ಸಿನಿಮಾ ಲೇಖನ

ವಿರೂಪತಾರಾ!

ಇಂದು ಚಿತ್ರ ನೋಡಿದ ಮೇಲೆ ಮನಸ್ಸು ಹಗುರಾಗುವುದಿಲ್ಲ. ಮನಸ್ಸು ನಿಮ್ಹಾನ್ಸ್ ಆಗುತ್ತದೆ! ಇಷ್ಟಕ್ಕೂ ನಮ್ಮ ನಾಯಕರು...

ವಿರೂಪತಾರಾ!
Published On :

ಇಂದು ಚಿತ್ರ ನೋಡಿದ ಮೇಲೆ ಮನಸ್ಸು ಹಗುರಾಗುವುದಿಲ್ಲ. ಮನಸ್ಸು ನಿಮ್ಹಾನ್ಸ್ ಆಗುತ್ತದೆ! ಇಷ್ಟಕ್ಕೂ ನಮ್ಮ ನಾಯಕರು ನಮ್ಮನ್ನೇಕೆ ನಿಮ್ಹಾನ್ಸ್‌ಗೆ ಒಯ್ಯುತ್ತಿದ್ದಾರೆ? ಪ್ರೇಕ್ಷಕನ ಈ ಮಾನಸಿಕ ಪ್ರಶ್ನೆಗೆ ಉತ್ತರ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಪಾಪ ತಮ್ಮ ನೆಚ್ಚಿನ ನಟರೇ ಅಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರೆ, ಅವರನ್ನು ತೆರೆ ಮೇಲೆ ಕಂಡವನ ಮಾನಸಿಕ ಸ್ಥಿತಿ ಹೇಗಿರಬೇಡ, ಹೇಳಿ?
ಪ್ರೇಕ್ಷಕನ ಮನಸ್ಸನ್ನು ನಿಮ್ಹಾನ್ಸ್ ರೋಗಿಯಂತೆ ಮಾಡುವ ನಾಯಕನ ಈ ಔಟ್‌ಲುಕ್ಕು, ಚಿತ್ರಕ್ಕೆ ಪ್ರಚಾರ ತಂತ್ರವೇ? ಗೊತ್ತಿಲ್ಲ. ಆದರೆ ಹುಚ್ಚ, ದೆವ್ವ, ಅಲೆಮಾರಿ, ಹಾಫ್ ಮೆಂಟಲ್, ಪೂರ್ತಿ ತಲೆಕೆಟ್ಟವ, ದೇವರು, ಅಘೋರಿ, ಪಿಶಾಚಿ... ಹೀಗೆ ಮನುಷ್ಯನನ್ನು ನಿದ್ದೆಯಲ್ಲೂ ಎಬ್ಬಿಸಿ ಭಯ ಬೀಳಿಸುವ ರೂಪಗಳು ನಮ್ಮ ನಾಯಕರ ಮೈಯನ್ನು ಆವರಿಸಿಕೊಳ್ಳುತ್ತಿವೆ. ಒಂದು ಕಾಲದಲ್ಲಿ ಬ್ಯಾನರ್, ನಿರ್ದೇಶಕ, ನಾಯಕ, ಕಥೆಯ ಕಾರಣಕ್ಕೆ ಸುದ್ದಿಯಾಗುತ್ತಿದೆ ಸಿನಿಮಾ, ಈಗ ಯಾವುದಾದರೂ ಒಂದು ಗೆಟಪ್ (ವೇಷ) ವಿಚಾರದಲ್ಲಿ ಆ ಚಿತ್ರ ಸುದ್ದಿಯಾಗುತ್ತಿದೆ. ನಾಯಕಿಯ ಫೋಟೋ ಸೆಶನ್‌ನಿಂದಲೇ ಸುದ್ದಿ ಮಾಡುವ ಚಿತ್ರಗಳ ನಡುವೆ ಇಂಥ ಚಿತ್ರ-ವಿಚಿತ್ರ ವೇಷಗಳಿಂದ ಸುದ್ದಿ ಮಾಡುವ ಪರಂಪರೆ ಹೆಚ್ಚಾಗುತ್ತಿದೆ. ಇದು ಒಳ್ಳೆಯದೋ, ಕೆಟ್ಟದೋ ಅದು ಬೇರೆ ಪ್ರಶ್ನೆ. ಆದರೆ 'ನಿಮ್ಮ ಮೆಚ್ಚಿನ ನಟರು ಇನ್ನು ಮುಂದೆ ವಿಕ್ಷಿಪ್ತವಾಗಿ ಕಾಣಿಸಿಕೊಳ್ಳಲಿದ್ದಾರೆ' ಎನ್ನುವ ಪ್ರಕಟಣೆ ಅಧಿಕೃತವಾಗಿ ಪೋಸ್ಟರ್‌ನಲ್ಲಿ ಕಾಣಿಸಿಕೊಳ್ಳುವ ಕಾಲ ದೂರವಿಲ್ಲ.
ವೇಷ ಭೂಷಣ ಎಂದ ಕೂಡಲೇ ಹೊಸತನದಿಂದ ಕೂಡಿದ ಭಿನ್ನ ವೇಷಗಳ ಬಗ್ಗೆ ಇಲ್ಲಿ ಮಾತನಾಡುತ್ತಿಲ್ಲ. ತಮ್ಮ ವೇಷದಲ್ಲೇ ತಾನು ಈಗ ನಾರ್ಮಲ್ ಅಲ್ಲ ಎಂದು ತೋರಿಸಿಕೊಳ್ಳುವ ವಿಚಿತ್ರ ಗೆಟಪ್‌ಗಳ ಲೋಕದ ಕುರಿತು. 'ಉಪೇಂದ್ರ', 'ಎ' ಚಿತ್ರಗಳ ವಿಚಿತ್ರ ಗೆಟಪ್‌ಗಳನ್ನೂ ಮೀರಿಸುವ ಔಟ್‌ಲುಕ್‌ನಲ್ಲಿ ಈಗ ನಾಯಕರು ರಾರಾಜಿಸುತ್ತಿದ್ದಾರೆ. ನಟ ವಿಜಯ್ ಅಭಿನಯದ 'ದೇವ್ರು' ಚಿತ್ರ ನಿಮಗೆ ನೆನಪಿರಬಹುದು. ಅದರಲ್ಲಿ ಸ್ಮಶಾನ ಕಾಯುವ, ಪಕ್ಕಾ ಅರ್ಧ ಹುಚ್ಚನಂತೆ ತಲೆ ಬೋಳಿಸಿಕೊಂಡು, ಮೈ ಮೇಲೆ ಕಾವಿ ಬಟ್ಟೆ ಹೊದ್ದು, ಅಧುನಿಕ ಯಮನಂತೆ ವಿಜಯ್ ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಾಗ, ಪ್ರೇಕ್ಷಕರಲ್ಲಿ ವಿಚಿತ್ರ ಕಲ್ಪನೆಗಳು ಹುಟ್ಟಿಕೊಂಡವು. 'ಜೋಗಯ್ಯ' ಚಿತ್ರದಲ್ಲಿ ಅಘೋರಿಯಾದ ನಟ ಶಿವರಾಜ್‌ಕುಮಾರ್, 'ಕಲ್ಪನಾ' ಚಿತ್ರದಲ್ಲಿನ ಹೆಣ್ಣು ದೆವ್ವದ ರೂಪ, 'ಆರಕ್ಷಕ'ದಲ್ಲಿ ಹುಚ್ಚನಾಗಿ ಕಾಣಿಸಿಕೊಂಡ ರಿಯಲ್‌ಸ್ಟಾರ್ ಉಪೇಂದ್ರ ಚಿತ್ರದ ರೀಲುಗಳನ್ನೇ ಹೆದರಿಸಿದರು.

'ಯಾರೇ ಕೂಗಾಡಲಿ' ಎಂದ ನಟ ಪುನೀತ್, ಆ ಚಿತ್ರ ಮೊದಲ ಭಾಗ ಮುಗಿದ ಮೇಲೆ ಅಬ್ ನಾರ್ಮಲ್ ಆಗಿ ಕಂಡ. ಉದ್ದ ಕೂದಲು, ಮೊಣಕಾಲು ವರೆಗೆ ಮಡಚಿಕೊಂಡ ಪ್ಯಾಂಟಿನಲ್ಲಿ ಕಾಣಿಸಿಕೊಂಡವರು  ಪುನೀತ್. ಅದೇ ಚಿತ್ರದಲ್ಲಿ ಲೂಸ್ ಮಾದ ಯೋಗೀಶ್ ಕೂಡ ಪೂರ್ತಿ ಅಬ್‌ನಾರ್ಮಲ್. ಇಬ್ಬರು ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿರುವ ಆಸಾಮಿಗಳು.
ಬಾಲಿವುಡ್‌ನ ಖಾನ್‌ಗಳ ಪಕ್ಕದಲ್ಲಿ ನಿಲ್ಲುವಷ್ಟು ಸ್ಮಾರ್ಟ್ ಆಗಿ ಕಾಣುತ್ತಿರುವ ದರ್ಶನ್‌ರನ್ನು ಒಮ್ಮೆ ಹಿಂದಿರುಗಿ ನೋಡಿ... 'ಮೆಜೆಸ್ಟಿಕ್‌' ಚಿತ್ರದಲ್ಲಿ ಕೊಳೆತ ಹಲ್ಲು, ಸೈಕೋ ಕಿಲ್ಲರ್‌ನನ್ನು ನೆನಪಿಸುವ ಕಣ್ಣು, ಒರಟು ಮುಖದ ದರ್ಶನ್ ಅವರು. 'ಹುಚ್ಚ' ಚಿತ್ರದಲ್ಲಿ ಹುಚ್ಚನಾದ ಸುದೀಪ್, 'ಕರಿಚಿರತೆ'ಯಲ್ಲಿ ಬುಡುಬುಡಿಕೆಯಾದ, 'ಭೀಮಾ ತೀರದಲ್ಲಿ' ನಾಗಸಾಧು ಹಾಗೂ 'ವೀರಬಾಹು' ಚಿತ್ರದಲ್ಲಿ ಸ್ಮಶಾನ ಕಾಯುವವನಾಗಿ ಕಾಣಿಸಿಕೊಂಡ ವಿಜಯ್, 'ಅಲೆಮಾರಿ' ಹಾಗೂ 'ಸಿದ್ಲಿಂಗು'ಗಳಲ್ಲಿ ಹುಚ್ಚನಾಗಿದ್ದ ಯೋಗೀಶ್, '12 ಎಎಂ' ಚಿತ್ರದಲ್ಲಿ ಭೂತವಾಗಿ ಕಾಣಿದ ಕಾಶಿನಾಥ್ ಪುತ್ರ ಅಲೋಕ್, 'ಅಂಗುಲಿಮಾಲ'ನಾಗಿ ಸಾಯಿಕುಮಾರ್, 'ಕುಂಭರಾಶಿ'ಯಲ್ಲಿ ಬೈರಾಗಿಯಾಗಿದ್ದ ಚೇತನ್‌ಚಂದ್ರ, 'ಹುಚ್ಚ' ಚಿತ್ರದಲ್ಲಿ ಶಿವನಂತೆ ಪೋಸು ಕೊಟ್ಟ ಹೊಸ ನಟ ಧನಂಜಯ್, 'ಬೀರ' ಚಿತ್ರದಲ್ಲಿ ಹಾಲಿವುಡ್‌ನ 'ಅವತಾರ್‌' ಪ್ರಾಣಿಯಂತೆ ಕಾಣಿಸಿಕೊಂಡ 'ಗುಂಡ್ರಗೋವಿ' ಸತ್ಯ... ಹೀಗೆ ಪಟ್ಟಿ ಮಾಡುತ್ತ ಹೋದರೆ ಗಾಂಧಿನಗರದಲ್ಲಿ ಅಬ್‌ನಾರ್ಮಲ್ ಅವತಾರಿಗಳು ಗಲ್ಲಿ ಗಲ್ಲಿಗೂ ಸಿಗುತ್ತಾರೆ.
ಆದರೆ ಸಂತೋಷ್ ನಿರ್ದೇಶನದ 'ಗೊಂಬೆಗಳ ಲವ್‌' ಚಿತ್ರದಲ್ಲಿ ನಾಯಕ, ನಾಯಕಿ ಇಬ್ಬರೂ ಅಬ್‌ನಾರ್ಮಲ್ ಆದರೂ ಅವರು ಪ್ರೇಕ್ಷಕನನ್ನು ನಿಮ್ಹಾನ್ಸ್‌ಗೆ ಕಳುಹಿಸುವ ಸಾಹಸ ಮಾಡಲಿಲ್ಲ. 'ಅಯ್ಯೋ ಪಾಪ' ಎನ್ನುವ ಸಿಂಪಥಿ ಗಿಟ್ಟಿಸಿಕೊಂಡರು. ಹಾಗೆ ನೋಡಿದರೆ ಇಂಥ ವಿಚಿತ್ರ ಪಾತ್ರಗಳು ಚಿತ್ರರಂಗಕ್ಕೆ ಹೋಸದೇನೂ ಅಲ್ಲ. ಆದರೆ, ಅಂಥ ಅಬ್‌ನಾರ್ಮಲ್ ಪಾತ್ರಗಳಲ್ಲಿ ನಾಯಕ ಕಾಣಿಸಿಕೊಳ್ಳುತ್ತಿಲ್ಲ. ಈಗ ನಾಯಕನೇ ಅಂಥ ಪಾತ್ರಗಳಿಗೆ ವೇಷ ಹಾಕುತ್ತಿದ್ದಾನೆ. ಜೊತೆಗೆ ಇದೇ ವೇಷಗಳನ್ನೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಚಿತ್ರ ಮೊದಲು ಟೇಕ್‌ಅಪ್ ಆಗುವುದು ಇಂಥ ವಿಕ್ಷಿಪ್ತ ವೇಷಗಳಿಂದಲೇ ಎನ್ನುವಂಥ ವಾತಾವರಣ ಈಗ ನಿರ್ಮಾಣವಾಗಿದೆ. ಅಲ್ಲದೆ ಚಿತ್ರದ ಶೀರ್ಷಿಕೆಗಳೂ ಹಾಗೆಯೇ ಮೂಡಿಬರುತ್ತಿವೆ. 'ಹಾಫ್‌ಮೆಂಟಲ್‌', 'ಹುಚ್ಚ', 'ಕರಿಚಿರತೆ' ಮುಂತಾದ ಹೆಸರುಗಳನ್ನು ನೋಡಿ, ಚಿತ್ರಮಂದಿರಕ್ಕೆ ಹೋಗಿಬಂದ ಪ್ರೇಕ್ಷಕನಿಗೆ ನಿಮ್ಹಾನ್ಸ್ ನೆನಪಾಗದಿರಲು ಸಾಧ್ಯ

ಭೂಷಣ್ ಪ್ರಯೋಗ
ಚಿತ್ರಗಳಲ್ಲಿ ಕಾಣುವ ಅಬ್‌ನಾರ್ಮಲ್ ಪಾತ್ರಧಾರಿಗಳನ್ನು ಅಷ್ಟೇ ಅಬ್‌ನಾರ್ಮಾಲ್ ಆಗಿ, ವಿಚಿತ್ರವಾಗಿ ವಿನ್ಯಾಸ ಮಾಡುವುದರಲ್ಲಿ ಭೂಷಣ್ ಗೀಚಿ ಅವರದ್ದು ಎತ್ತಿದ ಕೈ. ಕೆನ್ ಕಲಾ ಶಾಲೆಯಲ್ಲಿ ಬಣ್ಣದ ಸಾಲುಗಳ ನಂಟು ಬೆಳೆಸಿಕೊಂಡ ಭೂಷಣ್, 'ಎ', 'ಉಪೇಂದ್ರ', ದೇವದತ್ ನಿರ್ದೇಶನದ ಚಿತ್ರದ ಪೋಸ್ಟರ್‌ಗಳೇ ಭೂಷಣ್‌ರ ಪ್ರಯೋಗಕ್ಕೆ ಸಾಕ್ಷಿ. 'ಎ' ಹಾಗೂ 'ಉಪೇಂದ್ರ' ಚಿತ್ರಗಳು ಆರಂಭದಲ್ಲಿ ಪ್ರೇಕ್ಷಕರ ಗಮನ ಸೆಳೆಯುವುದರಲ್ಲಿ ಭಿನ್ನ ವಿನ್ಯಾಸದ ಭೂಷಣ್‌ರ ಪೋಸ್ಟರ್‌ಗಳೇ ಮೊದಲ ಕಾರಣ ಎಂಬುದನ್ನು ಸ್ವತಃ ಉಪ್ಪಿಯೇ ಒಪ್ಪಿಕೊಳ್ಳುತ್ತಾರೆ. ಇತ್ತೀಚೆಗೆ ಬಂದ 'ಬಿಡಲಾರೆ ಎಂದೂ ನಿನ್ನ' ಹಾಗೂ 'ಬಣ್ಣ' ಚಿತ್ರಗಳಲ್ಲಿ ಮತ್ತೆ ತಮ್ಮ ಹಳೇ ಖದರ್ ತೋರಿಸಿದ್ದರು ಭೂಷಣ್. ಹಾರರ್, ಭೂತ, ಪ್ರೇತ ಹಾಗೂ ಅಬ್‌ನಾರ್ಮಲ್ ಸಿನಿಮಾಗಳ ಪೋಸ್ಟರ್‌ಗಳನ್ನು ವಿಶೇಷವಾಗಿ ವಿನ್ಯಾಸ ಮಾಡುವುದರಲ್ಲಿ ಭೂಷಣ್‌ರದ್ದು ಎತ್ತಿದ ಕೈ.

ವೇಷಗಳ ಕೊಡುಗೆ
ರಂಗಭೂಮಿ, ಯಕ್ಷಗಾನ, ಪೌರಾಣಿಕ ನಾಟಕಗಳು ಸೇರಿದಂತೆ ಜನ ಸಂಸ್ಕೃತಿಯ ಮುಂದುವರಿದ ಭಾಗವೆಂಬಂತೆ ಹುಟ್ಟಿಕೊಂಡ 'ಸಿನಿಮಾ' ಮಾಧ್ಯಮಕ್ಕೆ ಈಗ ಏನೇ ಪ್ರಭಾವ, ಪ್ರಚಾರ ಇದ್ದರೂ ಅದರ ಸಾಕಷ್ಟು ವಿಭಾಗಗಳು ರಂಗಭೂಮಿಯ ಕೊಡುಗೆ ಎಂಬುದು ಮಾತ್ರ ಖರೆ. ಅದರಲ್ಲೂ ಮುಖ್ಯವಾಗಿ ಸಿನಿಮಾವೊಂದರಲ್ಲಿ ನಟ, ನಟಿಯರು ತೊಡುವ ವೇಷಭೂಷಣಗಳು ಅರ್ಥಾತ್ ಪ್ರಸಾಧನ, ವಸ್ತ್ರಾಲಂಕಾರ ರಂಗಮಂದಿರದಿಂದ ವಲಸೆ ಬಂದಿರುವ ಸಂಸ್ಕೃತಿ. ಸಿನಿಮಾ, ಹೀಗೆ ಸ್ಟೇಜ್‌ನಿಂದ ಎತ್ತಿಕೊಂಡ ವೇಷಭೂಷಣದ ತಂತ್ರಗಳನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುತ್ತ ಬಂದಿದೆ. ಒಂದೊಂದು ಸಲ ಆ ಚಿತ್ರಕ್ಕೆ ಇಂಥ ವೇಷ ಬೇಕೋ, ಬೇಡವೋ ಗೊತ್ತಿಲ್ಲ, ಆದರೆ ಆ ವೇಷವನ್ನೇ ಪ್ರಧಾನವಾಗಿ ಪ್ರಚಾರ ಮಾಡುವಷ್ಟು ಗಿಮಿಕ್ ಚಿತ್ರರಂಗ ಕಲಿತುಕೊಂಡಿದೆ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.