ರಾಜ್ ಮೆಚ್ಚಿದ ಮೇಕಪ್

ತೆರೆ ಹಿಂದಿದ್ದವರು ಮುಂದೆ ಬಂದರು
ಮುಂದಿದ್ದವರು ಹಿಂದೆ ಹೋದರು
ಇದು ನಮ್ಮಪ್ಪನ ಜೀವನದಲ್ಲಿ ನಡೆದ ವಿಶಿಷ್ಟ ತಿರುವು. ನಮ್ಮ ತಂದೆ ಚಿತ್ರರಂಗಕ್ಕೆ ಬಂದಿದ್ದು ಮೇಕಪ್ ಕಲಾವಿದರಾಗಿ ಅಲ್ಲ, ನಟನಾಗಿ. ಆಗ ಸುಬ್ಬಯ್ಯ ನಾಯ್ಡು ಕಂಪನಿಯಲ್ಲಿ ನಟರಾಗಿದ್ದರು. ಮಹಾಬಲರಾವ್ ಹಾಗೂ ನಮ್ಮ ತಂದೆ ಪ್ರಸಿದ್ಧ ಹಾಸ್ಯ ಜೋಡಿ. ಆದರೆ ಯಾವುದೋ ಒಂದು ಚಿತ್ರಕ್ಕೆ ನಮ್ಮ ತಂದೆ ಹೋಗದೆ ತಪ್ಪಿಸಿಕೊಂಡರು. ಮಹಬಲರಾವ್‌ರಿಗೆ ಜೋಡಿ ಸಿಗಲಿಲ್ಲ. ಆಗ ಮೇಕಪ್ ಕಲಾವಿದರಾಗಿದ್ದ ಬಾಲಣ್ಣರನ್ನು ನರಸಿಂಹರಾಜು ಅವರಿಗೆ ಜೋಡಿ ಮಾಡಿ ಆ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಕೊಟ್ಟರು. ಇವರಿಬ್ಬರ ಜೋಡಿ ಕ್ಲಿಕ್ ಆಯ್ತು. ತೆರೆಹಿಂದಿನ ಕಲಾವಿದರಾಗಿದ್ದ ಬಾಲಣ್ಣ ತೆರೆ ಮೇಲೆ ತಾರೆಯಾದರು. ತೆರೆ ಮೇಲಿನ ತಾರೆಯಾಗಿದ್ದ ನಮ್ಮ ತಂದೆ ತೆರೆ ಹಿಂದಿಗೆ ಸರಿದರು.
ರಾಯರ ದಕ್ಷಿಣೆ
ಅದು 'ಕರುಳಿನ ಕರೆ' ಚಿತ್ರದ ಚಿತ್ರೀಕರಣದಲ್ಲಿ ನಡೆದ ಘಟನೆ. ನಮ್ಮಪ್ಪನ ಬಳಿ ಒಂದು ಅಪರೂಪದ ಪೋಟೋ ಇತ್ತು. ಅದನ್ನು ತಮಗೆ ಕೊಡುವಂತೆ ಆರ್.ನಾಗೇಂದ್ರರಾಯರು ಕೇಳಿದರು. ಅಪ್ಪ ಕೊಡಲಿಲ್ಲ. ಸಿಟ್ಟು ಮಾಡಿಕೊಂಡ ರಾಯರು, 'ಹೋಗಯ್ಯ ನಿನ್ನ ಮೇಕಪ್ ಬೇಡ. ನನ್ನ ಮೊಮ್ಮಗನ ಬಳಿ ಮೇಕಪ್ ಹಾಕಿಸಿಕೊಳ್ಳುತ್ತೇನೆ' ಎಂದರು. ಮೊಮ್ಮಗ ಎಂದರೆ ನಾನೇ. ಆಗ 'ಕೇಶವ ಬಾರೋ. ನೀನೇ ಇವತ್ತು ನನಗೆ ಮೇಕಪ್ ಮಾಡೋ' ಎಂದುಬಿಟ್ಟರು. ನನಗೆ ಕೈ ನಡುಗುತ್ತಿತ್ತು. 'ಹೆದರಬೇಡ. ನಿಮ್ಮಪ್ಪನಿಗಿಂತ ನೀನು ಚೆನ್ನಾಗಿ ಮೇಕಪ್ ಮಾಡಬೇಕು' ಎಂದಾಗ ನಮ್ಮಪ್ಪ ಕಣ್ಣಲ್ಲಿ ನೀರು ಹಾಕಿಕೊಂಡು, 'ರಾಯರೆ ನನ್ನ ಮಗನಿಗೆ ನಿಮ್ಮಂಥ ಮಹಾನ್ ಕಲಾವಿದರ ಮುಖ ಮುಟ್ಟುವ ಅವಕಾಶ ಕೊಟ್ಟಿದ್ದೀರಿ. ನನಗೆ ಇದಕ್ಕಿಂತ ಬೇರೆ ಭಾಗ್ಯ ಬೇಕಾ' ಎಂದು ಭಾವುಕರಾದರು. ನನ್ನ ಹಿಂದೆಯೇ ನಿಂತು ಅಪ್ಪ ಪ್ರೋತ್ಸಾಹಿಸಿದರು. ನಾನು ನಡುಗುತ್ತಲೇ ಮೇಕಪ್ ಮಾಡಿದೆ. ಎಲ್ಲ ಮುಗಿದ ಮೇಲೆ 'ಪುಟ್ಟ (ಅಂದರೆ ಡಾ.ರಾಜ್‌ಕುಮಾರ್) ಬಾರೋ. ಇಲ್ಲಿ ನೋಡೋ ನನ್ ಮೊಮ್ಮಗ ಕೇಶವ ಎಷ್ಟು ಚೆನ್ನಾಗಿ ಮೇಕಪ್ ಹಾಕಿದ್ದಾನೆ?' ಎಂದು ಹೆಮ್ಮಪಟ್ಟರು. ಜತೆಗೆ ಅಣ್ಣಾವ್ರ ಮುಂದೇನೆ ನನಗೆ 5 ರೂ ದಕ್ಷಿಣೆ ಕೊಟ್ಟು ಬೆನ್ನು ತಟ್ಟಿದರು. ಈ ಘಟನೆಗೆ ಸಾಕ್ಷಿಯಾಗಿದ್ದು ದಯಾನಂದ್ ಸಾಗರ್ ಸ್ಟುಡಿಯೋ.
ರಜನಿಕಾಂತ್ ಕೈ ಮುಗಿದಿದ್ದು
ಇದು ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಘಟನೆ. ಈಗ ದಕ್ಷಿಣ ಭಾರತದ ಸೂಪರ್‌ಸ್ಟಾರ್ ಆಗಿರುವ ರಜನಿಕಾಂತ್ ಮತ್ತು ನಾನು, ಒಂದಿಷ್ಟು ಮಂದಿ ಟೇಬಲ್ ಸ್ನೇಹಿತರು. ಮುಂದೆ ರಜನಿಕಾಂತ್ ನಟರಾದ ಮೇಲೆ ಕೆಲ ವರ್ಷಗಳ ನಂತರ ಅವರ ಚಿತ್ರವೊಂದಕ್ಕೆ ಮೇಕಪ್ ಮಾಡುವ ಅವಕಾಶ ಬಂತು. ಸೆಟ್‌ಗೆ ಹೋದ ಕೂಡಲೇ ರಜನಿಕಾಂತ್ ನನ್ನ ನೋಡಿ ಎದ್ದು ಬಂದು ನನ್ನ ಕೈ ಹಿಡಿದು 'ನಿನ್ನ ಕೈಗಳು ಸಾಮಾನ್ಯವಾದುದ್ದಲ್ಲ. 'ದೇವತಾ ಮನುಷ್ಯ'ರನ್ನು ಮುಟ್ಟಿದ ಕೈ. ಹೀಗಾಗಿ ನೀವು ಕೂಡ ನನ್ನ ಪಾಲಿಗೆ ದೇವರೆ' ಎಂದು ನನ್ನ ಎರಡು ಕೈ ಹಿಡಿದು ತಲೆ ಬಗ್ಗಿಸಿ ನಮಸ್ಕಾರ ಮಾಡಿದ ಮೇಲೆ ನನ್ನಿಂದ ಮೇಕಪ್ ಹಾಕಿಸಿಕೊಂಡರು. ಒಬ್ಬ ದೊಡ್ಡ ಕಲಾವಿದನ ಸರಳತೆ ಮತ್ತು ಪ್ರೀತಿ, ವಿಶ್ವಾಸ ಎಂದರೆ ಇದೇ. ಇಂಥ ಗುಣಗಳನ್ನು ನಾನು ಮತ್ತೆ ಕಂಡಿದ್ದು ರಾಜಣ್ಣ, ಅಮಿತಾಬ್ ಬಚ್ಚನ್ ಅವರಲ್ಲೇ.
ಹಲೋ ರಾಜ್...
ದಾರಿತಪ್ಪಿದ ಮಗ ಚಿತ್ರದಲ್ಲಿ ನಟ ತೂಗದೀಪ ಅವರಿಗೆ ಹೊಸದಾಗಿರುವ ಗೆಟಪ್ ಹಾಕಬೇಕೆಂದು ನಿರ್ದೇಶಕರು ತೀರ್ಮಾನಿಸಿದರು. ಆದರೆ ಅಣ್ಣಾವ್ರು 'ಬೇಡ ಮಾಮೂಲಿ ಗೆಟಪ್ ಸಾಕು' ಎಂದರು. ಆದರೆ ನಾನೇ ಪುಸಲಾಯಿಸಿ ಹೊಸ ಗೆಟಪ್‌ಗೆ ಅನುಮತಿ ಪಡೆದುಕೊಂಡೆ. ಆದರೆ ಯಾವ ಗೆಟಪ್ ಹಾಕಬೇಕೆಂಬ ಚಿಂತೆ ಶುರುವಾಯಿತು. ಆಗ 'ವಿತ್ ಆಫ್ ದಿ ವಿಲ್ಸ್' ಚಿತ್ರ ನೋಡಿದ್ದೆ. ಆ ಚಿತ್ರದಲ್ಲಿ ವಿಲ್ಸ್ ಪಾತ್ರಕ್ಕೆ ಹೇರ್ ಸ್ಟೈಲ್, ಸೈಡ್ ಬಾಂಡ್, ದಾಡಿ ತುಂಬಾ ಪೆಕ್ಯೂಲಿಯರ್ ಆಗಿತ್ತು. ಆ ಗೆಟಪ್ ನನಗೆ ಕಾಡಿತು. ಕೂಡಲೇ ಅದೇ ರೀತಿಯ ವಿಗ್, ಸೈಡ್ ಬಾಂಡ್, ದಾಡಿ ಮಾಡಿ ತೂಗದೀಪರಿಗೆ ಅಂಟಿಸಿದೆ. ಟೈಟ್ ಆಗಿರುವ ಸೂಟು ಬೂಟು ಹಾಕಿ ನಾನು ಮತ್ತು ನಿರ್ದೇಶಕ ಸೋಮಶೇಖರ್ ಅಣ್ಣಾವ್ರ ರೂಮ್‌ಗೆ ಕಳಿಸಿದೆವು. ತೂಗದೀಪ ಅವರು ರಾಜ್ ಬಳಿ ಹೋಗಿ 'ಹಲೋ ಗುಡ್ ಮಾರ್ನಿಂಗ್ ಮ್ಯಾನ್' ಎಂದ ಕೂಡಲೇ ರಾಜ್‌ಕುಮಾರ್ ಯಾರೂ ವಿದೇಶದಿಂದ ಬಂದಿರಬಹುದು ಎಂದುಕೊಂಡು 'ಯಸ್ ಯಸ್ ಗುಡ್ ಮಾರ್ನಿಂಗ್' ಎಂದಿದ್ದೇ ತಡ, 'ಅಣ್ಣ ನಾನಣ್ಣ ತೂಗದೀಪ. ಸುಮ್ಮನೆ ತಮಾಷೆ ಮಾಡಿದೆ' ಎಂದು ತಕ್ಷಣ ಕೈ ಕಟ್ಟಿಕೊಂಡು ನಿಂತುಬಿಟ್ಟರು. ರಾಜ್ ಜೋರಾಗಿ ನಕ್ಕಿ 'ಏನಯ್ಯ ನಿನ್ನ ಮೇಕಪ್ ಮಾಂತ್ರಿಕತೆ' ಎಂದು ಹೊಗಳಿದರು.
ನನ್ನ ಅಳುವಿನ ಹಿಂದೆ...
ನನ್ನ ಬಣ್ಣದ ದಿನಗಳನ್ನು ನೆನಪಿಸಿಕೊಂಡಾಗಲೆಲ್ಲ ಒಂದು ಘಟನೆ ಪದೇ ಪದೇ ಹೇಳುತ್ತಾನೆ. ಆ ಘಟನೆ ಹೇಳಿದಾಗ ಉಕ್ಕಿ ಬರುವ ದುಃಖ ತಡೆಯಲಾರೆ. ನನ್ನ ಮೊದಲ ಮಗಳ ಮದುವೆ ಪತ್ರಿಕೆ ಕೊಡಲು ಅಣ್ಣಾವ್ರ ಮನೆಗೆ ಹೋಗಿದ್ದೆ. ರಾಜಣ್ಣ 'ನಿನಗೆ ಅವಳಿಜವಳಿ ಮಕ್ಕಳಲ್ಲವಾ? ಇಬ್ಬರ ಮದುವೆನೂ ಒಟ್ಟಿಗೆ ಮಾಡೋಣ. ಏನಾದರೂ ಕಷ್ಟ ಇದ್ದರೆ ಹೇಳು. ನಾನು ಜೊತೆ ಸೇರಿಕೊಳ್ಳುತ್ತೇನೆ. ಅವರು ನನ್ನ ಮಕ್ಕಳ ಹಾಗೆ' ಎಂದರು. ಆದರೆ ನಾನು 'ಬೇಡ ಅಣ್ಣ. ಇನ್ನೊಬ್ಬಳ ಮದುವೆ ನಿಧಾನವಾಗಿ ನಾನೇ ಮಾಡುತ್ತೇನೆ' ಎಂದೆ. ಆಗ ರಾಜಣ್ಣ 'ಏನಪ್ಪ 'ನಾನೇ' ಮಾಡುತ್ತೇನೆ ಎಂದಿಯಲ್ಲ. ಹಾಗಾದರೆ ನಾವೆಲ್ಲ ಯಾರು' ಎಂದು ಪ್ರಶ್ನಿಸಿ, 'ಆಯ್ತು. ಎರಡನೆಯವಳ ಮದುವೆ ನಾವೆಲ್ಲ ಸೇರಿ ಮಾಡೋಣ' ಎಂದು ಹೇಳಿದರು. ಇದಾಗಿ ಒಂದೂವರೆ ವರ್ಷಕ್ಕೆ ನನ್ನ ಎರಡನೇ ಮಗಳ ಮದುವೆ ಪತ್ರಿಕೆ ಕೊಡಲು ಹೋದೆ. ಆಗ ರಾಜಣ್ಣ ನಮ್ಮನ್ನು ಅಗಲಿದರು. ಅಮ್ಮನಿಗೆ ಪತ್ರಿಕೆ ಕೊಟ್ಟು ಹೊರ ಬರುವಾಗ 'ನಿಂತುಕೊ ಕೇಶವ' ಎಂದರು. ನಾನು ತಿರುಗಿ ನೋಡಿದೆ. ಅಮ್ಮ ಹತ್ತಿರ ಕರೆದು 'ಏನೋ ಕಷ್ಟದಲ್ಲಿ ಇದ್ದೀಯಾ ಅನ್ನಿಸುತ್ತದೆ. ಒಂದು ಕೆಲಸ ಮಾಡುವ. ಊಟದ ಖರ್ಚು ನಾನೇ ನೋಡಿಕೊಳ್ಳುತ್ತೇನೆ' ಎಂದರಲ್ಲದೆ ಒಂದೂಕಾಲು ಲಕ್ಷ ಹಣ ನನ್ನ ಕೈಗಿಟ್ಟರು. ಅಣ್ಣ ಹೇಳಿದ ಮಾತನ್ನು ಒಂದೂವರೆ ವರ್ಷದ ನಂತರವೂ ಅಮ್ಮ ಮರೆತಿರಲಿಲ್ಲ. ಆ ಕ್ಷಣ ಜೋರಾಗಿ ಅತ್ತುಬಿಟ್ಟೆ. ಈಗಲೂ ಈ ಘಟನೆ ನೆನೆನಪಿಸಿಕೊಂಡರೆ ಅಳು ಬರುತ್ತದೆ.
ಉಳಿದುಕೊಂಡ ಕೊರಗು
ಭಕ್ತ ಕುಂಬಾರ ಚಿತ್ರದಲ್ಲಿ ಜ್ಞಾನದೇವಿಯ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡವರು ಈಗಿನ ಪ್ರಸಿದ್ಧ ನಟಿ ಶ್ರೀದೇವಿ. ಆಗ ಶ್ರೀದೇವಿ ಅವರ ತಾಯಿ ನನ್ನ ಬಳಿ ಬಂದು 'ನನ್ನ ಮಗಳಿಗೆ ನೀವೇ ಮೇಕಪ್ ಮಾಡಿ' ಅಂತ ಕೇಳಿದರು. ಆದರೆ ನಾನು ಬೇರೆ ಕಲಾವಿದರಿಗೆ ಮೇಕಪ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರಿಂದ ಶ್ರೀದೇವಿಗೆ ಮೇಕಪ್ ಮಾಡಲು ಆಗದೆ ಬೇರೆಯವರನ್ನು ಕಳುಹಿಸಿಕೊಟ್ಟೆ. ಆಕೆ ಮುಂದೆ ಸ್ಟಾರ್ ನಟಿಯಾಗಿಬಿಟ್ಟರು. ಈಗಲೂ ಟಿವಿಗಳಲ್ಲಿ, ಯಾವುದಾದರೂ ಚಿತ್ರದಲ್ಲಿ ಆಕೆಯನ್ನು ನೋಡಿದಾಗ ಇಷ್ಟು ದೊಡ್ಡ ಕಲಾವಿದೆಗೆ ಮೇಕಪ್ ಮಾಡದೇ ಹೋದನಲ್ಲ... ಎನ್ನುವ ಕೊರಗು ಆಗಾಗ ಕಾಡುತ್ತದೆ.
-ಕೇಶವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


