ಉಕ್ರೇನ್ ನಲ್ಲೆ ಬೆಂಗಳೂರು ನಲ್ಲ

ನಮ್ಮದು ಪರಿಪೂರ್ಣ ಕೌಟುಂಬಿಕ ಚಿತ್ರ. ಹೀಗಾಗಿ ಶುಕ್ರವಾರ ಕುಟುಂಬ ಸಮೇತ ಬಂದು ಚಿತ್ರ ನೋಡಿ... ಇಂಥ ಮನವಿ ಗೋಷ್ಠಿಗಳನ್ನು ಎಷ್ಟು ಕೇಳಿರುತ್ತೇವೋ ಲೆಕ್ಕವಿಲ್ಲ. ಹಾಗಂತ ಅವೆಲ್ಲ ನಿಜವಾಗಲೂ ಕೌಟುಂಬಿಕ ಚಿತ್ರಗಳೋ ಅಲ್ಲವೋ ಎಂಬುದನ್ನು ನೋಡಿದವರೇ ಹೇಳಬೇಕು. ಇಂಥವುಗಳ ನಡುವೆ ಇತ್ತೀಚೆಗೆ ಇನ್ನೊಂದು ಚಿತ್ರ ಸೆಟ್ಟೇರಿದೆ. ಇದು ಕೌಟುಂಬಿಕ ಚಿತ್ರ ಹೌದೋ ಅಲ್ಲವೋ ಎನ್ನುವುದು ಬೇರೆ ಮಾತು. ಆದರೆ ನಿಜಕ್ಕೂ ಇದು ಕುಟುಂಬದ ಚಿತ್ರ ಎನ್ನುವುದಕ್ಕೆ ಮಾತ್ರ ಸಾಕಷ್ಟು ಸಾಕ್ಷಿಗಳಿತ್ತು. ನಿರ್ಮಾಣದ ಹೊಣೆ ತಂದೆಯದ್ದು, ಬ್ಯಾನರ್ ಅಮ್ಮನದು, ನಿರ್ದೇಶನಕ್ಕೆ ತಮ್ಮ, ನಾಯಕ ಅಣ್ಣ. ಚಿತ್ರದ ಪ್ರಮುಖ ಜಾಗಗಳಲ್ಲಿ ಕುಟುಂಬದವರೇ ಕೂತಿದ್ದರು. ಆದರೆ ನಾಯಕಿ ಮಾತ್ರ ಉಕ್ರೇನ್ನಿಂದ ಆಮದಾಗಿರುವ ಬಿಳಿ ಜಿರಲೆಯಂತಿರುವ ಸಿಝನಾ.
ಆಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಮಾಡೆಲ್. ರ್ಯಾಂಪ್ ಶೋನಲ್ಲಿ ಪರಿಚಯವಾದಾಕೆಯನ್ನು ನಾಯಕಿಯನ್ನಾಗಿಸಲಾಗಿದೆ. ನಾಯಕ ಕಿರಣ್, ನಿರ್ದೇಶನ ಯಶವಂತ್, ನಿರ್ಮಾಪಕ ನಂದಕುಮಾರ್, ವರಲಕ್ಷ್ಮಿ ಅವರದ್ದು ಬ್ಯಾನರ್ ಬೆಂಬಲ. ಕಳೆದ ತಿಂಗಳು ಸೆಟ್ಟೇರಿದ ಈ ಚಿತ್ರದ ಹೆಸರು 'ಯುವ ಸಾಮ್ರಾಟ್'. ಶೇ. 60 ಭಾಗ ಚಿತ್ರೀಕರಣ ಮುಗಿಸಲಾಗಿದೆ.
ನಿರ್ಮಾಪಕ ನಂದಕುಮಾರ್ ಸಿನಿಮಾ ಪತ್ರಕರ್ತರಾಗಿ ಗಾಂಧಿನಗರದಲ್ಲಿ ಚಿರಪರಿಚಿತರು. ಅಲ್ಲದೆ ಈ ಹಿಂದೆ 'ಗುಡ್ಲಕ್' ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿ, ಬ್ಯಾಡ್ಲಕ್ಗೆ ಒಳಗಾದರೂ ನಗುನಗುತ್ತಲೇ ಸಿನಿಮಾ ಕನಸು ಕಂಡವರು. ಸಾಹಸ ಸಿಂಹ ವಿಷ್ಣುವರ್ಧನ್ರ ಆತ್ಮೀಯರ ಸಾಲಿನಲ್ಲಿ ಗುರುತಿಸಿಕೊಂಡಿರುವರು. ಪತ್ನಿ ಜೊತೆ ಸೇರಿ ಸಿನಿಮಾ ಪತ್ರಿಕೆ ಮಾಡಿದ ನಂದಕುಮಾರ್ ಈಗ ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. 'ಪತ್ನಿ ಸಹಕಾರ. ಸ್ನೇಹಿತರ ನೆರವಿನಿಂದ ಒಂದು ಒಳ್ಳೆಯ ಚಿತ್ರ ಮಾಡುವ ಕನಸಿನೊಂದಿಗೆ ಮತ್ತೆ ಬಂದಿದ್ದೇನೆ. ಈ ಸಲ ಮಗನನ್ನು ನಾಯಕನನ್ನಾಗಿಸುವ ಅಗತ್ಯ ಮತ್ತು ಅನಿವಾರ್ಯವಿತ್ತು. ದೊಡ್ಡವನು ನಾಯಕನಾದರೆ, ಚಿಕ್ಕವನು ನಿರ್ದೇಶಕನಾಗುತ್ತಿದ್ದಾನೆ. ನನ್ನ ಮಕ್ಕಳ ಮೇಲೆ ನಿಮ್ಮ ಪ್ರೀತಿ ಇರಲಿ' ಎಂದರು ನಂದಕುಮಾರ್. ಯುಶವಂತ್ಗೆ ಹೋಮ್ ಬ್ಯಾನರ್ನಲ್ಲಿ ಅಣ್ಣನಿಗಾಗಿ ಚಿತ್ರ ಮಾಡುತ್ತಿರುವುದು ಖುಷಿ ತಂದಿದೆಯಂತೆ. ಯುವಜನಾಂಗದ ಚಿತ್ರ ಇದು. ತುಂಬಾ ಕಲ್ಲರ್ಫುಲ್ ಆಗಿದೆ ಎಂಬುದು ಯಶವಂತ್ನ ಮಾತು. ಚಿತ್ರಕ್ಕೆ ಅರುಣ್ ಸುರೇಶ್ ಕ್ಯಾಮೆರಾ ಹಿಡಿದ್ದಾರೆ.
ಮೊದಲ ಬಾರಿಗೆ ನಾಯಕನಾಗುತ್ತಿರುವ ಕಿರಣ್ ಡ್ಯಾನ್ಸ್ನಲ್ಲಿ ಹೆಸರು ಮಾಡಿದವರು. ಈಗಾಗಲೇ ಸಾಕಷ್ಟು ಸ್ಟೇಜ್ ಶೋಗಳಲ್ಲಿ ಹೆಜ್ಜೆ ಹಾಕಿರುವ ಕಿರಣ್, ಸಿನಿಮಾಗೆ ಬೇಕಾದ ತರಬೇತಿ ತೆಗೆದುಕೊಂಡು ಕ್ಯಾಮೆರಾ ಮುಂದೆ ನಿಂತಿದ್ದಾರೆ. 'ಈ ಅವಕಾಶಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ. ಇದು ನನ್ನ ಕನಸು ಕೂಡ. ಕುಟುಂಬದವರ ನಂಬಿಕೆಗೆ ಮೋಸ ಮಾಡಲ್ಲ. ಅಭಿನಯಕ್ಕೆ ಅಗತ್ಯ ತಯಾರಿ ಮಾಡಿಕೊಂಡಿದ್ದೇನೆ' ಎಂದರು ಕಿರಣ್.
'ಇದು ಮೊದಲ ಚಿತ್ರ. ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ. ಕಾಲೇಜ್ ಲವ್ ಸ್ಟೋರಿ. ಕನ್ನಡ ಮಾತನಾಡುವುದು ಸವಾಲಿನ ಕೆಲಸ. ಆದರೂ ಕನ್ನಡ ಕಲಿಯುತ್ತೇನೆ' ಎಂದು ಫ್ಲೈಟ್ ಹಿಡಿಯಲು ರೆಡಿಯಾದಳು ಉಕ್ರೇನ್ ಚೆಲುವೆ ಸಿಝನಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


