ಮಾತ್ರ ಸ್ಫರ್ಧೆಯಲ್ಲಿತ್ತು. ಆದರೆ ಶಾಸ್ತ್ರಿ ಅವರ ಆಗಮನವಾದ ನಂತರ ಈ ಚಿತ್ರಕ್ಕೂ ಪ್ರಶಸ್ತಿ ನೀಡುವ ವಿಷಯಕ್ಕೆ ಮತ್ತೆ ಜೀವಬಂತು ಎನ್ನುವವರೂ ಇದ್ದಾರೆ. ಅವರ ಈ ಅನಿಸಿಕೆಗೆ ಕಾರಣ ಶಾಸ್ತ್ರಿ ಅವರ ನಿರ್ದೇಶನದ 'ಸರಸಮ್ಮನ ಸಮಾಧಿ' ಚಿತ್ರಕ್ಕೆ ಈ ವರ್ಷದ ರಾಜ್ಯಪ್ರಶಸ್ತಿ ಸಂದಿದೆ. 'ಸರಸಮ್ಮನ ಸಮಾಧಿ'ಯ ನಿರ್ಮಾಪಕರಾದ ಬಸಂತ್ಕುಮಾರ್ ಪಾಟೀಲ್ ಅವರೇ 'ಭಾರತ್ ಸ್ಟೋರ್ಸ್'ಗೂ ನಿರ್ಮಾಪಕರು. ಹಾಗಾಗಿ ಈ ನಿರ್ಮಾಪಕ, ನಿರ್ದೇಶಕರ ಆತ್ಮೀಯತೆ ಪ್ರಶಸ್ತಿಯ ಆಯ್ಕೆಯ ವಿಷಯದಲ್ಲಿ ಮೂಗುತೂರಿಸಿದೆಯೇ ಎಂಬ ಅನುಮಾನವೂ ಮೂಡುವುದು ಸಹಜ. ಆದರೂ ಅದನ್ನು ಒತ್ತಟ್ಟಿಗಿಟ್ಟು ನೋಡಿದರೆ ಕನ್ನಡ ಚಿತ್ರಗಳಿಗೆ ಅನ್ಯಾಯವಾಗಿದೆ ಎಂಬ ಅನಿಸಿಕೆಯಂತೂ ಗಂಭೀರವಾಗಿದೆ.
ಈ ಎಲ್ಲ ಅನುಮಾನಗಳಿಗೆ ಪುಷ್ಟಿ ನೀಡುವಂತೆ ಈ ಮುಂಚೆ ಅಂತಿಮ ತೀರ್ಪುಗಾರರು ಎನಿಸಿಕೊಂಡಿದ್ದ ಸಿ.ವಿ. ಶಿವಶಂಕರ್ ಮತ್ತು ಮೊದಲ ಸುತ್ತಿನ ತೀರ್ಪುಗಾರರಾಗಿದ್ದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಭಿಪ್ರಾಯ ಹೀಗಿದೆ..
ನಾನು ಭಾರತ್ ಸ್ಟೋರ್ಸ್, ಅಲೆಗಳು, ಕಾರಣಿಕ ಶಿಶು ಚಿತ್ರಗಳನ್ನು ನೋಡಿದ್ದೆ. ಅದಾದ ನಂತರ ನನ್ನ ಆರೋಗ್ಯ ಹದಗೆಟ್ಟಿತ್ತು. ಆದರೆ ನಾನು ಪ್ರಜ್ಞಾಶೂನ್ಯನಾಗಿರಲಿಲ್ಲ. 15ನೇ ತಾರೀಖಿನವರೆಗೆ ನಾನು ಆರೋಗ್ಯವಾಗಿಯೇ ಇದ್ದೆ. ಆದರೆ ಅದಾದ ನಂತರ ನನಗೆ ಪ್ರಶಸ್ತಿ ಆಯ್ಕೆಯ ಯಾವ ವಿವರಗಳೂ ಲಭ್ಯವಾಗಿಲ್ಲ. ನಾನು ರಿಪೋರ್ಟ್ ಕೊಡುವುದು ಬಾಕಿ ಇತ್ತು. ಆದರೆ ಇದ್ದಕ್ಕಿದ್ದಂತೆ ಪ್ರಶಸ್ತಿಯ ವಿವರಗಳನ್ನು ನಾನು ಪತ್ರಿಕೆಗಳಲ್ಲಿ ನೋಡಬೇಕಾಯ್ತು. ನಾನು ಈ ಮುಂಚೆ ನೋಡಿದ್ದ, ಎದೆಗಾರಿಕೆ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಮುಂತಾದ ಅನೇಕ ಚಿತ್ರಗಳನ್ನು ನಾನು ಪ್ರಶಸ್ತಿಗೆ ಶಿಫಾರಸು ಮಾಡಬೇಕೆಂದಿದ್ದೆ. ಈ ಬಾರಿ ನಿಜಕ್ಕೂ ಅನೇಕ ಚಿತ್ರಗಳು ಪ್ರಶಸ್ತಿಗೆ ಅರ್ಹವಾಗಿದ್ದವು. ಆದರೆ ನನ್ನ ಅಭಿಪ್ರಾಯವನ್ನು ಯಾರೂ ಕೇಳಲಿಲ್ಲ. ನನಗೆ ಮಾತನಾಡಲು ಕಷ್ಟವಾಗಿದ್ದರೂ ಅಭಿಪ್ರಾಯ ವಿನಿಮಯಕ್ಕೆ ಯಾವುದೇ ತೊಂದರೆ ಇರಲಿಲ್ಲ. ನಿರ್ಧಾರ ಮಾಡುವ ನಿಟ್ಟಿನಲ್ಲಾಗಲೀ, ಮಾತುಕತೆಯ ವಿಷಯದಲ್ಲಾಗಲೀ ನನ್ನಿಂದ ಈ ಕೆಲಸ ಆಗುವುದಿಲ್ಲ ಎಂದು ನಾನು ಹೇಳಿಲ್ಲದಿದ್ದರೂ, ಎಲ್ಲವನ್ನೂ ತಾವೇ ನಿರ್ಧಾರ ಮಾಡಿ ನನ್ನ ಅನಿಸಿಕೆಯನ್ನು ದೂರ ಇಟ್ಟಿದ್ದಾರೆ. ಒಂದೇ ಕನ್ನಡ ಚಿತ್ರಕ್ಕೆ ಪ್ರಶಸ್ತಿ ಬಂದಿರುವುದು ನನಗೆ ಅತೀವ ನೋವುಂಟುಮಾಡಿದೆ. ಆದರೆ, ಇಲ್ಲಿ ಯಾವುದೋ ಮೋಸ ಆಗಿದೆ ಎಂದು ನಾನು ಹೇಳುತ್ತಿಲ್ಲ. ಯಾರನ್ನೂ ದೂರುತ್ತಿಲ್ಲ. ನಾನು ಕೇವಲ ವಸ್ತುಸ್ಥಿತಿಯನ್ನು ಹೇಳುತ್ತಿದ್ದೇನೆ ಅಷ್ಟೆ.
- ಸಿ.ವಿ. ಶಿವಶಂಕರ್ (ಶಿವಶಂಕರ್ ಅವರ ಪುತ್ರ ಲಕ್ಷ್ಮಣ್ ತಂದೆಯೊಂದಿಗೆ ಸಂವಹನ ನಡೆಸಿ ಹೇಳಿದ್ದು)
'ಭಾರತ್ ಸ್ಟೋರ್ಸ್' ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಇರಲಿಲ್ಲ ಎಂಬುದು ಸುಳ್ಳು. ಆದರೆ ಭಾರತ್ ಸ್ಟೋರ್ಸ್ನಷ್ಟೇ ಪ್ರಶಸ್ತಿಗೆ ಅರ್ಹವಾದ ಇತರ ಚಿತ್ರಗಳೂ ಇದ್ದವು. ಅಂತಿಮ ಸುತ್ತಿನಲ್ಲಿ ಕನ್ನಡ ಪರ ಪ್ರತಿನಿಧಿ ಇರಲಿಲ್ಲ ಎಂಬ ಕಾರಣಕ್ಕೆ ನಮಗೆ ಅನ್ಯಾಯವಾಗಿದೆ ಎಂಬುದು ನಿಜ. ಶಾಸ್ತ್ರಿ ಅವರಿಗೆ ಕನ್ನಡ ಮಾತನಾಡಲು ಬರುತ್ತದೆ ಎಂಬುದನ್ನು ಬಿಟ್ಟರೆ ಅವರನ್ನು ಕನ್ನಡ ಚಿತ್ರರಂಗದ ಪ್ರತಿನಿಧಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಭಾರತ್ ಸ್ಟೋರ್ಸ್ಗೆ ಪ್ರಶಸ್ತಿ ಬಂದಿದ್ದು ಅಲ್ಪತೃಪ್ತಿ ಅಷ್ಟೇ. ಹೊಸ ರೀತಿಯ ಪ್ರಯತ್ನಗಳನ್ನು ಮಾಡಿ, ಪ್ರಶಸ್ತಿಗೆ ಅರ್ಹವಾದ ಅನೇಕ ಚಿತ್ರಗಳಿದ್ದೂ ನನ್ನ ಕೈಲಿ ಏನೂ ಮಾಡಲಾಗಲಿಲ್ಲವಲ್ಲ ಎಂಬ ಬಗ್ಗೆ ನನಗೆ ತೀವ್ರ ನಿರಾಶೆಯಿದೆ. ಆಯ್ಕೆಯ ಸಮಯದಲ್ಲಿ ಕನ್ನಡದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಪ್ರಯೋಗಗಳಾಗುತ್ತಿವೆಯಲ್ಲಾ ಎಂದು ಅನೇಕರು ಅಚ್ಚರಿ ಮತ್ತು ಸಂತಸ ವ್ಯಕ್ತಪಡಿಸಿದ್ದನ್ನು ನೋಡಿದ ಮೇಲೂ ನಮಗೆ ಕೇವಲ ಎರಡೇ ಪ್ರಶಸ್ತಿ ಬಂದಿದ್ದು ವಿಪರ್ಯಾಸ. ನಾನಂತೂ ಇನ್ನಷ್ಟು ಪ್ರಶಸ್ತಿಗಳನ್ನು ನಿರೀಕ್ಷಿಸಿದ್ದೆ.
- ನಾಗತಿಹಳ್ಳಿ ಚಂದ್ರಶೇಖರ್
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


