ಸಿನಿಮಾ ಲೇಖನ

ಭಟ್ಟರ ಹಳೆ ಬಾಕಿ

ನಿರ್ದೇಶಕ ಯೋಗರಾಜ್ ಭಟ್ಟರು ಋಣ ಸಂದಾಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರ ಮೊದಲ ಫಲಾನುಭವಿಗಳು...

ಭಟ್ಟರ ಹಳೆ ಬಾಕಿ
ನಿರ್ಮಾಪಕ ಹಾಗು ನಟ ಕರಿಸುಬ್ಬು
Published On :

ನಿರ್ದೇಶಕ ಯೋಗರಾಜ್ ಭಟ್ಟರು ಋಣ ಸಂದಾಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರ ಮೊದಲ ಫಲಾನುಭವಿಗಳು ಇಬ್ಬರು. ನಿರ್ಮಾಪಕ ಕಂ ನಟ ಕರಿಸುಬ್ಬು ಹಾಗೂ ವಿತರಕ ಕಂ ನಿರ್ಮಾಪಕ ಎನ್.ಕುಮಾರ್. 'ಮಣಿ' ಚಿತ್ರದಿಂದ ನಷ್ಟ ಅನುಭವಿಸಿದ ಕರಿಸುಬ್ಬು, 'ರಂಗ ಎಸ್‌ಎಸ್‌ಎಲ್‌ಸಿ' ಚಿತ್ರದಲ್ಲಿ ಕೈ ಸುಟ್ಟುಕೊಂಡ ಎನ್.ಕುಮಾರ್‌ಗಾಗಿ ಒಂದು ಚಿತ್ರ ಮಾಡಿಕೊಡುವುದಾಗಿ ಸ್ವತಃ ಭಟ್ಟರೇ ಮುಂದೆ ಬಂದಿದ್ದಾರೆ. ನಿರ್ಮಾಪಕರಿಬ್ಬರು 'ಜಾಯಿಂಟ್‌' ಆಗಿ ಯಸ್ ಎಂದಿದ್ದಾರೆ.

ಚಿತ್ರದ ಹೆಸರು, ನಾಯಕ, ಕಥೆ ಯಾವುದೂ ಅಂತಿಮಗೊಂಡಿಲ್ಲ. ಆದರೆ ಹಳೆ ಬಾಕಿಗೆ ಹೊಸ ಲೆಕ್ಕದ ಮೂಲಕ ಕೃತಜ್ಞತೆ ಸಲ್ಲಿಸಲು ಭಟ್ಟರು ತುದಿಗಾಲ ಮೇಲೆ ನಿಂತಿರುವುದನ್ನು ನೋಡಿ ಕರಿಸುಬ್ಬು ಫುಲ್ ಖುಷಿಯಾಗಿದ್ದಾರೆ. 'ಮಣಿ' ನಂತರ ನಿರ್ಮಾಣದ ಹೆಸರೆತ್ತಿದರೆ ಸಾಕು ಕನಸಿನಲ್ಲೂ ಬೆಚ್ಚಿ ಬೀಳುತ್ತಿದ್ದ ಕರಿಸುಬ್ಬು ಅವರನ್ನು ಸೋಲಿನ ಕಹಿ ಅನುಭವಗಳು ಹಿಂಬಾಲಿಸಿದ್ದವು. ಹೀಗಾಗಿ ಅವರು ಸ್ವತಂತ್ರ ನಿರ್ಮಾಣಕ್ಕೆ ಮುಂದಾಗುತ್ತಿರಲಿಲ್ಲ. ಆದರೆ 'ನಮಗೆ ಒಂದಷ್ಟು ಸಹಾಯ ಮಾಡಿ' ಎಂದು ಮನೆ ಬಾಗಿಲು ತಟ್ಟುವವರನ್ನು ಬರೀ ಕೈಯಲ್ಲಿ ಕಳಿಸಿದವರಲ್ಲ. ಕೆಲ ಹಂತದಲ್ಲಿ ಆ ಚಿತ್ರಕ್ಕೆ ಮೇನ್ ಪಿಲ್ಲರ್ ಆಗಿಯೂ ನಿಂತುಕೊಳ್ಳುತ್ತಿದ್ದರು.
ನಿರ್ಮಾಣದಿಂದ ಹಿಂದೆ ಸರಿದ ಮೇಲೆ ತಮ್ಮದೇ ಬಾಲಾಜಿ ಸ್ಟುಡಿಯೋ ನೋಡಿಕೊಳ್ಳುವ ಜೊತೆಗೆ ಅಭಿನಯದತ್ತ ಮುಖ ಮಾಡಿದ್ದರು.

ನಲವತ್ತು ವರ್ಷಗಳ ಹಿಂದೆ 'ಪರಿವರ್ತನೆ' ಎನ್ನುವ ಚಿತ್ರಕ್ಕೆ ಬಣ್ಣ ಹಚ್ಚಿದ್ದ ಕರಿಸುಬ್ಬು, ಇಲ್ಲಿವರೆಗೂ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹತ್ತಾರು ನಾಟಕಗಳಲ್ಲಿ ಅಭಿನಯಿಸಿ, 'ಬೆನಕ'ದಂಥ ರಂಗಭೂಮಿ ಹಿನ್ನೆಲೆಯಿಂದ ಬಂದರೂ ಕರಿಸುಬ್ಬು ಅವರನ್ನು ಚಿತ್ರರಂಗ ಒಬ್ಬ ಕಲಾವಿದ ಅಂತ ಗುರುತಿಸಲು ಮೂವತ್ತು ವರ್ಷ ಬೇಕಾಯಿತು. ಅದು ಕೂಡ ಇತ್ತೀಚೆಗೆ ಬಿಡುಗಡೆಯಾದ 'ದಂಡುಪಾಳ್ಯ' ಹಾಗೂ 'ವಿಷ್ಣುವರ್ಧನ' ಚಿತ್ರಗಳ ನಂತರ. ಇದೀಗ ಹಲವು ವರ್ಷಗಳ ನಂತರ ಮತ್ತೆ ನಿರ್ಮಾಣಕ್ಕಿಳಿದಿರುವ ಕರಿಸುಬ್ಬು ಮಾತಿಗಳಿದರು.
'ನನ್ನ ಮತ್ತು ಯೋಗರಾಜ ಭಟ್ಟರದ್ದು ಹಲವು ವರ್ಷಗಳ ಸ್ನೇಹ. 'ಸಾಧನೆ' ಧಾರಾವಾಹಿಯಲ್ಲಿ ಪರಿಚಯ. ಅಲ್ಲಿಂದ 3 ವರ್ಷ ಅವರು ನಿರ್ದೇಶಕರಾಗಿ, ನಾನು ನಟನಾಗಿದ್ದೆ. ಒಂದು ದಿನ ಇದ್ದಕ್ಕಿದ್ದ ಹಾಗೆ ಬಂದು 'ಒಂದು ಸಿನಿಮಾ ನಿರ್ಮಾಣ ಮಾಡಿ' ಎಂದಾಗ ಇಲ್ಲ ಅಂತ ಹೇಳಲು ಆಗಲಿಲ್ಲ. 'ಮಣಿ' ಆರಂಭವಾಯಿತು. ಚಿತ್ರ ಆರ್ಥಿಕವಾಗಿ ಸೋತಿರಬಹುದು. ಆದರೆ ಈಗಲೂ ಅದು ನನಗೆ ಒಳ್ಳೆಯ ಚಿತ್ರ. ಆದರೂ ಸೋಲಿನ ಅನುಭವ ಮುಂದೆ ನಿರ್ಮಾಪಕನಾಗಲು ನನ್ನನ್ನು ಬಿಡಲಿಲ್ಲ. ಎರಡು ದಿನಗಳ ಹಿಂದಷ್ಟೆ ಭಟ್ಟರೇ ಪೋನ್ ಮಾಡಿ 'ನಿಮಗಾಗಿ ಒಂದು ಸಿನಿಮಾ ಮಾಡಿಕೊಡುತ್ತೇನೆ. ಅವಕಾಶ ಕೊಟ್ಟು ನಿರ್ದೇಶಕನನ್ನಾಗಿಸಿದ್ದು ನೀವೆ. ಬನ್ನಿ ಮತ್ತೆ ಸಿನಿಮಾ ಮಾಡೋಣ' ಎಂದರು. ನಾನು ಆಯ್ತು ಎಂದೆ. ಜೊತೆಗೆ ಎನ್.ಕುಮಾರ್ ಕೂಡ ಸೇರಿಕೊಂಡರು' ವಿವರಿಸುತ್ತಾರೆ ಕರಿಸುಬ್ಬು.

ಸದ್ಯ ಶುಭದಿನಗಳು ಆರಂಭಗೊಂಡಂತಾಗಿದೆ ಎನ್ನುವ ಕರಿಸುಬ್ಬು, ಇಂಥದ್ದೇ ರೀತಿ ಸಿನಿಮಾ ಮಾಡಬೇಕೆಂದು ಭಟ್ಟರಿಗೆ ಹೇಳಿಲ್ಲವಂತೆ. ಎಲ್ಲವನ್ನೂ ಅವರಿಗೇ ಬಿಟ್ಟಿದ್ದಾರೆ. ಭಟ್ಟರು ಮೊದಲಿನಂತಲ್ಲ. ಈಗ ಅವರಿಗೂ ಒಂದು ಮಾರುಕಟ್ಟೆ ಇದೆ. ಜನಪ್ರಿಯ ನಿರ್ದೇಶಕರು. ಹೀಗಾಗಿ ಅವರು ಯಾವ ಕಥೆ ಮಾಡಿದರೂ ತಾವು ನಿರ್ಮಾಣಕ್ಕೆ ಸಿದ್ಧ ಎನ್ನುವುದು ಕರಿಸುಬ್ಬರ ಅಭಿಪ್ರಾಯ. ಅಂದಹಾಗೆ 'ದಂಡುಪಾಳ್ಯ'ದ ನಂತರ ಗಾಂಧಿನಗರದಲ್ಲಿ ಸುಣ್ಣ, ಬಣ್ಣ ಬಳಿದುಕೊಂಡ ಹೊಸ ಮನೆಯಂತೆ ಕರಿಸುಬ್ಬು ಕಾಣುತ್ತಿದ್ದಾರೆ. ಹೊಸಬರ ಚಿತ್ರಗಳಲ್ಲಿ ಅಭಿನಯಿಸುದ್ದಾರೆ. ನಿರ್ಮಾಣ, ಅಭಿನಯ, ಸ್ಟುಡಿಯೋ... ಸುಬ್ಬಣ್ಣ ಈಗ ಬ್ಯುಸಿ.

- ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.