ಕಡ್ಡಿಪುಡಿ ಖದರ್

ಈ ವಾರ 'ಕಡ್ಡಿಪುಡಿ' ಚಿತ್ರ ಬಿಡುಗಡೆಯಾಗುತ್ತಿದೆ. ಹೌದು, ಅದು ದುನಿಯಾ ಸೂರಿ ನಿರ್ದೇಶನದ ಚಿತ್ರ. ಆ ಕಾರಣಕ್ಕೆ ಅದರ ಬಗ್ಗೆ ನಿರೀಕ್ಷೆಗಳಿವೆ. ಶಿವರಾಜ್ಕುಮಾರ್ ಅಭಿನಯದ ಚಿತ್ರ. ಈ ಕಾರಣಕ್ಕೂ ನಿರೀಕ್ಷೆಗಳಿವೆ. ಹರಿಕೃಷ್ಣರ ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ಈ ಕಾರಣಕ್ಕೂ ನಿರೀಕ್ಷೆಗಳಿವೆ. ಐಂದ್ರಿತಾ ರೇ ಅವರಿಗೆ ಇಲ್ಲಿ ವಿಭಿನ್ನ ಪಾತ್ರವಂತೆ. ವೇಶ್ಯೆಯ ಪಾತ್ರದಲ್ಲಿ ಅಭಿನಯಿಸಿರುವ ಅವರ ಬಗ್ಗೆ ಈಗಾಗಲೇ ಎಲ್ಲ ಕಡೆ ಮಾತು ಕೇಳಿಬರುತ್ತಿವೆ ಎಂಬ ಕಾರಣಕ್ಕೂ ನಿರೀಕ್ಷೆಗಳಿವೆ. ಆದರೆ, ಚಿತ್ರದ ನಾಯಕಿ ರಾಧಿಕಾ ಪಂಡಿತ್ ಎಂಬುದು ಮಾತ್ರ ಈ ಎಲ್ಲ ಹೈಪ್ಗಳ ಮಧ್ಯೆ ಕಳೆದು ಹೋದಂತಿದೆ.
ಹೌದು, ಕಡ್ಡಿಪುಡಿಯ ಬಗ್ಗೆ ಮಾತನಾಡುವವರು ನಾಯಕಿ ರಾಧಿಕಾ ಪಂಡಿತ್ ಬಗ್ಗೆ ಮಾತನಾಡುತ್ತಿರುವುದು ಕಡಿಮೆಯೇ. ರಾಧಿಕಾ ಪಂಡಿತ್ ಕೂಡ ಕಡ್ಡಿಪುಡಿಯ ಬಗ್ಗೆ ಮಾತನಾಡಿದ್ದೂ ಕಡಿಮೆಯೇ. ಹಾಗಾಗಿ, ಐಂದ್ರಿತಾ ಅವರ ಪಾತ್ರಕ್ಕೆ ಸಿಕ್ಕ ಕ್ರೇಜ್ನಲ್ಲಿ ರಾಧಿಕಾ ಕಳೆದು ಹೋಗಿದ್ದಾರೆಯೇ ಎಂಬ ಅನುಮಾನ ಬರಬಹುದು. ಆದರೆ ಅದು ಚಿತ್ರದ ಪ್ರಚಾರದ ಸಮಯದಲ್ಲಿ ಮಾತ್ರ ಎಂಬುದು ರಾಧಿಕಾ ಪ್ರತಿಭೆಯ ಬಗ್ಗೆ ಗೊತ್ತಿರುವವರ ನಂಬಿಕೆ. ಒಮ್ಮೆ ಚಿತ್ರ ಬಿಡುಗಡೆಯಾದ ಮೇಲೆ ಎಂಥ ಪಾತ್ರದಲ್ಲಾದರೂ ಸೈ, ಪ್ರೇಕ್ಷಕರನ್ನು ಆಕರ್ಷಿಸುವ ಸಾಮರ್ಥ್ಯ ಅವರದ್ದು.
'ನನಗೆ ಸಿಕ್ಕಿರುವ ಪ್ರಚಾರ ಕಡಿಮೆ ಇರಬಹುದು. ಆದರೆ, ಕಡ್ಡಿಪುಡಿಯಂಥ ವಿಭಿನ್ನ ಚಿತ್ರ ಮತ್ತು ಪಾತ್ರ ಸಿಕ್ಕಾಗ ಅದನ್ನು ಚೆನ್ನಾಗಿ ಬಳಸಿಕೊಂಡಿದ್ದೇನೆ ಎಂಬ ನಂಬಿಕೆ ನನ್ನದು. ಚಿತ್ರ ತೆರೆಕಂಡ ಮೇಲೆ ಈ ಅಭಿಪ್ರಾಯ ಪ್ರೇಕ್ಷಕರದ್ದೂ ಆಗಲಿದೆ' ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ ರಾಧಿಕಾ.
ಬೇರೆ ಚಿತ್ರಗಳಂತೆ ಅವರದ್ದು ಇಲ್ಲಿ ಲವರ್ಗರ್ಲ್ ಪಾತ್ರವಲ್ಲ. 'ಆದರೆ ಈ ಮುಂಚೆ ಕೂಡ ಇಂಥ ಡೀ ಗ್ಲಾಮರಸ್ ಪಾತ್ರಗಳನ್ನು ಮಾಡಿದ್ದೇನೆ, ಹಾಗಾಗಿ ನನಗೆ ಇದೇನೂ ಹೊಸತಲ್ಲ' ಎನ್ನುವ ರಾಧಿಕಾ ಮೊದಲ ಬಾರಿಗೆ ಶಿವರಾಜ್ಕುಮಾರ್ ಅವರಿಗೆ ನಾಯಕಿಯಾಗಿರುವುದು ಮಾತ್ರ 'ಕಡ್ಡಿಪುಡಿ'ಯ ವಿಶೇಷ. 'ಒಲವೆ ಜೀವನ ಲೆಕ್ಕಾಚಾರ', 'ಹುಡುಗರು' ಮುಂತಾದ ಚಿತ್ರಗಳಲ್ಲಿ ಪ್ರೇಕ್ಷಕರು ಈಗಾಗಲೇ ನನ್ನನ್ನು ಡೀ ಗ್ಲಾಮರಸ್ ಆಗಿ ನೋಡಿದ್ದಾರೆ. ಆದರೆ ಈ ಚಿತ್ರದಲ್ಲಿ ಅಂಥದ್ದೇ ಪಾತ್ರದ ಇನ್ನೊಂದು ಮುಖ ಅನಾವರಣಗೊಳ್ಳಲಿದೆ ಎಂಬ ಭರವಸೆ ಅವರದ್ದು. ಹಾಗಂತ ತಮ್ಮ ಅಭಿಮಾನಿಗಳಿಗೆ, ಹೆದರಬ್ಯಾಡ್ರಿ ಅಂತ ಧೈರ್ಯ ಕೊಡುತ್ತಾರೆ ಅವರು.
ಕೇಳುಗರ ವಲಯದಲ್ಲಿ ಕಡ್ಡಿಪುಡಿಯ 'ಸೌಂದರ್ಯ ಸಮರ', 'ಬೇರೆ ಯಾರೋ', 'ಬುಡುಬುಡಿಕೆ ಮಾಲಿಂಗ' ಹಾಡುಗಳ ಸದೆ ್ದ ಜೋರಾಗಿದ್ದರೂ ಕಾಲರ್ ಟ್ಯೂನ್ನಲ್ಲಿ 'ಹೆದರಬ್ಯಾಡ್ರಿ' ಹಾಡು ಅತಿ ಹೆಚ್ಚು ಡೌನ್ಲೋಡ್ ಆಗಿರುವುದು ರಾಧಿಕಾ ಪಾಲಿನ ವಿಶೇಷ.
'ಮೊದಲ ದಿನದ ಪೋಟೋ ಶೂಟ್ನಲ್ಲೇ ಕಡ್ಡಿಪುಡಿಯ ವಿಶೇಷತೆ ಎದ್ದು ಕಂಡಿತ್ತು. ಚಿತ್ರಕ್ಕೊಂದು ಕ್ರೇಜ್ ಸೃಷ್ಟಿಯಾಗಿತ್ತು. ಈಗ ಆ ಕ್ರೇಜ್ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಉಮಾ ಎಂಬ ಪಾತ್ರದಲ್ಲಿ ಅಭಿನಯಿಸಿರುವ ನಾನು ಶಿವರಾಜ್ಕುಮಾರ್ ಅವರನ್ನು ಲಾಂಗ್ ಎತ್ತಿಕೊಂಡು ಗಾಂಧಿಬಜಾರ್ನಲ್ಲಿ ಅಟ್ಟಿಸಿಕೊಂಡು ಹೋಗುವ ಸ್ಟಿಲ್ಗಳಲ್ಲಿ ಕೊಂಚ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದೆ. ಅದು ನನ್ನ ಪಾತ್ರದ ಬಗ್ಗೆ ಎಲ್ಲರ ಕುತೂಹಲ ಕೆರಳಿಸಿತ್ತು. ಈಗ ತೆರೆಯ ಮೇಲೆ ನಾನು ಹೇಗೆ ಕಾಣುತ್ತೇನೆ' ಎಂಬ ಕುತೂಹಲಕ್ಕೆ ಇಂದು ತೆರೆಬೀಳಲಿದೆ ಎಂದು ಕಡ್ಡಿಪುಡಿಯ ಮಾತು ಮುರಿಯುತ್ತಾರೆ ರಾಧಿಕಾ.
- ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


