ಸರ್ಜಾ ಕಂಪನಿ

ಬಹುಭಾಷಾ ನಟ ಅರ್ಜುನ್ ಸರ್ಜಾ ಕನ್ನಡಕ್ಕೆ ಬಂದಿದ್ದಾರೆ. ನಟರಾಗಿ ಮಾತ್ರವಲ್ಲ, ನಿರ್ದೇಶಕರಾಗಿ, ನಿರ್ಮಾಪಕರಾಗಿ. ಹಾಗೆ ನೋಡಿದರೆ ಭುವನೇಶ್ವರಿಯ ಈ ತವರು ಸರ್ಜಾಗೆ ಹೊಸದೇನು ಅಲ್ಲ. ಕನ್ನಡದವರೇ ಆದರೂ ಯಶಸ್ಸಿನ ಶಿಖರವೇರಿದ್ದು ಮಾತ್ರ ತಮಿಳು, ತೆಲುಗು ಚಿತ್ರರಂಗದಲ್ಲಿ. ಇವರ ಅಕ್ಕನ ಮಕ್ಕಳಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಕನ್ನಡ ಬೆಳ್ಳಿತೆರೆ ಮೇಲೆ ಹೆಜ್ಜೆ ಹಾಕಿದ್ದಾರೆ. ಹೀಗಾಗಿ ಕನ್ನಡದ ಅರ್ಜುನ್ ಪರಭಾಷೆಗಳಲ್ಲಿ ಸ್ಟಾರ್‌ನಟ ಆದ ಮೇಲೆ ಮತ್ತೆ ಕನ್ನಡಕ್ಕೆ ಬರುತ್ತಾರೆಂಬ ಮಾತುಗಳು ಆಗಾಗ ಕೇಳಿ ಬರುತ್ತಿದ್ದವು. ಈ ನಡುವೆ ಅಶೋಕ್ ಖೇಣಿ ನಿರ್ಮಾಣದ 'ಪ್ರಸಾದ್' ಎನ್ನುವ ಕಲಾತ್ಮಕ ಚಿತ್ರದಲ್ಲಿ ಅಭಿನಯಿಸಿ ಎಲ್ಲರ ಪ್ರಶಂಸೆ ಗಿಟ್ಟಿಸಿಕೊಂಡರು. ಸದ್ಯ ಅಳಿಯಂದಿರಿಬ್ಬರು ಕನ್ನಡದಲ್ಲಿ ನೆಲೆಯೂರುತ್ತಿರುವಾಗ ಆ್ಯಕ್ಷನ್ ಕಿಂಗ್ ಎನ್ನಿಸಿಕೊಂಡಿರುವ ಅರ್ಜುನ್ ಸರ್ಜಾ ಕನ್ನಡದಲ್ಲೇ ಚಿತ್ರವೊಂದನ್ನು ಆರಂಭಿಸಿದ್ದಾರೆ. ಇತ್ತೀಚೆಗಷ್ಟೆ ಈ ಚಿತ್ರ ಅದ್ದೂರಿಯಾಗಿ ಲಾಂಚ್ ಆಯಿತು. ಅಲ್ಲಿಗೆ ಸರ್ಜಾ ಕಂಪನಿ ತವರಿನಲ್ಲಿ ಹೊಸದಾಗಿ ಆ್ಯಕ್ಷನ್‌ಗೆ ರೆಡಿಯಾಗುತ್ತಿದೆ.
ಕನ್ನಡ ಚಿತ್ರರಂಗದ ಘಟಾನುಘಟಿಗಳ ಸಮ್ಮುಖದಲ್ಲಿ ಆರಂಭಗೊಂಡ ಆ ಚಿತ್ರದ ಹೆಸರು 'ಅಭಿಮನ್ಯು'. ತನ್ನ ಕುಟುಂಬದವರ ಹಾಗೂ ಚಿತ್ರರಂಗದವರ ನಡುವೆ 'ಜಂಟಲ್‌ಮೆನ್' ಆಗಿ ಜಗಮಗಿಸುತ್ತಿದ್ದ ಅರ್ಜುನ್, 'ಇದು ತನ್ನ ಪುನರ್ ಜನ್ಮದ ಚಿತ್ರ' ಎನ್ನುವ ದಾಟಿಯಲ್ಲೇ ಮಾತಿಗೆ ನಿಂತರು. ಅಂದಹಾಗೆ ಇದೇ ಚಿತ್ರ ಕನ್ನಡ ಸೇರಿದಂತೆ ತೆಲುಗು, ತಮಿಳಿನಲ್ಲೂ ಮೂಡಿಬರಲಿದೆ ಎಂಬುದು 'ಅಭಿಮನ್ಯು' ಚಿತ್ರದ ಟಾಪ್ ಸುದ್ದಿ. ಅಕ್ಕಪಕ್ಕ ಇಬ್ಬರು ನಾಯಕಿಯರನ್ನು ನಿಲ್ಲಿಸಿಕೊಂಡು ಅರ್ಜುನ್ ಸರ್ಜಾ ಚಿತ್ರದ ಮುಹೂರ್ತದ ಪತ್ರಿಕಾಗೋಷ್ಠಿ ಸಭಾಂಗಣಕ್ಕೆ ಎಂಟ್ರಿಕೊಟ್ಟರು. ಆಗಲೇ ಹರಟೆಯಲ್ಲಿ ತೊಡಗಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ 'ಬಾರಪ್ಪ ರಾಜ' ಎನ್ನುವಂತ ನೋಟ ಬೀರಿದರು. ಯಾಕೆಂದರೆ ರವಿ ಮತ್ತು ಸರ್ಜಾರ ಸ್ನೇಹವೇ ಅಂಥದು. ಕ್ರೇಜಿಸ್ಟಾರ್ ಪ್ರಕಾರ ಅವರಿಗಿರುವ ಕೆಲವೇ ಹೋಗೋ ಬಾರೋ ಸ್ನೇಹಿತರಲ್ಲಿ ಅರ್ಜುನ್ ಸರ್ಜಾ ಮೊದಲಿಗರಾದರೆ, 'ಬಿಗ್‌ಬಾಸ್' ಖ್ಯಾತಿ ಬ್ರಹ್ಮಾಂಡ ಗುರೂಜಿ ಕೊನೆಯವರು. ಎಲ್ಲರ ಆಗಮನದ ನಂತರ ಮಾತು ಶುರುವಾಯಿತು. 'ಈ ಚಿತ್ರ ಈಗಿನ ಶಿಕ್ಷಣ ವ್ಯವಸ್ಥೆಯ ಕುರಿತ ಕಥೆ. ಶೇ.75 ಭಾಗ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಉಳಿದ 25 ಭಾಗ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ನನ್ನ ಪಾತ್ರ ಶೇ.75 ಮಂದಿಯನ್ನು ಪ್ರತಿನಿಧಿಸುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಶಿಕ್ಷಣ ವ್ಯವಸ್ಥೆ ಸೇರಿದಂತೆ ಇಡೀ ಸಿಸ್ಟಮ್ ವಿರುದ್ಧ ತಿರುಗಿ ನಿಲ್ಲುತ್ತಾನೆ ಮತ್ತು ಹೋರಾಡುತ್ತಾನೆ ಎಂಬುದು ಚಿತ್ರದ ಒಟ್ಟು ಸಾರಾಂಶ. ನನ್ನ ಮಟ್ಟಿಗೆ ಈ ಕಥೆ ಪ್ರತಿಯೊಬ್ಬರನ್ನೂ ಎಚ್ಚರಿಸುವ ತೀರಾ ಸಾದಾಸೀದವಾಗಿರುತ್ತದೆ' ಎಂದು ಗಂಭೀರವಾಗಿ ನುಡಿದರು ಅರ್ಜುನ್.
ಜಂಟಲ್‌ಮೆನ್‌ನ ಈ ಸೀರಿಯಸ್ ಮಾತುಗಳಿಂದ ಇಡೀ ಗೋಷ್ಠಿ ಗಂಭೀರವಾಗಿತ್ತು. ಇದು ಕ್ರೇಜಿಸ್ಟಾರ್‌ರನ್ನು ಗಾಬರಿಗೊಳಿಸಿತೋ ಏನೋ! 'ಅಯ್ಯೋ ಜೀವನದಲ್ಲಿ ಹೀಗೆ ಸೀರಿಯಸ್ ಆಗಿದ್ದರೆ ಹೇಗೆ? ಒಂದ್‌ಚೂರು ಆರಾಮಾಗಿ, ಖುಷಿಯಾಗಿರಿ' ಎನ್ನುತ್ತ ತಮ್ಮದೇ ಸ್ಟೈಲ್‌ನಲ್ಲಿ ಹಾಸ್ಯ ಚಟಾಕಿ ಹಾರಿಸಿದರು. ರವಿಚಂದ್ರನ್ ಪ್ರಕಾರ 'ಅಭಿಮನ್ಯು' ಒಳ್ಳೆಯ ಚಿತ್ರವಾಗುತ್ತದೆ ಎಂದುಕೊಳ್ಳಬೇಕಿಲ್ಲ. ಯಾಕೆಂದರೆ ಅದು ನೂರಕ್ಕೆ ನೂರು ಒಳ್ಳೆಯ ಚಿತ್ರ ಆಗಿರಲೇ ಬೇಕಂತೆ. ಇದಕ್ಕೆ ಕಾರಣ ಚಿತ್ರದ ಕ್ಯಾಪ್ಟನ್ ಅರ್ಜುನ್ ಸರ್ಜಾ ಎಂಬುದು ರವಿಚಂದ್ರನ್‌ರ ವಿಶ್ವಾಸದ ಮಾತುಗಳು. ಇದೇ ಸಂದರ್ಭದಲ್ಲಿ ತಮ್ಮ ಹಳೆಯ ಸ್ನೇಹವನ್ನು ತೆರೆದಿಟ್ಟರು ಕ್ರೇಜಿಸ್ಟಾರ್. 'ನಾನು ಮದ್ರಾಸ್‌ಗೆ ಹೊರಟಾಗ ಅರ್ಜುನ್‌ನನ್ನು ಕರದೆ. ಆತ ನಮ್ಮ ತಂದೆಗೆ ಹೇಳಿಲ್ಲ ಎಂದ. ನಾನ್ ಹೇಳ್ತಿನಿ ಬಾರಯ್ಯ ಎಂದೆ. ನನಗೆ ಹಾಕಿಕೊಳ್ಳುವುದಕ್ಕೆ ಬಟ್ಟೆ ಬೇರೆ ಇಲ್ಲ ಅಂದ ನಾನೇ ಕೊಡ್ತಿನಿ ಬಾರಪ್ಪ ಎಂದು ಈತನನ್ನು ಮದ್ರಾಸ್‌ಗೆ ಕರೆದುಕೊಂಡು ಹೋದೆ. ಆದರೆ ನಾನು ವಾಪಸ್ಸು ಬಂದೆ. ಸರ್ಜಾ ಮಾತ್ರ ಅಲ್ಲೇ ಸೆಟ್ಲಾಗಿಬಿಟ್ಟ' ಎಂದು ಹಳೆ ಸ್ಟೋರಿ ಬಿಚ್ಚಿಟ್ಟರು. ಚಿತ್ರಕ್ಕೆ ಶಶಿಧರ ಅಡಪರ ಕಲಾ ನಿರ್ದೇಶನ, ಹರಿಕೃಷ್ಣ ಸಂಗೀತ, ವೇಣು ಛಾಯಾಗ್ರಹಣ ಇದೆ. ಸುರ್ವೀನ್ ಚಾವ್ಲಾ ಹಾಗೂ ಶಾರ್ಲೆಟ್ ಕ್ಲೇರ್ ಚಿತ್ರದ ನಾಯಕಿಯರು. ವಿಶೇಷ ಎಂದರೆ ಮೂರು ಭಾಷೆಗಳಲ್ಲಿ ಅದೇ ಕಲಾವಿದರು ಹಾಗೂ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಹೀಗಾಗಿ ವೇಣು ಮತ್ತು ಹರಿಕೃಷ್ಣ ಪರಭಾಷೆಗೆ ಕಾಲಿಡುತ್ತಿದ್ದಾರೆ.
ಉದ್ಯಮಿ ಅಶೋಕ್ ಖೇಣಿ, ನಟಿ ತಾರಾ, ನಟರಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ಜಹಾಂಗೀರ್ ಸೇರಿದಂತೆ ಹಲವು ಮಂದಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಮಾಡೆಲಿಂಗ್ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ಕ್ಲೇರ್, ಮೊದಲ ಬಾರಿಗೆ ದಕ್ಷಿಣ ಭಾರತದ ಮೂರು ಪ್ರಮುಖ ಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಸುರ್ವೀನ್ ಈಗಾಗಲೇ ಕೆಲ ಚಿತ್ರಗಳಲ್ಲಿ ಕಾಣಿಸಿ ಕೊಂಡಿದ್ದರೂ, ಸರ್ಜಾ ಜೊತೆಗೆ ನಾಯಕಿಯಾಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದರು.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


