ಹೊಸ ಗೆಲುವು

ಒಂದು ಚಿತ್ರದ ಗೆಲುವು ಈ ಮಟ್ಟಕ್ಕೆ ನನಗೆ ಹೆಸರು ತಂದುಕೊಡುತ್ತದೆ ಎಂದುಕೊಂಡಿರಲ್ಲ. ಆದರೆ ನನ್ನ ಮೊದಲ ಚಿತ್ರ ಬಿಡುಗಡೆಯಾಗಿ ಎರಡು ವಾರ ದಾಟಿದ ಕೂಡಲೇ ಬೇರೆ ಬೇರೆ ಚಿತ್ರಗಳ ಕಥೆ ಕೇಳುವ ಅವಕಾಶ ಸಿಕ್ಕಿತು. ಇಲ್ಲಿವರೆಗೂ 40ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದೇನೆ... ಹೀಗೆಂದವರು ನಟ ಕೃಷ್ಣ. ಯಾವ ಚಿತ್ರ? ಯಾವ ಕೃಷ್ಣ? ಎನ್ನುವ ಪ್ರಶ್ನೆ ಮೂಡುವ ಮುನ್ನ ಚಿತ್ರದ ಹೆಸರು ಕೇಳಿ. ಅದು 'ಮದರಂಗಿ'. ಇದರ ನಾಯಕ ಕೃಷ್ಣ. ಹೊಸಬರ ಚಿತ್ರವಾದರೂ 50 ದಿನ ಪೂರೈಸಿದ್ದು, ಮೈಸೂರು ಸೇರಿದಂತೆ ಕೆಲ ಭಾಗಗಳಲ್ಲಿ ನೂರು ದಿನ ಪ್ರದರ್ಶನ ಕಾಣುವುದು ಗ್ಯಾರಂಟಿ ಎಂದು ಚಿತ್ರದ ವಿತರಕ ಎನ್.ಕುಮಾರ್ ಭವಿಷ್ಯ ನುಡಿಯುತ್ತಾರೆ. ಚಿತ್ರದ ನಾಯಕ ಗೆಲುವಿನ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ. ನಿರ್ಮಾಪಕ ನಾಗಪ್ಪ ಕಲೆಕ್ಷನ್ ಲೆಕ್ಕ ಕೊಡುತ್ತಾರೆ. ಅದು 'ಮದರಂಗಿ' ಚಿತ್ರದ ಗೆಲುವಿನ ಪತ್ರಿಕಾಗೋಷ್ಠಿ.
ಚಿತ್ರದ ನಿರ್ದೇಶಕ ಮಲ್ಲಿಕಾರ್ಜುನ್ ಮುತ್ತಲಗೇರಿ, ನಿರ್ಮಾಪಕ ನಾಗಪ್ಪ, ವಿತರಕ ಎನ್. ಕುಮಾರ್, ನಾಯಕ ಕೃಷ್ಣ, ನಾಯಕಿ ಸುಷ್ಮಾ ಎಲ್ಲರು ಚಿತ್ರದ ಗೆಲುವನ್ನು ಹಂಚಿಕೊಳ್ಳಲು ಬಂದಿದ್ದರು. ಇದು ಹೊಸಬರ ಚಿತ್ರ. 'ಒಂದು ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದರೆ ಪ್ರೇಕ್ಷಕರು ನೋಡುತ್ತಾರೆ ಎಂಬುದಕ್ಕೆ ನಮ್ಮ ಚಿತ್ರವೇ ಸಾಕ್ಷಿ. ನಮ್ಮ ನಿರೀಕ್ಷೆಗೆ ತಕ್ಕಂತೆ ಪ್ರೇಕ್ಷಕರನ್ನು ಮೆಚ್ಚಿಸುವುದರಲ್ಲಿ ಚಿತ್ರ ಯಶಸ್ವಿಯಾಗಿದೆ. ನನ್ನಂಥ ಹೊಸ ನಿರ್ದೇಶಕನ ಕೈಯಲ್ಲಿ ಸಿನಿಮಾ ಮಾಡಿಸಿದ ನಾಗಪ್ಪ ಹಾಗೂ ಕೃಷ್ಣ ಅವರಿಗೆ ನಾನು ಋಣಿಯಾಗಿರುತ್ತೇನೆ. ಚಿತ್ರ ಪ್ರದರ್ಶನವಾಗುತ್ತಿರುವ ಕಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಹೊಸಬರಿಗೆ ಇಷ್ಟು ಬೆಂಬಲ ಇದ್ದರೆ ಸಾಕು, ಇನ್ನೂ ಒಳ್ಳೆಯ ಚಿತ್ರಗಳು ಮೂಡಿ ಬರುತ್ತವೆ' ಎಂದರು ಮಲ್ಲಿಕಾರ್ಜುನ್. ವಿಶೇಷ ಎಂದರೆ ಚಿತ್ರದ ನಾಯಕ ಕೃಷ್ಣಗೆ ಈಗಾಗಲೇ ನಾಲ್ಕೈದು ಅವಕಾಶಗಳು ಬಂದಿದೆಯಂತೆ. 'ಚಿತ್ರದ ಈ ಗೆಲುವು ಇಡೀ ತಂಡಕ್ಕೆ ಸೇರಿದ್ದು. ಚಿತ್ರದ ಕುರಿತು ಬಂದ ವಿಮರ್ಶೆಗಳಲ್ಲಿ ನನ್ನ ಅಭಿನಯದಲ್ಲಿ ಸರಿ, ತಪ್ಪುಗಳನ್ನು ಗುರುತಿಸಿದ್ದಾರೆ. ಮುಂದಿನ ಚಿತ್ರದಲ್ಲಿ ಈ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸುತ್ತೇನೆ. ಬಹಳಷ್ಟು ನಿರ್ದೇಶಕರು ಬಂದು ಈಗಾಗಲೇ ಕಥೆ ಹೇಳಿದ್ದಾರೆ. ನನಗೆ ಹೊಂದಾಣಿಕೆಯಾಗುವ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ' ಎಂದರು ನಟ ಕೃಷ್ಣ.
ನಿರ್ಮಾಪಕ ನಾಗಪ್ಪ ಪ್ರಕಾರ ಇತ್ತೀಚೆಗೆ ಬಿಡುಗಡೆಯಾದ ಹೊಸಬರ ಚಿತ್ರಗಳ ಪೈಕಿ 'ಮದರಂಗಿ' ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. 50 ದಿನಗಳ ನಂತರ ಮತ್ತಷ್ಟು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ತಿಳಿಸುತ್ತಾರೆ. ಇನ್ನು ಟಿವಿ ರೈಟ್ಸ್ ಕೂಡ ಒಳ್ಳೆಯ ರೇಟಿಗೆ ಕೇಳುತ್ತಿದ್ದಾರಂತೆ. 'ಈಗಷ್ಟೆ ಚಿತ್ರರಂಗಕ್ಕೆ ಕಾಲಿಡುತ್ತಿರುವ ನನಗೆ 'ಮದರಂಗಿ' ಚಿತ್ರದ ಗೆಲುವು ಖುಷಿ ಕೊಟ್ಟಿದೆ. ನಾನು ಚಿತ್ರರಂಗದಲ್ಲಿ ನೆಲೆಯೂರಬಹುದೆಂಬ ಭರವಸೆ ನೀಡಿದೆ' ಎನ್ನುತ್ತಾರೆ ನಾಯಕಿ ಸುಷ್ಮಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


