ಹೌದು ಸ್ವಾಮಿ, ಯಾರು BIG BOSS
ಸುದೀಪ್ ಸಾರಥ್ಯದ ಈ ಟಿವಿಯ 'ಬಿಗ್ ಬಾಸ್' ಮುಕ್ತಾಯವಾಗಿದೆ. ತಾತ್ವಿಕವಾಗಿ ರಿಯಾಲಿಟಿ..

ನಟ ಸುದೀಪ್ರ ಸಾರಥ್ಯದ ಈ ಟಿವಿ ವಾಹಿನಿಯ 'ಬಿಗ್ ಬಾಸ್' ಮುಕ್ತಾಯವಾಗಿದೆ. ತಾತ್ವಿಕವಾಗಿ ರಿಯಾಲಿಟಿ ಶೋಗಳ ಬಗ್ಗೆ ಏನೇ ವಾದ, ವಿವಾದಗಳಿದ್ದರೂ ಇಂಥ ಶೋಗಳನ್ನು ನೋಡುವ ಜನರ ಸಂಖ್ಯೆ ಕಡಿಮೆಯಾಗಿಲ್ಲ. 'ಎದೆತುಂಬಿ ಹಾಡುವೆನು' ಕಾರ್ಯಕ್ರಮ ಕಿರುತೆರೆ ಪ್ರೇಕ್ಷಕರಿಗೆ ನೆನಪಿರಬೇಕು. ಸ್ವರ ಸಾಮ್ರಾಟ್ ಎಸ್ಪಿಬಿ ಅವರ ನಿರೂಪಣೆಯಲ್ಲಿ ಪ್ರಸಾರವಾಗುತ್ತಿದ್ದ ಕಿರುತೆರೆಯ ಆರಂಭದ ದಿನಗಳ ರಿಯಾಲಿಟಿ ಶೋ. ಆಗ ಯಾವುದೇ ಗಿಮಿಕ್ಗಳಿಲ್ಲದೆ ರಿಯಾಲಿಟಿ ಶೋಗಳು ಕಿರುತೆರೆಗೆ ಕಾಲಿಟ್ಟರೂ ಬರುಬರುತ್ತ ಅವು 'ಎಲ್ಲ'ವನ್ನೂ ತೆರೆದಿಟ್ಟವು. ಬದುಕಿನ ಖಾಸಗಿನತನದೊಳಗೂ ಪ್ರವೇಶಿಸಿದವು.
ಪೀಟರ್ ವಿಯರ್ ನಿರ್ದೇಶಿಸಿ, ಜಿಮ್ ಕ್ಯಾರಿ ಅಭಿನಯಿಸಿದ 'ದಿ ಟ್ರೂಮನ್ ಶೋ' ಚಿತ್ರ ನೋಡಿರುತ್ತೀರಿ. ಒಬ್ಬ ವ್ಯಕ್ತಿ ತನಗೇ ಗೊತ್ತಿಲ್ಲದೆ, ಹುಟ್ಟಿನಿಂದ 30 ವರ್ಷಗಳ ಅವನ ಬದುಕೇ ಒಂದು ರಿಯಾಲಿಟಿ ಶೋ ಕಂಪೋಸ್ ಮಾಡಿರುತ್ತದೆ. ಬಾಹ್ಯ ಶಕ್ತಿಗಳೇ ನಮ್ಮ ಬದುಕನ್ನು ನಿಯಂತ್ರಿಸುವ ಸಾಧನಗಳಾದಾಗ ನಿಜಕ್ಕೂ ರಿಯಾಲಿಟಿ ಒಳಗಿನ 'ಶಾಕ್' ಅನುಭವಿಸಿದವರಿಗೆ ಗೊತ್ತು ಎನ್ನುತ್ತದೆ ಈ ಚಿತ್ರ. ಪಾಶ್ಚಿಮಾತ್ಯ ಮಾಧ್ಯಮಗಳ ಬಳುವಳಿಯಂತೆ ಬಂದಿರುವ ರಿಯಾಲಿಟಿ ಶೋಗಳ ಬಗ್ಗೆ ಏನೇ ಮಾತನಾಡಿದರೂ ನೋಡುಗರು ನೋಡುತ್ತಲೇ ಇದ್ದಾರೆ. ಕಿರುತೆರೆ ಹೆಚ್ಚು ಹೆಚ್ಚು ರಿಯಾಲಿಟಿ ಆಗುತ್ತಿದೆ. ಈಗ ಇಂಥ ಶೋಗಳಿಗೆ ಜನರ ಭಾವನೆಗಳೇ ಬಂಡವಾಳವಾಗುತ್ತಿರುವಾಗ 'ಬಿಗ್ ಬಾಸ್' ಜನರಿಗೆ ಸನಿಹವಾಗಿದೆ. ಶೋನಲ್ಲಿ ಗೆದ್ದ ವಿಜಯ್ ರಾಘವೇಂದ್ರ ಅವರನ್ನು ಅರ್ಧ ಕೋಟಿ ಕೈ ಹಿಡಿದಿದೆ. ನಿರೂಪಣೆಯ ಸಾರಥ್ಯ ವಹಿಸಿಕೊಂಡ ಸುದೀಪ್ ಕೂಡ ಕಿರುತೆರೆಯಲ್ಲಿ ಹಿರಿ ತಲೆಯಾಗಿ ಬೆಳಗಿದ್ದಾರೆ. ಹೌದು, ಬಿಗ್ ಬಾಸ್ ಅಂದ್ರೆ ಯಾರು? ಇಬ್ಬರು ಇಲ್ಲಿ ಮಾತನಾಡಿದ್ದಾರೆ.
ನಿಮ್ಮನ್ನು ನಾನು ನಂಬುವುದು ಹೇಗೆ?
- ಸುದೀಪ್
ಬಿಗ್ ಬಾಸ್ ನಿರೂಪಕರಾಗಿ ಅಹ್ವಾನ ಬಂದಾಗ ನಿಮಗೆ ಏನನಿಸಿತು?
ಏನೂ ಅನ್ನಿಸಲಿಲ್ಲ. ಮೊದಲು ಬಂದು ಕೇಳಿದಾಗ ಆಯಿತು ಎಂದಿದ್ದೆ. ಆದರೆ ಇಡೀ ಕಾರ್ಯಕ್ರಮದ ರೂಪವನ್ನು ನರೇಟ್ ಮಾಡಿದಾಗ ತುಂಬಾ ಇಂಪ್ರೆಸ್ ಆದೆ. ಜೊತೆಗೆ ನಮ್ಮನ್ನು ನಾವು ಗಟ್ಟಿಗೊಳಿಸಿಕೊಳ್ಳುವುದಕ್ಕೆ ಇರುವ ಒಳ್ಳೆಯ ವೇದಿಕೆ ಅಂತ ಅನಿಸಿತು. ಹೀಗಾಗಿ ನಿರೂಪಣೆ ಕೆಲಸ ಒಪ್ಪಿಕೊಂಡೆ.
ಸ್ಟಾರ್ ನಟ ಕಿರುತೆರೆ ನಿರೂಪಕನಾಗಿ ವೇದಿಕೆ ಮೇಲೆ ನಿಂತ ಆ ಕ್ಷಣದ ನಿಮ್ಮ ಮನಸ್ಥಿತಿ ಹೇಗಿತ್ತು?
ಕಾರ್ಯಕ್ರಮ ಒಪ್ಪಿಕೊಂಡ ಮೇಲೆ ಇಲ್ಲಿ ಮನಃಸ್ಥಿತಿ ಪ್ರಶ್ನೆ ಎಲ್ಲಿ ಬಂತು! ಆದರೆ ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ ಎನ್ನಿಸಿತು. ಇಲ್ಲಿ ಯಾವುದೂ ಚಿಕ್ಕದಲ್ಲ.
ಹೀಗಾಗಿ ನಿರೂಪಣೆಯೂ ತೀರಾ ತೆಗೆದು ಹಾಕುವ ಕೆಲಸ ಅಲ್ಲ. ಇಟ್ಸ್ ಮೈ ಜಾಬ್ ಎಂದುಕೊಂಡು ಮುಂದುವರಿದೆ.
ಆರು 'ಕೋಟಿ' ಕನ್ನಡಿಗರ ಮುಂದೆ ನೀವು ಇದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡ್ರೆ?
ಸಿನಿಮಾ ಮಾಡಿದಾಗಲೂ ಕನ್ನಡಿಗರೇ ನೋಡುವುದು. ನಿರೂಪಣೆ ಮಾಡಿದಾಗಲೂ ಕನ್ನಡಿಗರೇ ನೋಡುವುದು. ಇಲ್ಲಿ ಪ್ರತ್ಯೇಕವಾಗಿ 'ಕೋಟಿ' ಕನ್ನಡಿಗರ ಪ್ರಶ್ನೆ ಬರಲ್ಲ. ಕೆಲಸ ಚೆನ್ನಾಗಿರಬೇಕು. ಒಪ್ಪಿಕೊಂಡ ಕೆಲಸ ಸರಿಯಾಗಿ ಮಾಡದೆ ಏನೇ ಚಾಲೆಂಜ್ ಮಾಡಿದರೂ ಪ್ರಯೋಜನ ಇಲ್ಲ. ಚಾಲೆಂಜ್ಗಿಂತ ಕೆಲಸ ತೋರಿಸುವುದು ಮುಖ್ಯವಾಗಿತ್ತು.
ಕಿರುತೆರೆಯ ನಿರೂಪಣೆ, ಹಿರಿತೆರೆಯಲ್ಲಿ ಅಭಿನಯ, ನಿರ್ದೇಶನ... ಇವುಗಳ ನಡುವಿನ ವ್ಯತ್ಯಾಸ ಮತ್ತು ಅನುಭವ ಹೇಗಿತ್ತು?
ದೊಡ್ಡ ವ್ಯತ್ಯಾಸ ಕಾಣಲಿಲ್ಲ. ಸಿನಿಮಾದಲ್ಲಿ ಯಾರೋ ಸೃಷ್ಟಿ ಮಾಡಿದ ಪಾತ್ರದಲ್ಲಿ ನಾವು ಪ್ರವೇಶ ಮಾಡಬೇಕಿತ್ತು. ಇಲ್ಲಿ ನಾವೇ ಪಾತ್ರವಾಗಿ, ನಾವೇ ನಮ್ಮ ನಮ್ಮನ್ನು ಸೃಷ್ಟಿಸಿಕೊಳ್ಳಬೇಕು. ಸಮಯ ಸಂದರ್ಭಕ್ಕೆ ತಕ್ಕಂತೆ ನಮ್ಮ ಪಾತ್ರವನ್ನು ಬದಲಾಯಿಸಿಕೊಳ್ಳಬೇಕು. ಇಲ್ಲಿ ತಾಳ್ಮೆ ಮುಖ್ಯ. ಸ್ವರ್ಧಿಗಳು ಏನೇ ಕೇಳಿದರೂ ಅವರನ್ನು ಸಮಾಧಾನ ಮಾಡಿ ಬರಬೇಕು. ಇದ್ದಕ್ಕಿದ್ದ ಹಾಗೆ ಯಾರೋ ಏನೋ ಮಾತನಾಡುತ್ತಾರೆ, ಅಳುತ್ತಾರೆ, ಕೋಪ ಮಾಡಿಕೊಳ್ಳುತ್ತಾರೆ, ಬೈಯುತ್ತಾರೆ. ಅದಕ್ಕೆ ಹೇಗೆ ರಿಯಾಕ್ಟ್ ಮಾಡಬೇಕೆಂದು ಸ್ಕ್ರಿಪ್ಟ್ ಮಾಡಿಕೊಟ್ಟಿರಲ್ಲ. ಆದರೆ ಸಿನಿಮಾ ಮೈದಾನ ಬೇರೆ. ಇಲ್ಲಿ ನಾವೇ ಹೀರೋ. ಪ್ರತಿಯೊಂದಕ್ಕೂ ಸ್ಕ್ರಿಪ್ಟ್. ಯಾರೋ ಆ್ಯಕ್ಷನ್ ಅಂತಾರೆ,ನಾವು ಆ್ಯಕ್ಟಿವ್ ಆಗಬೇಕು. ಉಳಿದಂತೆ ಅಲ್ಲೂ ಕ್ಯಾಮೆರಾಗಳಿರುತ್ತವೆ, ಇಲ್ಲೂ ಇರುತ್ತವೆ, ಅಲ್ಲೂ ಜನ ಜೋಡುತ್ತಾರೆ, ಇಲ್ಲೂ ನೋಡುತ್ತಾರೆ.
ಶೋನಲ್ಲಿ ಪಾಲ್ಗೊಂಡವರ ಬಗ್ಗೆ ಹಾಗೂ ಇಂಥ ಶೋಗಳ ಕುರಿತು ನಿಮ್ಮ ಅಭಿಪ್ರಾಯವೇನು?
ಅವರ ಪ್ರತಿಭೆ ಅವರನ್ನು ಬಿಗ್ ಬಾಸ್ ಮನೆಗೆ ಕರೆಸಿದೆ. ಇದರಲ್ಲಿ ನನ್ನ ಪ್ರತ್ಯೇಕವಾದ ವ್ಯಾಖ್ಯಾನವಿಲ್ಲ. ಇನ್ನು ಇಂಥ ರಿಯಾಲಿಟಿ ಶೋಗಳ ಪ್ರಸ್ತುತತೆ, ಅಪ್ರಸ್ತುತತೆ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ ನಾನು. ಶೋ ಮಾಡಬೇಕೆಂಬ ಯೋಜನೆ ವಾಹಿನಿಯದ್ದು, ಅದಕ್ಕೆ ನಿರೂಪಣೆ ಕೆಲಸ ಮಾತ್ರ ಮಾಡಿದ್ದೇನೆ ಅಷ್ಟೇ.
ಎಲ್ಲವೂ ನಾಟಕೀಯ, ಯಾಂತ್ರಿಕ ಮತ್ತು ಪೂರ್ವ ನಿರ್ಧಾರಗಳಂತೆ ರಿಯಾಲಿಟಿ ಶೋಗಳು ಸಾಗುತ್ತವೆ. ಇವು ಬಿಗ್ ಡ್ರಾಮಾ ಎಂಬುದು ಸಾಮಾನ್ಯವಾದ ಅಭಿಪ್ರಾಯ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಅವರವರ ಅಭಿಪ್ರಾಯ ಅವರವರಿಗೆ. ಅದನ್ನು ತಪ್ಪು ಎನ್ನಲಾರೆ. ಹಾಗಂತ ಸರಿ ಅಂತಾನೂ ಒಪ್ಪಿಕೊಳ್ಳಕ್ಕಾಗಲ್ಲ. ನಿಮ್ಮ ಪ್ರಕಾರ ಡ್ರಾಮಾ ಅಂದ್ರೆ ಏನು? ಫ್ರೀ ಪ್ಲಾನ್, ಸ್ಕ್ರಿಪ್ಟ್. ಅಲ್ಲ, ಒಂದು ರಾಜ್ಯದ ಸಿಎಂ ಆಗಿ ಗೆದ್ದವನು ಇಷ್ಟು ವೋಟು ಗಳಿಸಿದ್ದಾನೆಂದು ನೀವು ಸುದ್ದಿ ಮಾಡ್ತೀರಿ. ಆದರೆ ಅಷ್ಟು ವೋಟ್ ತೆಗೆದುಕೊಂಡಿರುವುದು ನಿಜಾನಾ? ನಿಮ್ಮನ್ನ ಹೇಗೆ ನಂಬುವುದು? ಆದರೂ ನಿಮ್ಮ ಸುದ್ದಿಯಂತೆ ಹೌದು, ಅವರೇ ಗೆದ್ದಿದ್ದಾರೆಂದು ನಂಬುತ್ತೇವೆ. ರಾಜ್ಯದ ಆಡಳಿತ ನಡೆಸಲು ಹೊರಟವನನ್ನು ನಾವು ರೀ ಚೆಕ್ ಮಾಡುತ್ತಿಲ್ಲ. ಆದರೆ ನಂಬಿಕೆ ಇದೆ. ಅವರ ಮೇಲೆ ಮತ್ತು ನಿಮ್ಮ ಬ್ರೇಕಿಂಗ್ ಸುದ್ದಿಗಳ ಮೇಲೆ. ಊಹೆ, ಕಲ್ಪನೆಯ ಪ್ರಶ್ನೆ, ಅಭಿಪ್ರಾಯಗಳಿಗೆ ಲೆಕ್ಕವಿಲ್ಲ. ರಿಯಾಲಿಟಿ ಶೋಗಳ ಬಗ್ಗೆಯೂ ಅಂಥ ಊಹೆಗಳಿವೆ ಅಷ್ಟೆ. ಆದರೆ ನಾವು ನಂಬಿ ಅಂತ ಯಾರನ್ನೂ ಒತ್ತಾಯ ಮಾಡಿಲ್ಲ. ಕನ್ವಿನ್ಸ್ ಮಾಡಿದ್ದೇವೆ. ನಂಬುವುದು ಬಿಡುವುದು ಶೋ ನೋಡಿದವರಿಗೆ ಬಿಟ್ಟಿದ್ದು.
98 ದಿನಗಳ ಈ ರಿಯಾಲಿಟಿ ಶೋ ಮೂಲಕ ನೀವು ಕಲಿತಿದ್ದೇನು?
ತಾಳ್ಮೆ, ಬೇರೊಬ್ಬರ ಮಾತನ್ನು ಕೇಳಬೇಕೆಂಬ ವ್ಯವಧಾನ, ಎದುರಿಗಿದ್ದವರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ. ಮುಖ್ಯವಾಗಿ ನಮ್ಮ ನಮ್ಮ ಯೋಗ್ಯತೆಗಳು ಇಲ್ಲಿ ಗೊತ್ತಾಗುತ್ತವೆ. ಯಾರೋ ಜಗಳ ಮಾಡಿಕೊಂಡಾಗ ವೇದಿಕೆ ಮೇಲೆ ನಿಂತು ಅವರನ್ನು ಹೇಗೆ ಸಮಾಧಾನ ಮಾಡಬೇಕೆಂದು ಯಾರೂ 'ಕಥೆ' ಬರೆದುಕೊಡಲ್ಲ ನೋಡಿ! ಆ ಸಂದರ್ಭದಲ್ಲಿ ಜಾಣ್ಮೆಯಿಂದ ವರ್ತಿಸಬೇಕು. ಇಂಥ ಸಣ್ಣ ಸಂಗತಿಗಳನ್ನು ಕಲಿತಿದ್ದೇನೆ.
ನಿಜ ಹೇಳಿ, ನಿಮ್ಮ ಪ್ರಕಾರ ಯಾರು ಇಲ್ಲಿ ಬಿಗ್ ಬಾಸ್? (ನಿರೂಪಕನಾ, ಗೆದ್ದವರಾ, ಹೌದು ಸ್ವಾಮಿ ಎಂದವರಾ, ಕಾರ್ಯಕ್ರಮದ ನಿರ್ವಾಹಕರಾ ಅಥವಾ ವಾಹಿನಿಯಾ?)
ಇವರೇ ದೇವರು ಅಂತ ನಿರ್ದಿಷ್ಟವಾಗಿ ಹೇಳಕ್ಕಾಗುತ್ತದೆಯೇ? ನನ್ನ ಪ್ರಕಾರ ಅದು ಸಾಧ್ಯವಿಲ್ಲ. ಆದರೆ ನೀವು ಯಾವುದನ್ನ ಮತ್ತು ಯಾರನ್ನ ಗಟ್ಟಿಯಾಗಿ ನಂಬುತ್ತೀರೋ ಅವರೇ ದೇವರು ಅಲ್ಲವೇ? ಇಲ್ಲೂ ಅಷ್ಟೆ, ನಿಮ್ಮೊಳಗಿನ 'ನಂಬಿಕೆ'ಯೇ ಬಿಗ್ ಬಾಸ್.
ಬಿಗ್ ಬಾಸ್ಗಾಗಿ ಒಂದಿಷ್ಟು ಹಿರಿತೆರೆಯ ಕಾಲ್ಶೀಟ್ಗಳಿಗೆ ಕೈ ಕೊಟ್ಟಿದ್ದೀರಿ. ಸರಿ, ಈಗ ಬಾಸ್ ಮನೆಯಿಂದ ಹೊರ ಬಂದಿದ್ದೀರಿ. ಸುದೀಪ್ರ ಮುಂದಿನ ಸಿನಿಮಾ ಯಾವುದು?
ಮೊದಲು ನಿರ್ಮಾಪಕ ಎನ್.ಕುಮಾರ್ ಅವರ ಸಿನಿಮಾ ಮಾಡುತ್ತೇನೆ. ಇದು ರಾಮ್ಗೋಪಾಲ್ ವರ್ಮಾರ ಜೊತೆಗಿನ ಸಿನಿಮಾ ಅಲ್ಲ. ನಾನೇ ನಿರ್ದೇಶನ ಮಾಡಬೇಕೆಂದುಕೊಂಡಿದ್ದೇನೆ. ಸದ್ಯದಲ್ಲೇ ಎಲ್ಲವೂ ಅಂತಿಮವಾಗಲಿದೆ. ನಿಜ, ಸಿಸಿಎಲ್ ಹಾಗೂ ಬಿಗ್ ಬಾಸ್ನಿಂದ ಒಟ್ಟು 8 ತಿಂಗಳು ಯಾವುದೇ ಸಿನಿಮಾ ಮಾಡಲಿಲ್ಲ. ಸಿಸಿಎಲ್ನ ಕರ್ನಾಟಕ ತಂಡದ ನಾಯಕನ ಜವಾಬ್ದಾರಿ ಬಂದಾಗ ಇಡೀ ಉದ್ಯಮದ ಪ್ರತಿಷ್ಠೆ, ಗೌರವ ಅಡಗಿತ್ತು. ಬಿಗ್ ಬಾಸ್ ವಿಚಾರಕ್ಕೆ ಬಂದರೆ ಇಲ್ಲಿ ನನ್ನ ನಂಬಿ ಒಂದಿಷ್ಟು ಮಂದಿ ಶೋಗೆ ಬಂದಿದ್ದರು. ಬಂದವರ ಜೊತೆ ನಾನು ಇಲ್ಲದಿದ್ದರೆ ಹೇಗೆ? ಜೊತೆಗೆ ಕಿರುತೆರೆ ಎನ್ನುವ ಸಮುದ್ರದಲ್ಲಿ ಈಜಲು ಹೊರಟಾಗ ಬೇರೆಲ್ಲ ಕೆಲಸಗಳನ್ನು ತಾತ್ಕಾಲಿಕವಾಗಿ ಬದಿಗಿಡಬೇಕನಿಸಿತು. ಈಗ ಎಲ್ಲ ಮುಗಿದಿದೆ. ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ.
ಬಿಗ್ ಪಾಯಿಂಟ್ಸ್
ಸ್ಥಳ: ಲೋನಾವಳ, ಮಹಾರಾಷ್ಟ್ರ
ಬಿಗ್ ಬಾಸ್ ಆರಂಭ: 24-3-2013
ಒಟ್ಟು ದಿನ: 98 (14 ವಾರ)
ಕಾರ್ಯಕ್ರಮದ ಸಾರಥ್ಯ: ರಾಘವೇಂದ್ರ ಹುಣಸೂರು ಮತ್ತು ಪರಮೇಶ್ವರ ಗುಂಡ್ಕಲ್
ನಿರೂಪಕ: ಸುದೀಪ್
ಕೆಲಸಗಾರರು: 400 ಮಂದಿ
ಒಟ್ಟು ಸದಸ್ಯರು: 16 ಪ್ಲಸ್ 1
ಸಂಭಾವನೆ: ಸರಾಸರಿ ವಾರಕ್ಕೆ 1 ಲಕ್ಷದಿಂದ 50 ಲಕ್ಷದವರೆಗೆ
ಮೊದಲು ನಿರ್ಗಮಿಸಿದವರು: ನರ್ಸ್ ಜಯಲಕ್ಷ್ಮಿ
ಮನೆ ಮನೆ ಕತೆ
ಮನೆಗೆ ಸದಸ್ಯರು ಬಂದಿದ್ದು:
ರಾಘವೇಂದ್ರ ಹುಣಸೂರು ಮತ್ತು ಪರಮೇಶ್ವರ್ ಅಷ್ಟೂ ಸ್ಪರ್ಧಿಗಳ ಜೊತೆ ಮಾತುಕತೆ ಮಾಡಿ ಆಯ್ಕೆ ಮಾಡಿದರು. ಒಬ್ಬೊಬ್ಬರಿಗೂ ಒಂದೊಂದು ಕ್ವಾಲಿಟಿ ಇರಬೇಕೆಂದು ಮೊದಲೇ ನಿರ್ಧಾರ ಮಾಡಿಕೊಂಡಿದ್ದರು.
ಬಿಗ್ ಬಾಸ್ ಮನೆ ಮುಂದೇನು?:
ಅದನ್ನು ಒಡೆಯುತ್ತಾರೆ. ಹಿಂದಿಯಲ್ಲಿ ಆರಂಭವಾಗುವ ಬಿಗ್ ಬಾಸ್ ಸೀಜನ್ 7ಕ್ಕೆ ಪುನರ್ ನಿರ್ಮಾಣ ಮಾಡುತ್ತಾರೆ.
ಮನೆಯ ಒಟ್ಟು ವೆಚ್ಚ: 2 ಕೋಟಿ
ಹೌದು, ಸ್ವಾಮಿ ನಾವೇ!:
ಬಿಗ್ ಬಾಸ್... ಬಿಗ್ ಬಾಸ್ ಎಂದು ಹಾಡುತ್ತ 'ಹೌದು ಸ್ವಾಮಿ' ಎನ್ನುತ್ತಿದ್ದವರು ಬೇರ್ಯಾರೂ ಅಲ್ಲ ಗಾಯಕ ವಿಜಯ್ ಪ್ರಕಾಶ್. ಈ ಹಾಡನ್ನು ಬರೆದವರು ನಿರ್ದೇಶಕ ಯೋಗರಾಜ್ ಭಟ್. ಆದರೆ ಮನೆಯ ಸದಸ್ಯರೊಂದಿಗೆ ಮಾತನಾಡುತ್ತಿದ್ದ ಧ್ವನಿ ಶೋನ ನಿಯಮದ ಪ್ರಕಾರ ಸೀಕ್ರೆಟ್.
ಟ್ಯೂನ್ ಹಾಕಿದವರು: ಹಿಂದಿಯಿಂದ ತಂದಿದ್ದು.
ಎಪಿಸೋಡ್ ಹೇಗೆ ಸಿದ್ಧಗೊಳ್ಳುತ್ತಿತ್ತು:
ಪ್ರತಿ ದಿನ 3 ಗಂಟೆಗೆ ಶೂಟಿಂಗ್ ಮುಗಿಯುತ್ತಿತ್ತು. ಆ ದಿನದ ಚಿತ್ರೀಕರಣವನ್ನು ಅವತ್ತೇ ಎಡಿಟ್ ಮಾಡಿ ರಾತ್ರಿ 8 ಗಂಟೆಗೆ ಪ್ರಸಾರ ಮಾಡಲಾಗುತ್ತಿತ್ತು.
ಶೋ ಐಡಿಯಾ ಬಂದಿದ್ದು:
ಪರ್ಫೆಕ್ಟ್ ಮನರಂಜನೆಯ ಕಾರ್ಯಕ್ರಮ ಬೇಕು ಎಂದಾಗ ಬಿಗ್ ಬಾಸ್ ಐಡಿಯಾ ಬಂದಿದೆ.
ಹಣ ಮುಖ್ಯವಲ್ಲ...
ನಾನು ಆಟವಾಡಲು ಹೋದವನಲ್ಲ. ಹೀಗಾಗಿ ಶೋನಲ್ಲಿ ಗೆದ್ದ ಹಣ ನನಗೆ ಮುಖ್ಯವಾಗಿ ಕಾಣುತ್ತಿಲ್ಲ. 98 ದಿನ ನೋಡುಗರ ನಂಬಿಕೆ, ಪ್ರೀತಿ, ವಿಶ್ವಾಸ ಪಡೆದುಕೊಂಡು ನಮ್ಮನ್ನು ನಾವು ಗಟ್ಟಿಗೊಳಿಸಿಕೊಂಡಿದ್ದು ಇದೆಯಲ್ಲ, ಅದು ಮುಖ್ಯವಾಗುತ್ತಿದೆ.
- ನಟ ವಿಜಯ್ ರಾಘವೇಂದ್ರ
ಪ್ರೀತಿ, ಅಭಿಮಾನ...
ಪ್ರತಿಯೊಂದು ವಾಹಿನಿಯಲ್ಲೂ ನನ್ನ ನಿರೂಪಣೆ ಬಗ್ಗೆ ಮಾತನಾಡುತ್ತಿದ್ದಾರೆ. ಹೊಗಳುತ್ತಿದ್ದಾರೆ. 'ಸುದೀಪ್ ಒಪ್ಪಿಕೊಂಡಿದ್ದನ್ನು ಪ್ರಾಮಾಣಿಕವಾಗಿ ಮಾಡುತ್ತಾನೆ' ಎನ್ನುವ ಭರವಸೆ ಅವರಲ್ಲಿದೆ. ಸ್ನೇಹಿತರು, ಬಂಧುಗಳು ನನ್ನ ಕೆಲಸದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇದಕ್ಕಿಂತ ನನಗೆ ಮತ್ತೊಂದು ಸಂಪಾದನೆ ಬೇಕಾ? ನನ್ನ ಮಗಳು ಶೋ ನೋಡುತ್ತಿದ್ದಾಗ ನನ್ನ ಇಮಿಟೇಟ್ ಮಾಡುತ್ತಿದ್ದಳು. ಅದನ್ನು ನೋಡಿ ನಗುತ್ತಿದ್ದೆ. ಇಟ್ಸ್ ಫನ್. ಜನರ, ಮಾಧ್ಯಮಗಳ ಪ್ರೀತಿ, ಅಭಿಮಾನ, ಗೌರವ ಸಂಪಾದಿಸಿಕೊಂಡಿದ್ದೇನೆ.
- ನಟ ಸುದೀಪ್
- ಆರ್.ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


