ಕೃಷ್ಣನಾ ಕ್ಯಾಮೆರಾ ಕಲೆ
ಯೋಗರಾಜ ಭಟ್ಟರ ಚಿತ್ರಗಳಲ್ಲಿ ಮಳೆ ಸ್ಪೆಷಲಿಸ್ಟ್ ಎನಿಸಿಕೊಂಡಿದ್ದ ಕೃಷ್ಣ ಮೊದಲ ಬಾರಿಗೆ 'ಕಡ್ಡಿಪುಡಿ'ಯಂಥ ರಾ ಎನಿಸುವ ಕ್ಯಾನ್ವಾಸ್ ಸ್ಪರ್ಶಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಿರ್ದೇಶಕರು ಎಂದಾಕ್ಷಣ ಯೋಗರಾಜಭಟ್, ಸೂರಿ ಎಂಬ ಹೆಸರುಗಳು ಜೊತೆ ಜೊತೆಗೇ ಕೇಳಿಬರುವಂತೆ ಛಾಯಾಗ್ರಹಕರು ಎಂದಾಗ ಕೇಳಿಬರುವ ಹೆಸರುಗಳೆಂದರೆ ಸತ್ಯ ಹೆಗಡೆ ಮತ್ತು ಮುಂಗಾರು ಮಳೆ ಕೃಷ್ಣ ಅವರದ್ದು. ತಮ್ಮ ತಮ್ಮ ಸಿನಿಮಾಗಳ ಮೂಲಕ ಒಮ್ಮೆ ಅವರು ಮುಂದೆ ಎನಿಸಿದರೆ
ಇನ್ನೊಮ್ಮೆ ಇವರು. 'ಮೈನಾ' ಬಂದಾಗ ಸತ್ಯ ಹೆಗಡೆ ಹೀರೋ ಆದರೆ, 'ಕಡ್ಡಿಪುಡಿ' ಸಮಯಕ್ಕೆ ಕೃಷ್ಣ ರ್ಯಾಂಕಿಂಗ್ನಲ್ಲಿ ಮೇಲೇರಿಬಿಡುತ್ತಾರೆ. ಸದ್ಯಕ್ಕೆ 'ಕಡ್ಡಿಪುಡಿ' ಚಿತ್ರದ ಬಗ್ಗೆ ಮಾತನಾಡುವ ಯಾರೇ ಆದರೂ ಕೃಷ್ಣ ಅವರ ಹೆಸರನ್ನು ಹೊರಗಿಟ್ಟು ಮಾತನಾಡಲು ಸಾಧ್ಯವೇ ಇಲ್ಲ ಎಂಬಷ್ಟರಮಟ್ಟಿಗೆ ಅವರ ಕ್ಯಾಮೆರಾ ಕೆಲಸ ಮಾಡಿದೆ. ಯೋಗರಾಜ ಭಟ್ಟರ ಚಿತ್ರಗಳಲ್ಲಿ ಮಳೆ ಸ್ಪೆಷಲಿಸ್ಟ್ ಎನಿಸಿಕೊಂಡಿದ್ದ ಕೃಷ್ಣ ಮೊದಲ ಬಾರಿಗೆ 'ಕಡ್ಡಿಪುಡಿ'ಯಂಥ ರಾ ಎನಿಸುವ ಕ್ಯಾನ್ವಾಸ್ ಸ್ಪರ್ಶಿಸಿದ್ದಾರೆ. ಆದರೆ ಅವರ ಮ್ಯಾಜಿಕಲ್ ಟಚ್ ಮಾತ್ರ ಇಲ್ಲೂ ಎದ್ದು ಕಾಣುತ್ತದೆ. ಕೃಷ್ಣ ಕೂಡ ನಮ್ಮ ಎಲ್ಲ ಛಾಯಾಗ್ರಾಹಕರಂತೆ ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಮಾತನ್ನೇ ಆಡದಿದ್ದರೂ, ಕಡ್ಡಿಪುಡಿಯ ಛಾಯಾಗ್ರಹಣದ ಬಗ್ಗೆ ಕೇಳಿಬರುತ್ತಿರುವ ಪ್ರಶಂಸೆಯಿಂದಲಾದರೂ ಥ್ರಿಲ್ ಆಗಿ ಕಡೆಗೂ ಇಲ್ಲಿ ಮಾತನಾಡುವ ಮನಸ್ಸು ಮಾಡಿದ್ದಾರೆ.
'ಕಡ್ಡಿಪುಡಿ' ನೋಡಿದವರೆಲ್ಲ ಸೂರಿ, ಶಿವಣ್ಣ ಜೊತೆ ಕೃಷ್ಣ ಕೂಡ ಹೀರೋ ಅಂತಿದ್ದಾರೆ. ಈ ಬಗ್ಗೆ ಏನು ಹೇಳ್ತೀರಿ?
ನಾನು ನಿಜಕ್ಕೂ ನಿರೀಕ್ಷೆ ಮಾಡಿರಲಿಲ್ಲ. 'ಮುಂಗಾರು ಮಳೆ', 'ಡ್ರಾಮಾ' ನಂತರ ನನಗೆ ಅತಿ ಹೆಚ್ಚು ಪ್ರೇಕ್ಷಕರ ಪ್ರಶಂಸೆ ಬರುತ್ತಿದೆ. ಪ್ರೇಕ್ಷಕರು ಎಲ್ಲಿಂದಲೋ ನನ್ನ ನಂಬರ್ ತಗೊಂಡು ನನಗೆ ಫೋನು ಮಾಡಿ ಹೇಳುವಷ್ಟು ಆಸಕ್ತಿ ತೋರಿಸುತ್ತಿರುವುದು ಖುಷಿ ಕೊಟ್ಟಿದೆ. ಫೇಸ್ಬುಕ್ನಲ್ಲೂ ನೂರಾರು ಮೆಸೇಜ್ಗಳು. ಥ್ರಿಲ್ ಆಗಿದ್ದೇನೆ.
ಇಲ್ಲಿಯವರೆಗೂ ಎಷ್ಟು ಸಿನಿಮಾ ಆಯ್ತು?
ಕಡ್ಡಿಪುಡಿ ನನ್ನ 23ನೇ ಸಿನಿಮಾ.
ಈ ಥರಾ ಸಿನಿಮಾ ಫಸ್ಟ್ ಟೈಮ್ ಅಲ್ವಾ?
ಹೌದು. ಇಂಥ ಚಿತ್ರ ಮಾಡಿದ್ದು ಇದೇ ಮೊದಲು. ಸೂರಿ ಜೊತೆಗೂ, ಶಿವರಾಜ್ಕುಮಾರ್ ಜೊತೆಗೂ ಮೊದಲನೆ ಬಾರಿಗೆ ಕೆಲಸ ಮಾಡಿದ್ದೇನೆ.
ನೀವು ಕಂಡಂತೆ ಯೋಗರಾಜಭಟ್ಟರಿಗೂ ಸೂರಿಗೂ ನಿರ್ದೇಶನದಲ್ಲಿ ಏನು ವ್ಯತ್ಯಾಸ?
ಇಬ್ಬರದ್ದೂ ಒಂದೇ ರೀತಿಯ ಯೋಚನೆ. ಆದರೆ ಕಂಟೆಂಟ್ ಮಾತ್ರ ಬೇರೆ ಬೇರೆಯಾಗಿರುತ್ತೆ. ಸೂರಿ ಅವರ ಚಿತ್ರಗಳಲ್ಲಿ ಗ್ರೇ ಶೇಡ್ ಹೆಚ್ಚು. ಭಟ್ಟರ ಚಿತ್ರಗಳಲ್ಲಿ ರೊಮ್ಯಾನ್ಸ್, ತಮಾಷೆ ಜಾಸ್ತಿ.
ಹೊಸ ಥರದ ಚಿತ್ರಕ್ಕೆ ಹೊಸ ತಯಾರಿ ಬೇಕಾಯ್ತಾ? ಯಾವ ಥರಾ?
ಮಾನಸಿಕ ತಯಾರಿ ಅದು. ಇಲ್ಲಿ ಯಾವ ಫ್ರೇಮ್ ಅನ್ನೂ ಸಿಂಗಾರ ಮಾಡಲು ಹೋಗಿಲ್ಲ. ಬರಿಗಣ್ಣಿಗೆ ಹೇಗೆ ಕಾಣುತ್ತೋ ಹಾಗೇ ಇರಲಿ ಎಂಬ ಸೂತ್ರ ಇತ್ತು. ಕ್ಯಾಂಡಿಡ್ ಫಾರ್ಮ್ಯಾಟ್. ಪ್ರೇಮಿಂಗ್ನಲ್ಲೇ ಮಜಾ ಇತ್ತು. ಹಾಗಾಗಿ ಬೋರಿಂಗ್ ಅನಿಸಲಿಲ್ಲ. ರಿಯಲಿಸ್ಟಿಕ್ ಕೆಲಸ ಮಾಡಿದ್ದೇನೆ. ಬೇರೆ ಚಿತ್ರಗಳಲ್ಲಿ ಹಾಡು ಫೈಟ್ಗಳನ್ನು ನಮ್ಮಿಷ್ಟಕ್ಕೆ ಬಿಟ್ಟುಬಿಡ್ತಾರೆ. ಅಲ್ಲಿ ನಮ್ಮತನ ತೋರಿಸಬೇಕಾಗುತ್ತದೆ. ಆದರೆ ಇಂಥ ಚಿತ್ರಗಳಲ್ಲಿ ಛಾಯಾಗ್ರಹಣದ ಬಗ್ಗೆ ನನಗೆಷ್ಟೇ ಗೊತ್ತಿದ್ದರೂ ನಾನು ನಿರ್ದೇಶಕರ ದೃಷ್ಟಿಯಲ್ಲಿ ಕಥೆ ಹೇಳಬೇಕಾಗುತ್ತದೆ. ಅದನ್ನೇ ಮಾಡಿದ್ದೇನೆ.
ಶಿವರಾಜ್ಕುಮಾರ್ ಅವರ ಜೊತೆ ಕೆಲಸ ಹೇಗಿತ್ತು?
ತುಂಬ ಕಂಫರ್ಟಬಲ್ ನಟ ಅವರು. ಪ್ರತಿದಿನ ಬೇರೆ ಬೇರೆ ರೀತಿಯ ಶಾಟ್ಗಳನ್ನು ತೆಗೆಯುತ್ತಿದ್ದೆವು. ಎಲ್ಲದಕ್ಕೂ ತುಂಬಾ ಸುಲಭವಾಗಿ ಹೊಂದಿಕೊಳ್ಳುತ್ತಿದ್ದರು. ನಾನು ಕೆಲಸ ಶುರು ಮಾಡಿದ ಕಾಲದಲ್ಲಿ ಅವರ ಸಿನಿಮಾ ಮಾಡ್ತೀನಿ ಅಂತ ಎಣಿಸಿರಲೇ ಇಲ್ಲ. ಆದರೆ ಆಸೆಯಿತ್ತು. ಈಗ ಕನಸು ನನಸಾದ ಅನುಭವ. ಈ ಹಿಂದೆ ಅವರ ಜೊತೆ ಕೆಲಸ ಮಾಡುವ ಎರಡು ಮೂರು ಅವಕಾಶಗಳು ಮಿಸ್ ಆಗಿದ್ದವು. ಆದರೆ ಕಡ್ಡಿಪುಡಿಯಂಥ ಒಳ್ಳೆಯ ಸಿನಿಮಾ ಸಿಗಬೇಕು ಅಂತಿತ್ತು ಅಂತ ಕಾಣ್ಸತ್ತೆ. ಹಾಗಾಗಿ, ಅದು ಒಳ್ಳೆಯದೇ ಆಯಿತು.
ಒಂದು ಹಾಡು ಬಿಟ್ಟರೆ, ಹಾಡು ಫೈಟ್ಗಳಲ್ಲಿ ಪ್ರಯೋಗಕ್ಕೆ ಅವಕಾಶ ಇರಲಿಲ್ಲ ಅನ್ಸುತ್ತೆ.
ತುಂಬಾ ಸೀದಾ ಸಾದಾ. ಈ ಸಿನಿಮಾದಲ್ಲಿ ನಿಮ್ಮ ಟಿಪಿಕಲ್ ಸ್ಟೈಲ್ ಮಳೆಯನ್ನ ಮಿಸ್ ಮಾಡ್ಕೊಂಡ್ರಾ?
ಇಲ್ಲ. ಇಲ್ಲಿ ಮಳೆಯನ್ನ ಕಂಟೆಂಟ್ ಆಗಿ ಯೂಸ್ ಮಾಡಿದೀನಿ. ಅಲ್ಲದೆ ಅದು ನನ್ನ ಸ್ಟೈಲ್ ಅಂತೇನೂ ಅಲ್ಲ. ಅಂಥ ಚಿತ್ರಗಳು ಗೆದ್ದಾಗ ನಿರ್ದೇಶಕರು ಅದೇ ಶೈಲಿ ಅನುಸರಿಸುತ್ತಾರೆ. ಅದು ನನ್ನ ವೈಯಕ್ತಿಕ ಶೈಲಿ ಏನಲ್ಲ.
ಕಡ್ಡಿಪುಡಿಯಲ್ಲಿ ನಿಮಗಿಷ್ಟವಾದ ಶಾಟ್ ಯಾವುದು?
'ಸೌಂದರ್ಯ ಸಮರ' ಹಾಡು. ಶಿವಣ್ಣರ ಕೆಲವು ಆ್ಯಕ್ಷನ್ ಸನ್ನಿವೇಶಗಳು. ಇನ್ನೂ ತುಂಬಾ ಇದೆ. ಆದರೆ ಟೈಟಲ್ ಕಾರ್ಡ್ ನನಗೆ ತುಂಬಾ ಎಲ್ಲಕ್ಕಿಂತ ಇಷ್ಟ.
ಇದು ನಿಮ್ಮನ್ನ ಕೇಳೋ ಪ್ರಶ್ನೆ ಅಲ್ಲ. ಆದ್ರೂ ಕೇಳ್ತಿದೀನಿ, ಸಿನಿಮಾ ಕಲೆಕ್ಷನ್ ಹೇಗಿದೆ?
ಈ ವಿಷಯ ನೀವು ನಿರ್ಮಾಪಕರನ್ನ ಕೇಳಬೇಕು. ನನಗೆ ಕರೆ ಮಾಡುವ ಎಲ್ಲರೂ ಸಿನಿಮಾ ನೋಡಿದೆ, ಚೆನ್ನಾಗಿದೆ, ನಿಮ್ಮ ಕ್ಯಾಮೆರಾ ವರ್ಕ್ ಕೂಡ, ಎನ್ನುವುದರ ಜೊತೆಗೆ ಹೌಸ್ಪುಲ್ ಇತ್ತು ಅಂತನೂ ಸೇರಿಸ್ತಾರೆ. ಹಾಗಾಗಿ ಕಲೆಕ್ಷನ್ ಚೆನ್ನಾಗಿದೆ ಅನ್ಸತ್ತೆ.
ಕಡ್ಡಿಪುಡಿ ಶೂಟಿಂಗಿಗೂ ಮುಂಚೆ ಸೂರಿ ಜೊತೆ ಏನು ಚರ್ಚೆ ಮಾಡಿದ್ರಿ?
ಸೂರಿ ಎಲ್ಲವನ್ನೂ ತುಂಬಾ ಫ್ಲ್ಯಾಟ್ ಆಗಿ ನೋಡೋಣ ಅಂತ ಮೊದಲೇ ಹೇಳಿದ್ರು. ಮೊದಲೆರಡು ದಿನ ನಾವು ಸರಿಯಾಗಿ ಮಾಡ್ತಿದ್ದೀವಾ ಅಂತ ಅಪನಂಬಿಕೆ ಇತ್ತು. ಆದರೆ ಬರ್ತಾ ಬರ್ತಾ ಸರಿಹೋಯ್ತು.
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


