ಲವ್ ಅಟ್ ಫಸ್ಟ್ ಕಾಪಿ

'ಇದು ಕೇವಲ ಪ್ರೆಸ್‌ಮೀಟ್ ಅಲ್ಲ, 'ಚಾರ್‌ಮಿನಾರ್' ಚಿತ್ರದ ಸಕ್ಸಸ್ ಮೀಟ್' ಎಂದು ಪದೇ ಪದೇ ಹೇಳಿದ ತೆಲುಗು ನಿರ್ಮಾಪಕ ಶ್ರೀಧರ್ ರೆಡ್ಡಿ, ಅದೇ ಖುಷಿಯಲ್ಲಿ ನಿರ್ದೇಶಕ ಆರ್. ಚಂದ್ರು ಅವರಿಗೆ ಹೂವಿನ ಬೊಕ್ಕೆ ಕೊಟ್ಟು ಕೇಕ್ ತರಿಸಿ ಕತ್ತರಿಸಿ ತಿನ್ನಿಸಿ ಖುಷಿಪಟ್ಟರು.
ಅವರ ಆ ಸಂಭ್ರಮಕ್ಕೆ ಕಾರಣ 'ಚಾರ್‌ಮಿನಾರ್' ಸಿನಿಮಾದ ಫಸ್ಟ್‌ಕಾಪಿ ನೋಡಿದ್ದು. ಅಪರೂಪದ ಲವ್‌ಸ್ಟೋರಿ ಇರುವ ಚಾರ್‌ಮಿನಾರ್ ಚಿತ್ರದ ಫಸ್ಟ್ ಕಾಪಿ ನೋಡಿದ ಕೂಡಲೇ ಶ್ರೀಧರ್ ಅವರಿಗೆ ಚಿತ್ರದ ಮೇಲೆ ಲವ್ ಆಯಿತಂತೆ. ಹಾಗಾಗಿ ಇದನ್ನು 'ಲವ್ ಅಟ್ ಫಸ್ಟ್ ಕಾಪಿ' ಎನ್ನಬಹುದು. ತಕ್ಷಣವೇ ಅವರು ಮಾಡಿದ ನಿರ್ಧಾರ ಎಂದರೆ ಚಾರ್‌ಮಿನಾರ್ ಅನ್ನು ತೆಲುಗು ಮತ್ತು ತಮಿಳು ಭಾಷೆಗಳಿಗೆ ರಿಮೇಕ್ ಮಾಡುವುದು. ಈ ಎರಡೂ ಭಾಷೆಗಳ ಚಿತ್ರವನ್ನು ಚಂದ್ರು ಅವರೇ ನಿರ್ದೇಶಿಸುತ್ತಿದ್ದಾರೆ ಎಂದೂ ಘೋಷಣೆ ಮಾಡಿದ ಶ್ರೀಧರ್ ತೆರೆದ ಪತ್ರಿಕಾಗೋಷ್ಠಿಯಲ್ಲಿ ಚಂದ್ರು ಕೈಗೆ ,ತಮ್ಮ ಜೇಬಿನಲ್ಲಿದ್ದ ನೋಟುಗಳನ್ನು ತುರುಕಿ ಇದು ನಾನು ಕೊಡುತ್ತಿರುವ ಅಡ್ವಾನ್ಸ್ ಎಂದೂ ಹೇಳಿಬಿಟ್ಟರು. ಮಾತು ಮಾತಿಗೆ 'ಆಹಾ ಎಂಥ ಚಿತ್ರ, ಪ್ರೇಮ್ ಅವರದ್ದು ಎಂಥಾ ಅಭಿನಯ' ಎಂದು ಉದ್ಘರಿಸುತ್ತಿದ್ದ ಶ್ರೀಧರ್ ತೆಲುಗು ಭಾಷೆಯಲ್ಲಿ ನಾಗಾರ್ಜುನ ಅಥವಾ ಅವರ ಪುತ್ರ ನಾಗಚೈತನ್ಯ ಅವರನ್ನು ನಾಯಕರನ್ನಾಗಿಸುವ ಯೋಚನೆಯಲ್ಲಿದ್ದಾರೆ. ಇದಕ್ಕೆ ದನಿಗೂಡಿಸುವ ಚಂದ್ರು ಕೂಡ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡರೆ ಈ ಇಬ್ಬರಲ್ಲಿ ಯಾರಿಗೆ ಬೇಕಾದರೂ ಚಿತ್ರವನ್ನು ಹೊಂದಿಸುವುದು ಕಷ್ಟವಲ್ಲ ಎನ್ನುತ್ತಾರೆ. ಇದರ ಜೊತೆಗೆ, ತಮಿಳಿನಲ್ಲೂ ಕೂಡ ದೊಡ್ಡ ಸ್ಟಾರ್ ನಟರೊಬ್ಬರನ್ನು ಸಂಪರ್ಕಿಸಲಾಗಿದ್ದು ಅವರ ಸಂಭಾವನೆಯ ವಿಷಯದಲ್ಲಿ ಚರ್ಚೆ ನಡೆಯುತ್ತಿದೆಯಂತೆ.
ತಮ್ಮ ಚಿತ್ರದ ಬಿಡುಗಡೆಯ ಮುಂಚಿನ ಈ ಖುಷಿಯನ್ನು ಹೇಳಿಕೊಳ್ಳಲು ಹಾಜರಿದ್ದ ನಾಯಕ ಪ್ರೇಮ್, ನಾಯಕಿ ಮೇಘನಾ ಗಾಂವ್ಕರ್ ಅಂದಿನ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಅಂದಹಾಗೆ 'ಚಾರ್‌ಮಿನಾರ್' ಮೇಲೆ ಮಾತ್ರವಷ್ಟೇ ಅಲ್ಲದೆ ಹ್ಯಾಂಡ್‌ಸಮ್ ಹೀರೋ ಪ್ರೇಮ್ ಮೇಲೂ ಶ್ರೀಧರ್ ರೆಡ್ಡಿ ಅವರ ಕಣ್ಣು ಜೋರಾಗಿಯೇ ಬಿದ್ದಿರುವುದಕ್ಕೆ ಅಲ್ಲಿ ಪುರಾವೆಗಳು ದೊರಕಿದವು. ಪ್ರೇಮ್ ಅವರನ್ನು ನೋಡಿದರೆ ಕಮಲಹಾಸನ್‌ರನ್ನು ನೋಡಿದ ಅನುಭವ ಆಗುತ್ತದೆ. ಅವರು ಪ್ರೇಮ್‌ಹಾಸನ್ ಎಂದು ಹೆಸರು ಬದಲಾಯಿಸಿಕೊಳ್ಳಬಹುದು ಎಂಬ ಸಲಹೆ ನೀಡಿದ ಶ್ರೀಧರ್ ರೆಡ್ಡಿ, ಪ್ರೇಮ್‌ರನ್ನು ತೆಲುಗು ಚಿತ್ರಗಳಲ್ಲಿ ನಾಯಕ ನಟನನ್ನಾಗಿಸುವ ತಮ್ಮ ಆಸೆಯನ್ನೂ ಹೇಳಿಕೊಂಡರು. ಸದ್ಯಕ್ಕೆ ಆರ್. ಚಂದ್ರು, ಪ್ರೇಮ್, ಮೇಘನಾ ಮತ್ತು ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡಿ 'ಚಾರ್‌ಮಿನಾರ್' ಚಿತ್ರದ ಪ್ರಚಾರದ ಕೆಲಸದಲ್ಲಿ ತೊಡಗಿದೆ. ಫೆಬ್ರವರಿ 8ಕ್ಕೆ ಚಂದ್ರು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
- ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


