ಬೇಕಿತ್ತಾ ಬೇಕಿತ್ತಾ

ಒಬ್ಬ ಸಿನಿಮಾ ನಿರ್ದೇಶಕ ನಟಿಯೊಬ್ಬಳಿಗೆ ಫೋನ್ ಮಾಡಿ, 'ನನ್ನ ಮುಂದಿನ ಸಿನಿಮಾಕ್ಕೆ ನಿನ್ನನ್ನೇ ನಾಯಕಿಯಾಗಿ ಆಯ್ಕೆ ಮಾಡಿದ್ದೇನೆ. ಇಂಥ ಲಾಡ್ಜ್‌ಗೆ ಬಾ ನಿನ್ನ ಜೊತೆ ಮಾತನಾಡಬೇಕು' ಎಂದು ಕರೆಯುತ್ತಾನೆ. ಅದಕ್ಕೆ ಈ ನಟಿ 'ಲಾಡ್ಜ್‌ಗೆ ಬರೋಕಾಗಲ್ಲ, ನೀವು ಬಂದು ನಮ್ಮ ಮನೆಯಲ್ಲಿ ನನ್ನ ಪೋಷಕರ ಜೊತೆಯಲ್ಲಿ ಮಾತನಾಡಿ' ಎಂದರೆ ಕಾಲ್ ಕಟ್. ಆ ನಂತರ ಆ ನಿರ್ದೇಶಕನ ಅಸಿಸ್ಟೆಂಟ್ ಒಬ್ಬ ನಟಿಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, 'ಏನೇ, ನಮ್ಮ ಸ್ಟಾರ್ ಡೈರೆಕ್ಟರ್ರು, ನಿಮ್ಮ ಮನೆಗೆ ಬಂದು ಮಾತನಾಡಬೇಕಾ? ನೀನೇನ್ ಐಶ್ವರ್ಯಾ ರೈ ಅಂದ್ಕೊಂಡಿದ್ದೀಯಾ, ನಮ್ ಸಿನಿಮಾದಿಂದ ನೀನು ರೈಯಾ' ಎನ್ನುತ್ತಾನೆ. ಈ ನಾಯಕಿ ಅದನ್ನು ಇನ್ನೊಬ್ಬರ ಬಳಿ ಅತ್ತುಕೊಂಡು ಹೇಳುತ್ತಾಳೆಯೇ ವಿನಃ ಆ ನಿರ್ದೇಶಕರ ವಿರುದ್ಧ ಚಕಾರ ಎತ್ತುವುದಿಲ್ಲ. ಅದೇ ನಾಯಕಿಗೆ ಇನ್ನೊಬ್ಬ ಹೆಸರು ಮಾಡಿದ ನಿರ್ದೇಶಕರು, ಕರೆದು ತಮ್ಮ ಚಿತ್ರದಲ್ಲಿ ಅವಕಾಶ ಕೊಡುತ್ತಾರೆ. ಈಕೆ ದೊಡ್ಡ ಸ್ಟಾರ್ ಅಲ್ಲದಿದ್ದರೂ ಈಕೆಯ ಹೆಸರಿನ ಮುಂದೆ 'ಮೇಡಮ್' ಎಂದು ಸೇರಿಸಿಯೇ, ಕರೆಯುತ್ತಾರೆ. ಶೂಟಿಂಗ್ ಜಾಗದಲ್ಲಿ ತನ್ನ ಅಕ್ಕ ತಂಗಿಗೆ ಕೊಟ್ಟಷ್ಟೇ ಮರ್ಯಾದೆ ಕೊಡುತ್ತಾರೆ. ನಾಯಕಿಗೆ ಸ್ಟಾರ್ ಹೊಟೇಲ್‌ನಲ್ಲಿ ರೂಮು ಹಾಕಿಕೊಟ್ಟು, ಒಬ್ಬಳೇ ಇರುವಾಗ ಆಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾವಹಿಸುತ್ತಾರೆ. ಇವರು ಹಾಕಿಕೊಟ್ಟ ರೂಮ್‌ಗೆ ಆಕೆಯ ಬಾಯ್‌ಪ್ರೆಂಡ್ ಬಂದು ಇದ್ದು ಹೋದರೂ ಇವರು ಸುಮ್ಮನಿರುತ್ತಾರೆ. ಆದರೆ ಇಂಥ ನಿರ್ದೇಶಕರ ವಿರುದ್ಧ ಈ ನಟಿ ತಗಾದೆ ತೆಗೆಯುತ್ತಾಳೆ. ಪಾಪ ಆ ನಿರ್ದೇಶಕ 'ಬೇಕಿತ್ತಾ ಇದು ಬ ೇಕಿತ್ತಾ' ಎಂದುಕೊಳ್ಳುತ್ತಾ 'ಏನ್ ಹುಡ್ಗೀರೋ ಇದ್ಯಾಕಿಂಗ್ ಆಡ್ತಾರೋ' ಎಂದು ತಲೆಮೇಲೆ ಕೈ ಹೊತ್ತು ಕೂರುತ್ತಾನೆ.
ಹಳೆ ರೆಕಾರ್ಡ್
ಹಾಡು: ಹೇಳಲಾರೆನು, ತಾಳಲಾರೆನು
ಚಿತ್ರ: ಬೆಂಕಿ ಬಿರುಗಾಳಿ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಎಂ. ರಂಗರಾವ್
ಗಾಯಕರು: ಜೇಸುದಾಸ್, ವಾಣಿ ಜಯರಾಂ
ಹೇಳಲಾರೆನು, ತಾಳಲಾರೆನು
ನನ್ನ ಮನಸಿನ ಭಾವನೆ
ನಾನು ನಿನ್ನನು ನೀನು ನನ್ನನು
ಮೆಚ್ಚಿ ಪ್ರೀತಿಯ ಕಾಮನೆ
ಎಂ, ರಂಗರಾವ್ ಸಂಗೀತದ ಈ ಹಾಡು ಆರಂಭದಲ್ಲಿ ಜೇಸುದಾಸ್ ವಾಣಿ ಜಯರಾಂ ಅವರ ಕಂಠದಲ್ಲಿ ಹೆಚ್ಚು ಕಮ್ಮಿ ಯಾವುದೋ ಮ್ಯೂಸಿಕಲ್ ಇನ್ಟ್ರ್ಸುಮೆಂಟ್‌ನಂತೇ ಕೇಳಿಸುತ್ತದೆ ಎನಿಸಿದರೂ ದೊಡ್ಡರಂಗೇಗೌಡರ ಸಾಹಿತ್ಯ ಮೆಲ್ಲ ಮೆಲ್ಲನೆ ಗರಿಗೆದರುತ್ತದೆ. ಸ್ವರ್ಗ ಲೋಕ ಇಲ್ಲೇ ತೇಲಿ ಒಲಿದ ಜೀವ ಹಾಡಿದೆ ಎನ್ನುತ್ತಾ ಕೇಳುಗರನ್ನೂ ಹಾಡಿಸುತ್ತಾರೆ ಗೌಡರು. ಡ್ಯುಯೆಟ್ ಹಾಡುಗಳಲ್ಲಿನ ಅದ್ಭುತ ಜೋಡಿಗಳಲ್ಲಿ ಒಂದಾದ ಜೇಸುದಾಸ್ ಮತ್ತು ವಾಣಿಜಯರಾಂ ಹಾಡಿರುವ ಈ ಹಾಡು ಹೇಳುವಂಥದೂ ಅಲ್ಲ, ತಾಳುವಂಥದ್ದೂ ಅಲ್ಲ ಕೇವಲ ಕೇಳುವಂಥದ್ದು.
ಹೊಸ ರೆಕಾರ್ಡ್
ಹಾಡು: ಅತಿ ಆತುರ ನಿನ್ನನು ನೋಡಲು
ಚಿತ್ರ: ಅಲೆ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮನೋಮೂರ್ತಿ
ಗಾಯಕರು: ಸೋನು ನಿಗಮ್
ಅತಿ ಆತುರ ನಿನ್ನನು ನೋಡಲು
ಅತಿ ಕಾತರ ಎಲ್ಲವಾ ಹೇಳಲು
ಅತಿ ಸಂತಸ ಸುಮ್ಮನೇ ಸೋಲಲು
ಅತಿ ಸಂಕಟ ದೂರವೇ ನಿಲ್ಲಲೂ
'ಅಲೆ' ಚಿತ್ರದ ಹಾಡುಗಳು ಈ ವರ್ಷದ ಹಿಟ್ ಹಾಡುಗಳ ಪಟ್ಟಿಯಲ್ಲಿ ದೊಡ್ಡ ಹೆಸರು ಮಾಡಿದರೆ ಆಶ್ಚರ್ಯವಿಲ್ಲ. ಹಾಗಾಗಿ ಈ ವಾರದ ಹೊಸ ರೆಕಾರ್ಡ್‌ನಲ್ಲೂ ಮತ್ತೆ ಅಲೆಯ ಸದ್ದು. ಈ ಬಾರಿ ಸದ್ದು ಮಾಡುತ್ತಿರುವವರು ಮಳೆ ಕವಿ ಜಯಂತ್ ಕಾಯ್ಕಿಣಿ. ಕಾಯ್ಕಿಣಿ ಅವರ ಸಾಹಿತ್ಯಕ್ಕೆ ಮನೋಮೂರ್ತಿ ಸಂಗೀತ ಸೇರಿದರೆ ಏನಾಗುತ್ತದೆ? ಇನ್ನೇನಾಗುತ್ತದೆ? ಹಾಡು ಹಿಟ್ ಆಗುತ್ತದೆ ಎಂಬುದೇ ಇದಕ್ಕೆ ಸರಳ ಉತ್ತರ. 'ಅತಿ ಕಾತುರ ನಿನ್ನನು ನೋಡಲು' ಎಂಬ ಈ ಹಾಡೂ ಕೂಡಾ ಈ ನಂಬಿಕೆಗೆ ಮೋಸ ಮಾಡುವುದಿಲ್ಲ. ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ 'ಅತಿ ಕಾತರ ಈ ಹಾಡನ್ನು ಕೇಳಲು'.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


