ತ್ರಿವಳಿ ಸಂಗಮ

ಬೆಳ್ಳಿಪರದೆಯನ್ನು ಬೆಳಗಿದ ಆ ಮೂವರಿಗೆ ಈಗ 'ಬೆಳ್ಳಿ ಮಹೋತ್ಸವ'. ಅರ್ಥಾತ್ ಆ ಮೂವರ ಕಾಂಬಿನೇಷನ್‌ನ ಚಿತ್ರಕ್ಕೆ ಈಗ 25 ವರ್ಷ. ತೆರೆತುಂಬಿಕೊಂಡ ಅವರು ಪ್ರೇಕ್ಷಕರ ಪಾಲಿಗೆ ನಿಜವಾಗಲೂ 'ಬ್ರಹ್ಮ ವಿಷ್ಣು ಮಹೇಶ್ವರ'ರಾಗಿ ಕಂಡಿದ್ದರು. ಪ್ರೇಕ್ಷಕ ಪ್ರಭು ಅವರನ್ನು ನೋಡಿ ಚಪ್ಪಾಳೆ ತಟ್ಟಿದ್ದರು. ಒಬ್ಬ ಪೊಲೀಸ್, ಮತ್ತೊಬ್ಬ ಡಾಕ್ಟರ್, ಮಗದೊಬ್ಬ ಲಾಯರ್... ಹೌದು, ಹೇಳುತ್ತಿರುವುದು 1988ರಲ್ಲಿ ತೆರೆಕಂಡ 'ಬ್ರಹ್ಮ ವಿಷ್ಣು ಮಹೇಶ್ವರ' ಚಿತ್ರದ ಕುರಿತೇ. ಅನಂತ್‌ನಾಗ್ ಖಾಕಿ ತೊಟ್ಟರೆ, ಅಂಬರೀಷ್ ಸ್ಟೆಥಾಸ್ಕೋಪ್ ಹಿಡಿದಿದ್ದರು, ರವಿಚಂದ್ರನ್ ಕರಿ ಕೋಟು ಧರಿಸಿದ್ದರು. ಈ ತ್ರಿಮೂರ್ತಿಗಳು ಒಟ್ಟಾಗಿ ಬೆಳ್ಳಿತೆರೆಯಲ್ಲಿ ಮಿಂಚಿ ಇಂದಿಗೆ ಅಂದರೆ 2013ಕ್ಕೆ 25 ವರ್ಷ ಆಗಿದೆ. ಇಷ್ಟು ವರ್ಷಗಳ ನಂತರ ಮತ್ತೆ ಅದೇ ಹೆಸರಿನ ಮತ್ತೊಂದು ಚಿತ್ರ ಸೆಟ್ಟೇರುತ್ತಿದೆ. 'ಅವ್ರೇ ಇಟ್ಟುಕೊಂಡಿರೋ ಹೆಸರು' ಇದು ಚಿತ್ರದ ಟ್ಯಾಗ್‌ಲೈನ್.
ಹೆಸರು ಮಾತ್ರ ಹಳೆಯದು. ಆದರೆ ಕಥೆ, ಪಾತ್ರಧಾರಿಗಳು, ನಿರ್ದೇಶನ, ನಿರ್ಮಾಣ ಎಲ್ಲದರಲ್ಲೂ ಹೊಸಬರ ಅಬ್ಬರ. ವಿಶೇಷ ಎಂದರೆ ತಮ್ಮ ಅಭಿನಯದ ಚಿತ್ರದ ಈ ಹೊಸ ಅವತಾರದ ಮುಹೂರ್ತಕ್ಕೆ ಅಂಬರೀಷ್, ಅನಂತ್ ನಾಗ್, ರವಿಚಂದ್ರನ್ ಅವರೇ ವಿಶೇಷ ಅತಿಥಿಗಳು. ರೆಬೆಲ್ ಸ್ಟಾರ್ ಮನೆಯಲ್ಲೇ ಮುಹೂರ್ತ ನಡೆಯಲಿದ್ದು, ಒಬ್ಬರು ಕ್ಲಾಪ್ ಮಾಡಿದರೆ, ಮತ್ತೊಬ್ಬರು ಕ್ಯಾಮೆರಾ ಚಾಲನೆ ಮಾಡುತ್ತಾರೆ, ಇನ್ನೊಬ್ಬರು ಚಿತ್ರತಂಡಕ್ಕೆ ಶುಭ ಕೋರುತ್ತಾರೆ. ಅಂದಹಾಗೆ ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಸ್ವರೂಪ್ ಸ್ವರ. ಇವರು ನಿರ್ದೇಶನಕ್ಕೆ ಹೊಸಬರಾದರೂ ಸಿನಿಮಾ ವ್ಯಾಕರಣ ಬಲ್ಲ ವ್ಯಕ್ತಿ. ನಟ- ನಿರ್ದೇಶಕ ಉಪೇಂದ್ರ, ಸಾಧುಕೋಕಿಲಾ, ಪಿ.ವಾಸು ಮುಂತಾದವರ ಬಳಿ ಕೆಲಸ ಮಾಡಿದ್ದಾರೆ. ಸಿನಿಮಾ ಬಗ್ಗೆ ತುಂಬಾ ಪ್ಯಾಷನೇಟ್ ಆಗಿರುವ ಸ್ವರೂಪ್, ಈ ಹಿಂದೆಯೇ ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್ ಅವರ ಚಿತ್ರವೊಂದನ್ನು ನಿರ್ದೇಶಿಸಬೇಕಿತ್ತು. ಅದಕ್ಕೆ 'ಶಿವು ಕೇರಾಫ್ ಬ್ಯೂಟಿಫುಲ್ ಗರ್ಲ್ಸ್' ಎನ್ನುವ ಹೆಸರಿಟ್ಟಿದ್ದರು. ಆದರೆ ಶಿವರಾಜ್‌ಕುಮಾರ್ ಅವರ ಡೇಟ್ ಸಮಸ್ಯೆಯಿಂದ ಈ ಚಿತ್ರವನ್ನು ಸದ್ಯಕ್ಕೆ ಬದಿಗಿಟ್ಟು ಹಳೆ ಚಿತ್ರಕ್ಕೆ ಹೊಸ ಲುಕ್ ಕೊಡಲು ಹೊರಟಿದ್ದಾರೆ.
ಹಳೆಯ 'ಬ್ರಹ್ಮ ವಿಷ್ಣು ಮಹೇಶ್ವರ' ಚಿತ್ರದಂತೆ ಇಲ್ಲೂ ಮೂವರು ನಾಯಕರು, ಮೂವರು ನಾಯಕಿಯರು. ಮೂರು ಪ್ರೇಮ ಕಥೆಗಳೂ ಇವೆ. ಆದರೆ ಒಬ್ಬೊಬ್ಬನದ್ದು ಒಂದೊಂದು ಥಿಯರಿ. ಅಂಜನ್‌ದೇವ್, ಸುನಿಲ್, ಪ್ರೀತಮ್ ಚಿತ್ರದ ಹೀರೋಗಳು. ಜೀವಿತಾ, ಮೇಘನಾ, ಸಂಜನಾ ಪ್ರಕಾಶ್ ನಾಯಕಿಯರು. ಇನ್ನೂ ಬಿಡುಗಡೆಯಾಗದ 'ಮೈಸೂರು ಮಲ್ಲಿಗೆ' ಚಿತ್ರದ ಬೆತ್ತಲೆ ರಾಣಿ ರೂಪಾ ನಟರಾಜ್ ಇಲ್ಲಿ ಅತಿಥಿ. ಮೈಸೂರಿನ ಕೃಷ್ಣ ನಿರ್ಮಾಪಕರು, ಸುನೀಲ್ ಬೀರೂರು ಕಾರ್ಯಕಾರಿ ನಿರ್ಮಾಪಕರು. 'ನಾನು ಕಾಲೇಜಿನಲ್ಲಿದ್ದಾಗಲೇ ಸಿನಿಮಾ ಬಗ್ಗೆ ಮೋಹ ಬೆಳೆಸಿಕೊಂಡವನು. ಚಿತ್ರರಂಗಕ್ಕೆ ಬಂದ ಮೇಲೆ ಸಾಕಷ್ಟು ಚಿತ್ರಗಳಿಗೆ ಕ್ಲಾಪ್ ಹಿಡಿದಿದ್ದೇನೆ, ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ಈಗ ಪೇಪರ್‌ನಲ್ಲಿ ಹತ್ತಾರು ಕಥೆಗಳು ಅಕ್ಷಕರ ರೂಪ ಪಡೆದುಕೊಂಡಿವೆ. ಇಲ್ಲಿ ಶೀರ್ಷಿಕೆ ಮಾತ್ರ ಹಳೆಯದು. ಎಲ್ಲೂ ಹಳೆ ತ್ರಿಮೂರ್ತಿಗಳನ್ನು ಇಮಿಟೇಟ್ ಮಾಡಿಲ್ಲ. ಮೂವರು ನಾಯಕರು, ನಾಯಕಿಯರು ಎಲ್ಲರೂ ಕನ್ನಡಿಗರೇ. ಕಳೆದ ಎರಡು ತಿಂಗಳುಗಳಿಂದ ನಾನೇ ಅವರಿಗೆ ತರಬೇತಿ ಕೊಡುತ್ತಿದ್ದೇನೆ. ನನ್ನ ಕಥೆಗೆ ತಕ್ಕಂತೆ ಆರು ಮಂದಿಯನ್ನೂ ತಯಾರು ಮಾಡಿದ್ದೇನೆ. ಪಕ್ಕಾ ಸ್ಕ್ರೀನ್ ಪ್ಲೇ ಸಿನಿಮಾ. ಫ್ಲ್ಯಾಷ್ ಬ್ಯಾಕ್ ತಂತ್ರಗಳನ್ನು ಬಳಸಿ ಚಿತ್ರ ಮಾಡಿದ್ದೇನೆ. ಹಳೆ ಹೆಸರಿನಲ್ಲಿ ಈಗಿನ ಯುವ ಜನಾಂಗದ ಮನಸ್ಥಿತಿಯನ್ನು ಹೇಳಲು ಹೊರಟಿದ್ದೇನೆ. ಯಾಕೆ ಹಳೆ ಶೀರ್ಷಿಕೇನೇ ಬೇಕಿತ್ತು ಎನ್ನುವುದಕ್ಕೆ ನಿರ್ದಿಷ್ಟ ಕಾರಣ ಇದೆ. ಚಿತ್ರ ನೋಡಿದರೆ ಗೊತ್ತಾಗುತ್ತದೆ.' ಎನ್ನುತ್ತಾರೆ ಸ್ವರೂಪ್ ಸ್ವರ.
ಚಿತ್ರ ಈಗಾಗಲೇ ಶುರುವಾಗಬೇಕಿತ್ತು. ಆದರೆ ವಿಶೇಷವಾಗಿ ಮುಹೂರ್ತ ಮಾಡಬೇಕೆಂಬ ಯೋಚನೆಯಿಂದ ತಡವಾಗುತ್ತಿದೆ. ಮುಖ್ಯವಾಗಿ ಅಂಬರೀಷ್, ಅನಂತ್‌ನಾಗ್, ರವಿಚಂದ್ರನ್ ಈ ಮೂವರನ್ನೂ ಒಟ್ಟಿಗೆ ಸೇರಿಸುವುದಕ್ಕಾಗಿ ತಡವಾಗುತ್ತಿದೆ. ಈಗ ಮೂವರು ಒಪ್ಪಿಗೆ ಕೊಟ್ಟಿದ್ದಾರೆ. ಅಂಬರೀಷ್ ಅವರ ಮನೆಯಲ್ಲಿಯೇ ಮುಂದಿನ ತಿಂಗಳು ಅದ್ದೂರಿಯಾಗಿ ಸೆಟ್ಟೇರಲಿದೆ. ರಂಗಾಯಣರಘು, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ಸುಧಾ ಬೆಳವಾಡಿ ಮತ್ತಿತರರು ಚಿತ್ರದ ಪ್ರಮುಖ ಪಾತ್ರಧಾರಿಗಳು. ಚಿತ್ರಕ್ಕೆ ಮುಹೂರ್ತ ನಡೆದ ಮೇಲೆ 60 ದಿನಗಳ ಕಾಲ ಒಂದೇ ಶೆಡ್ಯೂಲ್‌ನಲ್ಲಿ ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ವಿಶೇಷ ಅಂದರೆ 'ಓ ಮಲ್ಲಿಗೆ' ಚಿತ್ರದ ಖ್ಯಾತಿಯ ಚಾರುಲತಾ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ಸಿನಿಮಾದೊಳಗೊಂದು ಸಿನಿಮಾ ಎನ್ನುವ ಕಾನ್‌ಸೆಪ್ಟ್ ಕೂಡ ಇಲ್ಲಿದ್ದು, ಮೂವರು ನಾಯಕಿಯರ ಪಾತ್ರದಲ್ಲಿ ಈಗಾಗಲೇ ಹೆಸರು ಮಾಡಿರುವ ದೊಡ್ಡ ನಟಿಯರು ಕಾಣಿಸಿಕೊಳ್ಳಲಿದ್ದಾರಂತೆ.
-ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


