ಸಿನಿಮಾ ಲೇಖನ

ಸೀರೆ ಪ್ರಿಯೆ

ಸೀರೆ ಪ್ರಿಯೆ
Published On :

ನಿರ್ದೇಶಕ ಆರ್. ಚಂದ್ರು ಅವರ 'ಕೋ ಕೋ' ಚಿತ್ರ ತೆಲುಗಿಗೆ ರಿಮೇಕ್ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾಯಕ, ನಾಯಕಿಯನ್ನುಳಿದು ಕನ್ನಡ ಕಲಾವಿದರ ಬದಲಿಗೆ ತೆಲುಗು ನಟ, ನಟಿಯರ ಅಭಿನಯದಲ್ಲಿ ರಿಮೇಕ್ ಆಗುತ್ತಿರುವ ಈ ಚಿತ್ರಕ್ಕೆ 'ತಿಕ್ಕ' ಎಂದು ಹೆಸರಿಡಲಾಗಿದೆ. ಇಲ್ಲೂ ನಾಯಕನಾಗಿ ಶ್ರೀನಗರ ಕಿಟ್ಟಿ,  ನಾಯಕಿಯಾಗಿ ಪ್ರಿಯಾಮಣಿ ಇದ್ದಾರೆ. ಆದರೆ ಸುದ್ದಿ ಅದಲ್ಲ, ನಾಯಕಿಯ ಬಟ್ಟೆಯದ್ದು.

ಹೌದು, ಕಳೆದ ಎರಡ್ಮೂರು ವಾರಗಳಿಂದ ಪ್ರಿಯಾಮಣಿ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾಳೆ. ಇದಕ್ಕೆ ಕಾರಣ ಆಕೆ ತೊಟ್ಟ ಸೀರೆ. 'ನಟಿ ಪ್ರಿಯಾಮಣಿ ತಿಕ್ಕ ಚಿತ್ರದಲ್ಲಿ ಅಸಭ್ಯ ಹಾಗೂ ಅಶ್ಲೀಲವಾಗಿ ಕಾಣಿಸಿಕೊಂಡಿದ್ದಾರೆ' ಎಂದು ಅರೋಪಿಸಿ ಕೋರ್ಟ್ ಮೆಟ್ಟಿಲೇರಿರುವುದೇ ಸುದ್ದಿಯ ಕೇಂದ್ರಬಿಂದು.

ಸದ್ಯ ಚಿತ್ರೀಕರಣದಲ್ಲಿರುವ 'ತಿಕ್ಕ' ಹಾಗೂ 'ಚಾಂಡಿ' ಚಿತ್ರದಲ್ಲಿ ಪ್ರಿಯಾಮಣಿ ನಾಯಕಿ. ಈ ಪೈಕಿ 'ತಿಕ್ಕ'ದಲ್ಲಿ ಪ್ರಿಯಾ ಸೀರೆ ತೊಟ್ಟು ಮಳೆಯಲ್ಲಿ ನೃತ್ಯ ಮಾಡಿದ್ದಾರೆ. ಕೊಂಚ ಹಾಟ್ ಆಗಿಯೇ ಮೂಡಿಬಂದಿರುವ ಈ ಹಾಡಿನ ದೃಶ್ಯ ಮತ್ತು ನಾಯಕಿ ತೊಟ್ಟ ಸೀರೆ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಹೈದರಬಾದ್‌ನ ಸುಬುದ್ಧಿ ಎಂಬುವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇಷ್ಟಾಗಿದ್ದೇ ತಡ ತೆಲುಗಿನಲ್ಲಿ ಪ್ರಿಯಾಮಣಿಯ ಸೀರೆ ದೊಡ್ಡ ರಾದ್ಧಾಂತ ಮಾಡಿದೆ. ಈ ನಡುವೆ ಪ್ರಿಯಾ ಕೂಡ ಗರಂ ಆಗಿದ್ದಾರೆ. ಸೀರೆಯಲ್ಲೇ ಪತ್ರಿಕಾಗೋಷ್ಠಿಗೆ ಬಂದು ತನ್ನ ಮೇಲಿನ ಆರೋಪಗಳ ವಿರುದ್ಧ ಗರಂ ಆದ ಈ ನೀರೆ ಉತ್ತರಿಸಿದ್ದಾರೆ.

'ಯಾವುದು ಸಭ್ಯ, ಯಾವುದು ಅಸಭ್ಯ ಎಂದು ಬೇರೆಯವರಿಂದ ಹೇಳಿಸಿಕೊಳ್ಳುವ ಮಟ್ಟಕ್ಕೆ ನಾನು ಇಳಿದಿಲ್ಲ. ನನ್ನ ಉಡುಗೆಯಲ್ಲಿ ಎಲ್ಲಿ ಅಸಭ್ಯತನ ಇದೆ ಎಂಬುದನ್ನು ತೋರಿಸಲಿ. ಸುಮ್ಮನೆ ವಿವಾದ ಮಾಡಿ ಕಲಾವಿದರನ್ನು ಬೀದಿಗೆ ತರುವುದು ಸಮಂಜಸವಲ್ಲ. ಇಷ್ಟಕ್ಕೂ ಸೀರೆ ತೊಡುವುದು ತಪ್ಪೇ? ಸೀರೆ ಉಡುವುದೇ ಬೇಡ ಎನ್ನುವುದಾದರೆ ಯಾವ ಬಟ್ಟೆ ತೊಡಬೇಕು?' ಎಂದು ಖಾರವಾಗಿ ಪ್ರಶ್ನಿಸುತ್ತಾರೆ ಅವರು.

ತೆಲುಗು, ತಮಿಳು ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಪ್ರಿಯಾಮಣಿ ಅಭಿನಯಿಸಿದ್ದಾರೆ. ಬೆಂಗಳೂರಿನ ಹುಡುಗಿಯಾದರೂ ಬೆಳೆದದ್ದೆಲ್ಲ ಕೇರಳದಲ್ಲಿ. ಹೀಗಾಗಿ ಮಲೆಯಾಳಂ ಚಿತ್ರರಂಗದ ನಂಟು ಕೂಡ ಈಕೆಗೆ ಇದೆ. ಇನ್ನೂ ಕನ್ನಡದಲ್ಲಿ 'ರಾಮ್‌', 'ಅಣ್ಣಾಬಾಂಡ್‌', 'ಲಕ್ಷ್ಮಿ', 'ಏನೋ ಒಂಥರಾ', 'ವಿಷ್ಣುವರ್ಧನ', 'ಕೋ  ಕೋ', 'ಚಾರುಲತಾ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನ 'ಪೊರತ್ತಿವೀರನ್‌' ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಗಳಿಸಿದ ನಟಿ. ಮಲೆಯಾಳಂನ 'ತಿರಕ್ಕಥಾ' ಚಿತ್ರದಲ್ಲಿ ಪ್ರಿಯಾಮಣಿ ಅಭಿನಯ ಮೆಚ್ಚುಕೊಳ್ಳದಿರಲು ಸಾಧ್ಯವೇ ಇಲ್ಲ.

ಇಂಥ ನಟಿ ಮೊದಲ ಬಾರಿಗೆ ಬಟ್ಟೆ ವಿಚಾರಕ್ಕೆ ವಿವಾದ ಮಾಡಿಕೊಂಡಿದ್ದಾರೆ. 'ಸಾರ್ ಸಿನಿಮಾ ಎಂದ ಮೇಲೆ ಗ್ಲಾಮರ್ ಇರುತ್ತದೆ. ಆದರೆ ಅದನ್ನು ಅಸಭ್ಯವಾಗಿ ತೋರಿಸಿದ್ದೇವೆಯೇ ಎನ್ನುವುದು ಮುಖ್ಯ. ಗ್ಲಾಮರ್‌ಗೂ ಮತ್ತು ವಲ್ಗಾರಟಿಗೂ ತುಂಬಾ ವ್ಯತ್ಯಾಸವಿದೆ. ನಾನು ಇದುವರೆಗೂ ಮಾಡಿರುವ ಚಿತ್ರಗಳಲ್ಲಿ ಯಾವುದೇ ವಲ್ಗಾರಟಿಯನ್ನು ತೋರಿಸಿಲ್ಲ' ಎನ್ನುತ್ತಾರೆ ಪ್ರಿಯಾಮಣಿ. ಒಟ್ಟಿನಲ್ಲಿ ಕನ್ನಡದ ಪ್ರಿಯಾಮಣಿಯ ಸೀರೆ ವಿವಾದ ತೆಲುಗು ಚಿತ್ರರಂಗದಲ್ಲಿ 'ಹೊಸ ಗಾನ ಬಜಾನ'ದಂತೆ ಸದ್ದು ಮಾಡುತ್ತಿದೆ.

---
 ಸಿನಿಮಾದವರು ಎಂದ ಕೂಡಲೇ ನಮಗೆ ಜವಾಬ್ದಾರಿ ಇಲ್ಲ ಅಂತ ತಿಳಿಯಬೇಡಿ. ನಮಗೂ ಸಮಾಜಿಕ ಕಾಳಜಿ ಇದೆ. ಆದರೆ 'ನೀವು ಇಂಥದೇ ಬಟ್ಟೆ ಹಾಕಿ, ಹೀಗೆ ಅಭಿನಯಿಸಿ, ಆ ಬಟ್ಟೆ ತೊಡಬೇಡಿ' ಎಂದು ಕಲಾವಿದರ ಮೇಲೆ ಇಲ್ಲಸಲ್ಲದ ಒತ್ತಡ ಹಾಕುವುದು, ಆರೋಪ ಮಾಡುವುದು ಸರಿಯಲ್ಲ. ಒಬ್ಬ ನಟ, ನಟಿಗೆ ಯಾವ  ಪಾತ್ರ ಮಾಡಬೇಕು,  ಆ ಪಾತ್ರಕ್ಕೆ ತಕ್ಕಂತೆ ಯಾವ ರೀತಿಯ ಉಡುಪು ಹಾಕಿಕೊಳ್ಳಬೇಕು ಎಂಬುದು ನಿರ್ದೇಶಕ, ಕಲಾವಿದರಿಗೆ ಬಿಟ್ಟ ವಿಚಾರ. ಅಸಭ್ಯತೆ, ಅಶೀಲ್ಲತೆಯ ಹೆಸರಿನಲ್ಲಿ ಕಲಾವಿದರನ್ನು ಬೀದಿಗೆ ತರಬೇಡಿ
- ಪ್ರಿಯಾಮಣಿ


- ಕೇಶು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.