ಸಿನಿಮಾ ಲೇಖನ

ನವೀನ್ ಕೃಷ್ಣ

ನಟ ನವೀನ್ ಕೃಷ್ಣ ಮತ್ತೆ ತಮ್ಮ ಹೊಸ ಚಿತ್ರದೊಂದಿಗೆ ಬಂದಿದ್ದಾರೆ.

ನವೀನ್ ಕೃಷ್ಣ
Published On :

ನಟ ನವೀನ್ ಕೃಷ್ಣ ಮತ್ತೆ ತಮ್ಮ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಗೆಲುವಿಗಿಂತ ಸೋಲನ್ನೇ ಹೆಚ್ಚು ಕಂಡಿದ್ದರೂ ದೇವರ ಮೇಲೆ ಭಾರ ಹಾಕಿ ಸಿನಿಮಾ ಕಾಯಕವನ್ನು ಮುಂದುವರಿಸುತ್ತಲೇ ಇದ್ದ ನವೀನ್ ಈ ಬಾರಿ 'ಬಿಡಲಾರೆ ಎಂದೂ ನಿನ್ನ' ಎಂಬ ಹಾರರ್ ಚಿತ್ರದ ಮೂಲಕ ದೆವ್ವದ ಮೇಲೆ ಭಾರ ಹಾಕಿದ್ದಾರೆ. ಗಾಂಧಿನಗರದಲ್ಲಿ ಎಲ್ಲರ ಬಾಯಲ್ಲೂ ನವೀನ್ ಪ್ರತಿಭಾವಂತ ನಟ ಎಂಬ ಮಾತು ಆಗಾಗ ಕೇಳಿಬರುತ್ತಲೇ ಇರುತ್ತದೆ. ಆದರೆ ದೊಡ್ಡ ಮಟ್ಟದ ಯಶಸ್ಸು ಎಂಬುದು ನವೀನ್ ಕಡೆ ತೇಲಿ ಬಂದಿದ್ದು ಕಡಿಮೆಯೇ. ಆದರೂ, ತಮ್ಮ
ಮತ್ತೊಂದು ಪ್ರಯತ್ನದಲ್ಲಿ, ಕನ್ನಡ ಪ್ರೇಕ್ಷಕ ಒಳ್ಳೆಯ ಚಿತ್ರಗಳನ್ನು ಕೈ ಬಿಡುವುದಿಲ್ಲ ಎಂಬ ಎಲ್ಲರ ನಂಬಿಕೆಯೊಂದಿಗೆ 'ಬಿಡಲಾರೆ ಎಂದೂ ನಿನ್ನ' ಎಂಬುದು ಪ್ರೇಕ್ಷಕರ ಮನಸ್ಸಿನ ಮಾತಾಗುತ್ತದೆ ಎಂಬ ಹುಮ್ಮಸ್ಸಿನಲ್ಲಿರುವ ನವೀನ್ ಕೃಷ್ಣ ಅವರ ಮಾತುಗಳು ಇಲ್ಲಿವೆ.

'ಬಿಡಲಾರೆ ಎಂದೂ ನಿನ್ನ' ಚಿತ್ರದ ಸಕ್ಸಸ್ ನಿಮಗೆಷ್ಟು ಮುಖ್ಯ?
ಈ ಚಿತ್ರ ನನಗೆ ತುಂಬಾ ಮುಖ್ಯ. ಇದರ ನಂತರ ಇನ್ಯಾವ ಚಿತ್ರಗಳೂ ನನ್ನ ಕೈಲಿಲ್ಲ. ಹಾಗಾಗಿ ಈ ಚಿತ್ರದ  ಮೇಲೆ ಡಿಪೆಂಡ್ ಆಗಿದ್ದೇನೆ. ಆದರೆ ಕೈಯಲ್ಲಿ ಸಿನಿಮಾ ಇಲ್ಲ ಅನ್ನೋ ಕಾರಣಕ್ಕೆ ಹೇಳುತ್ತಿಲ್ಲ. ಈ ಚಿತ್ರ ಎಷ್ಟು
ದಿನ ಓಡುತ್ತೋ ಗೊತ್ತಿಲ್ಲ, ಆದರೆ ಖಂಡಿತಾ ಇದು ದುಡ್ಡು ಮಾಡುತ್ತದೆ ಎನ್ನುವ ನಂಬಿಕೆ ನನಗಿದೆ.

ಬಿಡಲಾರೆ ಎಂದೂ ನಿನ್ನ ಒಂದು ಒಳ್ಳೆಯ ಹಾರರ್ ಸಿನಿಮಾ ಬಂದು ಬಹಳ ದಿನ ಆಯ್ತು ಅನ್ನೋ ಕೊರಗನ್ನು ನಿವಾರಿಸುತ್ತಾ?
ನೂರಕ್ಕೆ ನೂರರಷ್ಟು ಹೌದು. ಇದು ಸೂಪರ್, ಅದ್ಭುತ ಎಂದೆಲ್ಲಾ ಹೇಳೊಲ್ಲ. ಆದರೆ ಒಂದು ಡೀಸೆಂಟ್ ಚಿತ್ರ. ಹಾರರ್ ಸಿನಿಮಾ ಎಂದರೆ ಒಂದಷ್ಟು ಕೆಟ್ಟ, ಭಯಾನಕ ಮುಖಗಳು, ಅಥವಾ ಸೌಂಡ್‌ನಲ್ಲೇ ಹೆದರಿಸೋದು ಇದೆಲ್ಲಾ ಬಿಟ್ಟು, ಕಥೆಯಲ್ಲಿನ  ಟ್ವಿಸ್ಟ್‌ಗಳಿಂದಾಗಿ  ಚಿತ್ರ ಗಮನ ಸೆಳೆಯುತ್ತದೆ.


ಚಿತ್ರದಲ್ಲಿ ನಿಮ್ಮ ಇನ್‌ವಾಲ್ವ್‌ಮೆಂಟ್ ಎಷ್ಟಿದೆ?
ಮೊದಲು ಹೀರೋ ಅಷ್ಟೇ ಆಗಿದ್ದೆ. ನಂತರ ಕೋ ಡೈರೆಕ್ಟರ್ ಆದೆ. ಪತ್ರಿಕೆಗಳಲ್ಲಿ ಬರುತ್ತಿರುವ ಜಾಹೀರಾತುಗಳ ಕಾನ್ಸೆಪ್ಟ್ ಮತ್ತು ಡಿಸೈನ್ ಎಲ್ಲವೂ ನನ್ನದೆ. ಆರಂಭದಲ್ಲಿದ್ದ ಚಿತ್ರಕಥೆಯಲ್ಲೂ ಕೈಯಾಡಿಸಿ ಒಂದಷ್ಟು ಟ್ವಿಸ್ಟ್‌ಗಳನ್ನು ಸೇರಿಸಿದ್ದೇನೆ. ಇನ್ನು ಎಂದಿನಂತೆ ನನ್ನ ಸಂಭಾಷಣೆಗಳಲ್ಲೂ 'ನನ್ನತನ' ಇದೆ.

ಸಿನಿಮಾಗಳು ಗೆಲ್ಲುತ್ತವೋ, ಸೋಲುತ್ತವೋ ನಿಮ್ಮ ಎಲ್ಲ ಚಿತ್ರಗಳವಲ್ಲೂ ಏನಾದರೂ ಹೊಸತನ ಇರುತ್ತೆ. ಈ ಸಿನಿಮಾದಲ್ಲಿ ಯಾವ ನವೀನತೆ ಇದೆ?
ಈ ಚಿತ್ರದ ಚಿತ್ರಕಥೆಯೇ ವಿಶೇಷ. ಯಾರೋ ಸಾಯ್ತಾರೆ, ದೆವ್ವ ಆಗಿ ಕಾಡಿಸ್ತಾರೆ ಅಥವಾ ಒಂದು ಪಾಳು ಬಿದ್ದ ಮನೆ ಇದೆ. ಅಲ್ಲಿ ನಿಗೂಢವಾದದ್ದು ನಡೆಯುತ್ತದೆ ಎನ್ನುವಂಥ ಕಥೆ ಇಲ್ಲಿಲ್ಲ. ಇಲ್ಲಿನ ಘಟನೆಗಳಲ್ಲಿ ಟ್ವಿಸ್ಟ್ ಇದೆ, ಚಿತ್ರಕಥೆಯಲ್ಲಿ ಟ್ವಿಸ್ಟ್ ಇದೆ, ಕ್ಲೈಮ್ಯಾಕ್ಸ್‌ನಲ್ಲೂ ಟ್ವಿಸ್ಟ್ ಇದೆ. ಪ್ರೇಕ್ಷಕರು ಅಂದುಕೊಂಡಿದ್ದೆಲ್ಲಾ ಸುಳ್ಳಾಗುವ ಅಚ್ಚರಿ ಇದೆ.

ನಿಮ್ಮ ಅತಿ ಪ್ರಯೋಗವೇ ನಿಮಗೆ ಮುಳುವಾಯ್ತು ಅಂತ ಯಾವಾಗಾದ್ರೂ ಅನಿಸಿದೆಯಾ?
ಪ್ರಯೋಗದ ಜೊತೆಗೆ ಮನರಂಜನೆಯನ್ನೂ ಕೊಡಲು ಯತ್ನಿಸಿದ್ದೇನೆ. ಈ ಚಿತ್ರದಲ್ಲೂ ಅದನ್ನೇ ಮಾಡಿದ್ದೇನೆ. ಇಲ್ಲಿ ಪ್ರೇಕ್ಷಕರನ್ನು ಹೆದರಿಸುವುದೇ ಉದ್ದೇಶ ಅಲ್ಲ. ಎಲ್ಲರೂ ಸೇರಿ ಪಕ್ಕಾ ಮನರಂಜನೆ ನೀಡಿದ್ದೇವೆ ಎಂದು ಹೇಳಬಲ್ಲೆ.

ನೀವು ಸೋಲುಗಳಿಂದ ನಿರಾಶರಾದಾಗಲೂ ನಿಮ್ಮ ಮೇಲೆ ಎಲ್ಲರಿಗೂ ನಂಬಿಕೆ, ವಿಶ್ವಾಸ ಇರುತ್ತದೆ ಅಲ್ಲವೇ?
ಹೌದು. ಅದನ್ನು ಉಳಿಸಿಕೊಳ್ಳಬೇಕಿದೆ. ಆದರೆ, ಇದು ನನಗೆ ಕಡೇ ಪರೀಕ್ಷೆ ಎನ್ನಬಹುದು. ತಾಂತ್ರಿಕವಾಗಿ, ಅಭಿನಯದಲ್ಲಿ, ಕ್ರಿಯೇಟಿವ್ ಆಗಿ ಈ ಚಿತ್ರದ ಎಲ್ಲ ವಿಭಾಗಗಳಲ್ಲೂ ತೊಡಗಿಕೊಂಡಿದ್ದೇನೆ. ಹಾಗಾಗಿ ನಿರೀಕ್ಷೆ ಇದೆ. ಹಾಗಾಗಿಯೇ ನಾನು ಈ ಚಿತ್ರವನ್ನು ಎಲ್ಲಾ ಕಡೆ ಅಷ್ಟೊಂದು ಪ್ರಮೋಟ್ ಮಾಡುತ್ತಿದ್ದೇನೆ. ಥಿಯೇಟರ್ ಎದುರಿಗೆ ಪಟಾಕಿ, ಹೂವಿನ ಹಾರಗಳ ಬದಲು ಒಂದು 'ಸ್ಕೇರಿ ಹೌಸ್‌'ನ ಸೆಟ್ ಹಾಕುತ್ತಿದ್ದೇವೆ.

ನಿರ್ದೇಶನ ಮಾಡ್ತೀರಿ ಅಂತ ಸುದ್ದಿ ಇದೆ. ನಿಜನಾ?
ಅದೇ ನನ್ನ ಮುಂದಿನ ಹೆಜ್ಜೆ. ಆದರೆ ಅವಸರವಿಲ್ಲ. ಸರಿಯಾದ ನಿರ್ಮಾಪಕರು ಸಿಗಬೇಕು. ದೊಡ್ಡಮಟ್ಟದಲ್ಲಿ ಬರಬೇಕು ಎನ್ನೋದು ನನ್ನ ಆಸೆ. ಎರಡು ಮೂರು ಕಥೆಗಳನ್ನು ಬರೆದಿಟ್ಟುಕೊಂಡಿದ್ದೇನೆ. ಎಂಥದೋ ಒಂದು ಸಿನಿಮಾ ಮಾಡೋಣ ಎಂಬ ಆಸೆ ಇಲ್ಲ. ಹಾಗಾಗಿ ಒಳ್ಳೆಯ ನಿರ್ಮಾಪಕರಿಗಾಗಿ ಹುಡುಕಾಟ ನಡೆಸಿದ್ದೇನೆ. 'ಬಿಡಲಾರೆ ಎಂದೂ ನಿನ್ನ' ಚಿತ್ರದ ನಿರ್ಮಾಪಕರೇ ನಮ್ಮ ಮುಂದಿ ನ ಚಿತ್ರಕ್ಕೆ ನೀವೇ ನಿರ್ದೇಶನ ಮಾಡಿ ಎಂದಿದ್ದಾರೆ. ನೋಡಬೇಕು.

- ಲಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.