ಸಿನಿಮಾ ಲೇಖನ

ಈ ಪ್ರೇಮ್ ಸಂಭಾಷಣೆ

ಈ ಪ್ರೇಮ್ ಸಂಭಾಷಣೆ
Published On :

ಚಂದ್ರು ಚಿತ್ರದ ಬಳಿಕ ಚಂದ್ರ ನಿರೀಕ್ಷೆ
ಅತ್ತ 'ಚಾರ್‌ಮಿನಾರ್‌'ನ ನಿರ್ದೇಶಕ ಚಂದ್ರು, ಸಂಕಷ್ಟದಲ್ಲಿರುವ ಚಿತ್ರಸಾಹಿತಿ ಕುಣಿಗಲ್ ನಾಗಭೂಷಣ್‌ರಿಗೆ ಒಂದು ಲಕ್ಷ ರುಪಾಯಿ ಕೊಟ್ಟ ಧನ್ಯತಾಭಾವದಲ್ಲಿದ್ದರೆ ಇತ್ತ ನಟ ನೆನಪಿರಲಿ ಪ್ರೇಮ್ ಬಹುದಿನಗಳ ನಿರೀಕ್ಷಿತ ಬ್ರೇಕ್ ಪಡೆದುಕೊಂಡು ನಿರಾಳತೆ ಅನುಭವಿಸುತ್ತಿದ್ದಾರೆ. ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆ, ತೆಲುಗು ರಿಮೇಕ್‌ನಲ್ಲಿ ನಾಗಚೈತನ್ಯ ಅಭಿನಯಿಸುತ್ತಿದ್ದಾರೆ ಎಂಬ ಖುಷಿ ಚಂದ್ರು ಅವರದ್ದಾದರೆ 'ಚಾರ್‌ಮಿನಾರ್‌' ಚಿತ್ರದ ತಮ್ಮ ನಟನೆಗೆ ಕೇಳಿಬರುತ್ತಿರುವ ಹೃದಯಸ್ಪರ್ಶಿ ಪ್ರತಿಕ್ರಿಯೆಗಳಿಂದ ಮನಸ್ಸು ತುಂಬಿಬಂದಿದೆ ಎನ್ನುವ ಪ್ರೇಮ್ ಮುಂಬರಲಿರುವ 'ಚಂದ್ರ' ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಶತ್ರುವಿನಲ್ಲಿ ಪೊಲೀಸ್ ಆಗಿರುವ ಅವರು ಹೊಸ ಚಿತ್ರಗಳ ಆಯ್ಕೆಯ ಬಗ್ಗೆ ಚ್ಯೂಸಿಯಾಗುತ್ತೇನೆ ಎನ್ನುತ್ತಾರೆ. ಗಾಂಧಿನಗರದಲ್ಲಿ ಮತ್ತೆ ಪ್ರೇಮ್ ಕಾಲ ಶುರುವಾಗಿರುವ ಬಗ್ಗೆ ಥ್ರಿಲ್ ಆಗಿದ್ದಾರೆ ಅವರು. ಒಂಥರಾ ನನಗೆ ಇದು ಸೆಕೆಂಡ್ ಇನ್ನಿಂಗ್ಸ್‌ನಂತೆ ಭಾಸವಾಗುತ್ತಿದೆ ಎನ್ನುವ ಲವ್ಲಿಸ್ಟಾರ್ ಪ್ರೇಮ್ ಜೊತೆಜೊತೆಯಲಿ ಒಂದು ಮಾತುಕತೆ.

ಬಹಳ ದಿನಗಳ ನಂತರ ನಿಮಗೊಂದು ಸಕ್ಸಸ್ ಸಿಕ್ಕಿದೆ. ಹೇಗನ್ನಿಸ್ತಿದೆ?
    ಒಂದು ಯಶಸ್ಸು ನೋಡಿ ಸುಮಾರು ವರ್ಷ ಆಗಿತ್ತು. ಎಲ್ಲರ ನಿರೀಕ್ಷೆಯನ್ನು ತಲುಪಿದ್ದೇನೆ ಎಂಬ ಖುಷಿ ಇದೆ. ಜೊತೆಗೆ ಈ ಬಾರಿ ಸಿಕ್ಕ ಯಶಸ್ಸನ್ನು ಹಿಂದಿನಂತೆ ಹಾಳು ಮಾಡಿಕೊಳ್ಳುವುದಿಲ್ಲ ಎಂಬ ಭರವಸೆಯೂ ಇದೆ. ಇನ್ನು ಮುಂದೆ ಮುಲಾಜಿಗೆ ಬಿದ್ದು ಸಿನಿಮಾಗಳನ್ನೂ ಒಪ್ಪಿಕೊಳ್ಳದೆ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತೇನೆ.

    'ಮತ್ತೆ ಬನ್ನಿ ಪ್ರೀತ್ಸೋಣ'ದಲ್ಲಿ ಜನ ಗುರುತಿಸಲಿಲ್ಲ ಅನ್ನೋ ಬೇಜಾರಲ್ಲಿದ್ರಿ, 'ಚಾರ್‌ಮಿನಾರ್‌' ಆ ನೋವು ನೀಗಿಸಿದೆಯಾ?
    ನನ್ನ ಸೋಲಿಗೆ ಪ್ರೇಕ್ಷಕರನ್ನು ದೂರಲು ಇಷ್ಟ ಪಡೊಲ್ಲ. ಸೋಲಿಗೆ ಬೇರೆ ಬೇರೆ ಕಾರಣಗಳಿರುತ್ತವೆ. ಈಗ ಅದೆಲ್ಲಾ ಹಳೆಯದು. ಸಕ್ಸಸ್ ಸಿಕ್ಕಿದೆ, ಅದನ್ನು ಎಂಜಾಯ್ ಮಾಡುತ್ತಿದ್ದೇನೆ.
    ವೃತ್ತಿಜೀವನದಲ್ಲಿ ನಿಮಗೆ ಪ್ರಮುಖ ಸಿನಿಮಾಗಳ್ಯಾವು? ಚಾರ್‌ಮಿನಾರ್‌ಗೆ ಅಲ್ಲಿ ಯಾವ ಸ್ಥಾನ ಇದೆ?
    ಚಿತ್ರರಂಗದಲ್ಲಿ ನನಗೆ ಜೀವ ಕೊಟ್ಟ ಚಿತ್ರ 'ಪ್ರಾಣ'. 'ನೆನಪಿರಲಿ', ನನಗೆ ಸಿಕ್ಕ ಮೊದಲ ಗೆಲುವು. ಅಲ್ಲಿಯವರೆಗಿನ ನನ್ನ ಎಲ್ಲ ಶ್ರಮ, ನೋವು, ಸಂಕಟಗಳಿಗೆ ಸಾಂತ್ವನ ಹೇಳಿದ ಚಿತ್ರ ಅದು. 25 ವಾರ ಓಡಿದ 'ಜೊತೆ ಜೊತೆಯಲಿ' ನನಗೆ 'ಲವ್ಲೀ ಸ್ಟಾರ್‌' ಪಟ್ಟ ತಂದುಕೊಟ್ಟ ಚಿತ್ರ. 'ಪಲ್ಲಕ್ಕಿ' ಹೊಸ ರೀತಿಯ ಅಭಿಮಾನಿಗಳನ್ನು ಸೃಷ್ಟಿಸಿದ ಚಿತ್ರ. ಈಗ 'ಚಾರ್‌ಮಿನಾರ್‌' ಅತಿದೊಡ್ಡ ಸಕ್ಸಸ್ ಎನ್ನುವಂತೆ ಸೂಪರ್‌ಹಿಟ್ ಆಗುವ ದಾರಿಯಲ್ಲಿದೆ.
    ಚಂದ್ರು ಜೊತೆಗಿನ ಮೊದಲ ಚಿತ್ರದ ಅನುಭವ ಹೇಗಿತ್ತು?
    ಒಂದು ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ ಎಂಬುದು ಪ್ರೂವ್ ಆಗಿದೆ. ನನಗೆ ಇಂಥ ಪಾತ್ರ ಕೊಟ್ಟ ಚಂದ್ರು ಅವರಿಗೆ ಋಣಿ. ಎಲ್ಲರೂ, ಇದು ನಿಮಗೆ ಹೇಳಿಮಾಡಿಸಿದಂಥ ಪಾತ್ರ ಎನ್ನುತ್ತಿದ್ದಾರೆ. ಆದರೆ, ಹೇಳಿ, ಮಾಡಿಸಿದ್ದು ಚಂದ್ರು.
    ರೂಪಾ ಅಯ್ಯರ್ ಅವರ 'ಚಂದ್ರ' ಚಿತ್ರ, ಮತ್ತೆ 'ಚಂದ್ರು ಚಿತ್ರ' ಎರಡನ್ನೂ ಹೇಗೆ ಒಟ್ಟಿಗೇ ಮ್ಯಾನೇಜ್ ಮಾಡಿದ್ರಿ? ಮಧ್ಯೆ ಸ್ವಲ್ಪ ಕಿರಿಕಿರಿ ಆಯ್ತು ಅಲ್ವಾ?
    ಹೌದು. ಆಯ್ತು. ಆದರೆ ಇಬ್ಬರನ್ನೂ ಕನ್‌ವಿನ್ಸ್ ಮಾಡಿಸಿ ಬ್ಯಾಲೆನ್ಸ್ ಮಾಡಿದೆ. ಜೊತೆಗೆ ಎರಡು ಚಿತ್ರಗಳಿಗೆ ಬೇರೆ ಬೇರೆ ಬಗೆಯ ಫಿಟ್‌ನೆಸ್ ಬೇಕಿತ್ತು. ಎರಡೂ ಪಾತ್ರಗಳಿಗೆ ಹೊಂದಾಣಿಕೆಯಾಗುವ ದೃಶ್ಯಗಳಲ್ಲಿ ಅಭಿನಯಿಸುತ್ತ, ಶೆಡ್ಯೂಲ್‌ಗಳ ನಡುವೆಯೇ ಡಯೆಟ್ ಮಾಡುತ್ತ ಬಾಡಿ ಫಿಟ್‌ನೆಸ್ ಕಾಯ್ದುಕೊಂಡೆ. ಈಗ ಆ ಎಲ್ಲ ಶ್ರಮ ಫಲ ಕೊಟ್ಟಿದೆ.

    ಮುಂದೆ ಇರೋ ಚಿತ್ರಗಳು? ಶತ್ರು, ಲೋಕಲ್ ವೆಂಕಟೇಶ?
    ಲೋಕಲ್ ವೆಂಕಟೇಶ ಚಿತ್ರವನ್ನು ಡ್ರಾಪ್ ಮಾಡಿದ್ದೇನೆ. ಶತ್ರುಗಾಗಿ ಕಾದಿದ್ದೇನೆ. ಅಲ್ಲೂ ತುಂಬ ವಿಭಿನ್ನ ಪ್ರೇಮ್ ಕಾಣಿಸುತ್ತಾರೆ ನಿಮಗೆ. ಅದರ ಹೊರತಾಗಿ ಸದ್ಯಕ್ಕೆ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಈ ಬಾರಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ತೀರ್ಮಾನಿಸಿದ್ದೇನೆ ಅಂಥ ಹೇಳಿದೆನಲ್ಲಾ?

    ತುಂಬಾ ಒಳ್ಳೆಯ ಹುಡುಗ ಅನ್ನೋ ಇಮೇಜ್ ಇದೆ, ಅಂಥಾದ್ರಲ್ಲಿ 'ಕೆಟ್ಟವನು' ಚಿತ್ರದ ಇಮೇಜ್ ನಿಮಗೆ ಒಪ್ಪುತ್ತಾ?
    ನಿಜಕ್ಕೂ ಚಾರ್‌ಮಿನಾರ್‌ನ ನಂತರ ನನಗೆ ಅಂಥದೊಂದು ಗೊಂದಲ ಶುರುವಾಗಿದೆ. ಅದರಲ್ಲೂ ಚಿತ್ರದ ಕ್ಲೈಮ್ಯಾಕ್ಸ್ ನೋಡಿ ಪ್ರೇಕ್ಷಕರು ನನಗೆ ಸಂಭಾವಿತ ಹೀರೋನ ಇಮೇಜ್ ಕೊಟ್ಟಿದ್ದಾರೆ. ಹಾಗಾಗಿ, ಈಗ ನೆಗೆಟಿವ್ ಪಾತ್ರದ ಬಗ್ಗೆ ಜಿಜ್ಞಾಸೆ ಇದೆ.

    ನೆನಪಿರಲಿ ಪ್ರೇಮ್‌ಗೆ ಆಗಾಗ ಮರೆತುಹೋಗುವಂಥ ವಿಷಯ ಯಾವುದು?
    ಯಾರ ಮೇಲೆ ಯಾವ ಕಾರಣಕ್ಕೆ ಸಿಟ್ಟು ಬಂದರೂ ಅದು ಹೆಚ್ಚು ದಿನ ನೆನಪಿರೊಲ್ಲ. ಮುಂದಿನ ಬಾರಿ ಅವರು ಸಿಕ್ಕಾಗ ನನಗೆ ಸಿಟ್ಟು ಮಾಡಿಕೊಂಡಿದ್ದು ಮರೆತೇ ಹೋಗಿರುತ್ತೆ ನನಗೆ. ಬಹುಶಃ ನನಗೆ ಅದು ದೇವರು ಕೊಟ್ಟ ವರ ಇರಬಹುದು.

    ಪ್ರೇಮ್ ಯಾಕೆ ಕಾಮಿಡಿ ಸಿನಿಮಾ ಮಾಡಬಾರದು?
    ಚಾರ್‌ಮಿನಾರ್‌ನಲ್ಲಿ ಒಂದಿಷ್ಟು ಪ್ರಯತ್ನ ಮಾಡಿದ್ದೇನೆ. ಆದರೆ, ಖಂಡಿತಾ ಒಂದು ಪೂರ್ಣಪ್ರಮಾಣದ ಹಾಸ್ಯಚಿತ್ರ ಮಾಡುವ ಆಸೆ ಇದೆ. ಕಥೆ, ನಿರ್ದೇಶಕರು ಸಿಗಬೇಕಷ್ಟೆ.

    ನಿಮ್ಮ ಕನಸಿನ ಸಿನಿಮಾ ಯಾವುದು?
    ಒಂದು ಪೌರಾಣಿಕ ಚಿತ್ರ ಮಾಡುವ ಇರಾದೆಯಿದೆ. ಸದ್ಯಕ್ಕೆ ಚಂದ್ರ ಚಿತ್ರದಲ್ಲಿ ಅದು ಭಾಗಶಃ ಈಡೇರಿದೆ.
-ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.