ಸಿನಿಮಾ ಲೇಖನ

ರಾಜನ ಬೆನ್ನಿಗೆ ಬೆಕ್ಕು

ರಾಜನ ಬೆನ್ನಿಗೆ ಬೆಕ್ಕು
ಗಣೇಶ್, ಉದಯ್ ಪ್ರಕಾಶ್
Published On :

ಚಿತ್ರರಂಗಕ್ಕೂ ಆಟೊಗಳಿಗೂ ಬಿಡಿಸಲಾಗದ ನಂಟು. ಬೆಳ್ಳಿತೆರೆ ಮೇಲೆ ಆಟೋ ಇಮೇಜ್ ಆಗಾಗ ನಳನಳಿಸುತ್ತಲೇ ಇದೆ. ನಟರಿಗೂ ಅಷ್ಟೆ, ಆಟೊ ಜೊತೆಗೆ ಸಿಕ್ಕಾಪಟ್ಟೆ ಎಮೋಷನಲ್ ನಂಟು. ಹೀಗಾಗಿ ಒಂದೆರಡು ದೃಶ್ಯಗಳಲ್ಲಿ ಆಟೊ ಹಾಗೆ ಬಂದು ಹೀಗೆ ಹೋಗಬೇಕೆಂಬುದು ಸಿನಿಮಾ ಮಂದಿಯ ಕನಸು. ಚಿತ್ರಕೃಷಿಕ ಶಂಕರ್‌ನಾಗ್‌ರ 'ಆಟೋರಾಜ' ಚಿತ್ರದ ನಂತರವಂತೂ 'ನಾನಿರುವುದೇ ನಿಮಗಾಗಿ' ಎನ್ನುವಂತೆ ಆಟೊಗಳು ರಾಜ ಬೀದಿಯಲ್ಲಿ ರಾರಾಜಿಸಿದವು. ಶಂಕರ್‌ನಾಗ್ ಕೂಡ ಈ ಚಿತ್ರದ ನಂತರ ಗಾಂಧಿ ಕ್ಲಾಸ್ ಪ್ರೇಕ್ಷಕರೆನ್ನಿಸಿಕೊಂಡಿರುವ ಆಟೋ ಚಾಲಕರ ಎದೆಯ ಅಭಿಮಾನದ ಸೀಟಿನಲ್ಲಿ ಕಾಯಂ ಆಗಿ ಅಲಂಕರಿಸಿದರು. ಅಲ್ಲದೆ 'ಭಾಷಾ' ಚಿತ್ರದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್, 'ಯಾರೇ ನೀ ಚೆಲುವೆ', 'ಕೋಟಿಗೊಬ್ಬ' ಚಿತ್ರದಲ್ಲಿ ವಿಷ್ಣುವರ್ಧನ್, 'ರಂಗ ಎಸ್‌ಎಸ್‌ಎಲ್‌ಸಿ'ಯಲ್ಲಿ ಸುದೀಪ್, 'ಆಟೋ ಶಂಕರ್‌' ಆಗಿ ಉಪೇಂದ್ರ, 'ಸಾರಥಿ'ಯಲ್ಲಿ ದರ್ಶನ್... ಹೀಗೆ ಘಟಾನುಘಟಿ ನಾಯಕನಟರು ಸಿನಿಮಾ ರಸ್ತೆಯಲ್ಲಿ ತುಂಬಾ ಪೋರ್ಸ್ ಆಗಿ ಆಟೋ ಓಡಿಸಿ ಗೆದ್ದಿದ್ದಾರೆ. ಇವರ ನಂತರ ಮತ್ತೆ ಅದೇ ರಸ್ತೆಯಲ್ಲಿ ಹೊಸ ಆಟೋ ಚಾಲಕನಾಗಿ ಬರುತ್ತಿರುವುದು ನಟ ಗಣೇಶ್.

ಉದಯ್ ಪ್ರಕಾಶ್ ನಿರ್ದೇಶನದ, ಸನ್ ಸಿಟಿ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿರುವ 'ಆಟೋರಾಜ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. 125ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು 'ಕೈ ಮುಗಿದು ಏರು ಇದು ಕನ್ನಡದ ತೇರು' ಎಂದು ಪ್ರೇಕ್ಷಕರಿಗೆ ಅಹ್ವಾನ ಕೊಡುವ ಸರದಿ ಈಗ ಗಣೇಶ್ ಪಾಲಿಗೆ ಬಂದಿದೆ. ಹೀಗಾಗಿ ಆಟೊದಲ್ಲೇ ಗಣೇಶ್ ಈಗಾಗಲೇ ಪ್ರಚಾರಕ್ಕೆ ಹೊರಟಿದ್ದಾರೆ. ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದಂತೆ ನಿರ್ದೇಶಕ ಉದಯ್ ಪ್ರಕಾಶ್‌ಗೆ ಭಯಮಿಶ್ರಿತ ವಿಶ್ವಾಸ ಹೆಚ್ಚಾಗಿದೆ. 'ಹೆಸರು ಹಳೆಯದು. ಆದರೆ ಅದರೊಳಗಿನ ಮ್ಯಾಟರ್ ಹೊಸದು' ಎನ್ನುವ ಪ್ರಕಾಶ್, ಆಟೊ ಮೂಲಕ ಎಂತೆಂಥ ಕತೆಗಳನ್ನು ಹೇಳಬಹುದು!? ಎನ್ನುವ ಅಚ್ಚರಿ ಹುಟ್ಟಿಸುವ ಮಟ್ಟಕ್ಕೆ ಈ ಚಿತ್ರ ಮಾಡಿದ್ದಾರಂತೆ.
'ಚಿತ್ರರಂಗಕ್ಕೆ ಆಟೋ ತುಂಬಾ ಲಕ್ಕಿ. ಸ್ಟಾರ್‌ನಟರು ಆಟೊ ಓಡಿಸಿದ್ದಾರೆ. ಆಟೊ ಎಲ್ಲರಿಗೂ ಗೆಲುವು ಕೊಟ್ಟಿದೆ.

ಎರಡು ವರ್ಷದ ಶ್ರಮ ಈ ಚಿತ್ರದಲ್ಲಿದೆ. ಗಣೇಶ್‌ಗೆ 'ಮುಂಗಾರು ಮಳೆ'ಯಲ್ಲಿ ಮೊಲ ಸಾಥ್ ಕೊಟ್ಟಿತು. ಆದರೆ ಯಾವುದನ್ನು ನಾವು ಅಪಶಕುನ ಎನ್ನುತ್ತೇವೋ ಅಂಥ ಪ್ರಾಣಿ ಆಟೊದಲ್ಲಿ ನಾಯಕನಿಗೆ ಸಾಥ್ ಕೊಡುತ್ತದೆ. ಆದರೆ ಅದನ್ನು ಕಂಡರೆ ನಾಯಕಿಗೂ ಆಗಲ್ಲ. ಆದರೂ ನಾಯಕನ ಪ್ರೀತಿಯ ಸಾರಥಿ ಆಗಿ ಕಾಣಿಸಿಕೊಳ್ಳುವ ಆ ಪ್ರಾಣಿ ಬೆಕ್ಕು. ಹೌದು, ಬೆಕ್ಕಿಗೆ ಇಲ್ಲಿ ಮಹತ್ವದ ಪಾತ್ರವಿದೆ. ನಾಯಕನಿಗೆ ನಾಯಕಿ ಸಿಗುವುದುರಿಂದ ಹಿಡಿದು ಸಾಕಷ್ಟು ತಿರುವುಗಳಲ್ಲಿ ಬೆಕ್ಕು ಸದ್ದು ಮಾಡುತ್ತದೆ. ಆಟೊ ಚಾಲಕರ ಜೀವನದಲ್ಲಿ ನಡೆದ ನೈಜ ಘಟನೆಗಳನ್ನು ಈ ಚಿತ್ರದಲ್ಲಿ ಸೇರಿದ್ದೇನೆ. ಪ್ರಯಾಣಿಕರಿಗೆ ಗಿಡಗಳನ್ನು ವಿತರಿಸಿ 'ಪರಿಸರ ಉಳಿಸಿ' ಎನ್ನುವ ಚಾಲಕ ವೇಣು, ಪ್ರತಿ ವರ್ಷ ತನ್ನ ಆಟೊಗೆ ಹುಟ್ಟು ಹಬ್ಬ ಮಾಡುವ ರವಿ, ಆಟೊವನ್ನು ಅನ್ನ ಕೊಡುವ ತಾಯಿ ಎನ್ನುವ ಚಾಲಕ... ಹೀಗೆ ಆಟೊ ಚಾಲಕರ ಬದುಕಿನ ಸತ್ಯಗಳು ಇಲ್ಲಿವೆ. ಯಾಕೆಂದರೆ ಈ ಕಥೆ ಹುಟ್ಟಿದ್ದೇ ಒಬ್ಬ ಆಟೊ ಚಾಲಕನಿಂದ. ಇಲ್ಲಿ ಗಣೇಶ್ ಫೈಟ್ ಮಾಡಿದ್ದಾರೆ, ಸಾಹಸ ದೃಶ್ಯಗಳಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಅವರ ಲವರ್ ಬಾಯ್ ಇಮೇಜ್ ಅನ್ನು ಬದಲಾಯಿಸುವ ಸಣ್ಣ ಪ್ರಯತ್ನ ಇಲ್ಲಿದೆ' ಎನ್ನುತ್ತಾರೆ ನಿರ್ದೇಶಕರು.
 ಚಿತ್ರದ ನಾಯಕಿ ಭಾಮಾ. ಹಳ್ಳಿಯಿಂದ ಬಂದು ಉನ್ನತ ಮಟ್ಟಕ್ಕೇರುವ ಹುಡುಗಿ ಪಾತ್ರದಲ್ಲಿ ಈಕೆ ಕಾಣಿಸಿಕೊಂಡಿದ್ದಾಳೆ. ಚಿತ್ರದ ಆರಂಭದಿಂದ ಕೊನೆಯವರೆಗೂ ನಟ ಶಂಕರ್‌ನಾಗ್‌ರ ನೆರಳು ಇರುತ್ತದಂತೆ. ಹುಡುಗಿಯರನ್ನು ಟ್ರ್ಯಾಪ್ ಮಾಡಿ ಅಪಹರಿಸುವುದು ಸೇರಿದಂತೆ ಹತ್ತಾರು ಘಟನೆಗಳು ಚಿತ್ರದಲ್ಲಿ ಬರಲಿದ್ದು, ಇಡೀ ಚಿತ್ರ ಕಾಲ್ಪನಿಕವಾದರೂ ಪ್ರತಿ ದೃಶ್ಯಕ್ಕೂ ಇಲ್ಲಿ ರಿಯಾಲಿಸ್ಚಿಕ್ ಟಚ್ ಇದೆಯಂತೆ. 'ನಾನು ಆಟೊದಲ್ಲಿ ಪ್ರಯಾಣಿಸುವಾಗ ಸಾಕಷ್ಟು ಮಂದಿ ಚಾಲಕರನ್ನು ಮಾತನಾಡಿಸಿದ್ದೇನೆ. ಅವರು ಹೇಳಿದ ಘಟನೆಗಳ ಮೇಲೆ ಕಥೆ ಮಾಡಿದ್ದೇನೆ. ಹೀಗಾಗಿ ಸಾಮಾನ್ಯ ಪ್ರೇಕ್ಷಕರಿಗೂ ತುಂಬಾ ಇಷ್ಟವಾಗುವ ಚಿತ್ರವಿದು' ಎಂಬುದು ಪ್ರಕಾಶ್‌ರ ನಂಬಿಕೆ.

 ಸಾಧುಕೋಕಿಲಾ, ಅರುಣ್ ಸಾಗರ್, ಧರ್ಮ, ಎಂ.ಎನ್. ಲಕ್ಷ್ಮಿ ದೇವಿ, ಬಿರಾದಾರ್, ಕಡ್ಡಿ ವಿಶ್ವ, ಕುರಿ ಪ್ರತಾಪ್, ಸ್ವಯಂವರ ಚಂದ್ರು ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. 'ಆಟೊರಾಜ' ಚಿತ್ರ ನಟ ಗಣೇಶ್‌ಗೆ ದೊಡ್ಡ ಗೆಲುವಿನ ಮೈಲುಗಲ್ಲಾಗಿ ನಿಲ್ಲಲಿದೆ ಎಂಬುದು ನಿರ್ದೇಶಕರ ವಿಶ್ವಾಸ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.