ಸಿಂಪಲ್ ಸೆಂಚೂರಿ

'ಸಿಂಪಲ್ಲಾಗೊಂದ್ ಲವ್ಸ್ಟೋರಿ' ಚಿತ್ರಕ್ಕೀಗ 'ಎಲ್ಲಿಂದ ಹೇಳುವುದೋ, ಶುರುವಿನಲೇ ಮುಗಿಯುವುದೋ, ಮುಗೀತಪ್ಪ ಅಂದುಕೊಂಡ್ರೆ ಮತ್ತೆ ಶುರುವಾಗುವುದೋ' ಎಂಬಂಥ ಹೊತ್ತು. ಮೊನ್ನೆ ಮೊನ್ನೆ ವರ್ಷದ ತಾಜಾ ಚಿತ್ರಕ್ಕೆ 100 ದಿನಗಳ ಸಂಭ್ರಮ. ಆದ್ರೆ ಸಿಂಪಲ್ ಸಂಭ್ರಮ ಇಲ್ಲಿಗೆ ಮುಗೀತು ಎಂದುಕೊಂಡ್ರೆ ಅದು ತಪ್ಪು. ಏಕೆಂದರೆ ಮೊನ್ನೆ ಶುಕ್ರವಾರ ರಾಜ್ಯಾದ್ಯಂತ ಮತ್ತೆ 'ಸಿಂಪಲ್ಲಾಗೊಂದ್ ಲವ್ಸ್ಟೋರಿ' ಬಿಡುಗಡೆಯಾಗಿದೆ. ಮುಂದಿನ ವಾರ ಮತ್ತಷ್ಟು ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ.
ಆರಂಭದಲ್ಲಿ ಬಿ ಮತ್ತು ಸಿ ಸೆಂಟರ್ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಆಸಕ್ತಿ ತೋರಿಸಿರಲಿಲ್ಲವಾದ್ದರಿಂದ ಚಿತ್ರ ಹಿಟ್ ಆದಮೇಲೆ ನಿರ್ದೇಶಕ ಸುನಿ ಮತ್ತು ತಂಡಕ್ಕೆ ಬಹಳಷ್ಟು ಕಡೆಯಿಂದ ನಮ್ ಏರಿಯಾದಲ್ಲೊಂದ್ ಥೇಟರ್ರಲ್ಲಿ ಬಿಡುಗಡೆ ಮಾಡಿ ಎಂಬ ಒತ್ತಾಯಗಳು ಕೇಳಿಬಂದಿದ್ದವಂತೆ. ಹಾಗಾಗಿ, ಮತ್ತೆ ಸಿಂಪಲ್ ಸಂಭ್ರಮ ಶುರುವಾಗಿದೆ. ಮೊನ್ನೆ ತ್ರಿಭುವನ್ ಚಿತ್ರಮಂದಿರದಲ್ಲಿ ಮಾರ್ನಿಂಗ್ ಶೋನಲ್ಲಿ ಇಡೀ ಸುನಿ ತಂಡ ಸೇರಿತ್ತು. ಆದರೆ ಮರುಬಿಡುಗಡೆಗೆ ಅಬ್ಬರದ ಪ್ರಚಾರ ನೀಡಿಲ್ಲದ ಕಾರಣ ಅನೇಕರಿಗೆ ಸಿನಿಮಾ ಬಿಡುಗಡೆಯಾಗಿರುವುದೇ ಗೊತ್ತಿಲ್ಲದೆ ಚಿತ್ರಮಂದಿರ ಅಷ್ಟೊಂದು ಜನಭರಿತವಾಗಿರಲಿಲ್ಲ. ಆದರೂ ಚಿತ್ರಮಂದಿರವನ್ನು ನಗೆಭರಿತವನ್ನಾಗಿಸಿದ್ದು ಇದೇ ಸುನಿ ತಂಡ. ಸಿನಿಮಾವೊಂದು ಮೊದಲ ದಿನದ ಮೊದಲ ಶೋ ಖಾಲಿ ಹೊಡೆದರೆ ಅದು ಚಿತ್ರತಂಡದ ಪಾಲಿಗೆ ಮರ್ಮಾಘಾತ. ಕನಸುಗಳಿಗೆ ಬೆಂಕಿ ಬಿದ್ದ ಅನುಭವ. ಆದರೆ ಈಗಾಗಲೇ ಸೂಪರ್ ಸಕ್ಸಸ್ ಕಂಡು, ಅದು ಮರುಬಿಡುಗಡೆಯ ಸಮಯವಾದ್ದರಿಂದ ಸುನಿ ಅಂಡ್ ಟೀಮ್ ಜನ ಕಡಿಮೆ ಎಂದು ಬೇಸರಪಡುವಂಥದ್ದೇನಿರಲಿಲ್ಲ. ಅದರ ಬದಲಾಗಿ ಈ ಸ್ನೇಹಿತರ ತಂಡ ಚಿತ್ರಮಂದಿರದಲ್ಲಿ ಕುಳಿತು ಒಂದಿಷ್ಟು ಮಜಾ ತೆಗೆದುಕೊಂಡಿತು. ಚಿತ್ರದ ಆರಂಭದಲ್ಲಿ ನಾಯಕನ ಪ್ರವೇಶ ಆಗುತ್ತಿದ್ದಂತೆ ತಂಡದ ಒಬ್ಬ ವ್ಯಕ್ತಿಯ ಕಡೆಯಿಂದ ಫುಲ್ ವಾಲ್ಯೂಮ್ ಸೀಟಿ. ಅದು ನಾಯಕ ರಕ್ಷಿತ್ ಶೆಟ್ಟಿದ್ದೇ ಕೆಲಸ ಎಂಬುದು ಮಾತ್ರ ಅಲ್ಲಿನ ಕಿಕ್. ಅದಷ್ಟೇ ಅಲ್ಲ ಟೈಟಲ್ ಕಾರ್ಡ್ನಲ್ಲಿ ತನ್ನ ಹೆಸರು ಬಂದಾಕ್ಷಣ ನಿರ್ದೇಶಕ ಸುನಿ ಅವರ ಸೀಟಿ, ಚಪ್ಪಾಳೆ.
ಹಾಡು ಬಂದಾಕ್ಷಣ ಸಂಗೀತ ನಿರ್ದೇಶಕ ಭರತ್ ಕೇಕೆ. ಮಚ್ಚಾ ಏನ್ ಸಾಂಗ್ ಮಾಡಿದಾನೋ ಎಂಬ ಹೊಗಳಿಕೆ. ಚಿತ್ರದ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿರುವ ಗೆಳೆಯರ ಬಳಗದ್ದೂ ಇದೇ ರಿಯಾಕ್ಷನ್. ಎಲ್ಲದಕ್ಕೂ ನಿರ್ಮಾಪಕ ಹೇಮಂತ್ ಅವರ ಸಾರಥ್ಯ. ತಂತಮ್ಮ ಕೆಲಸ ತಾವೇ ಮಾಡಿಕೊಳ್ಳಬೇಕು ಎಂಬಂತೆ ಎಲ್ಲರೂ ತಮಗೆ ತಾವೇ 'ಬಹುಪರಾಕ್' ಹೇಳಿಕೊಂಡು, ಕೊನೆಗೆ ಸಿನಿಮಾ ಮುಗಿಯುವ ಸಮಯದಲ್ಲಿ ಬೇಕಂತಲೇ 'ಲೇ, ಮುಗೀತು, ಬನ್ರೋ ಹೋಗೋಣ' ಎಂದು ಸೀಟಿನಿಂದ ಎದ್ದು ಎರಡು ಹೆಜ್ಜೆ ಹಾಕಿ, ಮತ್ತೆ 'ಅಯ್ಯೋ ಇನ್ನೂ ಮುಗಿದಿಲ್ಲ ಕಣ್ರೋ' ಎನ್ನುತ್ತಾ ವಾಪಸ್ಸು ಬಂದು ಕೂತು, 'ಉಳಿದವರು ಕಂಡಂತೆ' ತಾವೂ ತಮ್ಮ ಸಿನಿಮಾ ನೋಡುತ್ತಾ ನೆರೆದಿದ್ದ ಅರೆಬರೆ ಜನಸ್ತೋಮಕ್ಕೆ ಮಜಾ ಕೊಟ್ಟಿದ್ದು ಅಂದಿನ ವಿಶೇಷ. ಅಂತೂ ಸಿಂಪಲ್ ಸಂಭ್ರಮಕ್ಕೆ ಮತ್ತೆ ಚಾಲನೆ ದೊರೆತಿದೆ ಎಂಬುದು ಸದ್ಯದ ಸುದ್ದಿ.
ಬಾಕ್ಸ್ ಆಫೀಸ್ನಲ್ಲಿ ಮಹಾನದಿ, ರಾಧನ ಗಂಡ.
ಇನ್ನು ಈ ವಾರದ ಬಾಕ್ಸ್ ಆಫೀಸ್ ವಿಷಯದಲ್ಲಿ ಶಿವರಾಜ್ಕುಮಾರ್, ಸೂರಿ ಕಾಂಬಿನೇಶನ್ನ ಕಡ್ಡಿಪುಡಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದರೆ, ಕಳೆದ ವಾರ ಬಿಡುಗಡೆಯಾದ ಇನ್ನೆರಡು ಚಿತ್ರಗಳ ಬಾಕ್ಸ್ ಆಫೀಸ್ ವಿಷಯ ಅಷ್ಟೇನೂ ಆಶಾದಾಯಕವಾಗಿಲ್ಲ. 'ಮಹಾನದಿ' ಚಿತ್ರಕ್ಕೆ ಸ್ಟಾರ್ಗಳ ಕೊರತೆ ಕಾಡುತ್ತಿದೆ. ಇದು ಹಳೆಯ ಕಾಲದ ಕಥೆ ಎಂದಿರುವ ಪ್ರೇಕ್ಷಕರ ಪ್ರತಿಕ್ರಿಯೆ ಸುಮಾರು. ಇನ್ನು ಕೋಮಲ್ ಅಭಿನಯದ 'ರಾಧನ್ ಗಂಡ' ಚಿತ್ರದ್ದೂ ಇದೇ ಕಥೆ. ಜಗ್ಗೇಶ್ ತಮ್ಮ ಕೆರಿಯರ್ನ ಆರಂಭದ ದಿನಗಳಲ್ಲಿ ಮಾಡಿದಂಥ ಹೆಂಡತಿ ಪ್ರಧಾನ ಹಾಸ್ಯ ಚಿತ್ರಗಳ ದಾರಿ ತುಳಿದಿರುವ 'ರಾಧನ್ ಗಂಡ' ಪ್ರೇಕ್ಷಕರನ್ನು ಆಕರ್ಷಿಸುತ್ತಿಲ್ಲ. ಕಿಂಗ್ ರವಿಕುಮಾರ್ ಅವರ ಮೇಕಿಂಗ್ನಲ್ಲೂ ವಿಶೇಷವಿಲ್ಲ ಎನ್ನುತ್ತಿದ್ದಾನೆ ಪ್ರೇಕ್ಷಕ. ರಾಧನ್ ಗಂಡ ನಾನು ಮೊದ್ಲು 'ರಾಧಿಕನ್ ಗಂಡ' ಆಗಿದ್ದೆ ಕಣ್ರೀ ಎಂದು ಕೂಗಿ ಹೇಳಿದರೂ ಅದು ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಆದರೆ ಕೋಮಲ್ ಕಮಾಲ್ ಡಲ್ ಆಗಿದ್ದರೂ ರಾಧನ್ ಗಂಡ ತೀರಾ 'ನಂದೀಶ'ನ ಹಾದಿ ಹಿಡಿದಿಲ್ಲ ಎಂಬುದಷ್ಟೇ ಸಮಾಧಾನ.
- ಲಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


