ವಿಜಯವಾಣಿ
ನಾನು ಖಂಡಿತಾ ವುಮನೈಸರ್ ಅಲ್ಲ, ದಯವಿಟ್ಟು ನನ್ನನ್ನು ಹಾಗೆ ಕರೆಯಬೇಡಿ. ಹಾಗಿದ್ದಿದ್ದರೆ ಅಂದು ನನ್ನ ಹೆಂಡತಿ ಮಕ್ಕಳು ಆಡಿದ ಮಾತುಗಳನ್ನು ಕೇಳಿದ ಮೇಲೆ...

'ಈ ಪಾಪಿ ದುನಿಯಾ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ, ಗೆಳತಿ ನೀನೂನು ಉಳಿದಿಲ್ಲ' ಎಂದು ಗುನುಗುತ್ತಿದ್ದ ದುನಿಯಾ ವಿಜಯ್, ಅಕ್ಕನ ಮನೆಯ ಚಿಕ್ಕ ಕೋಣೆಯೊಂದರ ಹಳೆಯ ಪಂಚೆ ಸುತ್ತಿಕೊಂಡು ಮೂಲೆಯಲ್ಲಿ ಕುಳಿತು ಅಕ್ಷರಶಃ ಗಳಗಳನೆ ಕಣ್ಣೀರು ಹಾಕುತ್ತಿದ್ದರು. ಆದರೆ ಆ ಮಬ್ಬುಗತ್ತಲಲ್ಲಿ ಲೈಟೂ ಇರಲಿಲ್ಲ, ಕ್ಯಾಮೆರಾ ಇರಲಿಲ್ಲ, ಸಿಕ್ಸ್‌ಪ್ಯಾಕ್ ಹೀರೋನ ಆ್ಯಕ್ಷನ್ ಕೂಡ ಇರಲಿಲ್ಲ. ಅದು ಅಭಿನಯ ಆಗಿರಲಿಲ್ಲ. ಅಕ್ಕನ ಮಗಳು ಕೋಣೆಯೊಳಗೆ ಬರುವ ಸದ್ದಾದೊಡನೆ ಥಟ್ಟನೆ ಕಣ್ಣೀರು ಒರೆಸಿಕೊಂಡು ಕೊಂಚ ನಗಲು ಪ್ರಯತ್ನಿಸಿದರು. ಆ ನಗು ಮಾತ್ರ ಖಂಡಿತಾ ಅಭಿನಯ ಆಗಿತ್ತು!
ನಾನು ಖಂಡಿತಾ ವುಮನೈಸರ್ ಅಲ್ಲ, ದಯವಿಟ್ಟು ನನ್ನನ್ನು ಹಾಗೆ ಕರೆಯಬೇಡಿ. ಹಾಗಿದ್ದಿದ್ದರೆ ಅಂದು ನನ್ನ ಹೆಂಡತಿ ಮಕ್ಕಳು ಆಡಿದ ಮಾತುಗಳನ್ನು ಕೇಳಿದ ಮೇಲೆ ಯಾವುದಾದರೂ ಗರ್ಲ್‌ಪ್ರೆಂಡ್‌ನ ಜೊತೆ ಹೋಗಿರುತ್ತಿದ್ದೆನೇ ಹೊರತು, ಸ್ಮಶಾನದಲ್ಲಿ ಹೋಗಿ ಮಲಗುತ್ತಿರಲಿಲ್ಲ ಎನ್ನುತ್ತಾ ಮಾತಿಗಾರಂಭಿಸಿದರು ದುನಿಯಾ ವಿಜಿ.
-ಯಾವತ್ತೂ ನಾನು ದೈಹಿಕ ಸುಖದ ಹಿಂದೆ ಬಿದ್ದವನಲ್ಲ. ಹೌದು ನಿಜ. ನಾನು ಶುಭಾ ಪೂಂಜಾಳನ್ನು ಪ್ರೀತಿಸಿದ್ದು ನಿಜ. ಅಲ್ಲಿ ನನ್ನ ತಪ್ಪಾಗಿದೆ. ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ನಾನು ಬಯಸಿದ್ದು ಪ್ರೀತಿಯನ್ನು. ತಲೆಯ ಮೇಲೆ ಕೈಯಿಟ್ಟು ನೇವರಿಸಿದರೆ ಅಮ್ಮನ ನೆನಪಾಗಬೇಕು ಎನಿಸುವಂಥ ಪ್ರೀತಿಯನ್ನು. ಅದು ನನಗೆ ಸಿಗಲಿಲ್ಲ. 14 ವರ್ಷದಲ್ಲಿ ನಾನು ನನ್ನ ಹೆಂಡತಿಯನ್ನು ಬದಲಾಯಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇನೆ. ಯಾವುದೂ ಫಲ ಕೊಡದೇ ಇದ್ದುದರಿಂದ ವಿಚ್ಛೇದನದ ನಿರ್ಧಾರ ಮಾಡಿದೆನೇ ಹೊರತು, ಇದು ಒಂದೇ ದಿನದಲ್ಲಿ ಮಾಡಿದ ನಿರ್ಧಾರವಲ್ಲ.
-ನನ್ನ ಕಾಲ್ಗುಣದಿಂದಲೇ ನನ್ನ ಗಂಡ ಸ್ಟಾರ್ ಆಗಿದ್ದು ಎಂದು ನಾಗರತ್ನ ಹೇಳುತ್ತಿದ್ದಾಳೆ. ಸಂತೋಷ. ನಿಮಗೊಂದು ವಿಷಯ ಹೇಳುತ್ತೇನೆ. ಈಕೆಯ ಕಾಲ್ಗುಣದಿಂದ ಆಗಿದ್ದಿದ್ದರೆ ಮದುವೆಯಾದ ಮರುವರ್ಷವೇ ನನಗೆ ಸ್ಟಾರ್‌ಗಿರಿ ಸಿಗಬೇಕಿತ್ತು. ಮದುವೆ ಆಗಿ 8 ವರ್ಷದ ನಂತರ ನನಗೆ 'ದುನಿಯಾ' ಸಿಕ್ಕಿದ್ದು.
ಅದು ನನ್ನ ಪರಿಶ್ರಮದಿಂದ
ಗಳಿಸಿದ್ದು. ಬಹುಶಃ ಆ ನಂತರವೇ ನಾನು 'ನಿಜವಾದ ದುನಿಯಾ ನೋಡಿದ್ದು'.
-ಇವತ್ತು ನಿದ್ದೆ ಮಾತ್ರೆ ಇಲ್ಲದೆ ನಿದ್ದೆ ಬರ್ತಿಲ್ಲ. ಊಟ ಮಾಡಿದ್ದು ಯಾವಾಗ ಅಂತನೇ ನೆನಪಿಲ್ಲ. ಗಂಡುಮಕ್ಕಳು ಶೋಷಣೆಗೊಳಗಾದ್ರೆ ರೊಚ್ಚಿಗೇಳಬಾರದಾ? ಟಿವಿ ಚಾನೆಲ್‌ನಲ್ಲಿ ಕುಳಿತು ನನ್ನ ಮಕ್ಕಳ ಬಾಯಲ್ಲಿ ಏನೆಲ್ಲಾ ಹೇಳಿಸಿ, 'ಡ್ಯಾಡಿ ಮೈ ಲವ್ಲೀ ಡ್ಯಾಡಿ' ಅಂತ ಹಾಡು ಹಾಕಿಸುತ್ತಾಳಲ್ಲ, ನನ್ನ ಮನಸ್ಸಿಗೆ ಎಷ್ಟು ನೋವಾಗುತ್ತದೆ ಎಂಬ ಕಲ್ಪನೆಯೂ ಇವರಿಗಿಲ್ಲವೇ? ಅಲ್ಲದೆ, ಈಗಿನ್ನೂ ವಿಚ್ಚೇದನದ ವಿಚಾರಣೆ ನಡೆಯುತ್ತಿದೆ. ಆಗಲೇ ನನ್ನ ಮಕ್ಕಳನ್ನು ನನ್ನ ಹತ್ತಿರ ಬರಲು ಆಕೆ ಬಿಡುತ್ತಿಲ್ಲ. ಬಂದರೆ ಎಲ್ಲಿ ಮಕ್ಕಳು ಅಮ್ಮ ತಮ್ಮ ಬಾಯಲ್ಲಿ ಸುಳ್ಳು ಹೇಳಿಸುತ್ತಿರುವ ವಿಷಯವನ್ನು ನನಗೆ ಹೇಳಿಬಿಡುತ್ತಾರೋ ಎಂಬ ಭಯ. ಈ ಬಗ್ಗೆ ನಾನು ಪೊಲೀಸ್‌ಗೆ, ಬಾಸ್ಕೋಗೆ ದೂರು ದಾಖಲಿಸಿದ್ದೇನೆ.
-ನನಗೆ ವಿಚ್ಛೇದನ ನೀಡುವುದು ಇಷ್ಟವಿಲ್ಲ ಎಂದು ಹೇಳುವ ಈ ನನ್ನ ಹೆಂಡತಿ ನನ್ನ ಮೇಲೆ ಹಲವು ದೂರು ದಾಖಲಿಸಿದ್ದಾಳೆ. ಆ ಕೇಸಿನಲ್ಲಿ ನನಗೆ ಶಿಕ್ಷೆಯಾದರೆ 10 ವರ್ಷ ಜೈಲು ಗ್ಯಾರಂಟಿ. ಹೀಗಿದ್ದಾಗ ನನ್ನ ಜೊತೆ ಸಂಸಾರ ಮಾಡುವ ಈಕೆಯ ಆಸೆಗೆ ಲಾಜಿಕ್ ಎಲ್ಲಿದೆ?
-ಶುಭಾ ಇನ್ನು ನನ್ನ ಬದುಕಿನಲ್ಲಿಲ್ಲ. ಮತ್ತೆ ಬರೋದೂ ಇಲ್ಲ. ಆಕೆಗೆ ಮದುವೆ ಆಗಲಿ. ಚೆನ್ನಾಗಿರಲಿ. ಆದರೆ ಇದು ನನ್ನ ಪತ್ನಿಗೆ ಗೊತ್ತಿಲ್ಲದ ವಿಷಯ ಆಗಿರಲಿಲ್ಲ. ಆಕೆಯನ್ನು ಮನೆಗೆ ಕರೆದುಕೊಂಡು ಬಂದು ಹೆಂಡತಿಯ ಬಳಿ ಮಾತನಾಡಿಸಿದ್ದೆ. ಆಗ ಹೆಂಡತಿ ಸುಮ್ಮನಿದ್ದಳು. ಈಗ ಯಾಕೆ ಅದು ಮತ್ತೆ ನೆನಪಾಯಿತು? ಅದಕ್ಕೆ ಕಾರಣಗಳನ್ನು ಈಗಾಗಲೇ ಕೊಟ್ಟಿದ್ದೇನೆ.
ಈಕೆಯನ್ನು ಮದುವೆಯಾಗುವ ಮುನ್ನವೇ ನಾನೊಬ್ಬ ಡಿವೋರ್ಸಿ. ನಿಜ. ಆ ಮದುವೆ ಕೇವಲ ಎರಡೂವರೆ ತಿಂಗಳು ಮಾತ್ರ ಉಳಿಯಿತು. ಆಗ ನನಗೆ ಕೇವಲ 19 ವರ್ಷ. ನನಗೆ ಏನೂ ಗೊತ್ತಿರಲಿಲ್ಲ. ಆದರೆ ಇಲ್ಲಿಯವರೆಗೂ ಆ ಹೆಣ್ಣುಮಗಳ ಹೆಸರನ್ನು ಯಾರ ಬಳಿಯೂ ನಾನು ಹೇಳಿಲ್ಲ. ಅದು ಹೆಣ್ಣಿನ ಬಗ್ಗೆ ನನಗಿರುವ ಗೌರವ.
-ನನ್ನ ಹೆಂಡತಿಯ ತಂಗಿ ಮದುವೆ ಮಾಡಿದ್ದು ನಾನು. ಅವಳ ತಮ್ಮನಿಗೆ ಸಹಾಯ ಮಾಡಿದ್ದು ನಾನು. ನಾಲ್ಕು ಕೋಟಿಯ ಮನೆಯನ್ನು ಅವಳ ಹೆಸರಿಗೆ ಬರೆದಿದ್ದೇನೆ. ನಾನು ಸಿನಿಮಾ ನಿರ್ಮಾಣ ಮಾಡುವಾಗಲೂ ನಾನು ನಿರ್ಮಾಪಕರು ಅಂತ ಮಾಡಿದ್ದು ನನ್ನ ತಂದೆಯನ್ನೂ ಅಲ್ಲ, ನನ್ನ ತಾಯಿಯನ್ನೂ ಅಲ್ಲ ನನ್ನ ಹೆಂಡತಿಯನ್ನೇ. ಈಗ ಹೇಳಿ ನನಗೆ ಅವಳ ಮೇಲೆ ಪ್ರೀತಿ ಇಲ್ಲವೇ?
-ಮನೆಯಲ್ಲಿ ನಾನೇ ಕೊಡಿಸಿರೋ ಎಷ್ಟೋ ಒಳ್ಳೊಳ್ಳೆಯ ಸೀರೆಗಳಿವೆ. ಆದರೆ ಈಕೆ ಟಿವಿ ಚಾನೆಲ್‌ಗೆ ಹೋಗುವಾಗ ಹಳೆಯ ಮಾಸಿದ ಬಣ್ಣದ ಸೀರೆ ಉಟ್ಟುಕೊಂಡು ಹೋಗ್ತಾಳೆ. ಟಿವಿ ಚಾನೆಲ್‌ನಲ್ಲಿ ಕೂತು ಫೇಕ್ ಕಾಲ್ ಮಾಡಿಸಿಕೊಂಡು ಮಾತಾಡ್ತ್ತಾಳೆ. ಯಾಕೆ?
-ಈ ಫೋಟೋಗಳನ್ನು ನೋಡಿ, ಅಲ್ಲಿರುವ ಸೀರೆ ಬೆಲೆ ಎಷ್ಟು, ಹಾಕಿರುವ ಒಡವೆಗಳ ಬೆಲೆ ಎಷ್ಟು, ಅವಳ ಬಳಿ ಇರುವ ಇಂಪೋರ್ಟೆಡ್ ಪರ್ಸ್‌ನ ಬೆಲೆ ಎಷ್ಟು ಕೇಳಿ.
-ಒಂದು ಹೆಣ್ಣಿಗೆ ಅನ್ಯಾಯ ಆಗುತ್ತಿದೆ ಎಂದು ಟಿವಿ ಚಾನೆಲ್‌ಗಳಲ್ಲಿ ಗೋಳಿಡುವ ಇದೇ ನಾಗರತ್ನಳ ಮೇಲೆ ಇಬ್ಬರು ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡಿದ ಬಗ್ಗೆ ಪೊಲೀಸ್ ದೂರುಗಳಿವೆ. ಅದರ ದಾಖಲೆ ನನ್ನ ಬಳಿ ಇದೆ. ಆ ಇಬ್ಬರು ಹೆಣ್ಣುಮಕ್ಕಳಿಗೆ ಸಹಾಯ ಮಾಡಲು ಹೊರಟಿದ್ದಕ್ಕೆ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟಿದ್ದಾಳೆ ನನ್ನ ಹೆಂಡತಿ. ಮಾತೆತ್ತಿದರೆ ನನ್ನ ಮಕ್ಕಳ ಮೇಲೆ ಆಣೆ ಮಾಡಲು ಹೇಳುವ ಇವಳು ಮಕ್ಕಳ ಮೇಲೆ ಆಣೆ ಮಾಡಿ ಹೇಳಲಿ, ಒಂದು ಅಮಾಯಕ ಹುಡುಗಿಯ ಮದುವೆ ನಿಲ್ಲಿಸಿ, ಬಾಳು ಹಾಳು ಮಾಡಿದ್ದು ಸುಳ್ಳು, ಇನ್ನೊಂದು ಹುಡುಗಿಯ ಬಟ್ಟೆ ಬಿಚ್ಚಿ ಹೊಡೆದಿದ್ದು ಸುಳ್ಳು ಅಂತ, ನಾನು ಡಿವೋರ್ಸ್ ಅರ್ಜಿ ವಾಪಸ್ ತಗೋತೀನಿ.
-ಶುಭಾ ಬಗ್ಗೆ ಇರೋದಿಷ್ಟಾದರೆ ಇಲ್ಲದ್ದನ್ನೆಲ್ಲಾ ಮಾತಾಡಿದ್ರು. ಈಗ ಎಂಬಿಬಿಎಸ್ ಮಾಡಿರೋ ಇನ್ನೊಂದು ಹುಡುಗಿ ಬಗ್ಗೆ ಮಾತಾಡ್ತಾರೆ. ಆಕೆ ಜೊತೆ ಸಿನಿಮಾ ಮಾಡಿದ್ದೇ ತಪ್ಪಾ?. ಇವಳು ಯಾರನ್ನೂ ಬಿಡೊಲ್ಲ. ಎಲ್ಲವನ್ನೂ ಸಹಿಸಿಕೊಬೇಕಾ?
-ನನ್ನ ಮನೆಯಿಂದ ನಾನು ಒಂದು ಪಿನ್ ಅನ್ನೂ ತಂದಿಲ್ಲ. ತರೋದೂ ಇಲ್ಲ. ನನಗೆ ದುಡಿಯುವ ತಾಕತ್ತಿದೆ. ಮುಂದಿನ ಬದುಕನ್ನು ರೂಪಿಸಿಕೊಳ್ಳುವುದು ಗೊತ್ತಿದೆ. ನನ್ನ ವಿಷಯ ಹಾಳಾಗಿ ಹೋಗಲಿ. ಈ ಇಬ್ಬರು ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಿ.
= ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


