ಮಧ್ಯಂತರ
ಕನ್ನಡದ ಧಾರಾವಾಹಿಗಳಲ್ಲಿ ಹೊಸತನವಿದೆಯೆ? ಖಂಡಿತಾ ಇದೆ. ಎಷ್ಟಿದೆ ಎಂದರೆ, ಹಳೆ ಕಲಾವಿದರನ್ನು ಮರೆತೇಬಿಡುವಷ್ಟು!

ಕನ್ನಡದ ಧಾರಾವಾಹಿಗಳಲ್ಲಿ ಹೊಸತನವಿದೆಯೆ? ಖಂಡಿತಾ ಇದೆ. ಎಷ್ಟಿದೆ ಎಂದರೆ, ಹಳೆ ಕಲಾವಿದರನ್ನು ಮರೆತೇಬಿಡುವಷ್ಟು!
ಹಿಂದೆ ಕನ್ನಡ ಸೀರಿಯಲ್‌ಗಳಲ್ಲಿ ರಂಗಭೂಮಿಯಿಂದ ಬಂದವರು, ಟೆಲಿಫಿಲ್ಮ್‌ನಲ್ಲಿ ನಟಿಸಿದವರು ಮಾತ್ರವಲ್ಲ ಹಿರಿತೆರೆಯ ಪೋಷಕ ಪಾತ್ರಗಳಾಗಿರುವವರು ಧಾರಾಳವಾಗಿ ಕಾಣಿಸುತ್ತಿದ್ದರು. ನಾಯಕಿಯನ್ನು ಆರಿಸುವಾಗ, ನಟನೆಯ ಹಿನ್ನೆಲೆಯಿಲ್ಲದ ಕಾಲೇಜು ಹುಡುಗಿಯರನ್ನು ತಂದು ಮುಖ್ಯ ಭೂಮಿಕೆಯಲ್ಲಿ ಕೂರಿಸಲಾಗುತ್ತದೆ. ದಶಕದ ಹಿಂದಿನ ನಾಯಕಿಯರಿಗೆ ಪೋಷಕ ಪಾತ್ರಗಳಲ್ಲಿ ಕೂಡ ಅವಕಾಶವಿಲ್ಲ ಎನ್ನುವುದು ಪ್ರಮುಖ ಆರೋಪ. ದಶಕದ ಹಿಂದೆ ಕಿರುತೆರೆಯಲ್ಲಿ ನಾಯಕಿಯಾಗಿ ಮೆರೆದು, ಅದೇ ಚೆಲುವನ್ನು ಉಳಿಸಿಕೊಂಡಿದ್ದರೂ ಈಗ ಬೇಡಿಕೆ ಕಳೆದುಕೊಂಡಿರುವ ನಟಿಯೇ ಹೀಗೆ ಹೇಳುವಾಗ ಬೆಚ್ಚುವಂತಾಗುತ್ತದೆ. ಅವರ ಮಾತಿನ ಸತ್ಯಾಸತ್ಯತೆ ಪರೀಕ್ಷಿಸಲು ಮತ್ತೊಂದಷ್ಟು ನಟಿಯರ ಜತೆ ನಡೆಸಿದ ಸಂವಾದವಿದು.
ಕರ್ನಾಟಕ ಟಿವಿಲೋಕದ ಉಪಾಧ್ಯಕ್ಷೆ ಸಪ್ನ ರಾಜ್ ಈ ಹೇಳಿಕೆಯನ್ನು ಸಂಪೂರ್ಣ ಬೆಂಬಲಿಸುತ್ತಾರೆ. ತಾನು ಕೂಡ ನಿರ್ದೇಶಕರ ಆ ಮನಸ್ಥಿತಿಯ ಬಲಿಪಶುವೆಂದು ಹೇಳುತ್ತಾರೆ. 'ಯೌವನವನ್ನು ಕಾಯ್ದುಕೊಂಡಿದ್ದೇನೆ. ಅದಕ್ಕಾಗಿ ಯೋಗ, ಪ್ರಾಣಾಯಾಮ ಎಂದು ಸಾಕಷ್ಟು ಡೆಡಿಕೇಟೆಡ್ ಆಗಿದ್ದೇನೆ. ನಾಯಕಿಯಾಗಿ ಬೇಡ. ಅವರ ಅಕ್ಕ, ಅತ್ತಿಗೆಯ ಪಾತ್ರಗಳಿಗೂ ಆಯ್ಕೆ ಮಾಡುತ್ತಿಲ್ಲ, ನೇರವಾಗಿ ತಾಯಿ ಪಾತ್ರಕ್ಕೆ ಮಾತ್ರ ಆಹ್ವಾನಿಸುವುದು ನಿಜಕ್ಕೂ ನೋವುಂಟುಮಾಡಿದೆ' ಎಂಬುದು ಸಪ್ನರ ಅಭಿಮತ.
'ಖಂಡಿತವಾಗಿಯೂ ನನಗೆ ಹಾಗನಿಸುತ್ತಿಲ್ಲ' ಎಂದು ಕಡ್ಡಿ ಮುರಿದವರು ನಟಿ ಹಂಸ. ಅವರ ಪ್ರಕಾರ 'ಬದಲಾವಣೆ ಜಗತ್ತಿನ ನಿಯಮ. ಒಂದು ದಶಕದಿಂದ ನಾಯಕಿಯಾಗಿ ಮೆರೆದವರಲ್ಲಿ ತಾನೂ ಸೇರಿದ್ದೇನೆ. ಇದು ವೇಗದ ಯುಗ. ಜನರ ಅಭಿರುಚಿ ಬದಲಾಗುತ್ತಲೇ ಇರುತ್ತವೆ. ಅವರು ಎಷ್ಟೆಂದು ಹಳಬರನ್ನೇ ನೋಡುತ್ತಾರೆ? ಅದಕ್ಕೆ ನಾವು ಹೊಂದಿಕೊಳ್ಳಬೇಕು. ಕಲಾವಿದೆ ಎಂದ ಮೇಲೆ ಪಾತ್ರವನ್ನು ಚೆನ್ನಾಗಿ ನಿರ್ವಹಿಸುವುದು ಮುಖ್ಯ' ಎನ್ನುತ್ತಾರೆ.
ರೇಖಾ ಕುಮಾರ್ ಇಂದಿಗೂ ಚೆಲುವು- ನಟನೆ ಎರಡರ ಪೂರ್ಣ ಪ್ಯಾಕೇಜ್. ಆದರೆ ಅವರ ಪರಿಸ್ಥಿತಿಯೂ ಸಪ್ನರಿಗಿಂತ ವಿಭಿನ್ನವಲ್ಲ. ಹಂಸ ಹೇಳಿದಂತೆ ವಿಭಿನ್ನತೆಯ ಹೆಸರಲ್ಲಿ ಧಾರಾವಾಹಿಯೊಂದರಲ್ಲಿ ತಾಯಿಯ ಪಾತ್ರಕ್ಕೆ ಒಪ್ಪಿಕೊಂಡರು. ಆದರೆ ಅದೇ ಮುಳುವಾಗಿ ಹೋಯಿತು. ಆ ತಾಯಿಯನ್ನು ತಲೆಗೂದಲನ್ನು ಬಿಳಿಯಾಗಿಸಿ ಇನ್ನೂ ಮುಂದುವರಿಸಲಾಗುತ್ತಿದೆ. ಒಪ್ಪಿಕೊಂಡರೆ ಮೂರು ವರ್ಷಕ್ಕೆ ಅದೇ ಗೆಟಪ್ಪು. ಆ ಬಳಿಕ ಎಲ್ಲರೂ ನಾಯಕ ಅಥವಾ ನಾಯಕಿಯ ತಾಯಿ ಪಾತ್ರಕ್ಕೇ ಆಹ್ವಾನಿಸುತ್ತಾರೆ. ಇನ್ನು ಸಿನೆಮಾ ಮಂದಿ ಕರೆದು ಒಳ್ಳೆಯ ಪಾತ್ರ ನೀಡುವುದು ಕನಸಿನ ಮಾತು. ಮಾತ್ರವಲ್ಲ, ತನಗೆ ಇಷ್ಟೊಂದು ಹಿರಿಯ ಪಾತ್ರ ನೀಡುವುದರಿಂದ ವಾಸ್ತವದಲ್ಲಿ ನಲುವತ್ತು ದಾಟಿದವರು ಪಾತ್ರಗಳಿಲ್ಲದೆ ಮನೆ ಸೇರಬೇಕಾದ ಅನಿವಾರ್ಯತೆಯೂ ಉಂಟಾಗಿದೆ. ಇದೀಗ ಮಲಯಾಳಂನ ಏಷ್ಯಾನೆಟ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯಲ್ಲಿ ತನ್ನ ಪಾತ್ರ ಯುವತಿಯದು ಎಂದು ರೇಖಾ ಹೇಳುತ್ತಾರೆ. ಕಲೆಗೆ ಹೆಸರಾದ ಕೇರಳವೇ ಈಕೆಯನ್ನು ಇಲ್ಲಿಂದ ಕರೆಸಿ ಅಂಥದೊಂದು ಪಾತ್ರ ನೀಡಬೇಕಾದರೆ ನಮ್ಮವರಿಗಿನ್ನೂ ಹಿತ್ತಲ ಗಿಡ ಮದ್ದಲ್ಲವೆಂದೇ ಹೇಳಬೇಕಲ್ಲವೆ?
ರೇಖಾ ಜೊತೆಜೊತೆಗೇ ನಾಯಕಿಯಾಗಿ ಬಂದವರು ಮಂಜುಭಾಷಿಣಿ. ಸಿಲ್ಲಿಲಲ್ಲಿ ಧಾರವಾಹಿಯ ಪ್ರಭಾವ, ಇನ್ನೂ ತಾಯಿಯ ಪಾತ್ರಕ್ಕೆ ಬಡ್ತಿ ಸಿಕ್ಕಿಲ್ಲ. ಸಿಕ್ಕರೂ ಕೂಡ ಅದನ್ನು ನಿರ್ವಹಿಸುವುದು ಕಲಾವಿದೆಯಾಗಿ ತನ್ನ ವೃತ್ತಿಧರ್ಮವೆಂಬುದು ಅವರ ಅಭಿಪ್ರಾಯ. ಹೊಸಬರ ದರ್ಬಾರು ಹೆಚ್ಚಿದ್ದರಿಂದಾಗಿ ತಮಗೆ ಅವಕಾಶದ ಕೊರತೆಯಾಗಿರುವ ಅನುಭವ ಇಲ್ಲವೆನ್ನುತ್ತಾರೆ ಮಂಜುಭಾಷಿಣಿ.
ರಂಗಭೂಮಿ, ಸೀರಿಯಲ್ ಕಲಾವಿದೆ, ಕಾಸ್ಟ್ಯೂಮ್ ಡಿಸೈನರ್ ನಾಗಿಣಿ ಭರಣ ನೀಡುವ ಅಭಿಪ್ರಾಯಕ್ಕೆ ಇಲ್ಲಿ ಮಹತ್ವವಿದೆ. 'ಬಂದವರು ಹೊಸಬರೇ ಇದ್ದರೂ ಪ್ರತಿಭೆಯಿಲ್ಲದೆ ತಳವೂರಲು, ಹೆಸರು ಗಳಿಸಲು ಅಸಾಧ್ಯ. ಹೊಸಬರನ್ನು ಪೂರ್ಣ ಪ್ರಮಾಣದ ಕಲಾವಿದರನ್ನಾಗಿಸುವಲ್ಲಿ ನಿರ್ದೇಶಕರ ಪಾತ್ರ ಮಹತ್ವದ್ದು' ಎನ್ನುತ್ತಾರೆ.
ನಿರ್ಮಾಪಕ, ನಿರ್ದೇಶಕರೂ ಹೊಸಬರಲ್ಲಿ ಪ್ರತಿಭೆ ಸೃಷ್ಟಿಸುವುದಕ್ಕಿಂತಲೂ ತಮ್ಮ ಬೇಳೆ ಬೇಯಿಸುವುದಕ್ಕೇ ಹೆಚ್ಚು ಒತ್ತು ಕೊಡುತ್ತಾರೆ. ಹೊಸಬರೆಂದರೆ ನಖರಾಗಳಿರದು, ಸಂಭಾವನೆಯೂ ಕೊಟ್ಟಷ್ಟು. ಕಳೆದುಹೋಗುವುದು ಧಾರಾವಾಹಿ ಕ್ಷೇತ್ರದ ಗುಣಮಟ್ಟ ಕೂಡ ಹೌದು. ಒಳ್ಳೆಯ ಕತೆ, ಅದರಲ್ಲಿ ಪ್ರತಿಭಾವಂತರಿಗೆ ತಕ್ಕ ಪಾತ್ರಗಳು ಇವೆಲ್ಲ ತುಂಬಿರುವ ಧಾರಾವಾಹಿಯನ್ನು ಹುಡುಕುವುದು ಹುಲ್ಲ ಬಣವೆಯಲ್ಲಿ ಸೂಜಿ ಹುಡುಕಿದಂತೆಯೇ.
- ಶಶಿಕರ ಪಾತೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


