ಸಿನಿಮಾ ಲೇಖನ

ಏಕ್ ಪ್ಯಾಸೀ ಜಿಂದಗಿ!

'ನಮ್ಮ ಚಿತ್ರ ಡಿಫರೆಂಟಾಗಿದೆ' ಎಂದು ಸುಳ್ಳು ಬೊಗಳುವ ನಿರ್ಮಾಪಕರನ್ನು, ಪೊರ್ಕಿ ಹುಡುಗರನ್ನೇ ಗುರಿಯಾಗಿಸಿಕೊಂಡು...

ಏಕ್ ಪ್ಯಾಸೀ ಜಿಂದಗಿ!
Published On :

ಗುರುವೇ, ಎಲ್ಲಿದ್ದೀರಿ?
'ನಮ್ಮ ಚಿತ್ರ ಡಿಫರೆಂಟಾಗಿದೆ' ಎಂದು ಸುಳ್ಳು ಬೊಗಳುವ ನಿರ್ಮಾಪಕರನ್ನು, ಪೊರ್ಕಿ ಹುಡುಗರನ್ನೇ ಗುರಿಯಾಗಿಸಿಕೊಂಡು ರೀಲು ಸುತ್ತುವ ನಿರ್ದೇಶಕರನ್ನು, ಮಚ್ಚು ಬೀಸುವುದನ್ನೂ ಹೊಕ್ಕಳು ತೋರಿಸುವುದನ್ನೂ ಅಭಿನಯ ಎಂದುಕೊಂಡಿರುವ ನಟನಟಿಯರನ್ನು ನೋಡಿದಾಗ ನಿನ್ನ ನೆನಪಾಗುತ್ತದೆ. ಬಾಳಿದ್ದು 39 ವರ್ಷ, ಕೊಟ್ಟದ್ದು ಹತ್ತು ಮತ್ತೆರಡು ಚಿತ್ರ ಎಂಬುದಷ್ಟೇ ಲೆಕ್ಕವಾದರೆ ನೀನು ಬಾಲಿವುಡ್‌ನ ದೃಷ್ಟಿಯಲ್ಲಿ ಲೆಕ್ಕಕ್ಕಿಲ್ಲದ ಮನುಷ್ಯ ಅಷ್ಟೇ. ಆದರೆ ಜಗತ್ತಿನ ಮಹಾನ್ ಚಲನಚಿತ್ರಗಳ ಪಟ್ಟಿಯಲ್ಲಿ ನಿನ್ನ ಎರಡೋ ಮೂರೋ ಚಿತ್ರಗಳು ಇದ್ದೇ ಇರುತ್ತವಲ್ಲ ಗುರುವೇ, ಇದೇನು ಜಾದು!

'ಯೇ ದುನಿಯಾ ಆಗರ್ ಮಿಲ್ ಭೀ ಜಾಯೇ ತೋ ಕ್ಯಾ ಹೈ' ಎನ್ನುವ ನಿನ್ನ ದನಿ ಅದೋ ಆ ಬೆಳಕಿನ ಪ್ರವಾಹದೊಳಗಿಂದ ತೂರಿ ಬರುತ್ತಿದೆ. 'ಎಸೆದುಬಿಡು ಈ ಲೋಕವನ್ನು ನನ್ನ ಮುಂದಿನಿಂದ' ಎಂಬ ನಿನ್ನ ವ್ಯಗ್ರ ಆರ್ತನಾದ ನಮ್ಮೊಳಗಿನಿಂದಲೇ ಬಂದಂತೆನಿಸುತ್ತಿದೆ. ನಿನ್ನ ಚಿತ್ರಗಳ ಹಾಡುಗಳಲ್ಲಿ ಮತ್ತೆ ಮತ್ತೆ ಪ್ರತ್ಯಕ್ಷವಾಗುವ ಬೆಳಕಿನ ಕೋಲುಗಳು, ಭರವಸೆಯ ಪ್ರಭೆಗಳಂತೆಯೇ ಭಾಸವಾಗುತ್ತವೆ. ಆದರೆ ನೀನು ಅಂಥ ಭರವಸೆಗಳನ್ನೆಲ್ಲ ಕೊಂಚವೂ ನೆಚ್ಚದವನು. ಅದಕ್ಕೇ ನಿನ್ನ ಚಿತ್ರಗಳಲ್ಲಿ ಅಷ್ಟೊಂದು ವಿಷಾದ, ದುರಂತ. ಮತ್ತೆ ಮತ್ತೆ ಪ್ರೇಮವನ್ನೂ ದುರಂತವನ್ನೂ ಅದರೆಲ್ಲ ಆಯಾಮಗಳಲ್ಲಿ ಚಿತ್ರಿಸುತ್ತ ಹೋದ ನೀನು ಕೊನೆಗೆ ಅದಕ್ಕೇ ತುತ್ತಾಗಿ ಹೋದೆಯಲ್ಲ! ಲೋಕದಿಂದ ತಿರಸ್ಕೃತನಾಗಿ ಮರಣದ ನಂತರ ಕೀರ್ತಿವಂತನಾಗುವ ಕವಿ, ಕಲಾವಿದೆಯನ್ನು ಪ್ರೀತಿಸಿ ನಿರಾಶನಾಗುವ ನಿರ್ದೇಶಕ... ಪ್ರೀತಿ ದಕ್ಕದ ವ್ಯಕ್ತಿಗಳೇ ನಿನ್ನ ಪಾತ್ರಗಳಾಗಿರೋದು. ನಿನಗೆ ಗೊತ್ತಾ? ಜಗತ್ತು ನಿನ್ನನ್ನು ಎಷ್ಟು ಪ್ರೀತಿಸುತ್ತಿತ್ತು ಎಂಬುದನ್ನು ಕೊನೆಗೂ ನೀನು ಅರ್ಥ ಮಾಡಿಕೊಳ್ಳಲೇ ಇಲ್ಲ! ನಿನ್ನ ಕಾಲದಿಂದ ನೀನು ಅದೆಷ್ಟೋ ಮುಂದಿದ್ದೆ ಎಂಬುದನ್ನು ಈಗ ಒಪ್ಪಿಕೊಳ್ಳಲಾಗುತ್ತಿದೆ.
ಬಣ್ಣವನ್ನು ನೋಡಿ ನೋಡಿ ದಣಿದಿದ್ದೇವೆ ಗುರುವೇ. ಆಗಾಗ ನಿನ್ನ ಕಪ್ಪು ಬಿಳುಪು ಚಿತ್ರಗಳಿಗೆ ಮರಳಿ ನಮ್ಮ ಎದೆಗಳನ್ನು ಆರ್ದ್ರಗೊಳಿಸಿಕೊಳ್ಳುವೆವು. ನಿನ್ನ ಮತ್ತೊಂದು ಹುಟ್ಟುಹಬ್ಬದ ನೆನಪಿಗಷ್ಟೇ ಈ ನಾಲ್ಕು ಸಾಲಲ್ಲ, ನೀನು ಕೊಟ್ಟ ಅಳಿವಿರದ ಆ ಕೆಲವು ಕಪ್ಪು ಬೆಳಕಿನ ಕ್ಷಣಗಳಿಗಾಗಿ ಕೂಡ.

- ವಿಹಂಗಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.