ಚಾರ್ ಮುಚಾಯೇ ಶೋರ್
ಹೆಸರು ಮಾಡಿದ ನಿರ್ದೇಶಕರ ಸಿನಿಮಾಗಳು ಸೋಲುತ್ತಿರುವ ಟ್ರೆಂಡ್ನಲ್ಲಿ ನಿರ್ದೇಶಕ ಆರ್.ಚಂದ್ರು ಗೆದ್ದು, ಸದ್ದು ಮಾಡಿದ್ದಾರೆ....

ಹೆಸರು ಮಾಡಿದ ನಿರ್ದೇಶಕರ ಸಿನಿಮಾಗಳು ಸೋಲುತ್ತಿರುವ ಟ್ರೆಂಡ್ನಲ್ಲಿ ನಿರ್ದೇಶಕ ಆರ್.ಚಂದ್ರು ಗೆದ್ದು, ಸದ್ದು ಮಾಡಿದ್ದಾರೆ. ನಿರ್ದೇಶಕರಾಗಿ ಚಂದ್ರು ಹೊಸ ಎತ್ತರಕ್ಕೇರಿದರೆ, ನಾಯಕ ನೆನಪಿರಲಿ ಪ್ರೇಮ್ ತಣ್ಣಗೆ ಕೂತು ಯಶಸ್ಸಿನ ನಗೆ ಬೀರುತ್ತಿದ್ದಾರೆ.
'ಚಾರ್ಮಿನಾರ್' ಚಿತ್ರದ ಮೂಲಕ ಪ್ರೇಮ್ಗೂ ಮರುಹುಟ್ಟು ಸಿಕ್ಕಂತಾಗಿದೆ. 'ಹ್ಯಾಂಡ್ಸಮ್' ಹೀರೋಗೆ 'ಹ್ಯಾಂಡ್ಫುಲ್' ಅವಕಾಶಗಳೇನೂ ಸಿಗುತ್ತಿದ್ದವು. ಆದರೆ ಅವರ ಚಿತ್ರಗಳು 'ಹೌಸ್ಫುಲ್' ಆಗಿದ್ದು ಕಡಿಮೆಯೇ. 'ಕೈ' ಕೆಸರಾದರೂ ಬಾಯಿ ಮೊಸರಾಗಿದ್ದು ಅಪರೂಪವೇ. ನೆನಪಿರಲಿ ಪ್ರೇಮ್ಗೆ ನೆನಪಿಟ್ಟುಕೊಳ್ಳುವಂಥ ಪಾತ್ರಗಳೇನೋ ಸಿಗುತ್ತಿದ್ದವು. ಆದರೆ ನೆನಪಿಟ್ಟುಕೊಳ್ಳುವಂಥ ಯಶಸ್ಸು ಸಿಕ್ಕು ಬಹಳ ದಿನಗಳಾಗಿದ್ದವು. ಆದರೀಗ ಎಲ್ಲ ಬದಲಾದಂತಿದೆ. ಅವರ 'ಚಾರ್ಮಿನಾರ್' ಚಿತ್ರಕ್ಕೆ ಸಿಕ್ಕಿರುವ ಆರಂಭದ ಯಶಸ್ಸು ನೋಡಿದರೆ ಈ ಚಿತ್ರ ವರ್ಷದ ಮೊದಲ ದೊಡ್ಡ ಹಿಟ್ ಆಗುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದೆ. ಒಟ್ಟಿನಲ್ಲಿ ಚಂದ್ರು ನಿರ್ದೇಶನದ 'ಐದನೇ' ಚಿತ್ರದ ಮೂಲಕ ಪ್ರೇಮ್ 'ಆರಕ್ಕೇರಿದ್ದಾರೆ'.
'ಚಾರ್ಮಿನಾರ್'ನ ಆರಂಭಿಕ ದಿನಗಳ ಕಲೆಕ್ಷನ್, ಮೊದಲ ಬಾರಿಗೆ ನಿರ್ಮಾಪಕರೂ ಆಗಿರುವ ಚಂದ್ರುಗೆ ಆನೆಬಲ ಕೊಟ್ಟಿದೆ. ತೆಲುಗು ಚಿತ್ರಗಳ ತವರೂರಂತಿರುವ ಬಳ್ಳಾರಿಯಲ್ಲೂ, ಪರಭಾಷೆಯ ಸ್ಪೆಷಲ್ ಚಿತ್ರಗಳ ನಡುವೆ 'ಚಾರ್ಮಿನಾರ್' ಗಳಿಕೆಯಲ್ಲಿ ಮುಂದಿದೆ ಎನ್ನುವುದು ಅವರ ಆತ್ಮವಿಶ್ವಾಸ ಹೆಚ್ಚಿಸಿದೆ. ಅಲ್ಲಿನ ಚಿತ್ರಮಂದಿರದ ಮಾಲೀಕರು ತೆಲುಗಿನ 'ಮಿರ್ಚಿ' ಚಿತ್ರಕ್ಕಿಂತ ಹೆಚ್ಚು ಗಳಿಸುತ್ತಿರುವ 'ಚಾರ್ಮಿನಾರ್'ನ ಬಗ್ಗೆ ಅಚ್ಚರಿಗೊಂಡಿದ್ದಾರಂತೆ.
ಚಿತ್ರ ಕಚ್ಚಿಕೊಂಡಿದೆ ಎಂಬ ಸುದ್ದಿ ಹರಡುತ್ತಿದ್ದಂತೆ, ಗಾಂಧಿನಗರದಲ್ಲೂ ಚಂದ್ರು ಮಾರ್ಕೆಟ್ ಜೋರಾಗಿದೆ. ಇಲ್ಲಿ ಒಂದು ಚಿತ್ರ ಗೆದ್ದರೆ ಅದು ಗೆದ್ದವರನ್ನು ಹಲವು ವರ್ಷಗಳ ಕಾಲ ಕೈ ಹಿಡಿದು ನಡೆಸುತ್ತದೆ. ಸೋತರೆ ಅಲ್ಲಿಯವರೆಗೂ ಮಾಡಿದ್ದೆಲ್ಲಾ ಹೊಳೆಯಲ್ಲಿ ತೊಳೆದ ಹುಣಸೆಹಣ್ಣು. ಈ ಕಾರಣಕ್ಕೆ ಗಾಂಧಿನಗರದ ಹಲವು ನಿರ್ಮಾಪಕ, ವಿತರಕರು ಈಗಾಗಲೇ 'ವಾರೆವ್ಹಾ ಚಂದ್ರು, ಹೊಸ ಸಿನಿಮಾ, ಹೊಸ ಸಕ್ಸಸ್, ಅದ್ಭುತ! ಒಂದ್ ಹತ್ತು ವರ್ಷ ಸೆಟಲ್ ಆದೆ ಬಿಡು' ಎಂಬ ಮಾತುಗಳನ್ನಾಡುತ್ತಿದ್ದಾರೆ. ಅದರ ಜೊತೆಗೆ 'ನಮಗೂ ಒಂದು ಸಿನಿಮಾ ಮಾಡಿಕೊಡಿ' ಎಂಬ ಆಫರ್ಗಳೂ ಶುರುವಾಗಿವೆಯಂತೆ.
ಒಟ್ಟಿನಲ್ಲಿ ಚಂದ್ರು ಅವರ ಐದನೆಯ ಚಿತ್ರ 'ಚಾರ್' ಮಚಾಯೇ ಶೋರ್ ಎನ್ನುತ್ತಿದೆ. ಹಾಗಾಗಿ ಇಲ್ಲಿ ನನ್ನ ಅದೃಷ್ಟದ ಸಂಖ್ಯೆ ನಾಲ್ಕೋ ಅಥವಾ ಐದೋ ಎಂಬ ಗೊಂದಲದಲ್ಲಿದ್ದಾರೆ ಚಂದ್ರು. ಆದರೆ, 'ಸಂಖ್ಯಾ'ಶಾಸ್ತ್ರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಸದ್ಯಕ್ಕೆ ಚಿತ್ರ ನೋಡಿ ದಿಲ್ಖುಷ್ ಆಗಿರುವ 'ಅಸಂಖ್ಯ' ಅಭಿಮಾನಿಗಳ ಪ್ರೀತಿಯ ಮಾತುಗಳಿಗೆ ಕಿವಿಯಾಗಿದ್ದಾರೆ. ವರ್ಷದ ಆರಂಭದಲ್ಲೇ ಸಿಕ್ಕಿರುವ ಯಶಸ್ಸಿನ ಮೊದಲ ಪುಳಕದಲ್ಲಿ ಅವರದ್ದು.
ಚಿತ್ರ ತನ್ನ ಟಾರ್ಗೆಟ್ ಪ್ರೇಕ್ಷಕರನ್ನು ರೀಚ್ ಆಗಿದೆ. ತಮಿಳಿನಿಂದ ರಿಮೇಕ್ ಆದ ಆಟೋಗ್ರಾಫ್ನ ನಂತರ ಅಂಥದ್ದೇ ಹಳೆಯ ನೆನಪುಗಳ ಕಥೆ ಹೊಂದಿದ, ಅದೇ ಧಾಟಿಯ ಚಿತ್ರವಾದರೂ, 'ಚಾರ್ಮಿನಾರ್' ಅಪ್ಪಟ ನಮ್ಮ ಮಣ್ಣಿನ ವಾಸನೆ ಇರುವ ಕಥೆಯಾಗಿರುವುದೇ ಚಿತ್ರ ಗೆಲುವಿಗೆ ಕಾರಣ ಎನ್ನಲಾಗುತ್ತಿದೆ. ಕೆಲವರಿಗೆ 'ನಿರೂಪಣೆ ನಿಧಾನವಾಯಿತು' ಎನಿಸಿದರೂ ಚಿತ್ರದ ಒಟ್ಟಾರೆ ಪರಿಣಾಮದ ಬಗ್ಗೆ ಯಾರದೂ ದೂಸ್ರಾ ಮಾತಿಲ್ಲ. 'ಚಾರ್ಮಿನಾರ್'ನಲ್ಲಿ ಇತರ ಕಮರ್ಷಿಯಲ್ ಚಿತ್ರಗಳಂತೆ 'ಆ್ಯಕ್ಸಿಡೆಂಟಲ್' ತಿರುವುಗಳಿಲ್ಲ, ನಮ್ಮೆಲ್ಲರ ಜೀವನದ ಅನೇಕ ಮಧುರ ನೆನಪುಗಳನ್ನು ಕೆದಕುವ ಘಟನೆಗಳೇ ಚಿತ್ರಕ್ಕೆ ಆಧಾರವಾಗಿರುವುದರಿಂದ ಇದೊಂದು 'ಇನ್ಸಿಡೆಂಟಲ್' ಸಿನಿಮಾ ಎನ್ನಬಹುದು. ನೋಡುತ್ತಾ, ನೋಡುತ್ತಾ, 'ನನ್ ಲೈಫಲ್ಲೂ ಹೀಗೇ ಆಗಿತ್ತು' ಎನಿಸುವುದರಿಂದ, ಒಂಥರಾ 'ಕೋ ಇನ್ಸಿಡೆಂಟಲ್' ಸಿನಿಮಾ ಎನ್ನಲೂಬಹುದು.
ಆದರೆ, ಚಿತ್ರ ನೋಡಿದ ಎಲ್ಲರಿಗೂ ಇದು ನಮ್ಮ ಕಥೆ ಎನಿಸಿದರೂ ಯಾರೂ ಚಂದ್ರು ವಿರುದ್ಧ 'ಕೇಸು' ಹಾಕುತ್ತಿಲ್ಲ, ಹಾಗಾಗಿ 'ಇದು ನಂದೇ ಕಥೆ ಸರ್' ಎನ್ನುವ 'ಸೆಂಟಿಮೆಂಟಲ್ ಕೇಸು'ಗಳನ್ನು ಆಲಿಸುವಲ್ಲಿ ಮಾತ್ರ ನಿರ್ದೇಶಕ ಆರ್.ಚಂದ್ರು ಬ್ಯುಸಿ.
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


