ಹೊಸ ಗೊಂಬೆ

ಗಳಿಕೆ ದೃಷ್ಟಿಯಿಂದ 'ಗೊಂಬೆಗಳ ಲವ್' ಬಾಕ್ಸ್ ಆಫೀಸ್ ಅನ್ನೇನೂ ಚಿಂದಿ ಉಡಾಯಿಸುತ್ತಿಲ್ಲ. ಆದರೆ ಪ್ರೇಕ್ಷಕರ ಎದೆಯಲ್ಲಿ ಮಾತ್ರ ಅದು ಮುಗ್ಧ ಮಗುವಿನಂತೆ ಪವಡಿಸಿದೆ. ಅಲ್ಲಿಗೆ ಒಬ್ಬ ಹೊಸ ತಲೆಮಾರಿನ ನಿರ್ದೇಶಕ ಮತ್ತು ಆತನ ಚಿತ್ರಕ್ಕೆ ಹಾಗೂ ಪಾತ್ರಧಾರಿಗಳಿಗೆ ಸಿಗಬೇಕಾದ ಗೆಲವು ಸಿಕ್ಕಂತೆ.
ಕಳೆದ ವಾರ ಪ್ರೇಕ್ಷಕರಿಗೆ ಎರಡು ಅಪರೂಪದ ಚಿತ್ರಗಳನ್ನು ನೋಡಿದ ಅನುಭವ. ಒಂದು ಹಳ್ಳಿಯಿಂದ ಹೊರಟು ಹಾರ್ಟ್‌ಗೆ ಇಳಿಯುವ 'ಚಾರ್‌ಮಿನಾರ್', ಮತ್ತೊಂದು ಕನಸು ಮತ್ತು ಭಾವನೆಗಳ ನಡುವೆ ಪಯಣಿಸುವ 'ಗೊಂಬೆಗಳ ಲವ್'. ನಿರ್ದೇಶಕ ಸಂತೋಷ್‌ಗೆ ಇದು ಮೊದಲ ಸಿನಿಮಾ. ಆದರೆ ಚಿತ್ರ ನೋಡಿದ ಪ್ರೇಕ್ಷಕರಿಗೆ 'ಇವರು ಅನುಭವಸ್ಥರು' ಎಂಬ ಭಾವ. ಮನಮಿಡಿಯುವ ಚಿತ್ರವೊಂದನ್ನು ತೆರೆ ಮೇಲೆ ಕಟ್ಟಿಕೊಟ್ಟಿರುವ ನಿರ್ದೇಶಕ ಸಂತೋಷ್ ಮುಖದಲ್ಲಿ ಈಗ ಧನ್ಯತೆಯ ಭಾವ.
ಹೊಸತನಕ್ಕೆ ನೂರಕ್ಕೆ ನೂರರಷ್ಟು 'ಗೊಂಬೆಗಳ ಲವ್' ಸಾಕ್ಷಿಯಾಗಿ ನಿಲ್ಲುತ್ತದೆ. ಆದರೆ ಇಂಥದೊಂದು ಅಪರೂದ ಕಥೆ ಇಟ್ಟುಕೊಂಡಿದ್ದ ಸಂತೋಷ್‌ಗೆ ಅಷ್ಟು ಸುಲಭದಲ್ಲಿ ನಿರ್ಮಾಪಕರು ಸಿಗಲಿಲ್ಲ ಎಂಬುದು ಸತ್ಯ. ಹೀಗಾಗಿ 2011ರಿಂದ ಕಥೆಯನ್ನು ಕೈಯಲ್ಲಿ ಹಿಡಿದು ಕಂಡ ಕಂಡ ನಿರ್ಮಾಪಕರ ಮನೆ ಬಾಗಿಲು ತಟ್ಟಿದ್ದಾರೆ. ಕಥೆ ಕೇಳಿದ ಮೇಲೆ ಕೆಲವರು 'ನಾಯಕನ್ನು ಬದಲಾಯಿಸಿ' ಎಂದರೆ ಮತ್ತೆ ಕೆಲವರು 'ಅಯ್ಯೋ ಕಥೆ ಚೆನ್ನಾಗಿಲ್ಲ. ಒಂದಿಷ್ಟು ಬದಲಾವಣೆ ಮಾಡಲು ಸಾಧ್ಯವೇನೋ ನೋಡಿ' ಎಂಬ 'ಉಚಿತ' ಸಲಹೆ ನೀಡಿದ್ದಾರೆ. ಇಂಥವರೇ ಹೆಚ್ಚು. ಈ ನಡುವೆ 'ನಾನೇ ನಿನ್ನ ಸಿನಿಮಾ ನಿರ್ಮಾಣ ಮಾಡುತ್ತೇನೆ' ಎಂದು ಮುಂದೆ ಬಂದ ನಿರ್ಮಾಪಕರೊಬ್ಬರು ಎಲ್ಲವೂ ಸಿದ್ಧವಾಗಿದ್ದಾಗ ಇದ್ದಕ್ಕಿದ್ದಂತೆ ಕೈ ಬಿಟ್ಟರು.
'ಕನ್ನಡದಲ್ಲಿ ಇಂಥ ಕಥೆಗಳನ್ನು ಒಪ್ಪುವ ನಿರ್ಮಾಪಕರಿಲ್ಲ' ಎಂದುಕೊಂಡು ತಮಿಳಿನ ಪ್ರಸಿದ್ಧ ನಿರ್ದೇಶಕ ಅಮೀರ್ ಬ್ಯಾನರ್‌ಗಾಗಿ ಸಿನಿಮಾ ಮಾಡಲು ಹೊರಟ ಸಂತೋಷ್‌ಗೆ ಮತ್ತೆ ಅದೇ ನಿರಾಸೆ. 'ಕಥೆ ಚೆನ್ನಾಗಿದೆ. ಆದರೆ ಸಮಯ ಕೊಡಿ ನೋಡೋಣ' ಎಂದರಂತೆ ಅಮೀರ್. ಹೀಗಾಗಿ ಬೆಂಗಳೂರಿಗೆ ವಾಪಸಾದ ಸಂತೋಷ್ ತನ್ನ ಸ್ನೇಹಿತರಾದ ಅಜಯ್ ರಾಜ್ ಅರಸ್, ಅರುಣಾ ದತೆ ಸೇರಿ 'ಗೊಂಬೆಗಳ ಲವ್' ಶುರು ಮಾಡಿಯೇಬಿಟ್ಟರು. ಅದೀಗ ಪ್ರೇಕ್ಷಕರ ಮುಂದಿದೆ.
ಚಿತ್ರ ಹಾಗೂ ತಮ್ಮ ಹಿನ್ನೆಲೆ, ಸಿನಿಮಾ ಕನಸಿನ ಬಗ್ಗೆ ಸಂತೋಷ್ ಇಲ್ಲಿ ಮಾತನಾಡಿದ್ದಾರೆ.
ಚಿತ್ರದ ಕಥೆ ಹೊಳೆದದ್ದು ಹೇಗೆ? ಇದು ನೈಜ ಘಟನೆಯೋ, ಕಲ್ಪನೆಯೋ?
ಚಿತ್ರದ ಮೊದಲರ್ಧದ ಪ್ರೇಮ ಕಥೆ ಸಿದ್ಧಮಾಡಿಟ್ಟುಕೊಂಡಿದ್ದೆ. ಸೆಂಕೆಡ್ ಹಾಫ್ ಹೇಗಿರಬೇಕೆಂದು ಯೋಚಿಸುತ್ತಿದ್ದಾಗ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದು ಗಮನ ಸೆಳೆಯಿತು. ಅಲ್ಲಿ ಒಬ್ಬ ಅಂಗವಿಕಲ ತಾಯಿಗೆ ಮಗನನ್ನು ಸಾಕಲು ಆಗದೇ ದಯವಿಟ್ಟು ಯಾರಾದರೂ ತೆಗೆದುಕೊಂಡು ಸಾಕಿ ಎಂದು ಅಂಗಲಾಚುವ ದೃಶ್ಯ. ಮಗನನ್ನೇ ನಿರಾಕರಿಸುತ್ತಿದ್ದ ಆಕೆಯ ಅಸಹಾಯಕತೆ ನೋಡಿ ಕಣ್ಣೀರು ಬಂತು. ಅಂಗವಿಕಲ ಮಕ್ಕಳು ಏಕೆ ಬೇಡ ಎನ್ನುವ ಪ್ರಶ್ನೆಯಲ್ಲೇ ಚಿತ್ರದ ಸೆಕೆಂಡ್ ಹಾಫ್ ಹುಟ್ಟಿಕೊಂಡಿತು. ಹೀಗಾಗಿ ಇದು ಕಲ್ಪನೆಯೂ ಹೌದು, ವಾಸ್ತವ ಕೂಡ.
ಆಗ ಕಥೆ ಚೆನ್ನಾಗಿಲ್ಲ ಎಂದವರು ಈಗ ಏನನ್ನುತ್ತಿದ್ದಾರೆ?
ಕೆಲವರು ಬಂದು ಅಪ್ಪಿಕೊಂಡು 'ಒಳ್ಳೆಯ ಸಿನಿಮಾ ಕೊಟ್ಟಿದ್ದೀಯಾ ಕಣೋ' ಎನ್ನುತ್ತಿದ್ದಾರೆ. ಕಥೆ ಕೇಳಿ ಬೇಡ ಎಂದವರು, ನಿನ್ನ ಕನಸಿನ ಚಿತ್ರಕ್ಕೆ ನೀನೇ ಸಾಟಿ ಎನ್ನುತ್ತಿದ್ದಾರೆ. ಇವರೆಲ್ಲರಿಗಿಂತ ಚಿತ್ರಮಂದಿರದಲ್ಲಿ ಪ್ರೇಕ್ಷರು ಕಣ್ಣೀರು ಹಾಕಿದ್ದನ್ನು ನೋಡಿದ್ದೇನೆ. ಚಪ್ಪಾಳೆ ತಟ್ಟಿದ್ದಾರೆ. ಸಿನಿಮಾ ಮುಗಿದ ಮೇಲೆ ಮೌನವಾಗಿ ಎದ್ದು ಹೋಗಿದ್ದಾರೆ. ಅಷ್ಟರ ಮಟ್ಟಿಗೆ ನನ್ನ ಸಿನಿಮಾ ಪ್ರೇಕ್ಷಕರ ಮನಸ್ಸು ಮುಟ್ಟಿದೆ.
ಚಿತ್ರದ ಫಸ್ಟ್ ಹಾಫ್‌ನಲ್ಲಿ ಲಾಜಿಕ್ ಹುಡುಕುವವರಿಗೆ ನಿಮ್ಮ ಸ್ಪಷ್ಟನೆ?
ಕನಸು ಕಾಣುವ ಚಿತ್ರದ ನಾಯಕ, ನಾಯಕಿ ಹೊರಗಿನ ಪ್ರಪಂಚವನ್ನೇ ನೋಡದವರು.
ಇದ್ದ ಒಬ್ಬ ತಾಯಿಯನ್ನೂ ಕಳೆದುಕೊಂಡು ಹಸಿವನ್ನೂ ಮರೆತು ಸಾವಿಗಾಗಿ ಕಾಯುತ್ತಿರುವಾಗ ಕನಸು ಕಾಣುತ್ತಾರೆ. ಬದುಕಲೇ ಆಗದಿದ್ದವರು ಕನಸು ಕಾಣುವುದು ಇದೆಯಲ್ಲ, ಅದೇ ದೊಡ್ಡದು. ಯಾವ ವಸ್ತುವನ್ನೂ ನೋಡಿಲ್ಲ, ಯಾರನ್ನೂ ಕಂಡಿಲ್ಲ, ಊರು, ಕೇರಿ, ಪಟ್ಟಣ ಯಾವುದೂ ಅವರಿಗೆ ಗೊತ್ತಿಲ್ಲ. ಅಂಥವರು ಲವ್ ಮಾಡುತ್ತಾರೆ. ಅದೂ ಕನಸಿನಲ್ಲಿ. ಅದರಲ್ಲಿ ಲಾಜಿಕ್ ಹುಡುಕಲು ಆಗುತ್ತದೆಯೇ?
ಚಿತ್ರತಂಡದ ಕುರಿತು ಹೇಳಿ?
ನಟಿ ಶ್ರುತಿ, ನಟ ಅಚ್ಯುತ್ ಕುಮಾರ್, ರಾಮಕೃಷ್ಣ ಇವರ ಹೊರತಾಗಿ ಎಲ್ಲರು ಹೊಸಬರು. ನಾಯಕ ಅರುಣ್, ನಿರ್ಮಾಪಕ ಅಜಯ್ ರಾಜ್ ಅರಸ್ ನನ್ನ ಕಾಲೇಜಿನ ಸ್ನೇಹಿತರು. ಚಿತ್ರಕ್ಕೆ ಸಹಾಯಕರಾಗಿ ದುಡಿದವರೆಲ್ಲ ನನ್ನ ಗೆಳೆಯರು. ನಾಯಕಿ ಪಾವನಿಗೂ ಮೊದಲ ಚಿತ್ರ. ಎಲ್ಲರೂ ಶಕ್ತಿಮೀರಿ ಕೆಲಸ ಮಾಡಿದ್ದರಿಂದಲೇ ಸಿನಿಮಾ ಈ ಮಟ್ಟಕ್ಕೆ ಬರಲು ಕಾರಣ.
ನಿಮ್ಮ ಚಿತ್ರಕ್ಕೆ ಉದ್ಯಮದ ಪ್ರತಿಕ್ರಿಯೆ ಏನು?
ಇಡೀ ಉದ್ಯಮ ಬಂದು ಸಿನಿಮಾ ನೋಡುವುದೂ, ಬಿಡುವುದು ಅವರವರಿಗೆ ಬಿಟ್ಟ ವಿಚಾರ. ಆದರೆ ಹೊಸ ಕನಸಿನ ಹುಡುಗರು ಇಂಥ ಸಿನಿಮಾ ಮಾಡಿದಾಗ ಚಿತ್ರಮಂದಿರ ಕೊಡಿಸುವುದು, ಪ್ರಚಾರಕ್ಕೆ ಸಹಾಯ ಮಾಡುವುದು ಇತ್ಯಾದಿ ಸಣ್ಣ ಪುಟ್ಟ ಸಹಾಯ ಮಾಡಬಹುದಿತ್ತು. ತಮಿಳಿನಲ್ಲಿ ಯಾರೋ ಹೊಸಬರು ಸೇರಿ ಸಿನಿಮಾ ಮಾಡಿದಾಗ ಇಡೀ ಉದ್ಯಮ ನೋಡುತ್ತದೆ (ಉದಾ: ರೇಣಿಗುಂಟ ಚಿತ್ರ). ನಮಗೆ ಅಷ್ಟು ದೊಡ್ಡ ಸಹಾಯ ಬೇಡ. ಸಿನಿಮಾ ಬಿಡುಗಡೆಯಾದ ಮೇಲೆ ಚಿತ್ರಮಂದಿರಗಳಲ್ಲಿ ಇರಲು ಅವಕಾಶ ಕೊಡಿ ಸಾಕು.
ನಿಮ್ಮ ಚಿತ್ರವನ್ನು ನೀವೇ ವ್ಯಾಖ್ಯಾನ ಮಾಡುವುದಾದರೆ?
ಜತ್ತನ್ನೇ ನೋಡದವರ ಕನಸು ಮತ್ತು ಭಾವನೆಗಳ ನಡುವೆ ಪಯಣಿಸುತ್ತಲೇ ಮನುಷ್ಯತ್ವವನ್ನು ಕೂಗಿ ಹೇಳುವ ಬದುಕು ನನ್ನ 'ಗೊಂಬೆಗಳ ಲವ್'.
ಮುಂದಿನ ಸಿನಿಮಾ ನಿರ್ದೇಶನ, ಕನಸು, ಪಯಣ...?
ಇನ್ನೊಂದು ಒಳ್ಳೆಯ ಸಿನಿಮಾ ಮಾಡುವ ಆಸೆ ಇದೆ. ನನಗೆ ಅದೇ ಡ್ಯೂಯೆಟ್, ಫೈಟ್, ಲಾಂಗು, ಮಚ್ಚಿನ ಸಿನಿಮಾ ಮಾಡುವುದು ಆಗಲ್ಲ. ಅಂಥ ಸಿನಿಮಾಗಳು ಈಗಾಗಲೇ ಬರುತ್ತಿವೆ. ನಾನು ಕೂಡ ಯಾಕೆ ಅದೇ ಸಿನಿಮಾ ಮಾಡಬೇಕು? ಖಂಡಿತ ಒಳ್ಳೆಯ ಸಿನಿಮಾ ಮಾಡುತ್ತೇನೆ.
'ಬುರುಡೆ ಭವಿಷ್ಯ'
ಸಂತೋಷ್ ಮೂಲತಃ ಬೆಂಗಳೂರಿನವರು. ಹುಟ್ಟಿ, ಬೆಳೆದಿದ್ದು ಇಲ್ಲೇ. ಬಸವನಗುಡಿಯ ಎಟಿಎನ್‌ಸಿ ಕಾಲೇಜಿನಲ್ಲಿ ದ್ದಾಗಲೇ ಸಿನಿಮಾ ಹುಚ್ಚು ಹತ್ತಿಸಿಕೊಂಡವರು. ಸಂಗೀತ ನಿರ್ದೇಶಕ ವಿ.ಮನೋಹರ್ 'ಬುರುಡೆ ಭವಿಷ್ಯ' ಧಾರಾವಾಹಿ ಮಾಡುತ್ತಿದ್ದಾಗ ಅವರೊಂದಿಗೆ ಕೆಲ ಕಾಲ ಇದ್ದರು. 'ಇಂತಿ ನಿನ್ನ ಪ್ರೀತಿಯ' ಚಿತ್ರ ಮಾಡುವಾಗ ನಿರ್ದೇಶಕ ಸೂರಿ ಜೊತೆ ಕೆಲಸ ಮಾಡಿ, ಅನಾಮಿಕನಾಗಿ ಕೆಲ ಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಆಗಲೇ ಬೇರೊಂದು ರೀತಿಯ ಸಿನಿಮಾ ಮಾಡುವ ಯೋಚನೆ ಹುಟ್ಟಿಕೊಂಡದ್ದಂತೆ.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


