ಅಪ್ಪು ಮಕ್ಕಳು
'ಮೈತ್ರಿ' ಪದಕ್ಕೆ ರಾಜಕಾರಣದಲ್ಲೇನೂ ಬೆಲೆ ಸಿಗುತ್ತಿಲ್ಲ. ಆದರೆ, ಸಿನಿಮಾದಲ್ಲಿ 'ಮೈತ್ರಿ'ಗೆ...

ಇಬ್ಬರು ಬಿಗ್ಸ್ಟಾರ್ಗಳ ಕನ್ನಡ ಸಿನಿಮಾ. ಆದರೆ, ಇದೇನು ಪಕ್ಕಾ ಮಾಸ್ ಆ್ಯಂಡ್ ಕಮರ್ಷಿಯಲ್ ಚಿತ್ರವಲ್ಲ. ಹಾಗಾದರೆ ಇವರಿಬ್ಬರ 'ಮೈತ್ರಿ'ಯ ಹಿಂದಿನ ಗುಟ್ಟೇನು?
'ಮೈತ್ರಿ' ಪದಕ್ಕೆ ರಾಜಕಾರಣದಲ್ಲೇನೂ ಬೆಲೆ ಸಿಗುತ್ತಿಲ್ಲ. ಆದರೆ, ಸಿನಿಮಾದಲ್ಲಿ 'ಮೈತ್ರಿ'ಗೆ ಬೆಲೆ, ಪ್ರಚಾರ ಎರಡೂ ಸಿಗುತ್ತದೆ. ಇದು ಮಲ್ಟಿ ಸ್ಟಾರ್ಗಳ ಮೈತ್ರಿ. ಹೀಗಾಗಿ, ರಾಜಕೀಯದಲ್ಲಿ ಬೆಲೆ ಕಳೆದುಕೊಳ್ಳುತ್ತಿರುವ 'ಮೈತ್ರಿ'ಕೂಟಗಳು ಚಿತ್ರರಂಗದಲ್ಲಿ ನಿಧಾನಕ್ಕೆ ಮಹತ್ವ ಹೆಚ್ಚಿಸಿಕೊಳ್ಳುತ್ತಿವೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್, ಮಲೆಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಈಗ ಒಟ್ಟಿಗೇ ನೊಗ ಕಟ್ಟಿದ್ದಾರೆ!
ಈಗಾಗಲೇ ಚಿತ್ರೀಕರಣ ಶುರುವಾಗಿರುವ ಈ ಸ್ಟಾರ್ ನಟರ ಚಿತ್ರದ ಹೆಸರು 'ಮೈತ್ರಿ'. ಗಿರಿರಾಜ್ ನಿರ್ದೇಶನ, ಎನ್.ಎಸ್. ರಾಜ್ಕುಮಾರ್ ನಿರ್ಮಾಣ. ಮಲೆಯಾಳಂ ಹಾಗೂ ಕನ್ನಡದ ಈ 'ಮೈತ್ರಿ'ಗೆ ನಾಯಕಿಯಾಗಿ ಭಾವನಾ. 'ಆ ದಿನಗಳು' ಅರ್ಚನಾ ಕೂಡ ಇದ್ದಾರೆ. ಇಳಯರಾಜ ಸಂಗೀತ. ಗಿರಿರಾಜ್ ಈ ಹಿಂದೆ ಡಿಜಿಟಲ್ ಕ್ಯಾಮೆರಾದಲ್ಲಿ 'ನವಿಲಾದವರು' ಚಿತ್ರವನ್ನು ನಿರ್ದೇಶಿಸಿ, ಕ್ರಿಯಾಶೀಲತೆ ಮೆರೆದವರು. ನಂತರ 'ಜಟ್ಟ' ಚಿತ್ರವನ್ನು ನಿರ್ದೇಶಿಸಿದ ನಂತರ 'ಮೈತ್ರಿ'ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 'ಮೈನಾ' ಗುಂಗಿನಲ್ಲಿರುವ ನಿರ್ಮಾಪಕ ರಾಜ್ಕುಮಾರ್ಗೆ 'ಮೈತ್ರಿ' ಮತ್ತೊಂದು ಮೈಲುಗಲ್ಲಾಗುತ್ತದೆಂಬ ಗಟ್ಟಿ ನಂಬಿಕೆ. ಅಂದಹಾಗೆ ಯಾವುದೇ ಸದ್ದು ಗದ್ದಲವಿಲ್ಲದೆ ಆರಂಭವಾಗಿರುವ ಈ 'ಮೈತ್ರಿ' ಬಗ್ಗೆ ಮೊದಲ ಬಾರಿಗೆ ನಟ ಪುನೀತ್ರಾಜ್ಕುಮಾರ್ ಇಲ್ಲಿ ಮಾತನಾಡಿದ್ದಾರೆ...
ಹೊಸ 'ಮೈತ್ರಿ' ಆರಂಭವಾಗಿದೆ. ಚಿತ್ರೀಕರಣದ ಅನುಭವ ಹೇಗಿದೆ?
ನಿಜವಾಗಲೂ ನನ್ನ ಮಟ್ಟಿಗೆ ಇದು ಹೊಸ 'ಮೈತ್ರಿ'ನೇ. ಯಾಕೆಂದರೆ ಇದು ರೆಗ್ಯುಲರ್ ಪುನೀತ್ ರಾಜ್ಕುಮಾರ್ ಸಿನಿಮಾ ಅಲ್ಲ. ನನ್ನ ಅಭಿನಯದ ಹೆಚ್ಚು ದೃಶ್ಯಗಳಿಲ್ಲ. ಆದರೆ, ಮೋಹನ್ಲಾಲ್ರಂಥ ದೊಡ್ಡ ನಟನ ಜೊತೆಗೆ ಕಾಣಿಸಿಕೊಳ್ಳುತ್ತಿರುವುದು ಖುಷಿ ತಂದಿದೆ. ಈ ಕಾರಣಕ್ಕೆ ಚಿತ್ರೀಕರಣ ವಿಶೇಷ ಎನ್ನಿಸುತ್ತಿದೆ.
ಬಿಗ್ಸ್ಟಾರ್ಗಳು ಒಟ್ಟಾಗಿದ್ದೀರಿ. ಸಹಜವಾಗಿ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗುತ್ತವೆ. ನಿಮ್ಮ 'ಮೈತ್ರಿ' ಈ ನಿರೀಕ್ಷೆಯನ್ನು ತಣಿಸಬಹುದೇ?
ದಯವಿಟ್ಟು ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಇದು ಪಕ್ಕಾ ನನ್ನ ಸ್ಟೈಲಿನ ಸಿನಿಮಾ ಆಗಿರುವುದಿಲ್ಲ. ನಿರ್ದಿಷ್ಟವಾಗಿ ಹೇಳಬೇಕು ಅಂದರೆ ಇದೊಂದು ಮಕ್ಕಳ ಚಿತ್ರ. ಒಂದು ಒಳ್ಳೆಯ ಸಿನಿಮಾ ಎಂದುಕೊಂಡು ನೋಡಲು ಬನ್ನಿ.
ನಟ ಮೋಹನ್ಲಾಲ್ ಜೊತೆಗಿನ ನಟನೆ ಹೇಗನ್ನಿಸುತ್ತಿದೆ?
ನಾನು ಈ ಚಿತ್ರ ಒಪ್ಪಿಕೊಂಡಿದ್ದು ಮೋಹನ್ಲಾಲ್ರನ್ನು ನೋಡಿ. ಅಪ್ಪಾಜಿ ಅವರ ದೊಡ್ಡ ಅಭಿಮಾನಿ ಅವರು. ನಾನೂ ಅವರ ಸಾಕಷ್ಟು ಚಿತ್ರಗಳನ್ನು ನೋಡಿದ್ದೇನೆ. ಮಲೆಯಾಳಂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ನಾನು.
'ಮೈತ್ರಿ'ಯ ಕಥೆ ಏನು?
ಇದೇ ಮೊದಲ ಬಾರಿಗೆ ಇಂಥ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹೀಗಾಗಿ ಈ ಸಿನಿಮಾ ಬಗ್ಗೆ ಮಾತನಾಡಿ ಅಂದರೆ ಏನು ಹೇಳಬೇಕು ಅಂತ ಗೊಂದಲ ಶುರುವಾಗುತ್ತದೆ. ನನ್ನ ದೃಷ್ಟಿಯಿಂದ ಇದು ಪ್ರಯೋಗಾತ್ಮಕ ಚಿತ್ರ. ಫೈಟು, ಹಾಡು, ಡ್ಯಾನ್ಸು ಮುಂತಾದ ಕಮರ್ಷಿಯಲ್ ಅಂಶಗಳಿಲ್ಲ. ಹಾಗಂತ ಈ ಚಿತ್ರವನ್ನು ಇಂಥದ್ದೇ ವರ್ಗದ್ದು ಎಂದು ಬ್ರ್ಯಾಂಡ್ ಮಾಡಲಾರೆ. ಆದರೆ ಪ್ರೇಕ್ಷಕರಿಗೆ ಇಷ್ಟವಾಗುವ ಮತ್ತು ಎಲ್ಲರೂ ಮೆಚ್ಚಿ ನೋಡುವಂಥ ಚಿತ್ರವಿದು. ನೈಜ ಪುನೀತ್ ಹೇಗಿರುತ್ತಾರೋ ಚಿತ್ರದಲ್ಲೂ ಹಾಗೆಯೇ ಕಾಣಿಸಿಕೊಳ್ಳುತ್ತಾರೆ. ಅಂದರೆ ನನ್ನದೇ ಹೆಸರಿನ ಪಾತ್ರ ಇಲ್ಲಿದೆ.
ನಿಮ್ಮ ಸಿನಿಮಾ ಜರ್ನಿ ನೋಡಿದಾಗ ಆರಂಭ ದಿನಗಳ ಹೊರತಾಗಿ ಒಂದು ವರ್ಷದಲ್ಲಿ ಎರಡೇ ಚಿತ್ರ. ಒಂದು ಬಿಡುಗಡೆ, ಮತ್ತೊಂದು ಸೆಟ್ಟೇರುತ್ತದೆ. '2' ನಿಮ್ಮ ಅದೃಷ್ಟದ ಸಂಖ್ಯೆನಾ?
ಆ ಥರ ಏನಿಲ್ಲ. ಲಾಂಗ್ ಗ್ಯಾಪ್ ತೆಗೆದುಕೊಂಡು ಚಿತ್ರ ಮಾಡುತ್ತಿದ್ದೇನೆ. ಕೆಲವು ಸಲ ಶುರುವಾಗಬೇಕಾದ ಚಿತ್ರಗಳು ನಿಧಾನವಾಗುತ್ತವೆ. ಹೀಗಾಗಿ ವರ್ಷಕ್ಕೆ ಪುನೀತ್ ಅವರದ್ದು ಎರಡೇ ಸಿನಿಮಾ ಅಂಥ ಅನ್ನಿಸುತ್ತದೆ. ಮುಂದೆ ವರ್ಷಕ್ಕೆ 3 ಸಿನಿಮಾ ಅಂತೂ ಗ್ಯಾರಂಟಿ ಮಾಡುತ್ತೇನೆ. ಆದರೆ '2' ನನ್ನ ಅದೃಷ್ಟ ಸಂಖ್ಯೆಯಂತೂ ಅಲ್ಲ ಬಿಡಿ.
ಮುಂದಿನ ಚಿತ್ರ 'ನಿನ್ನಿಂದಲೇ' ಯಾವಾಗ ಶುರುವಾಗುತ್ತದೆ?
ಅಯ್ಯೋ 'ನಿನ್ನಿಂದಲೇ' ಶೀರ್ಷಿಕೆ ನಮ್ಮದಲ್ಲ. ಯಾರೋ ಸುಮ್ಮನೆ ಪ್ರಚಾರ ಮಾಡಿದ್ದಾರೆ. ಬೇರೆ ಶೀರ್ಷಿಕೆಯಲ್ಲಿ ಸದ್ಯದಲ್ಲೇ ಚಿತ್ರ ಶುರುವಾಗುತ್ತಿದೆ. ಈ ಬಾರಿ ನನ್ನ ಚಿತ್ರದ ನಿರ್ದೇಶಕ ಜಯಂತ್ ಸಿ. ಪರಾಂಜೆ. ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದವರು.
ಇನ್ನು ಕಿರುತೆರೆ ವಿಷಯಕ್ಕೆ ಬಂದರೆ, ಕೋಟ್ಯಾಧಿಪತಿಯ ಮೊದಲು ಮತ್ತು ಎರಡನೇ ಸೀಸನ್ ನಡುವೆ ವ್ಯತ್ಯಾಸ ಕಂಡಿದ್ದುಂಟೆ?
ಮೊದಲನೇ ಸೀಸನ್ನಲ್ಲಿ ನಿರೂಪಣೆ ಮಾಡಲು ಒಂದಿಷ್ಟು ಸೈಕಲ್ ತುಳಿದೆ. ಆದರೆ ಎರಡನೇ ಸೀಸನ್ನಲ್ಲಿ ನಿರೂಪಣೆ ತುಂಬಾ ಸುಲಭ ಅನ್ನಿಸಿತು. ವಿಶೇಷವಾಗಿ ನಾನು ಸಾಕಷ್ಟು ಕಲಿತೆ. ಮುಖ್ಯವಾಗಿ ಈ ಸೀಸನ್ನಲ್ಲಿ ಒಬ್ಬ ಕೋಟಿ ಗೆದ್ದ. ಮುಂದೆ ಯಾರಾದರೂ ಕೋಟಿ ಗೆದ್ದರೆ ತುಂಬಾ ಸಂಭ್ರಮಿಸುತ್ತೇನೆ.
ಟಿಆರ್ಪ್ಪಿ ದೃಷ್ಟಿಯಿಂದ ನಿಮ್ಮ ಶೋಗೆ ಪ್ರತಿಸ್ಪರ್ಧಿ ಅನ್ನಿಸಿದ್ದು ಯಾರು?
(ನಗುತ್ತ) ರೀ... ಈ ಪ್ರಶ್ನೆಗೆ ಉತ್ತರ ಗೊತ್ತಿದ್ದೂ ಕೇಳ್ತೀರಾ? ನಿಮ್ಮ ಪ್ರಶ್ನೆಗೆ ಉತ್ತರ ಬೇಕಿದ್ದರೆ ಕಾರ್ಯಕ್ರಮ ನಿರ್ಮಾಣ ಮಾಡಿ ಪ್ರಸಾರ ಮಾಡುತ್ತಿರುವ ಸುವರ್ಣ ವಾಹಿನಿಯ ಮುಖ್ಯಸ್ಥ ಅನೂಪ್ ಚಂದ್ರಶೇಖರ್ರನ್ನು ಕೇಳ್ಬೇಕಪ್ಪ. ಆಯ್ತು, ನಿಮ್ಮ ನಿರೀಕ್ಷೆಯ ಉತ್ತರವನ್ನೇ ಹೇಳ್ತಿನಿ... ಮತ್ತೊಂದು ವಾಹಿನಿಯಲ್ಲಿ ಬಿಗ್ಬಾಸ್ ಶೋ ಪ್ರಸಾರವಾಗುತ್ತಿತ್ತು. ಅಲ್ಲಿ ಸುದೀಪ್ ನಿರೂಪಕರಾಗಿ ಅವರ ಕೆಲಸವನ್ನು ಅವರು ಮಾಡಿದ್ದಾರೆ. ಇಲ್ಲಿ ನನ್ನ ಕೆಲಸ ನಾನು ಮಾಡಿದ್ದೇನೆ. ಆ ಶೋನಲ್ಲಿ ಗೆದ್ದಿದ್ದು ನನ್ನ ಸೋದರ ಸಂಬಂಧಿ. ಉಳಿದಂತೆ ಸ್ಪರ್ಧಿ ಯಾರು ಎನ್ನುವುದು ನನಗೆ ಗೊತ್ತಿಲ್ಲ.
ಕೋಟಿ ಗೆಲ್ಲೋ ಆಟದಲ್ಲಿ ಅಪ್ಪು ಗೆದ್ದಿದ್ದೆಷ್ಟು?
ಜನರ ಪ್ರೀತಿ, ಸಾಮಾನ್ಯ ಜ್ಞಾನ. ಇದಕ್ಕಿಂತ ನಾನು ಬೇರೇನೇ ಗೆದ್ದಿದ್ದರೂ ಅದು ಲೆಕ್ಕಕ್ಕೆ ಬಾರದು.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


