ಗಣೇಶ್ ಬಂದ ಆಟೋ ತಂದ

ನಟ ಗಣೇಶ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ' ಆಟೋರಾಜ'ದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನಡೆಯಿತು. ನೂರಾರು ಆಟೋ ಚಾಲಕರ ನಡುವೆ ಚಾಲಕರಿಂದಲೇ ಸಿಡಿ ಬಿಡುಗಡೆ ಮಾಡಿಸುವ ಮೂಲಕ ಚಿತ್ರತಂಡ ವೈಶಿಷ್ಟ್ಯ ಮೆರೆಯಿತು. ಈ ಹಿಂದೆ 'ಯೋಗಿ', 'ಕಳ್ಳ ಮಳ್ಳ ಸುಳ್ಳ' ಚಿತ್ರಗಳನ್ನು ನಿರ್ದೇಶಿಸಿದ್ದ ಉದಯ್ ಪ್ರಕಾಶ್ ನಿರ್ದೇಶನದ 'ಆಟೋರಾಜ'ಕ್ಕೆ ಅರ್ಜುನ್ ಜನ್ಯ ಸಂಗೀತ ಇದೆ. ಭಾಮಾ ಹಾಗೂ ದೀಪಿಕಾ ಕಾಮಯ್ಯ ನಾಯಕಿಯರು. ಸ್ಯಾನ್ ಸಿಟಿಯ ವಿಶ್ವ ಕಾರ್ಯಪ್ಪ ಹಾಗೂ ಗಿರೀಶ್ ನಿರ್ಮಾಪಕರು.
ಅದ್ದೂರಿ ವೇದಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಚಿತ್ರದ ಹಾಡುಗಳಿಗೆ ನಾಯಕ ಗಣೇಶ್ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
'ಅಂದುಕೊಂಡಂತೆ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಗಣೇಶ್ರಿಗೆ ಹೊಸ ರೀತಿಯ ಪಾತ್ರ ಇದು. ಪ್ರೀತಿ, ಪ್ರೇಮ, ಸೆಂಟಿಮೆಂಟ್, ಮನರಂಜನೆ ಎಲ್ಲವೂ ಇದೆ. ಪಕ್ಕಾ ಕಮರ್ಷಿಲ್ ಸಿನಿಮಾಗೆ ಬೇಕಾದ ಅಂಶಗಳು ಇಲ್ಲಿವೆ. ಖಂಡಿತ ಗಣೇಶ್ರಿಗೆ ಈ ಚಿತ್ರ ಗೆಲುವಿನ ಚಿತ್ರವಾಗುತ್ತದೆ' ಎಂಬ ಭರವಸೆ ವ್ಯಕ್ತಪಡಿಸಿದರು ಉದಯ್ ಪ್ರಕಾಶ್.
ನಿರ್ಮಾಪಕರಿಬ್ಬರು ಬೇಕಾದಷ್ಟು ಖರ್ಚು ಮಾಡಿದ್ದು ಅದಕ್ಕೆ ತಕ್ಕಂತೆ ಚಿತ್ರ ಮೂಡಿ ಬಂದಿದೆ. ಹಾಡುಗಳ ಪೈಕಿ ರೀಮಿಕ್ಸ್ ತುಂಬಾ ಮೆಚ್ಚುಗೆ ಗಳಿಸಿದೆಯಂತೆ.
'ಚಿತ್ರದ ಶೀರ್ಷಿಕೆಯೇ ತುಂಬಾ ಪವರ್ಫುಲ್ ಆಗಿದೆ. ಎಂದಿನಂತೆ ನನ್ನ ಸ್ಟೈಲಿನ ಚಿತ್ರವಾಗಿರದೆ ನಿಜಕ್ಕೂ ಭಿನ್ನ ಎನ್ನಿಸುವ ಕಥೆ ಮಾಡಿದ್ದಾರೆ ನಿರ್ದೇಶಕರು. ಮೊದಲ ಬಾರಿಗೆ ಆಟೋ ಚಾಲಕರ ಉಡುಪಿನಲ್ಲಿ ಕಾಣಿಸಿಕೊಂಡಿರುವುದು ನನ್ನ ಅದೃಷ್ಟ. ನಿರ್ದೇಶಕ ಉದಯ್ ಪ್ರಕಾಶ್ ಹಾಗೂ ಕಥೆ ಮೇಲೆ ನಂಬಿಕೆ ಇಟ್ಟುಕೊಂಡು ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಖಂಡಿತ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ' ಎಂದರು ಗಣೇಶ್. ನಟಿ ದೀಪಿಕಾ ಕಾಮಯ್ಯ ಗ್ಲಾಮರ್ ಪಾತ್ರ ಮಾಡಿದ್ದಾರೆ.
ಅರ್ಜುನ್ ಜನ್ಯರ ಸಂಗೀತ ಎಂದ ಮೇಲೆ ಎಲ್ಲ ರೀತಿಯ ಹಾಡುಗಳೂ ಚಿತ್ರದಲ್ಲಿರುತ್ತವೆ. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರು ಕೇಳುವಂಥ ಹಾಡುಗಳನ್ನು ಕೊಡುವುದರಲ್ಲಿ ಜನ್ಯ ಅವರದ್ದು ವಿಶೇಷ ಪ್ರತಿಭೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


