ದಾಸ ಬಂದ

ನಟ ಕೋಮಲ್‌ಗಾಗಿಯೇ ಚಿತ್ರದ ಶೀರ್ಷಿಕೆಗಳು ಹುಟ್ಟಿಕೊಳ್ಳುತ್ತವೆಯೇ? ಇತ್ತೀಚೆಗೆ ಅವರ ಅಭಿನಯದಲ್ಲಿ ಮೂಡಿ ಬರುತ್ತಿರುವ ಹಾಗೂ ಬಂದಿರುವ ಚಿತ್ರಗಳ ಹೆಸರು ನೋಡಿದರೆ ಹಾಗೊಂದು ಪ್ರಶ್ನೆ ಕಾಡುತ್ತದೆ. 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ', 'ಕಳ್‌ಮಂಜ', 'ವಾರೆವ್ಹಾ', 'ಗೋವಿಂದಾಯ ನಮಃ' 'ರಾಧಾಳ ಗಂಡ', 'ಗೋವಾ', 'ಪ್ಯಾರ್‌ಗೆ ಆಗ್‌ಬಿಟ್ಟೈತೆ', 'ಮೀರ್‌ಸಾದಕ್' ಇವು ಕೋಮಲ್‌ಗಾಗಿ ಹುಟ್ಟಿಕೊಂಡ ಶೀರ್ಷಿಕೆಗಳೇ? ಎನ್ನುವುದು ಗಾಂಧಿನಗರದ ಪ್ರಶ್ನೆ.
ಸದ್ಯ ಇವುಗಳ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗುತ್ತಿದೆ. ಅದೇ 'ಪುಂಗಿದಾಸ'. ಇತ್ತೀಚೆಗೆ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಯಿತು. ಶ್ರೀನಾಥ್ ಈ ಚಿತ್ರದ ನಿರ್ದೇಶಕರು. ಸದಾಶಿವ ಅಲಿಯಾಸ್ ರಾಮಣ್ಣ ಚಿತ್ರದ ನಿರ್ಮಾಪಕರು. ರಾಜೇಂದ್ರ ಕಾರಂತ್ ಅವರ ಸಂಭಾಷಣೆ ಚಿತ್ರಕ್ಕಿದೆ. ವಿಶೇಷ ಎಂದರೆ ಹಿರಿಯ ನಟಿ ಸಾಹುಕಾರ್ ಜಾನಕಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಾಜಕಾರಣಿ ಬಿ.ಸಿ. ಪಾಟೀಲ್ ಈ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದ ನಾಯಕನಾಗಿರುವ ಕೋಮಲ್‌ಗೆ ಬಾಂಬೆ ಹುಡುಗಿ ಆಸ್ಮಾ ನಾಯಕಿ.
ಆರ್.ಎಸ್. ಗೌಡ ಅವರ ಸ್ಟುಡಿಯೋದಲ್ಲಿ ಚಿತ್ರೀಕರಣದ ಟೆಂಟ್ ಹಾಕಲಾಗಿತ್ತು. 'ಎಂದಿನಂತೆ ಇದು ನನ್ನದೆ ಸ್ಟೈಲಿನ ಚಿತ್ರವಾದರೂ ನಿರ್ದೇಶಕ ಶ್ರೀನಾಥ್ ಇರುವುದರಿಂದ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳು ಇಲ್ಲಿವೆ. ಪ್ರೇಕ್ಷಕರಿಗೆ ಮನರಂಜನೆ ಒದಗಿಸುವುದು ನಮ್ಮ ಉದ್ದೇಶ. ಅದರಂತೆ ಚಿತ್ರ ಮಾಡುತ್ತಿದ್ದೇವೆ. ವಿಶೇಷ ಎಂದರೆ ಚಿತ್ರದಲ್ಲಿ ನನ್ನ ರೆಗ್ಯುಲರ್ ಲುಕ್ ಜೊತೆಗೆ ಹಲವು ವಿವಿಧ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹೀಗಾಗಿ ನನ್ನ ಮಟ್ಟಿಗೆ ಹೊಸ ರೀತಿಯ ಸಿನಿಮಾ ಇದು. ನೋಡುವುದಕ್ಕಂತೂ ಡಿಫರೆಂಟ್ ಆಗಿರುತ್ತದೆ' ಎಂದರು ಕೋಮಲ್. ಈಗಾಗಲೇ ಚಿತ್ರಕ್ಕೆ 25 ದಿನಗಳ ಚಿತ್ರೀಕರಣ ಮುಗಿದೆ. ಕೋಮಲ್ ಇಲ್ಲಿ ನಾರದನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಹುಕಾರ್ ಜಾನಕಿ ತುಂಬಾ ವರ್ಷಗಳ ನಂತರ ಮತ್ತೆ ಬಂದಿದ್ದಾರೆ. 82 ವರ್ಷ ವಯಸ್ಸಿನ ಜಾನಕಿ, 40ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಪುಂಗಿದಾಸ' ಚಿತ್ರದ ಕಥೆ ಕೇಳಿದ ಕೂಡಲೇ ಮರು ಮಾತನಾಡದೆ ಒಪ್ಪಿಕೊಂಡು, ಪಾತ್ರ ಮಾಡಿದ್ದನ್ನು ನಿರ್ದೇಶಕ ಶ್ರೀನಾಥ್ ಹೆಮ್ಮೆಯಿಂದ ಹೇಳಿಕೊಂಡರು. ಜಾನಕಿ ಅವರು ಚಿತ್ರದಲ್ಲಿ ಸುದರ್ಶನ್ ಅವರಿಗೆ ಜೋಡಿಯಾಗಿ ಅಭಿನಯಿಸಲಿದ್ದಾರೆ. 'ಮುಂದೆ ಕೂಡ ನನಗೆ ಸೂಕ್ತ ಎನ್ನಿಸುವ ಪಾತ್ರಗಳು ಸಿಕ್ಕರೆ ಅಭಿನಯಿಸುವುದಾಗಿ' ಜಾನಕಿ ಭರವಸೆ ಕೊಟ್ಟರು.
ಕೋಮಲ್ ಅವರ ಮೇಲೆ ನಂಬಿಕೆ ಇಟ್ಟು ಈ ಚಿತ್ರದಲ್ಲಿ ಅಭಿನಯಿಸಲು ಬಂದಿರುವುದಾಗಿ ಬಿ.ಸಿ. ಪಾಟೀಲ್ ಹೇಳಿಕೊಂಡರು. 'ಕೋಮಲ್ ಮತ್ತು ಅವರ ಅಭಿಮಾನಿ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ನಮ್ಮ ನಿರೀಕ್ಷೆಯಂತೆ ಚಿತ್ರ ಮೂಡಿ ಬಂದಿದೆ. ಪ್ರೇಕ್ಷಕರಿಗೆ ನೂರಕ್ಕೆ ನೂರು ಭಾಗ ಮನರಂಜನೆ ಕೊಡುವುದು ಗ್ಯಾರಂಟಿ' ಎಂದರು ಶ್ರೀನಾಥ್. ನಾಯಕಿ ಆಸ್ಮಾಗೆ ಇದು ಎರಡನೇ ಚಿತ್ರ. ಹಿಂದಿ ಚಿತ್ರವೊಂದರಲ್ಲಿ ಅಭಿನಯಿಸಿದ್ದಾರೆ. 'ಒಳ್ಳೆಯ ಪಾತ್ರ. ಕನ್ನಡ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು' ಎಂದರು ಆಸ್ಮಾ. ಚಿತ್ರತಂಡದ ಮಾತುಕತೆಯ ನಡುವೆಯೇ ಚಿತ್ರದ ಚಿತ್ರೀಕರಣ ಸಾಗಿತ್ತು.
- ಕೇಶು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


