ಸೂಪರ್‌ಛತ್ರಿಗಳು

ನಿರ್ದೇಶಕ ಎಸ್. ನಾರಾಯಣ್ ಮತ್ತೆ ಛತ್ರಿ ಕೆಲಸಕ್ಕೆ ಮುಂದಾಗಿದ್ದಾರೆ. ಅರೇ! ನಾರಾಯಣ್ ಕೂಡ ಛತ್ರಿ ಕೆಲಸ ಮಾಡ್ತಾರಾ ಅಂತ ತಲೆಗೆ ಹುಳು ಬಿಟ್ಟುಕೊಳ್ಳಬೇಡಿ. ಕುರಿ, ಕೋತಿ ಆದ ಮೇಲೆ ನಾರಾಯಣ್ ಅಂಡ್ ಕೊ. ಈಗ ಛತ್ರಿಗಳ ಹಿಂದೆ ಬಿದ್ದಿದೆ. ಹೌದು, ಕೂಸು ಹುಟ್ಟೋಕೆ ಮುನ್ನವೇ ಕುಲಾವಿ ಹೊಲಿಸೋದು ಹಳೇ ಮಾತು. ನಾರಾಯಣ್ ಕೂಸು ಹುಟ್ಟಿ ಬೆಳೆದ ಮೇಲೇ ಕುಲಾವಿ ಹೊಲಿಸಿದ್ದಾರೆ. ಇದೂ ಒಂಥರಾ ಛತ್ರಿ ಕೆಲಸವೇ!
ಹೀಗಾಗಿ ಇನ್ನು ಮುಂದೆ ನಾರಾಯಣ್ ತಂಡವನ್ನು ನೋಡಿದವರು 'ಕುರಿಗಳು', 'ಕೋತಿಗಳು' ಎನ್ನುವ ಬದಲು 'ಛತ್ರಿಗಳು' ಎಂದರೂ ಬೇಸರ ಮಾಡಿಕೊಳ್ಳುವುದಿಲ್ಲ. ಯಾಕೆಂದರೆ ಅವರ ಮುಂದಿನ ಚಿತ್ರದ ಹೆಸರೇ 'ಛತ್ರಿಗಳು ಸಾರ್ ಛತ್ರಿಗಳು'. ಚಿತ್ರಕ್ಕೆ ಹೆಸರಿಡದೆ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದಾರೆ. ಆಮೇಲೆ, ಮೂರು ಸಾವಿರ ಅಂಚೆ ಪತ್ರಗಳು, ನಾಲ್ಕು ಸಾವಿರ ಫೋನ್ ಕರೆಗಳು, 25 ಸಾವಿರ ಎಸ್‌ಎಂಎಸ್‌ಗಳ ಮೂಲಕ ಜನರಿಂದ ಬಂದ ಹೆಸರುಗಳ ಪೈಕಿ 'ಛತ್ರಿಗಳ'ನ್ನು ಆಯ್ಕೆ ಮಾಡಿ ಚಿತ್ರಕ್ಕಿಟ್ಟಿದ್ದಾರೆ. ನಾರಾಯಣ್, ರಮೇಶ್ ಅರವಿಂದ್, ಮೋಹನ್ ಈ ಮೂವರ ಕಾಂಬಿನೇಷನ್‌ನಲ್ಲಿ ಸಿದ್ಧವಾಗಿರುವ ಈ ಹಾಸ್ಯ ಚಿತ್ರಕ್ಕೆ ನಾರಾಯಣ್‌ರ ನಿರ್ದೇಶನ, ನಿರ್ಮಾಣ, ರಮೇಶ್ ಅರವಿಂದ್‌ರ ಕಥೆ, ಮೋಹನ್‌ರ ಸಂಭಾಷಣೆ ಇದೆ. ಈ ಮೂವರು ಚಿತ್ರವನ್ನು ಮೆಟ್ರೋ ರೈಲಿಗಿಂತ ವೇಗವಾಗಿ ಚಿತ್ರೀಕರಣ ಮುಗಿಸಿದಿದ್ದಾರೆ.
ಅಂದಹಾಗೆ ಚಿತ್ರದಲ್ಲಿ ಮೂವರು ನಾಯಕರಿಗೆ ನಾಲ್ಕು ಮಂದಿ ನಾಯಕಿಯರು. ಮಾನಸಿ, ಸನಾತನಿ, ಪವಿತ್ರಾ ಗೌಡ, ಸುಷ್ಮಾ. ಜಗದೀಶ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಚಿತ್ರಕ್ಕೆ ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಬೋಂಡಾ ಮಾರುವ ಪಾತ್ರಧಾರಿ ಮಾನಸಿಗೆ ಇಲ್ಲಿ ದ್ವಿಪಾತ್ರ, ಸನಾತನಿ ನಾರಾಯಣ್‌ರಿಗೆ ಜೋಡಿಯಾಗಿದ್ದು, ಮೈ ಮೇಲೆ ದೆವ್ವ ಬರಿಸಿಕೊಳ್ಳುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವಿತ್ರಾಗೌಡ ರಮೇಶ್ ಅರವಿಂದ್‌ರಿಗೆ ಜೋಡಿ. ಸುಷ್ಮಾಗೆ ಇಲ್ಲಿ ಮಾಡೆಲ್ ಪಾತ್ರ. ಈಕೆ ಕೂಡ ರಮೇಶ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ನಾಲ್ವರು ನಾಯಕಿಯರು ನಾರಾಯಣ್‌ರ ಶಿಸ್ತಿನ ಬಗ್ಗೆಯೇ ಹೇಳಿಕೊಂಡರು.
ಎಲ್ಲರ ಮಾತು ಮುಗಿಯುತಿದ್ದಂತೆಯೇ ಮೂವರು ನಾಯಕರೂ ಶರ್ಟ್ ಬಿಚ್ಚಿ ನಿಂತುಕೊಂಡರು. ಆಗ 'ಛತ್ರಿಗಳು ಸಾರ್ ಛತ್ರಿಗಳು' ಶೀರ್ಷಿಕೆ ಅನಾವರಣಗೊಂಡಿತು.
ಎಸ್. ನಾರಾಯಣ್
'ಇದು ಅನಿರೀಕ್ಷಿತವಾಗಿ ಶುರುವಾದ ಚಿತ್ರ. ನಮ್ಮದೇ ಕಾಂಬಿನೇಷನ್‌ನಲ್ಲಿ ಹಾಸ್ಯ ಚಿತ್ರಗಳು ಬಂದು ಪ್ರೇಕ್ಷಕರನ್ನು ರಂಜಿಸಿದವು. ಆದರೆ ಮತ್ತೆ ಅಂಥ ಚಿತ್ರಗಳು ಬರಲಿಲ್ಲ. ಹೀಗಾಗಿ ಮತ್ತೆ ನಾವು ಮೂವರು ಒಂದಾಗಿ ಪಕ್ಕಾ ಹಾಸ್ಯ ಚಿತ್ರವನ್ನು ಮಾಡುವ ಕನಸು ಕಂಡ ಫಲವಾಗಿ 'ಛತ್ರಿಗಳು ಸಾರ್ ಛತ್ರಿಗಳು' ಶುರುವಾಯಿತು'
ಮೋಹನ್
'ನಾನು ಕೂಡ ನಾರಾಯಣ್‌ರಿಂದ ಸಾಕಷ್ಟು ಕಲಿತಿದ್ದೇನೆ. ಮೊದಲ ಬಾರಿಗೆ ರೈಟರ್ ಆಗಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ನಗುವುದು ಮತ್ತು ನಗಿಸುವುದೇ ಈ ಚಿತ್ರದ ಗುರಿ. ಪಕ್ಕಾ ಕಾಮಿಡಿ ಪ್ಯಾಕೇಜ್ ಡೀಲ್. ಚಿತ್ರದಲ್ಲಿ ಪ್ರತಿಯೊಬ್ಬರ ಗೆಟಪ್‌ಗಳು ಚೆನ್ನಾಗಿವೆ'.
ರಮೇಶ್ ಅರವಿಂದ್
'ಪ್ರತಿಭೆ ಜೊತೆಗೆ ಶ್ರಮ ಇದ್ದರೆ ನಾರಾಯಣ್ ಜೊತೆ ಒಳ್ಳೆಯ ಸಿನಿಮಾ ಮಾಡಬಹುದು ಎಂಬುದಕ್ಕೆ ಈ ಚಿತ್ರ ಸಾಕ್ಷಿ. ನನಗೆ ಮೈಕಲ್‌ನ ಪಾತ್ರ ತುಂಬಾ ಚೆನ್ನಾಗಿದೆ'
= -ಕೇಶು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


