ಭಾವನಾ ಲೋಕ
ಚಂದನವನದಲ್ಲಿ ಆಗಾಗ್ಗೆ ಕೇರಳದ ಕಾಫಿ ಘಮಘಮಿಸುತ್ತದೆ. ಒಮ್ಮೆ ರುಚಿ ನೋಡಿದರೆ ಸಾಕು, ಮತ್ತೆ ಮತ್ತೆ ಬೇಕು ಎನ್ನಿಸುವ ಕಾಫಿ ಅದು.

ನಟ ಉಪೇಂದ್ರ ಅಭಿನಯದ 'ಟೋಪಿವಾಲ' ಚಿತ್ರ ಈ ವಾರ ತೆರೆ ಕಾಣುತ್ತಿದೆ. ಉಪ್ಪಿ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿರುವ ಕೇರಳದ ಸುಂದರಿ ಭಾವನಾ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾಳೆ. 'ಜಾಕಿ' ಚಿತ್ರದ ಮೂಲಕ ಗಾಂಧಿನಗರಕ್ಕೆ ಬಂದ ಈಕೆ ಒಂದಾದ ಮೇಲೊಂದರಂತೆ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.
ಚಂದನವನದಲ್ಲಿ ಆಗಾಗ್ಗೆ ಕೇರಳದ ಕಾಫಿ ಘಮಘಮಿಸುತ್ತದೆ. ಒಮ್ಮೆ ರುಚಿ ನೋಡಿದರೆ ಸಾಕು, ಮತ್ತೆ ಮತ್ತೆ ಬೇಕು ಎನ್ನಿಸುವ ಕಾಫಿ ಅದು. ಸ್ವಲ್ಪ ಹಾಟ್ ಎಂದೆನ್ನಿಸಿದರೂ ಹೋಮ್ಲಿ ವಿಭಾಗದಲ್ಲಿ ಫುಲ್ ಮಿಲ್ಸ್. ಜೊತೆಗೆ ಒಂದಿಷ್ಟು ಸ್ಪೈಸಿ. ದೇವರ ನಾಡಿನ ಕಾಫಿ ಎಸ್ಟೇಟ್‌ನಿಂದ ಹಾರಿ ಬರುವ ಹೂವುಗಳ ಹೊರ ನೋಟವೇ ಹೀಗೆ, ಬೆಳ್ಳಂಬೆಳಗ್ಗೆ ಚುಮುಚುಮು ಚಳಿಯಲ್ಲಿ ಹೀರುವ ಬೆಚ್ಚನೆಯ ಕಾಫಿಯ ಹಾಗೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಘಮಘಮಿಸುತ್ತಿರುವ ಕೇರಳ ನಾರಿಯರ ಪಟ್ಟಿ ದೊಡ್ಡದಿದೆ. ರೋಮ, ಪಾರ್ವತಿ ಮೆನನ್, ಭಾಮಾ, ನಿತ್ಯಾ ಮೆನನ್, ಮೀರಾ ಜಾಸ್ಮಿನ್, ನವ್ಯಾ ನಾಯರ್, ಕಾರ್ತಿಕಾ ನಾಯರ್ ಹೀಗೇ ಮುಂದುವರಿಯುತ್ತದೆ. ಇವರಲ್ಲಿ ರೋಮ ಹೊರತಾಗಿ ಉಳಿದವರೆಲ್ಲ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ಮೂರಂಕಿ ದಾಟಿದವರೇ. ಆದರೆ ಭಾಮಾ, ಭಾವನಾ ಇಂದಿಗೂ ಬಹು ಬೇಡಿಕೆ ಉಳಿಸಿಕೊಂಡಿರುವ ನಟಿಯರು. ಈ ಪೈಕಿ ಭಾವನಾ ಗಾಂಧಿನಗರಕ್ಕೆ ಹಾಟ್ ಫೇವರೆಟ್.
ಮಲೆಯಾಳಿ ಚಿತ್ರರಂಗದ ಟಾಪ್ ಒನ್ ನಟಿಯರ ಸಾಲಿನಲ್ಲಿರುವ ಈಕೆ, ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ಮಿಂಚುತ್ತಿದ್ದಾಳೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಬಣ್ಣದ ಲೋಕಕ್ಕೆ ಕಾಲಿಟ್ಟ ಭಾವನಾ, ಮೊದಲು ಕಾಣಿಸಿಕೊಂಡಿದ್ದು ಸುರೇಶ್ ಗೋಪಿ ಜೊತೆ ಮಲೆಯಾಳದ 'ಚಿಂತಾಮಣಿ ಕೊಲ ಕೇಸ್' ಚಿತ್ರದಲ್ಲಿ.
ಬಣ್ಣ ಹಚ್ಚಿದ ಮೇಲೆ ಪಿಯುಸಿಗೇ ವಿದ್ಯಾಭ್ಯಾಸ ಕೈಬಿಟ್ಟು ಬೇರೆ ಭಾಷೆಗಳಲ್ಲಿ ಅವಕಾಶಗಳನ್ನು ಅರಸಿ ಹೊರಟವಳ ಮುಂದೆ ಸಾಲು ಸಾಲು ಚಿತ್ರಗಳು ಬಂದವು. 'ದೇವರೇ ನನ್ನ ಗಾಡ್‌ಫಾದರ್' ಎನ್ನುವ ಭಾವನಾ, ಗಾಸಿಪ್‌ಗಳಿಗೆ ಸಿಕ್ಕವಳಲ್ಲ. ಹಾಗೊಂದು ವೇಳೆ ಈಕೆಯ ಮೇಲೆ ಗಾಸಿಪ್‌ಗಳು ಬಂದರೂ ಅದಕ್ಕೆ ಪ್ರತಿಕ್ರಿಯಿಸದೇ ಮೌನವಾಗಿದ್ದು ಬಿಡುವ ಜಾಣೆ. 'ಸಿನಿಮಾ ಮಂದಿ ಎಂದ ಮೇಲೆ ಅನುಮಾನಗಳು, ಗಾಸಿಪ್‌ಗಳು ಇದ್ದೇ ಇರುತ್ತವೆ. ಅದರೆ ಪ್ರತಿಯೊಂದಕ್ಕೂ ಉತ್ತರ ಕೊಡುತ್ತ ಹೋದರೆ ಕೆರಿಯರ್ ಕೈಬಿಟ್ಟು ಹೋಗುತ್ತದೆ. ಇಷ್ಟಕ್ಕೂ ಗಾಸಿಪ್‌ಗಳಿಂದ ಸುದ್ದಿ ಮಾಡಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಅಗತ್ಯ ಮತ್ತು ಅನಿವಾರ್ಯತೆ ನನಗಿಲ್ಲ. ಅಂಥ ಚೀಪ್ ಕ್ಯಾಟರ್ ನನ್ನದಲ್ಲ' ಎಂದು ಕಡ್ಡಿ ತುಂಡು ಮಾಡಿದಂತೆ ಮಾತನಾಡುತ್ತಾಳೆ.
ಕನ್ನಡ, ತೆಲುಗು, ತಮಿಳು, ಮಲೆಯಾಳಂನಲ್ಲಿ ಇದುವರೆಗೂ 62 ಚಿತ್ರಗಳಲ್ಲಿ ಅಭಿನಯಿಸಿದ್ದಾಳೆ. ಇದರಲ್ಲಿ 6 ಕನ್ನಡ ಚಿತ್ರಗಳೂ ಸೇರಿಕೊಂಡಿವೆ. 'ಜಾಕಿ', 'ವಿಷ್ಣುವರ್ಧನ', 'ರೋಮಿಯೋ', 'ಯಾರೇ ಕೂಗಾಡಲಿ', 'ಟೋಪಿವಾಲ' ಹಾಗೂ 'ಬಚ್ಚನ್' ಆ ಚಿತ್ರಗಳು. ಸದ್ಯ ಶಿರಿನ್ ನಿರ್ದೇಶನದ 'ಟೋಪಿವಾಲ' ಮಾ.15ರಂದು ಬಿಡುಗಡೆಯಾಗುತ್ತಿದೆ. ಇನ್ನು ಶಶಾಂಕ್ ನಿರ್ದೇಶನದ, ಸುದೀಪ್ ಅಭಿನಯದ 'ಬಚ್ಚನ್' ಚಿತ್ರ ಈಗಷ್ಟೆ ಬಿಡುಗಡೆಯ ಸಿದ್ಧತೆ ಆರಂಭಿಸಿದೆ. 'ಕನ್ನಡದಲ್ಲಿ ನನಗೆ ಸಿಗುತ್ತಿರುವ ಅವಕಾಶಗಳ ಬಗ್ಗೆ ಕನ್ನಡ ಪ್ರೇಕ್ಷಕರಿಗೆ ನಾನು ಋಣಿ. ಪ್ರತಿ ಚಿತ್ರವೂ ಒಂದೊಂದು ಇಮೇಜ್ ಕೊಟ್ಟಿದೆ. ನನ್ನ ಮೊದಲ ಕನ್ನಡ ಚಿತ್ರ ಗೆದಿದ್ದು ನನಗೆ ಖುಷಿಯಾಗಿದೆ. ಈ ವಾರ ಬಿಡುಗಡೆಯಾಗುತ್ತಿರುವ 'ಟೋಪಿವಾಲ'ದ ಕಥೆಯೂ ತುಂಬಾ ಚೆನ್ನಾಗಿದೆ. ಭಿನ್ನವಾಗಿ ನಿರೂಪಣೆ ಮಾಡಿದ್ದಾರೆ. ಈ ಚಿತ್ರವೂ ಗೆಲ್ಲುತ್ತದೆಂಬ ನಂಬಿಕೆ ಇದೆ' ಎನ್ನುತ್ತಾರೆ ಭಾವನಾ.
ನೋಡಿದ ಕೂಡಲೇ ಮನೆ ಮಗಳು ಎನ್ನಿಸುವ ಹೋಮ್ಲಿ ನೋಟ, ದುಂಡು ಮುಖ, ನಕ್ಕರೆ ಮಲ್ಲಿಗೆ ಅರಳಿದಂತೆ, ಬಣ್ಣದ ಜಗತ್ತಿಗೆ ಬೇಕಾದ ಗ್ಲಾಮರ್ ಮತ್ತು ಗ್ರಾಮರ್ ಎರಡನ್ನೂ ಒಳಗೊಂಡಿರುವ ಈ ದುಂಡು ಮಲ್ಲಿಗೆಯ ಸೌಂದರ್ಯದ ಗುಟ್ಟು ಯೋಗ, ಊಟ ಮತ್ತು ನಗು. ಹೌದು, ಎಷ್ಟೇ ಕೆಲಸ ಇದ್ದರೂ ಪ್ರತಿ ದಿನ ಇಂತಿಷ್ಟು ಸಮಯ ಅಂತ ಯೋಗ ಮಾಡುವುದಕ್ಕೆ ಮೀಸಲಿಡುತ್ತಾಳೆ. ಇನ್ನು ಊಟದಲ್ಲಿ ಡಯಟ್ ಇಲ್ಲ. ಒಳ್ಳೆಯ ಊಟ ಸಿಕ್ಕರೆ ಬಿಡಲ್ಲ. ಯಾವಾಗಲೂ ನಗು ನಗುತ್ತ, ಬೇರೆಯವರನ್ನೂ ನಗಿಸುತ್ತಾಳೆ. ಸಣ್ಣ ಪುಟ್ಟ ಕಿರುಕ್ಕುಗಳಿಗೆ ತಲೆ ಕೆಡಿಸಿಕೊಳ್ಳದಿದ್ದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಂತಸವಾಗಿರಬಹುದು ಎಂದು ನಂಬಿಕೆ.
ಭಾವನಾ ತೆರೆ ಮೇಲಿನ ಸೌಂದರ್ಯಕ್ಕೆ ಮಾತ್ರ ಸೀಮಿತವಲ್ಲ. ಅಭಿನಯದಲ್ಲೂ ಫಸ್ಟ್ ಕ್ಲಾಸ್ ವಿದ್ಯಾರ್ಥಿನಿ. ಈಕೆ ಅಭಿನಯಿಸಿರುವ ಚಿತ್ರಗಳು ಸೋತಿದ್ದರೂ ಪಾತ್ರ ಮತ್ತು ಆಕೆಯ ಅಭಿನಯ ಮಾತ್ರ ಸೋತಿಲ್ಲ ಎಂಬುದು ಸತ್ಯ. ಸಿನಿಮಾ ಹೊರತಾಗಿ ಸಂಗೀತ ಕೇಳುವ, ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡಿರುವ ಭಾವನಾ, ಇತ್ತೀಚೆಗಷ್ಟೆ ಒಂದು ವಿಭಿನ್ನ ರೀತಿಯ ಚಿತ್ರ ಒಪ್ಪಿಕೊಂಡಿದ್ದಾಳೆ. ಮಲೆಯಾಳಂನ ರಾಜೇಶ್ ಬಿ. ಮೆನನ್ ನಿರ್ದೇಶನದ 'ಯೆಲ್ಲೊ' ಚಿತ್ರ. ಈ ಸಿನಿಮಾದಲ್ಲಿ ಭಾವನಾ ಅಂಗವಿಕಲೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಯಾಣದಲ್ಲಿ ಸಾಗುವ ಈ ಕತೆಯಲ್ಲಿ ಮೂಲತಃ ಪಟಪಟನೆ ಮಾತನಾಡುವ ಈಕೆ, ಮೂಗ ಮತ್ತು ಕಿವುಡು ನಾಯಕಿ!
-ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


