ಬಾರೋ ಚಂದಿರ ಇನ್ನೂ ಹತ್ತಿರ
ರೂಪಾ ಅಯ್ಯರ್ ನಿರ್ದೇಶನದ 'ಚಂದ್ರ' ಈ ವಾರ ಪ್ರೇಕ್ಷಕನಿಗೆ ಹತ್ತಿರವಾಗುತ್ತಿದೆ. 'ನೀನು ಹತ್ತಿರ ಇದ್ದಿದ್ದರೆ ಏನು ಅಂದವೋ, ನನ್ನ...

ರೂಪಾ ಅಯ್ಯರ್ ನಿರ್ದೇಶನದ 'ಚಂದ್ರ' ಈ ವಾರ ಪ್ರೇಕ್ಷಕನಿಗೆ ಹತ್ತಿರವಾಗುತ್ತಿದೆ. 'ನೀನು ಹತ್ತಿರ ಇದ್ದಿದ್ದರೆ ಏನು ಅಂದವೋ, ನನ್ನ ಮುತ್ತಿಗೆ ಸಿಕ್ಕಿದ್ದರೇ ಆಹಾ ಏನು ಅಂದವೋ' ಎನ್ನುವಂಥ ರೊಮ್ಯಾಂಟಿಕ್ ಸಿನಿಮಾ ಇದು. ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಾಯಕಿಯರಲ್ಲೊಬ್ಬರಾದ ಶ್ರೀಯಾ ಶರಣ್ ಮತ್ತು ಕನ್ನಡದ ಲವ್ಲೀ ಸ್ಟಾರ್ ಪ್ರೇಮ್ ಅಭಿನಯಿಸಿರುವ ರಾಯಲ್ ಸ್ಟೋರಿ 'ಚಂದ್ರ', ಕೇವಲ 'ರಾಯಲ್ ಲವ್ಸ್ಟೋರಿ' ಅಷ್ಟೇ ಅಲ್ಲ, ಒಂದು ಅಪ್ಪಟ, ಪ್ರಾಮಾಣಿಕ 'ಲಾಯಲ್ ಲವ್ಸ್ಟೋರಿ' ಕೂಡ ಹೌದು ಎನ್ನುವುದು ನಿರ್ದೇಶಕಿ ರೂಪಾ ಹೇಳುವ ಮಾತು. ಈ ವಾರ ಕನ್ನಡ ಪ್ರೇಕ್ಷಕರಿಗೆ ಒಂದು ಕಲರ್ಫುಲ್ ಲವ್ಸ್ಟೋರಿ ಕೊಡುತ್ತಾ ರೂಪಾ ಅಯ್ಯರ್ ಇಲ್ಲಿ ತಮ್ಮ ಎರಡನೇ ಸಿನಿಮಾದ ಬಗ್ಗೆ ಎರಡು ಮಾತುಗಳನ್ನಾಡಿದ್ದಾರೆ. ಪ್ರೇಕ್ಷಕರು 'ಬಾರೋ ಚಂದಿರ ಇನ್ನೂ ಹತ್ತಿರ' ಎನ್ನುವುದಷ್ಟೇ ಬಾಕಿ.
ನಿಮ್ಮ ಮೊದಲ ಚಿತ್ರ 'ಮುಖಪುಟ'ಕ್ಕೂ 'ಚಂದ್ರ'ನಿಗೂ ಏನು ವ್ಯತ್ಯಾಸ?
ಅದು ರಿಯಲಿಸ್ಟಿಕ್, ಇದು ಫಿಲ್ಮೀ. ಅದು ಸಿಂಪಲ್, ಇದು ಗ್ರ್ಯಾಂಡ್ ಅಂಡ್ ಕಲರ್ಪುಲ್. ಅದು ಲೋ ಬಜೆಟ್ ಚಿತ್ರ, ಇದು ಹೈ ಬಜೆಟ್ ಚಿತ್ರ. ಅದನ್ನು ಆರ್ಟ್ ಎನ್ನಬಹುದು, ಇದು ಕಮರ್ಷಿಯಲ್. ಆದರೆ ಖಂಡಿತವಾಗಿಯೂ ಎರಡೂ ಒಳ್ಳೆಯ ಚಿತ್ರಗಳು.
ಈಗ ಚಂದ್ರ ಸಿನಿಮಾ ಮಾಡಿದ್ದೀರಿ. ಈ ಸಬ್ಜೆಕ್ಟ್ ಸಿಕ್ತು ಅಂತ ಸಿನಿಮಾ ಮಾಡೋಕೆ ಹೊರಟಿದ್ದಾ? ಅಥವಾ ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದಮೇಲೆ ಸಬ್ಜೆಕ್ಟ್ ಹುಡುಕಿದ್ದಾ?
ಒಂಥರಾ ಎರಡೂ ಆಯ್ತು. ಸಿನಿಮಾ ಅನ್ನೋದು ನನ್ನ ಪ್ರಮುಖ ವೃತ್ತಿ ಅಲ್ಲ. ನನ್ನ ಹಲವು ಪ್ರವೃತ್ತಿಗಳಲ್ಲಿ ಇದೂ ಒಂದು. 'ಮುಖಪುಟ'ದ ಮತ್ತೊಂದು ಸಿನಿಮಾ ಮಾಡಬೇಕೂಂತ ಆಸೆ ಇತ್ತು. ಆದರೆ ಸ್ಫೂರ್ತಿ ಕೊಡುವಂಥ ಕಥೆ ಸಿಕ್ಕಿರಲಿಲ್ಲ. ರಾಜಮನೆತನದ ಒಂದು ಲವ್ಸ್ಟೋರಿ ಕೇಳಿದ ಮೇಲೆ ಇದನ್ನೇ ಸಿನಿಮಾ ಮಾಡಬೇಕು ಅಂತ ಶುರುಮಾಡಿದ್ದು.
'ಮುಖಪುಟ'ದಲ್ಲಿ ನೀವೇ ಡೀಗ್ಲಾಮರಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದಿರಿ. 'ಚಂದ್ರ' ಚಿತ್ರ ಅದಕ್ಕೆ ಸಂಪೂರ್ಣ ವಿರುದ್ಧವಾದದ್ದು ಅನಿಸುತ್ತೆ. ಪೂರ್ತಿ ಗ್ಲಾಮರಸ್ ಆಗಿದೆ ಅಲ್ವಾ?
ಇದು ಗ್ಲಾಮರ್ ಓರಿಯೆಂಟೆಡ್ ನಿಜ. ಆದರೆ ಅದಕ್ಕೆ ಪ್ರೀತಿಯ ಟಿಂಟ್ ಹಾಕಿದ್ದೇನೆ. ಇದು ರೊಮ್ಯಾಂಟಿಕ್ ಮತ್ತು ಅಟ್ರಾಕ್ಟಿವ್ ಚಿತ್ರ. ಗ್ಲಾಮರ್ನ ದುರ್ಬಳಕೆ ಮಾಡಿಕೊಂಡಿಲ್ಲ. ಇಲ್ಲಿರುವುದು ಸಹಜವಾದ ಪ್ರೇಮ ಮತ್ತು ಪ್ರಣಯ.
ಪ್ರೇಕ್ಷಕ ಚಂದ್ರ ಚಿತ್ರವನ್ನು ಯಾರಿಗಾಗಿ ನೋಡಬೇಕು? ಶ್ರೀಯಾ? ಪ್ರೇಮ್? ರೂಪಾ ಅಯ್ಯರ್?
ಚಂದ್ರ ಎಲ್ಲರ ಪ್ರಯತ್ನದ ಫಲ. ನಿಜ ಚಿತ್ರದ ಒಂದೊಂದು ಫ್ರೇಮ್ ಕೂಡ ಪೇಂಟಿಂಗ್ನಂತೆ ಬರಬೇಕು ಎಂದು ಆಸ್ಥೆ ವಹಿಸಿ ಮಾಡಿದ್ದೇನೆ. ಆದರೆ ನನ್ನ ಕನಸಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಇದನ್ನೊಂದು ಒಳ್ಳೆಯ ಸಿನಿಮಾ ಅಂತ ಜನ ನೋಡಲಿ ಅಷ್ಟೆ.
ಸದ್ಯಕ್ಕೆ ನಿಮ್ಮ ಮತ್ತು ಪ್ರೇಮ್ ಮಧ್ಯೆ ಇರೋ ಬಿನ್ನಾಭಿಪ್ರಾಯ ಬಿಟ್ಟು ಹೇಳಿ. 'ಚಂದ್ರ' ಚಿತ್ರದ ನಾಯಕನಾಗಿ ಪ್ರೇಮ್ ಅಭಿನಯದ ಬಗ್ಗೆ ನಿಮ್ಮ ಅನಿಸಿಕೆ?
ಪ್ರೇಮ್ ಅವರ ಪಾತ್ರ, ಅವರ ಗೆಟಪ್ ಎಲ್ಲವನ್ನೂ ಶ್ರದ್ಧೆಯಿಂದ ನಿರ್ಧಾರ ಮಾಡಿದ್ದೆ. ಅವರ ಅಪಿಯರೆನ್ಸ್ ಹೀಗೇ ಇರಬೇಕು, ಅವರ ಮುಖಭಾವ, ಬಾಡಿ ಲ್ಯಾಂಗ್ವೇಜ್ ಎಲ್ಲವನ್ನೂ ಡಿಸೈಡ್ ಮಾಡಿದ್ದೆ. ನನ್ನ ಎಲ್ಲ ಕಲ್ಪನೆಗೆ ತಕ್ಕಂತೆ ಪ್ರೇಮ್ ಅಭಿನಯಿಸಿದ್ದಾರೆ. ಅವರು ನಿರ್ದೇಶಕರ ನಟ. ಒಂದು ದೃಶ್ಯ ಅಷ್ಟು ಸಮಾಧಾನ ಆಗಲಿಲ್ಲ ಅಂತ ಸಣ್ಣ ಹಿಂಟ್ ಕೊಟ್ಟರೂ ಇನ್ನೊಮ್ಮೆ ಮಾಡೋಣ ಎನ್ನುತ್ತಿದ್ದರು.
ನಿರ್ದೇಶಕಿಯಾಗಿ, ಶ್ರಿಯಾ ಅವರ ಅಭಿನಯದ ಬಗ್ಗೆ ಏನು ಹೇಳ್ತೀರಿ. ಗ್ಲಾಮರ್ ಒಂದೇ ಅವರ ಆಸ್ತಿನಾ?
ಖಂಡಿತಾ ಅಲ್ಲ. ಈ ಚಿತ್ರದಲ್ಲಿ ಒಬ್ಬ ನಟಿ ತನ್ನಲ್ಲಿರುವ ಹೆಣ್ತನದ ಸೂಕ್ಷ್ಮಗಳನ್ನು ತೋರಿಸಬೇಕಾಗಿತ್ತು. ಮಾಡೆಲಿಂಗ್ ಮಾಡುವುದು ಸುಲಭ. ಆದರೆ ಇದು ಕಷ್ಟ. ಇಲ್ಲಿ ಆಕೆ 'ಐ ಲವ್ ಯೂ' ಎಂದರೆ ಅದು ಅತ್ಯಂತ ಸಹಜವಾಗಿರಬೇಕಿತ್ತು.
ನನ್ನ ಪಾತ್ರವನ್ನು ಗ್ರಹಿಸಿ, ತಾನೊಬ್ಬಳು ರಾಜಕುಮಾರಿ ಎಂಬುದನ್ನು ಅನುಭವಿಸಿ ಅಭಿನಯಿಸಿದ್ದಾರೆ ಶ್ರೀಯಾ. ಅಲ್ಲದೆ, ಕಲರಿಪಯಟ್ಟು ಫೈಟ್ನಲ್ಲಿ ಕೇಬಲ್ ಇಲ್ಲದೆ ಜಂಪ್ ಮಾಡಿ ಫೈಟ್ ಕೂಡಾ ಮಾಡಿದ್ದಾರೆ.
ಸಿನಿಮಾ ಶುರುವಾದಾಗಿನಿಂದ ನಿರ್ಮಾಪಕರು ಬದಲಾಗ್ತಾನೇ ಇದ್ರು. ಯಾಕೆ?
'ಚಂದ್ರ' ಚಿತ್ರಕ್ಕೆ ಮೊದಲ ದಿನದಿಂದಲೂ ನನ್ನ ಇಂಡಿಯಾ ಕ್ಲಾಸಿಕ್ ಆರ್ಟ್ಸ್ ಕಂಪನಿಯದ್ದೇ ನಿರ್ಮಾಣ.
ಮಧ್ಯದಲ್ಲಿ ಸಹನಿರ್ಮಾಪಕರಾಗುತ್ತೇವೆ ಎಂದು ಒಂದಷ್ಟು ಜನ ಬಂದುಹೋದರು ಅಷ್ಟೆ. ಅದಕ್ಕೆ ಅವರವರ ಅನಿವಾರ್ಯತೆ, ತೊಂದರೆ ಕಾರಣ.
ಅಶೋಕ್ ಖೇಣಿ ಏನೋ ಕೇಸು ಹಾಕಿದಾರಂತೆ. ನೀವು 'ಖೇಣಿ ಕೇಳಿ' ಸಿನಿಮಾ ಮಾಡಬೇಕಿತ್ತಂತಾ?
ಖೇಣಿ ಅವರಿಗೆ ಪ್ರಸಾದ್ ದುಡ್ಡು ಕೊಡಬೇಕು ಎಂಬ ಕಾರಣಕ್ಕೆ ಈ ಕೇಸು ಹಾಕಲಾಗಿದೆ. ಆದರೆ ವಾಣಿಜ್ಯ ಮಂಡಳಿಯಲ್ಲಿ ಈ ಕೇಸು ರಿಜೆಕ್ಟ್ ಆಗಿದೆ. ಏಕೆಂದರೆ ಪ್ರಸಾದ್ ವಾಣಿಜ್ಯ ಮಂಡಳಿಯ ನಿರ್ಮಾಪಕರ ಸಂಘದ ಸದಸ್ಯರೇ ಅಲ್ಲ. ಅವರು ಕೇವಲ ವಿತರಕರು. ಅಲ್ಲದೆ, ನಮ್ಮ ಚಿತ್ರಕ್ಕೂ ಪ್ರಸಾದ್ಗೂ ಸಂಬಂಧ ಇಲ್ಲ. ಹಾಗಾಗಿ ಈ ಕೇಸಿಗೆ ಬೆಲೆ ಇಲ್ಲ.
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


