ಸಿನಿಮಾ ಲೇಖನ

ಮದರಂಗಿಯ ಪಂಚರಂಗಿ ಹಾಡು

ಮದರಂಗಿಯ ಪಂಚರಂಗಿ ಹಾಡು
Published On :

'ಗೋವಿಂದಾಯ ನಮಃ' ಚಿತ್ರದ ಉರ್ದು ಮಿಶ್ರಿತ ಹಾಡು ನೋಡಿ ಜನ 'ಪ್ಯಾರ್‌ಗೇ ಆಗ್‌ಬುಟ್ಟೈತೆ' ಎಂದಿದ್ದರು. ಈಗ  ಉರ್ದು ಬದಲು ಬಟ್ಲರ್ ಇಂಗ್ಲಿಷ್ ಹಾಡು ಕೇಳುವ ಅವಕಾಶ ಕೊಟ್ಟಿದ್ದಾರೆ ಸಂಗೀತ ನಿರ್ದೇಶಕ ಅನೂಪ್ ಸೀಳಿನ್.
 ಅನೂಪ್ ಸಂಗೀತ ನೀಡಿರುವ 'ಮದರಂಗಿ' ಚಿತ್ರದ ಹಾಡು ಇದು. 'ಡಾರ್ಲಿಂಗ್ ಡಾರ್ಲಿಂಗ್ ಕಮ್ ಕಮ್ ಡಾರ್ಲಿಂಗ್, ವಿ ಗೋ ಜಾಲಿರೈಡು' ಎನ್ನುವ ಈ ಹಾಡು ಸದ್ಯಕ್ಕೆ ಭಾರೀ ಸುದ್ದಿ ಮಾಡುತ್ತಿದೆ. 'ಒಮ್ಮೆ ಕೇಳಿದರೆ ಮತ್ತೊಮ್ಮೆ, ಮತ್ತೊಮ್ಮೆ ಕೇಳಿದರೆ ಮಗದೊಮ್ಮೆ, ಮಗದೊಮ್ಮೆ ಕೇಳಿದರೆ ಹಲವಾರು ಬಾರಿ ಕೇಳಲೇಬೇಕೆನಿಸುವ' ಎನ್ನುವಂಥ ಕೆಟಗರಿಗೆ ಸೇರಿದ ಹಾಡು ಇದು. 80ರ ದಶಕದ ಡಿಸ್ಕೋ ಶೈಲಿ ಬಳಸಿ ಕೇಳುಗರು ಗಿಟಾರ್‌ನಾದದ ಅಲೆಯಲ್ಲಿ ತೇಲುವಂತೆ ಮಾಡಿದ್ದಾರೆ ಅನೂಪ್. ಹಾಡಿನ ಆರಂಭದಲ್ಲಿ ಬರುವ ಮ್ಯೂಸಿಕ್ ಬಿಟ್‌ನಿಂದ ಹಾಡು ಒಂದೇ ಕ್ಷಣದಲ್ಲಿ ಟೇಕಾಫ್ ಆಗುತ್ತದೆ.
ಕೊಂಚ ಮಡಿವಂತಿಕೆ ಬಿಟ್ಟರೆ, ಡಾ. ನಾಗೇಂದ್ರಪ್ರಸಾದ್ ಬರೆದಿರುವ ಹಾಡಿನ ಸಾಹಿತ್ಯದಲ್ಲೂ ಕಚಗುಳಿ ಇದೆ. ಹಾಗಾಗಿ, ಪೊರ್ಕಿ ಸಾಹಿತ್ಯ ಎಂದು ಮೂಗುಮುರಿಯದೆ ಇದ್ದರೆ ಕಿವಿ ತುಂಬಿಸಿಕೊಳ್ಳಲು ಅಡ್ಡಿಯಿಲ್ಲ. ಹಾಗಂತ ಇದು ಬರೀ ಸಂಗೀತ, ಸಾಹಿತ್ಯದ ಮೋಡಿ ಅಲ್ಲ, ಕೇವಲ ಕೇಳೋದಷ್ಟೆ ಅಲ್ಲ, ನೋಡಿ ಸ್ವಾಮಿ ಎನ್ನುವಂಥ ಗುಣವೂ ಈ ಹಾಡಿಗಿದೆ ಎಂದರೆ ಅದಕ್ಕೆ ಕಾರಣ ಹಾಡಿನ ಚಿತ್ರೀಕರಣ. ನಾಯಕ, ನಾಯಕಿಯರ ಕಾಸ್ಟ್ಯೂಮ್ ಮತ್ತು ಮುರಳಿ ಅವರ ನೃತ್ಯ ನಿರ್ದೇಶನ. ಇತ್ತೀಚೆಗೆ ಹಲವು ವಿಭಿನ್ನ ಹಾಡುಗಳ ನೃತ್ಯ ನಿರ್ದೇಶನದಿಂದ ಗಮನ ಸೆಳೆದಿರುವ ಮುರಳಿ ಅವರ ಲೇಟೆಸ್ಟ್ ಗಾನ ಇದು. ಜೊತೆಗೆ, ನಾಯಕ ಕೃಷ್ಣ ಅವರ ಡ್ಯಾನ್ಸಿಂಗ್ ಸ್ಕಿಲ್, ನಾಯಕಿ ಸುಷ್ಮಾ ಅವರ ಹಾವಭಾವ ಕೂಡ ಮಜವಾಗಿದೆ.
ಹಾಡಿನ ಮತ್ತೊಂದು ವಿಶೇಷ ಎಂದರೆ ಅನೂಪ್ ಸೀಳಿನ್ ಮತ್ತು ವಾರಿಜಾಶ್ರೀ ಅವರ ಕಂಠ. 'ಡಾರ್ಲಿಂಗ್ ಡಾರ್ಲಿಂಗ್‌' ಹಾಡು ಹುಟ್ಟಿದ ಬಗ್ಗೆ ಅನೂಪ್ 'ಇಂಥದೊಂದು ಬಟ್ಲರ್ ಇಂಗ್ಲಿಷ್ ಹಾಡು ಮಾಡಬೇಕು ಎಂದು ಬಹಳ ದಿನಗಳಿಂದ ಅಂದುಕೊಂಡಿದ್ದೆ. ಹಾಡಿನ ಮೊದಲ ಸಾಲಿನ ಸಾಹಿತ್ಯವನ್ನು ಬರೆದಿಟ್ಟುಕೊಂಡು ಕಾದಿದ್ದೆ. ಆದರೆ ಅದನ್ನು ಬಳಸಿಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ. ಹಾಡಿನ ಮೊದಲ ಸಾಲಲ್ಲಿ 'ವಿ ಗೋ ಜಾಲಿ ರೈಡು' ಎಂಬ ಸಾಲಿದೆ. 'ಮದರಂಗಿ' ಚಿತ್ರದ ನಾಯಕನದ್ದು ಡ್ರೈವರ್ ಪಾತ್ರ. ಹಾಗಾಗಿ ಇಲ್ಲಿ ನನ್ನ ಹಾಡು ಬಳಕೆಯಾಯ್ತು' ಎನ್ನುತ್ತಾರೆ. ಆನಂತರ ಹಾಡಿನ ಉಳಿದ ಸಾಹಿತ್ಯದ ವಿಶಯ ಬಂದಾಗ 'ನಾಯಕ ಬಟ್ಲರ್ ಇಂಗ್ಲಿಷ್ ಮಾತಾಡಲಿ, ನಾನು ನಾಯಕಿಯ ಬಾಯಲ್ಲಿ ಮಂಡ್ಯ ಭಾಷೆ ಮಾತಾಡಿಸುತ್ತೇನೆ' ಎಂದರಂತೆ ನಾಗೇಂದ್ರ ಪ್ರಸಾದ್. ಅವೆರಡೂ ಸೇರಿ ಈಗ ಯಾರೂ ಮಾತಾಡಂಗಿಲ್ಲ ಎನ್ನುವಂಥ 'ಡಾರ್ಲಿಂಗ್ ಡಾರ್ಲಿಂಗ್‌' ಹಾಡು ಸಿದ್ಧವಾಗಿದೆ.  ಸದ್ಯಕ್ಕೆ ಈ ಹಾಡಿನ ಸಣ್ಣ ತುಣುಕು ಯೂ ಟ್ಯೂಬ್‌ನಲ್ಲಿ ಲಭ್ಯವಿದೆ. ಪೂರ್ತಿ ಹಾಡು ಇನ್ನೊಂದು ವಾರದಲ್ಲಿ ಸಿದ್ಧವಾಗಲಿದೆಯಂತೆ.
'ಗೂಳಿ', 'ಪ್ರೀತ್ಸೆ ಪ್ರೀತ್ಸೆ', 'ಯಕ್ಷ', 'ಎದ್ದೇಳು ಮಂಜುನಾಥ', 'ಸಿದ್ಲಿಂಗು', 'ಐ ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರದ ವಿಭಿನ್ನ ಹಾಡುಗಳ ಮೂಲಕ ಗಮನಸೆಳೆದಿದ್ದ ಅನೂಪ್ ಈಗ 'ಮದರಂಗಿ' ಮೂಲಕ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಸುದ್ದಿ ಮಾಡಲು ಅವರ 'ಪರಾರಿ', 'ಡೈರೆಕ್ಟರ್ ಸ್ಪೆಷಲ್‌', 'ಬಿ3', 'ನೀರ್‌ದೋಸೆ'ಗಳು ಕಾಯುತ್ತಿವೆ.
- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.