ಸಿನಿಮಾ ಲೇಖನ

ಕಡಲ ಕನ್ಯೆ

ಉಟ್ಟೂ ಉಡದಂತಿರುವ ಸೀರೆ ಈಗಲೋ ಆಗಲೋ ಜಾರಿ ಬೀಳುವಂತಿದೆ.

ಕಡಲ ಕನ್ಯೆ
Published On :

ಉಟ್ಟೂ ಉಡದಂತಿರುವ ಸೀರೆ ಈಗಲೋ ಆಗಲೋ ಜಾರಿ ಬೀಳುವಂತಿದೆ. 'ಮಹಾನದಿ'ಯಂತೆ ಹರಿಯುತ್ತಿರುವ ಅಲೆಗಳ ನಡುವೆ ನಿಂತ ಆಕೆ ನೀರಿಗೆ ಬಿಸಿ ಮುಟ್ಟಿಸಿದಂತಿದೆ. ಕೈಯಲ್ಲೊಂದು ಮೀನು. ಅದು ಆಕೆಯ ದೇಹದ ವಯ್ಯಾರ ನೋಡಿ ವಿಲವಿಲನೆ ಒದ್ದಾಡುತ್ತಿದಂತೆ ಬಾಸವಾಗುತ್ತಿದೆ. ಸಾಲದ್ದಕ್ಕೆ ಆಕೆಯ ಮುಖದಲ್ಲಿ ನಸು ನಾಚಿಕೆ, ರಭಸವಾಗಿ ಹರಿಯುವ ನೀರನ್ನು ತನ್ನ ಕಣ್ಣೋಟದಲ್ಲೇ ಕಟ್ಟಿ ಹಾಕಬಲ್ಲ ಮತ್ಸ್ಯಕನ್ಯೆಯಂತೆ ಕಾಣುವ ಮೀನು ಕಣ್ಣಿನ ಮೀನಾಕ್ಷಿ. ನೆನೆದ ದೇಹ, ಅತ್ತಿತ್ತ ಸರಿದ ಸೀರೆ, ಕಣ್ಣು ಕುಕ್ಕುವ ಸೊಂಟದ ಚೈನು, ಅವಳನ್ನು ಮುಟ್ಟಲು ಸ್ಪರ್ಧೆಗೆ ಬಿದ್ದಂತೆ ನುಗ್ಗುತ್ತಿರುವ ಕಡಲ ಅಲೆಗಳು. ಇಡೀ ಚಿತ್ರಕ್ಕೆ ಅವಳೇ ಜೀವ ಮತ್ತು ಪಾತ್ರ...

'ಮಹಾನದಿ' ಚಿತ್ರದ ಪೋಸ್ಟರ್‌ಗಳು ಪ್ರೇಕ್ಷಕರ ಗಮನ ಸೆಳೆದಿರುವುದೇ ಇಂಥ ಶೃಂಗಾರಮಯ ನೋಟ ಮತ್ತು ವರ್ಣನೆಗಳಿಂದ. ಹಾಗೆ ಆಕರ್ಷಿಸುತ್ತಿರುವ ಆ ನೀರೆಯ ಹೆಸರು 'ಗಂಡ ಹೆಂಡತಿ' ಸಂಜನಾ. ಅಲ್ಲಲ್ಲ, ನಟಿ ಸಂಜನಾ. ಯಾಕೆಂದರೆ ಸಂಜನಾ ಹಳೆ ಇಮೇಜ್‌ನಿಂದ ಹೊರ ಬರಲು ಸಾಕಷ್ಟು ಕರಸತ್ತು ಮಾಡುತ್ತಿದ್ದಾರೆ. ಕೇವಲ 'ಅಂಥ' ಪಾತ್ರಗಳಿಗೆ ಈಕೆ ಸೀಮಿತ ಎಂದು ಮೂಗು ಮುರಿದ ಗಾಂಧಿನಗರಕ್ಕೆ ಬೆನ್ನು ತೋರಿಸಿ ಟಾಲಿವುಡ್‌ನ ಟಾಂಗಾಗಾಡಿ ಹತ್ತಿದಾಕೆ. ಅಲ್ಲಿ ಒಂದಿಷ್ಟು ಚಿತ್ರಗಳಲ್ಲಿ ಮಿಂಚಿ, ತಮಿಳು, ಮಲೆಯಾಳಂ ಕ್ಯಾಮೆರಾಗಳಿಗೂ ಮುಖ ತೋರಿಸಿದ್ದಾಳೆ. ಅಂದಹಾಗೆ ಕೃಷ್ಣ ಉಪ್ಪೂರು ನಿರ್ದೇಶನದ 'ಮಹಾನದಿ' ಚಿತ್ರದ ಮೂಲಕ ಸಂಜನಾ ಪ್ರೇಕ್ಷಕರ ಮುಂದೆ ಬರುತ್ತಿದ್ದಾಳೆ.
ಇದು ಮಹಿಳಾ ಪ್ರಧಾನ ಚಿತ್ರವಾಗಿರುವ ಕಾರಣ ಸಂಜನಾ ಕೂಡ ಈಗ ಬ್ರೇಕಿಂಗ್ ನ್ಯೂಸ್‌ನಲ್ಲಿದ್ದಾಳೆ. ನಿತ್ಯ ಪೇಜ್3 ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತ ಆರಕ್ಕೇರದ, ಮೂರಕ್ಕಿಳಿಯದ ಸಂಜನಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುವ ನಟಿ. ಆದರೆ ಈ ಸುದ್ದಿಗಳು ಕೆರಿಯರ್‌ಗೆ ಅನುಕೂಲವಾಗಲಿಲ್ಲ ಎಂದರಿತ ಸಂಜನಾ, ಸೀದಾ ಹೋಗಿದ್ದು ಪರಭಾಷೆಯ ಬಾಗಿಲಿಗೆ. ಅಲ್ಲಿ ಪ್ರಭಾಸ್, ಮೋಹನ್‌ಲಾಲ್, ರಾಜಶೇಖರ್ ಮುಂತಾದ ಸ್ಟಾರ್‌ಗಳ ಜೊತೆ ಅಭಿನಯಿಸುತ್ತಲೇ ಕನ್ನಡದಲ್ಲೂ ರವಿಚಂದ್ರನ್, ಜಗ್ಗೇಶ್, ದರ್ಶನ್, ಶಿವರಾಜ್ ಕುಮಾರ್ ಮುಂತಾದ ನಟರೊಂದಿಗೆ ಹೆಜ್ಜೆ ಹಾಕಿದ್ದಾಳೆ. ಇಷ್ಟೆಲ್ಲ ತಾಲೀಮಿಗೆ ಕಾರಣ ತನ್ನ ಹಳೆ ಇಮೇಜ್ ಬದಲಾಗಲಿ ಎಂಬುದು. ಹಿಂದಿ ತನ್ನ ಮಾತೃಭಾಷೆಯಾದರೂ ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಸಿಂಧಿ, ಪಂಜಾಬಿ, ಮಾರ್ವಾಡಿ... ಹೀಗೆ ಎಂಟು ಭಾಷೆಗಳು ಈಕೆಗೆ ಸಲೀಸು. ಈ ಕಾರಣಕ್ಕೆ ಈಕೆ 'ಬಹುಭಾಷೆ' ನಟಿ.

ಸದ್ಯ ಇದೇ ವಾರ ಬಿಡುಗಡೆಯಾಗುತ್ತಿರುವ 'ಮಹಾನದಿ' ಚಿತ್ರದ ಮೇಲೆ ಸಾಕಷ್ಟು ವಿಶ್ವಾಸ ಮತ್ತು ಗೆಲುವಿನ ನಂಬಿಕೆ ಇಟ್ಟುಕೊಂಡಿರುವ ಸಂಜನಾ, 'ನಾನು ಒಬ್ಬ ನಟಿಯಾಗಿ ಗುರುತಿಸಿಕೊಳ್ಳುವುದಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದೇನೆ. ಚಿಕ್ಕ ಪಾತ್ರವಾದರೂ ನನ್ನ ಕ್ಯಾಲಿಬರ್ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಕನ್ನಡದ ಜೊತೆಗೆ ಬೇರೆ ಭಾಷೆಯ ಚಿತ್ರಗಳಲ್ಲೂ ನಟಿಸಿದೆ. ಅಲ್ಲಿ ಹೆಸರು ಮಾಡಿದ ಮೇಲೆಯೇ ಗಾಂಧಿನಗರ ಗುರುತಿಸಿತು. ಈಗ 'ಮಹಾನದಿ' ಚಿತ್ರ ಬಿಡುಗಡೆಯಾಗುತ್ತಿದೆ. ನನ್ನ ವೃತ್ತಿಗೆ ಹೊಸ ಬ್ರೇಕ್ ಸಿಗುತ್ತದೆಂಬ ನಂಬಿಕೆ ಇದೆ. ಇಂಥ ಚಿತ್ರ, ಪಾತ್ರ, ಕಥೆಯಲ್ಲಿ ಈ ಹಿಂದೆ ಕಾಣಿಸಿಕೊಂಡಿಲ್ಲ. ಮಹಾನದಿಯಲ್ಲಿ ನಾನು ಮಾಡಿರುವ ಪಾತ್ರ ಸಿಗಬೇಕೆಂದರೆ ಅದೃಷ್ಟ ಮಾಡಿರಬೇಕು. ಮೀನುಗಾರರ ಕುಟುಂಬದ ಹೆಣ್ಣುಮಗಳ ಪಾತ್ರ ಮಾಡುವುದು ಎಂದರೆ ನನ್ನ ಮಟ್ಟಿಗೆ ಸವಾಲಿನ ಕೆಲಸ' ಎಂಬುದು ಸಂಜನಾಳ ಉವಾಚ.

ಚಿತ್ರದ ನಿರ್ದೇಶಕ ಈ ಹಿಂದೆ ಮಹಿಳಾ ಪ್ರಧಾನ ಚಿತ್ರ ಮಾಡಿ ರಾಜ್ಯ ಪ್ರಶಸ್ತಿ ತೆಗೆದುಕೊಂಡಿದ್ದರಂತೆ. 'ಮಹಾನದಿ' ಕೂಡ ನಾಯಕಿ ಪ್ರಧಾನ ಚಿತ್ರವಾಗಿದ್ದರಿಂದ ಸಂಜನಾ ಇನ್ನಿಲ್ಲದ ಉತ್ಸಾಹದಲ್ಲಿ ಕಥೆ ಕೇಳಿದ ಕೂಡಲೇ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಹೂವಿನ ಹಾಗೆ ಇರುವ ಮುಗ್ಧ ಹೆಣ್ಣಾಗಿ ಏನೆಲ್ಲ ಸಾಧಿಸುತ್ತಾಳೆ ಎಂಬುದು ಚಿತ್ರದ ಕಥೆ. 'ಚಿತ್ರೀಕರಣ ಪೂರ್ತಿ ಮಂಗಳೂರಿನಲ್ಲೇ ನಡೆಯಿತು. ಚಿತ್ರ ಶುರುವಾಗುವ 15 ದಿನಗಳ ಮುಂಚೆಯೇ ನಾನು ಕರಾವಳಿ ಪ್ರದೇಶಕ್ಕೆ ಹೋಗಿ ಅಲ್ಲಿ ಮೀನುಗಾರರ ಕುಟುಂಬಗಳ ಜತೆ ಬೆರತು ಅವರ ಜೀವನ ನೋಡಿದೆ. ನನ್ನಂಥ ಮಾಡ್ರನ್ ಹುಡುಗಿಗೆ ಇದು ವಿಶೇಷ ಅನುಭವ ಕೊಟ್ಟಿತು' ಎನ್ನುವ ಸಂಜನಾ, ನಿರ್ಮಾಪಕರಾದ ವಿನ್ಸೆಂಟ್ ಹಾಗೂ ಗ್ಲೆನ್ ಡಯಾಸ್‌ರನ್ನು ತುಂಬಾ ಹೊಗಳುತ್ತಾರೆ.  ಒಟ್ಟು ಎಪ್ಪತ್ತು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಸಂಜನಾಳ ಜೊತೆ ದಿಲೀಪ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ಮಾಲತಿ ಸರದೇಶ್‌ಪಾಂಡೆ, ಶೋಭರಾಜ್, ಲೋಕನಾಥ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇಡೀ ಚಿತ್ರ ಸುಂದರ್‌ನಾಥ್ ಸುವರ್ಣರ ಕ್ಯಾಮೆರಾದಲ್ಲಿ ಅರಳಿದೆ. ಎ.ಎಂ. ನೀಲ್‌ರ ಸಂಗೀತ ಇದೆ.

- ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.