ಸಿನಿಮಾ ಲೇಖನ

ಕ್ರೇಜಿ ಕರ್ನಲ್

ಕ್ರೇಜಿ ಕರ್ನಲ್
Published On :

'ನಾನು ನಿಜ ಜೀವನದಲ್ಲಿ ಏನೇನೂ ಅಲ್ಲ. ಆದರೆ ನನ್ನ ಜೀವನದ ವಿಶೇಷವೋ, ಕಲಾ ರಂಗದ ಧ್ಯಾನವೋ. ತೆರೆ ಮೇಲೆ ಎಲ್ಲವೂ ಆಗಿಬಿಟ್ಟೆ. ಎಸ್‌ಎಸ್‌ಎಲ್‌ಸಿಯೂ ಓದದ ನಾನು ಡಾಕ್ಟರ್ ಆಗಿ ಬ್ರೈನ್, ಹಾರ್ಟ್ ಅಪರೇಷನ್ ಮಾಡಿದೆ. ಪೊಲೀಸನಾದೆ. ಎಂದೂ ನೇಗಿಲೂ ಹಿಡಿಯದವ ಉಳುಮೆ ಮಾಡಿ ರೈತನಾದೆ.  ಹೈಸ್ಕೂಲ್ ಕೊಠಡಿಯನ್ನೂ ನೋಡದವನು ಮೇಷ್ಟ್ರಾದೆ. ವಕೀಲ, ಸಚಿವ, ಭಿಕ್ಷುಕ, ವಿರೋಧ ಪಕ್ಷದ ನಾಯಕ, ಮೆಕ್ಯಾನಿಕ್... ಅಬ್ಬಾ ಒಂದೆರಡೆ? ಪದವಿ, ಅಧಿಕಾರ, ಅಂತಸ್ತು, ಸ್ಥಾನ-ಮಾನ, ಗೌರವ ಎಲ್ಲದಕ್ಕೂ ಪಾತ್ರನಾದೆ. ಒಬ್ಬ ಮನುಷ್ಯ ಎಷ್ಟು ಬಾರಿ ಸಾಯಲು ಸಾಧ್ಯ? ನಾನು ಅದೆಷ್ಟು ಸಲ ಸತ್ತಿದ್ದೀನೋ ಗೊತ್ತಿಲ್ಲ! ಕಲೆ ಅಂದರೆ ಇದೇ ನೋಡಿ. ನಮ್ಮದಲ್ಲದ ಪಾತ್ರದಲ್ಲಿ ನಾವು ಜೀವಿಸುವುದು (ಅಭಿನಯಿಸುವುದಲ್ಲ) ಎಂದರೆ ಜೀವನದ ಅತ್ಯುತ್ತಮ ಸೌಭಾಗ್ಯ ಅಲ್ಲವೇ? ಅದಕ್ಕೇ ಬಣ್ಣದ ಜಗತ್ತು ಎಂಥವನನ್ನೂ ಸೆಳೆದು ಬಿಡುತ್ತದೆ. ನಾನೂ ಹೊರತಾಗಿರಲಿಲ್ಲ'.
ಒಬ್ಬ ಅಡುಗೆ ಭಟ್ಟನ ಮಗ ಜೇಬಿನಲ್ಲಿ ಹತ್ತು ಪೈಸೆ ಇಲ್ಲದಿದ್ದರೂ ಹತ್ತೂರಿನ ಒಡೆಯನಾದದ್ದು ಚಿತ್ರರಂಗದಲ್ಲಿ. ಹಾಗೆ ತನಗೆ ಎಲ್ಲವನ್ನೂ ಕೊಟ್ಟ ಬಣ್ಣದ ಬದುಕಿನ ನೆನಪಿನಂಗಳಕ್ಕೆ ಜಾರಿದವರು ಹಿರಿಯ ನಟ ರಮೇಶ್ ಭಟ್. ಅದು ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸುವ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮ.
ರತ್ನಾಕರ್ ಭಟ್- ಸುಲೋಚನಾ ದಂಪತಿ ಹಿರಿಯ ಮಗ ರಮೇಶ್ ಭಟ್. ಆರು ತಂಗಿಯರು, ಇಬ್ಬರು ತಮ್ಮಂದಿರು. ಕಡಲತಡಿಯ ಮಂಕಿ ಗ್ರಾಮದವರು. ಹೆತ್ತವರು ಹೊಟ್ಟೆಪಾಡಿಗಾಗಿ ಅಡುಗೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಾಗ ಇವರೂ ರಾಜಧಾನಿಗೆ ಬಂದರು. 70-80ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದ ರಮೇಶ್ ಭಟ್‌ರಿಗೆ ಬಣ್ಣದ ಗೀಳು ಅಂಟಿದ್ದು ಶಾಲಾ ದಿನಗಳಲ್ಲೇ. ರಂಗಭೂಮಿಯಿಂದ ಬೆಳ್ಳಿತೆರೆಗೆ ಹೆಜ್ಜೆ ಹಾಕಿದವರಿಗೆ ವಿದ್ಯೆ ಹತ್ತಲಿಲ್ಲ. ಅಪ್ಪನ ಒತ್ತಾಯಕ್ಕೆ ಬಸವನಗುಡಿಯಲ್ಲಿ ಜ್ಯೋತಿಪ್ರಕಾಶ್ ಸ್ಟೋರ್ಸ್ ಎನ್ನುವ ಬೇಕರಿ ಇಟ್ಟುಕೊಂಡು, ಜತೆಯಲ್ಲೇ  ಬಣ್ಣದ ಲೋಕಕ್ಕೆ ಕಾಲಿಟ್ಟರು.
ಜೀವನ ಪಾಠದ ಜತೆಗೆ ಅಭಿನಯದ ಪಾಠಕ್ಕೂ ಕಿವಿ ಕೊಡುತ್ತಿದ್ದರು. ಹವ್ಯಾಸಿ ರಂಗಭೂಮಿ ಹೊಸ ಕ್ರಾಂತಿಗೆ ನಾಂದಿ ಹಾಡುತ್ತಿದ್ದ ಕಾಲಘಟ್ಟದಲ್ಲಿ ಬಣ್ಣದ ಮೋಹ ಮತ್ತಷ್ಟು ಸೆಳೆಯಿತು. ಅದಕ್ಕೆ ತಕ್ಕಂತೆ ಬಿ.ವಿ.ಕಾರಂತರಂಥ ದಿಗ್ಗಜರ ಸಂಪರ್ಕ.ಚಿತ್ರರಂಗಕ್ಕೆ ಬಂದ ಆರಂಭ ದಿನಗಳಲ್ಲೇ ಶಂಕರ್‌ನಾಗ್ ಒಡನಾಟ.
'ಬೆಂಗಳೂರಿಗೆ ಬಂದಾಗ ನಾನಿನ್ನೂ ಬಾಲಕ. ಗುಟ್ಟಹಳ್ಳಿಯಲ್ಲಿ ಪ್ರೈಮರಿ ಶಾಲೆಗೆ ಸೇರಿಕೊಂಡೆ. ಅಲ್ಲಿ ಬಸಪ್ಪ ಮೇಸ್ಟ್ರು ಶಾಲೆಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೂ  ನನ್ನಿಂದ ವಿವಿಧ ವೇಷ ಹಾಕಿಸೋರು. ಸಣ್ಣಪುಟ್ಟ ಡ್ರಾಮಾಗಳನ್ನು ಮಾಡಿಸುತ್ತಿದ್ದರು. ನಾನು ಬಣ್ಣದ ಮೋಹಕ್ಕೆ ಒಳಗಾಗಲು ಮೊದಲ ಕಾರಣ ಮತ್ತು ಪ್ರೇರಣೆ ಈ ಬಸಪ್ಪ ಮೇಷ್ಟ್ರು. ಮುಂದೆ ರಂಗಭೂಮಿ ಸೆಳೆತ ಹೆಚ್ಚಾಯಿತು. ಅಲ್ಲದೆ ಹವ್ಯಾಸಿ ರಂಗಭೂಮಿ ಹೊಸ ಪ್ರಯೋಗಗಳಿಗೆ ಒಡ್ಡುಕೊಳ್ಳುತ್ತಿದ್ದು. ಪ್ರೇಮಾ ಕಾರಂತರು 'ಹೆಡ್ಡಾಯಣ' ಎನ್ನುವ ಮಕ್ಕಳ ನಾಟಕ ಮಾಡಿಸಿದರು. ಅದರಲ್ಲಿ ನನ್ನದು ಗಿರವಿ ಅಂಗಡಿಯ ಸೇಟು ಪಾತ್ರ. ಇಲ್ಲಿಂದ ರಂಗದ ನಂಟು ಆರಂಭವಾಯಿತು' ಎನ್ನುತ್ತಾರೆ ರಮೇಶ್ ಭಟ್.
 'ಹೆಡ್ಡಾಯಣ'ದಲ್ಲಿ ರಮೇಶ್‌ರ ಪಾತ್ರ ನೋಡಿ ಮೇಕಪ್ ನಾಣಿ ಎನ್. ಲಕ್ಷ್ಮೀನಾರಾಯಣರಿಗೆ ಪರಿಚಯಿಸಿದರು. 'ಅಬಚೂರಿ ಪೋಸ್ಟಾಫೀಸು' ಸಿನಿಮಾದಲ್ಲಿ ಪ್ಲೇಬಾಯ್ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ನಾಣಿ 'ನಿನ್ನ ಪ್ರತಿಭೆ ಸಿನಿಮಾದಲ್ಲಿ ತೋರಿಸುವ' ಎಂದಾಗ 'ನನ್ನಂಥವನಿಗೆ ಅವಕಾಶ ಸಿಗುವುದುಂಟೆ' ಎಂದು ಅನುಮಾನ ಕಾಡಿತಂತೆ. ಆದರೆ, 'ಬಣ್ಣದ ಜಗತ್ತು ಎಂದರೆ ಅನುಮಾನ, ಅವಮಾನ, ನಂತರ ಸನ್ಮಾನ' ಎಂಬ ನಾಣಿಯ ಮಾತು ಧೈರ್ಯ ತುಂಬಿತು. ಬೆನಕ, ನಟರಂಗ, ಸ್ಪಂದನ ಸೇರಿದಂತೆ ಹಲವು ರಂಗ ವೇದಿಕೆಗಳಲ್ಲಿ ಕೆಲಸ ಮಾಡಿರುವ ರಮೇಶ್, ಸತ್ತವರ ನೆರಳು, ಹಯವದನ, ಜೋಕುಮಾರಸ್ವಾಮಿ, ಮಿತ್ರಭೇದ, ಸರ್ವೋತ್ತಮ, ನೋಡಿ ಸ್ವಾಮಿ ನಾವಿರೋದೇ ಹೀಗೆ, ಬ್ಯಾರಿಸ್ಟರ್, ನಾಗಮಂಡಲ ಮುಂತಾದ ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ.
'ಹಯವದನ'ದಲ್ಲಿ ನನ್ನ ಪಾತ್ರವನ್ನು ಅಮೂಲ್ ಪಾಲೇಕರ್ ಹಾಗೂ ಗುರುದತ್ತ್‌ಗೆ ಹೋಲಿಕೆ ಮಾಡಿದ್ದು ನನ್ನ ಅದೃಷ್ಟ. 'ಸೆಪ್ಟೆಂಬರ್ 8' ನಾಟಕದಲ್ಲಿ ಶಿವರಾಮ ಕಾರಂತರೊಂದಿಗೂ ಅಭಿನಯಿಸಿದ್ದು ನನ್ನ ಪುಣ್ಯ. 'ಪರಮೇಶಿ ಪ್ರೇಮ ಪ್ರಸಂಗ' ಚಿತ್ರಕ್ಕೂ ಮುನ್ನ 'ವೇದಾಂತ' ಚಿತ್ರದಲ್ಲೇ ನಾಯಕನಾಗಿದ್ದ ನನ್ನ ಸಿನಿಮಾ ಜೀವನ 1980ರ ಹೊತ್ತಿಗೆ ಪ್ರಾರಂಭವಾಯಿತು' ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ರಮೇಶ್.
 ಬಣ್ಣದ ಜಗತ್ತಿಗೆ ಬಂದ ಮೇಲೆ ನಾಟಕಗಳಲ್ಲಿ ಅಭಿನಯಿಸುತ್ತಲೇ ಬೆಳ್ಳಿತೆರೆಯಲ್ಲಿ 300ರ ಗಡಿ ದಾಟಿರುವ ಅಪರೂಪದ ನಟ ರಮೇಶ್ ಭಟ್. ತಾನು ಮಾಡದಿರುವಂತಹ ಪಾತ್ರ ಇನ್ನೂ ಯಾವುದಾದರೂ ಇದೆಯಾ ಎಂದು ಹುಡುಕುವ ಅವರ  ಬಣ್ಣದ ಪಯಣ ನಟನೆಗಷ್ಟೇ ಸೀಮಿತವಲ್ಲ. ಸಹಾಯಕ ನಿರ್ದೇಶಕ, ಪ್ರೊಡಕ್ಷನ್ ಮ್ಯಾನೇಜರ್, ನಿರ್ದೇಶನ, ನಿರ್ಮಾಣ, ಕಥೆ ಬರೆಯುವುದು ಸೇರಿದಂತೆ ತೆರೆ ಹಿಂದೆಯೂ ಗುರುತಿಸಿಕೊಂಡವರು.
'ಚಿತ್ರರಂಗ ನನಗೆ ಅನ್ನ ಕೊಟ್ಟಿದೆ. ಅಶ್ರಯ ನೀಡಿದೆ. ಆದರೆ ನನ್ನ ಪ್ರೀತಿಯ ಶಂಕರ್‌ನನ್ನು ಮಾತ್ರ ದೂರ ಮಾಡಿತು. ಅವನಿಲ್ಲದ ನನ್ನ ಪಾಡು ಮಿರರ್‌ನಂತೆ. ಬೀಳುವ ಲೈಟ್ ಅನ್ನು ರೀಬೌಂಡ್ ಮಾಡುವುದು. ಆದರೆ ಲೈಟ್ ಬಿಡಬೇಕಾದವನೇ ಇಲ್ಲ. ಹೀಗಾಗಿ ರೀಬೌಂಡಿಂಗ್ ಇಲ್ಲದೆ, ಬರೀ ಬೌಂಡರಿನಲ್ಲಿ ನಿಂತಿದ್ದೇನೆ. ಥರ್ಡ್ ಅಂಪೈರ್ ಔಟ್, ನಾಟ್ ಔಟ್ ಅಂತ ಹೇಳುವವರಿಗೂ ಇಲ್ಲೇ ಇರುತ್ತೇವೆ. ಔಟ್ ಅಂತಾಗ...' ಇಷ್ಟನ್ನು ಹೇಳಿ ಭಾವುಕರಾದರು ರಮೇಶ್ ಭಟ್.

ಕನಸುಗಳ ಪಾದರಸ
ಶಂಕರ್‌ನಾಗ್ ಮುಂಬೈನಿಂದ ಬೆಂಗಳೂರಿಗೆ ಬಂದಾಗ ತನ್ನ ಸಹಾಯಕ್ಕಾಗಿ ಒಬ್ಬರನ್ನು ಹುಡುಕುತ್ತಿದ್ದರು. ಆಗ ಛಾಯಾಗ್ರಾಹಕ ಗೌರಿಶಂಕರ್ 'ರಮೇಶ್ ಭಟ್ ಎಂಬ ಹುಡುಗ ಇದ್ದಾನೆ. ಅವನು ನಿಮ್ಮೊಟ್ಟಿಗೆ ಇರಲು ಸೂಕ್ತ ವ್ಯಕ್ತಿ' ಎಂದು ನನ್ನ ಹೆಸರು ಸೂಚಿಸಿದ್ದಾರೆ. ನಾನು ಆಗ 'ಉಷಾ ಸ್ವಯಂವರ' ಚಿತ್ರೀಕರಣಕ್ಕಾಗಿ ಮೈಸೂರಿಗೆ ಹೋಗಿದ್ದೆ. ಅಲ್ಲಿಗೆ ನನಗೆ ಹೇಳಿ ಕಳುಹಿಸಿದ್ದ ಶಂಕರ್‌ನಾಗ್‌ರನ್ನು ನಾನು ಬೆಂಗಳೂರಿಗೆ ಬಂದು ಮೊದಲು ಭೇಟಿಯಾಗಿದ್ದು ರವಿಂದ್ರ ಕಲಾಕ್ಷೇತ್ರದಲ್ಲಿ. 'ನಾನು ರಮೇಶ್ ಭಟ್‌' ಎಂದು ಪರಿಚಯಿಸಿಕೊಂಡಾಗ 'ನಾನು ನೀನು ಒಂದೇ ವಯಸ್ಸಿನವರು. ನೀನು ನನ್ನ ಸಾರ್ ಅಂತ ಕರೆಯಬೇಡ. ನಾನೂ ನಿನ್ನನ್ನು ನೀವು, ಹೋಗಿ, ಬನ್ನಿ ಅಂತ ಕರೆಯಲ್ಲ. 'ಭಟ್‌' ಎಂದು ಕರೆಯುತ್ತೇನೆ. ನೀವು ನನ್ನ 'ಶಂಕರ್‌' ಅಂದ್ರೆ ಸಾಕು' ಎಂದ ಅವರ ಮಾತಿಗೆ ನಾನು 'ಆಯಿತು' ಎನ್ನುವ ಮುನ್ನವೇ ಅವರದ್ದೇ ಸ್ಟೈಲ್‌ನಲ್ಲಿ ಎರಡೂ ಕೈ ಬೆರಳುಗಳಲ್ಲಿ ಚಿಟಿಕೆ ಹೊಡೆಯುತ್ತಾ ಸರಸರನೇ ಕಲಾ ಕ್ಷೇತ್ರದ ಮೆಟ್ಟಿಲು ಹತ್ತುಬಿಟ್ಟರು. ನಾನು ನಿಬ್ಬೆರಗಾಗಿ ನೋಡುತ್ತಲೇ ಎದುರುಸಿರು ಬಿಡುತ್ತ ಮೆಟ್ಟಿಲು ಹತ್ತಿಕೊಂಡು ಹೋದೆ. 'ಯಾಕೆ ಆಯಾಸ ಆಯಿತೆ' ಎಂದರು. 'ಇಲ್ಲಾ ಸಾರ್‌' ಎಂದೆ. ಹೀಗೆ ಮೊದಲ ಭೇಟಿಯಲ್ಲೇ ಶಂಕರ್‌ನಾಗ್ ವ್ಯಕ್ತಿಯಲ್ಲ, ಅದೊಂದು ಕನಸುಗಳ ಪಾದರಸ ಅಂತ ಅರ್ಥವಾಯಿತು.

-ಆರ್.ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.