ಮೇಘನಾ ಮಾಲೆ!
'ಚಾರ್ಮಿನಾರ್'ದು ರಾಧಾ ಮೋಹನರ ಪ್ರೇಮಕತೆ. ಚಿತ್ರದಲ್ಲಿ ನಾಯಕಿಯ ಹೆಸರು ರಾಧಾ. ಮೇಘನಾಳ ಜೊತೆ ಮಾತನಾಡುತ್ತಾ ಹೋದಂತೆ ಆ ನಾಯಕಿಗೆ ಮತ್ತು ಈಕೆಗೆ ಒಂದಷ್ಟು ಸಾಮ್ಯತೆಗಳಿವೆಯೆನಿಸಿತು.

'ಚಾರ್ಮಿನಾರ್'ದು ರಾಧಾ ಮೋಹನರ ಪ್ರೇಮಕತೆ. ಚಿತ್ರದಲ್ಲಿ ನಾಯಕಿಯ ಹೆಸರು ರಾಧಾ. ಮೇಘನಾಳ ಜೊತೆ ಮಾತನಾಡುತ್ತಾ ಹೋದಂತೆ ಆ ನಾಯಕಿಗೆ ಮತ್ತು ಈಕೆಗೆ ಒಂದಷ್ಟು ಸಾಮ್ಯತೆಗಳಿವೆಯೆನಿಸಿತು. ಅದನ್ನೇ ಅವರಲ್ಲಿ ಕೇಳಿದಾಗ ಆಕೆ ಮನಸ್ಸು ಬಿಚ್ಚಿ ನೀಡಿರುವ ಉತ್ತರಗಳು ಇಲ್ಲಿವೆ...
'ಚಾರ್ಮಿನಾರ್' ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆಯೆಂದರೆ ಹೈದರಾಬಾದ್ನ ಮಂದಿಯೇ 'ಚಾರ್ಮಿನಾರ್' ನೋಡಲು ಕರ್ನಾಟಕಕ್ಕೆ ಬರುವಂತಾಗಿದೆ!
ಹಾಗಂತ ನಿರ್ದೇಶಕ ಚಂದ್ರು ಅವರೇ ಖುದ್ದಾಗಿ ಹೇಳಿಕೊಂಡರು. ಅಂದಹಾಗೆ, ಈ ಚಿತ್ರ ಈಗ ತೆಲುಗಿಗೆ ರೀಮೇಕ್ ಆಗ್ತಿದೆ. ಇನ್ನು ಚಿತ್ರದ ನಾಯಕಿ ಮೇಘನಾ ಗಾಂವ್ಕರ್ಗಂತೂ ಇದು ಜಾಕ್ಪಾಟ್ ಹೊಡೆದಂತಾಗಿದೆ. ಕಿರುತೆರೆಯಿಂದ ಬಂದ ಈ ಗುಲ್ಬರ್ಗದ ಪ್ರತಿಭೆ ಅಚ್ಚಗನ್ನಡದ ಹುಡುಗಿ. ಮಾರುತಿರಾವ್, ಸುಹಾಸಿನಿ ದಂಪತಿಯ ಮೂವರು ಮಕ್ಕಳಲ್ಲಿ ಮೇಘನಾ ಹಿರಿಯಳು. ಮೇಘನಾ ಕಾಲೇಜು ಜೀವನಕ್ಕಾಗಿ ಆರಿಸಿಕೊಂಡಿದ್ದು ಬೆಂಗಳೂರಿನ ಜೈನ್ ಕಾಲೇಜನ್ನು. ಆಮೇಲೆ ಬೆಂಗಳೂರು ವಿವಿಯಿಂದ ಪದವಿ. ಪೊಲೀಸ್ ಅಧಿಕಾರಿಯಾಗಿರುವ ತಂದೆಗೆ ಮಗಳನ್ನು ಐಎಎಸ್ ಮಾಡುವ ಕನಸಿತ್ತು.
ಆಗ ಮೇಘನಾ ಬಣ್ಣದ ಲೋಕದಲ್ಲಿನ ತನ್ನ ಆಕಾಂಕ್ಷೆಯನ್ನು ತಂದೆಗೆ ಹೇಳಲೇಬೇಕಾಯಿತು. ಏನೇ ಆದರೂ ಎಲ್ಲವೂ ವಿದ್ಯಾಭ್ಯಾಸ ಪೂರೈಸಿದ ಬಳಿಕವಷ್ಟೇ ಎಂದಿದ್ದರು ತಂದೆ. ನೃತ್ಯ ಮೇಲಿನ ಲವ್ವಿಗಾಗಿ ಖ್ಯಾತ ಬಾಲಿವುಡ್ ನೃತ್ಯ ನಿರ್ದೇಶಕ ಶಾಮಕ್ ದಾವರ್ರ ಡ್ಯಾನ್ಸ್ ಸ್ಕೂಲ್ಗೆ ಸೇರಿಕೊಂಡರು ಮೇಘನಾ. ಆ ಮೂಲಕ ಮುಂಬೈ ಸೇರಿದಂತೆ ಭಾರತದಾದ್ಯಂತ ಮಾತ್ರವಲ್ಲ ದುಬೈ, ಸಿಂಗಾಪುರ್, ಆಸ್ಟ್ರೇಲಿಯ ಮುಂತಾದ ದೇಶಗಳಲ್ಲಿ ಏಳು ವರ್ಷ ನೃತ್ಯ ಪ್ರದರ್ಶನಗಳಲ್ಲಿ ಮಿಂಚಿದರು. ಬಳಿಕ ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟ್ಗೆ ಸೇರಿ, ನಿರ್ದೇಶನದ ಕನಸು ಕಂಡರು. ಆದರೆ, ಇವರ ಅಂದ ಕಂಡವರು 'ನೀವು ತೆರೆಯ ಹಿಂದೆಯಲ್ಲ, ಮುಂದೆ ಇರಬೇಕಾದವರು' ಎಂದು ಟಿಪ್ಸ್ ಕೊಟ್ಟರಂತೆ.
ಮೇಘನಾ ಲೈಫಲ್ಲಿ ಇದೇ ಟರ್ನಿಂಗ್ ಪಾಯಿಂಟ್!
ಝೀ ಕನ್ನಡದ 'ಕುಣಿಯೋಣು ಬಾರಾ...' ಸೇರಿದಂತೆ ಒಂದಷ್ಟು ಟೀವಿ ಶೋಗಳ ಮೂಲಕ ಹೆಸರು. ಮುಂದೆ ನಿರ್ದೇಶಕ ಅರವಿಂದ್ ಕಶ್ಯಪ್ರ ಸಿನೆಮಾದಲ್ಲಿ ನಾಯಕಿಯಾಗುವ ಅವಕಾಶ. 'ನಮ್ ಏರಿಯಾನಲ್ ಒಂದ್ದಿನ' ಎಂಬ ಆ ಚಿತ್ರದಿಂದಾಗಿ ಮೇಘನಾಗೆ ಒಳ್ಳೆಯ ನಟಿಯೆಂಬ ಹೆಸರೂ ಬಂತು. 'ವಿನಾಯಕ ಗೆಳೆಯರ ಬಳಗ', 'ತುಘಲಕ್', 'ಭಕ್ತ ಶಂಕರ' ಮುಂತಾದ ಚಿತ್ರಗಳಲ್ಲೂ ಮಿಂಚು. ಇದೀಗ 'ಚಾರ್ಮಿನಾರ್' ಮೂಲಕ ಮೇಘನಾ ಗಾಂವ್ಕರ್ ಕನ್ನಡದ ಸ್ಟಾರ್ ನಾಯಕಿಯರಲ್ಲೊಬ್ಬರಾಗಿ ಮಿಂಚುತ್ತಿದ್ದಾರೆ.
ರಾಧೆಗೂ ನಿಮಗೂ ಇರುವ ಹೋಲಿಕೆಗಳೇನು?
ಬಹುಶಃ ಅಷ್ಟೊಂದೇನೂ ಇಲ್ಲವೇನೋ. ಆದರೆ ನನಗೆ ಬಿಳಿ ಬಣ್ಣದ ಚೂಡಿದಾರ ಧರಿಸುವುದೆಂದರೆ ಇಷ್ಟ. (ಚಿತ್ರದ ಜನಪ್ರಿಯ ಪೋಸ್ಟರ್ ಒಂದರಲ್ಲಿ ನಾಯಕಿ ಕೂಡ ಬಿಳಿ ಬಣ್ಣದ ಚೂಡಿದಾರದಿಂದಲೇ ಗಮನ ಸೆಳೆದಿದ್ದಳು.) ಹಾಗೆಯೇ ಪುಸ್ತಕಗಳನ್ನು ಓದುವ ಹವ್ಯಾಸವಿದೆ.
ಮುಂಬೈನ ಕೊರಿಯೋಗ್ರಾಫರ್ ಮಾಸ್ಟರ್ ಮರ್ಸಿಯಲ್ಲಿ ನಿಮಗಿದ್ದ ಕ್ರಶ್ ಬಗ್ಗೆ ನಿಮ್ಮಿಂದಲೇ ಕೇಳಿದ್ದೇವೆ. ಈಗ ಮೇಘನಾರ ಬಾಳಿಗೂ 'ಮೋಹನ'ನ ಪ್ರವೇಶವಾಗಿದೆಯೇ?
ಕ್ರಶ್ನ ಕಾಲ ದಾಟಿಯಾಗಿದೆ. ಮುಂದಿನ ಐದು ವರ್ಷಗಳಿಗೆ ಚಿತ್ರರಂಗದಲ್ಲಿ ಮಾತ್ರ ಗಮನ ಕೇಂದ್ರೀಕರಿಸಲು ಬಯಸುತ್ತೇನೆ. ಸದ್ಯಕ್ಕೆ ಯಾವ ಮೋಹನನ ಕರೆಗೆ ಓಗೊಡುವುದಕ್ಕೂ ಪುರುಸೊತ್ತಿಲ್ಲ.
ಚಿತ್ರದ ಪ್ರಥಮ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ನೀವು ನಿಮ್ಮ ಇಂಟ್ರಡಕ್ಷನ್ ಸೀನ್ಗೆ ನೀವೇ ಉತ್ಸಾಹದಿಂದ ಕಿರುಚಿದ್ದು ಕಾಣಿಸಿತು. ಇದೇಕೆ?
ಅದರಲ್ಲೇನು ವಿಶೇಷ? 'ರಾಧ ಬರ್ತಾಳ?' ಎಂದು ನಾಯಕ ಕೇಳುವಾಗಲೇ ಪ್ರೇಕ್ಷಕರು ಸೀಟಿ ಹಾಕಿ ಸ್ವಾಗತಿಸಿದ್ದನ್ನು ನೀವು ನೋಡಿರಬಹುದು. ಅಭಿಮಾನಿಗಳಿಗೆ ಅಷ್ಟೊಂದು ಖುಷಿಯಿರಬೇಕಾದರೆ ನಟಿಸಿರುವ ನನಗೆ ಅದೆಷ್ಟು ಸಂತಸವಿರುವುದಿಲ್ಲ. ಮನದ ಸಂತಸವನ್ನು ಅಡಗಿಸಿಡುವ ವ್ಯಕ್ತಿತ್ವ ನನ್ನದಲ್ಲ. ಹಾಗಾಗಿ ಹಿಂದೆಮುಂದೆ ನೋಡದೆ ಕಿರುಚಿಕೊಂಡೆ.
ಇಂದು ಎಲ್ಲರ ಪ್ರಿಯ ಲವ್ಸ್ಟೋರಿ ಚಾರ್ಮಿನಾರ್. ನಿಮಗೆ ಯಾವುದು?
ನಾನು ಚಿಕ್ಕವಳಿದ್ದಾಗಿನಿಂದ ಒಂದು ಲವ್ಸ್ಟೋರಿ ನೋಡಿ ತುಂಬಾ ಇಷ್ಟಪಟ್ಟಿದ್ದೇನೆ. ಆ ಹಿಂದಿ ಚಿತ್ರದ ಹೆಸರು 'ಲವ್'. ರೇವತಿ ಮತ್ತು ಸಲ್ಮಾನ್ಖಾನ್ ನಾಯಕ- ನಾಯಕಿಯಾಗಿದ್ದರು.
ನೀವು ಕತೆ ಬರೆಯುವುದಾಗಿ ಕೇಳಿದ್ದೇನೆ. ಅವುಗಳನ್ನು ಸಿನೆಮಾ ಮಾಡುವ ಯೋಜನೆಯಿದೆಯೇ?
ನಾನು ಬರೆಯುವುದು ಸಣ್ಣಕತೆಗಳನ್ನು ಮಾತ್ರ. ಸಾಧ್ಯವಾದರೆ ಮುಂದೊಂದು ದಿನ ಒಂದು ಕಥಾಸಂಕಲನವನ್ನಾಗಿ ಪ್ರಕಟಿಸುವ ಉದ್ದೇಶವಿದೆ.
ನಿಮ್ಮ ಮೆಚ್ಚಿನ ತಿಂಡಿ-ತೀರ್ಥ, ಹಣ್ಣು-ಹಂಪಲು ಬಗ್ಗೆ ಹೇಳಿ...
ತುಂಬಾ ಸಿಂಪಲ್. ಅನ್ನ ಸಾಂಬಾರ್, ಕಾಫಿ, ಬಾಳೇಹಣ್ಣು ಮೊದಲಾದವು.
ನಿಮಗೆ ಮರೆಯಲಾಗದ ಘಟನೆ ಯಾವುದು?
ನವರಂಗ್ ಥಿಯೇಟರ್ನಲ್ಲಿ 'ನಮ್ ಏರಿಯಾಲ್ ಒಂದಿನ' ಪ್ರದರ್ಶನಕ್ಕೆ ಚಿತ್ರ ತಂಡದವರೆಲ್ಲ ಹೋಗಿದ್ದೆವು. ಥಿಯೇಟರಲ್ಲಿ ರೀಲ್ ಬಿಡುವ ಒಬ್ಬ ತಾತ ನನ್ನನ್ನು ಬಳಿಗೆ ಕರೆದರು. 'ನೋಡಮ್ಮ, ನನಗೆ ಈಗ 70 ವರ್ಷ ಆಯ್ತು. ಎಷ್ಟೋ ವರ್ಷದಿಂದ ಈ ಕೆಲಸ ಮಾಡ್ತಿದ್ದೇನೆ. ಆದರೆ ನಿನ್ನಷ್ಟು ಸಹಜವಾಗಿ ನಟಿಸಿದ ನಟಿಯನ್ನು ನಾನು ಬೇರೆ ನೋಡಿಲ್ಲ' ಎಂದರು. ಅದು ನನಗೆ ದೊರಕಿದ ದೊಡ್ಡ ಪ್ರಶಸ್ತಿಯೆಂಬಂತೆ ಸದಾ ನೆನಪಲ್ಲಿರುತ್ತದೆ.
ನೀವು ಸಹಜತೆಯ ಪಾತ್ರವಷ್ಟೇ ಮಾಡುತ್ತಿದ್ದೀರಿ. ಬಹುಶಃ ನಿಮ್ಮನ್ನು ಗ್ಲಾಮರಸ್ಸಾಗಿಸಲು ರವಿಚಂದ್ರನ್ನೇ ಬರಬೇಕೆಂಬ ಹಾಗಿದೆ!?
ಬಹುಶಃ ಹೌದು ನಾನು ಇರುವಷ್ಟು ಚೆನ್ನಾಗಿಯೂ ತೆರೆಯಮೇಲೆ ಕಾಣಿಸುತ್ತಿಲ್ಲವೇಕೆ ಎಂಬುದು ಹಲವರ ಪ್ರಶ್ನೆ. ಚಿತ್ರದ ಪಾತ್ರಗಳಿಗಾಗಿ ಡಿಗ್ಲಾಮರೈಸ್ಡ್ ಆಗಿದ್ದೇ ಹೆಚ್ಚೆನ್ನಬಹುದು. ಪಾತ್ರಕ್ಕೆ ಅಗತ್ಯವೆನಿಸಿದಲ್ಲಿ ಗ್ಲಾಮರಸ್ಸಾಗಲು ನಾನು ಸಿದ್ದಳಿದ್ದೇನೆ. ಆದರೆ ವಲ್ಗಾರಿಟಿಗೆ ನನ್ನ ವಿರೋಧವಿದೆ.
-ಶಶಿಕರ ಪಾತೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


