ಸಿನಿಮಾ ಲೇಖನ

ರಗಳೆ ರಮ್ಯಾ

ರಗಳೆ ರಮ್ಯಾ
Published On :

ಯಾವುದಾದರೊಂದು ಚಿತ್ರದಲ್ಲಿ ರಮ್ಯಾ ಇದ್ದಾಳೆ ಎಂದರೆ ಅಲ್ಲಿ ವಿವಾದ, ಕಿರಿಕ್ಕು ಇರಲೇಬೇಕು. ರಗಳೆ ಮಾಡಿಕೊಳ್ಳುವುದೇ ತಮ್ಮ ಪರಮ ಗುರಿ ಎಂಬಂತೆ ವರ್ತಿಸುವ ಈ ಪ್ರತಿಭಾವಂತೆ ಗಾಂಧಿನಗರ ಕಂಡ ಪಕ್ಕಾ 'ರಾಂಗ್ ನಂಬರ್‌'.

'ಊರಿಗೊಬ್ಳೆ ಪದ್ಮಾವತಿ' ಎಂದರೆ ಅದು ತಾನೇ ಎಂದು ಬೆನ್ನು ತಟ್ಟಿಕೊಳ್ಳುವ ನಟಿ ರಮ್ಯಾಳ ಕಾಲ ಮುಗಿದು ಯಾವುದೋ ಕಾಲ ಆಗಿದೆ. 'ರಮ್ಯಾ ಚೈತ್ರಕಾಲ' ಎಂದು ಹೊಗಳಿಸಿಕೊಳ್ಳುತ್ತಿದ್ದ ಈಕೆ ಸದ್ಯ 'ರಮ್ಯಾ ವಿತ್ ರಗಳೆ' ಎನ್ನುವಷ್ಟರ ಮಟ್ಟಿಗೆ ಕಿರಿಕ್ ರಾಣಿಯಾಗಿದ್ದಾರೆ. ನಟ ಪುನೀತ್ ರಾಜ್‌ಕುಮಾರ್‌ರೊಂದಿಗೆ 'ಅಭಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಈಕೆ ಇಲ್ಲಿಯವರೆಗೂ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡದ 'ಹಿರಿಯ ನಟಿ' ಅನ್ನಿಸಿಕೊಂಡಿದ್ದಾರೆ. ಜತೆಗೆ ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದೇನೆಂಬುದೇ ಈಕೆಯ ತಲೆಗೇರಿ ವರ್ಷಗಳೇ ಕಳೆದಿವೆ.
ಅಹಂಕಾರ, ಮುಂಗೋಪ, ತರಲೆ ಇವೆಲ್ಲದರ ಮೂರ್ತರೂಪವೇ ಈಕೆ. ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದೆಂದರೆ ಆಟವಾಡಿದಷ್ಟು ಸುಲಭ. ಹೀಗಾಗಿ ರಮ್ಯಾ ಅಭಿನಯಿಸಿರುವ ಬಹುತೇಕ ಚಿತ್ರಗಳಲ್ಲಿ ಒಂದಲ್ಲಾ ಒಂದು ಕಾರಣದಿಂದ ವಿವಾದ, ಕಿರಿಕ್ಕುಗಳಾಗಿವೆ ಎಂದರೆ ಅದು ಈ ನಟಿಯ ಸಾಮರ್ಥ್ಯವೂ ಹೌದು.

ಈಕೆಯ ಕಾರಣದಿಂದಲೇ ಒಂದಿಷ್ಟು ಚಿತ್ರಗಳು ಆರಂಭಗೊಂಡು ನಿಂತು ಹೋಗಿರುವ ಉದಾಹರಣೆಗಳೂ ಇವೆ. 'ಉಲ್ಲಾಸ' ಸಾಕ್ಷಿ. ಪತ್ರಕರ್ತರಲ್ಲ, ಗಾಂಧಿನಗರದ ಮಂದಿಗೂ ಈಕೆಯನ್ನು ಮಾತನಾಡಿಸುವುದು ಸುಲಭದಲ್ಲಿ ಸಾಧ್ಯವಿಲ್ಲ. ಎಷ್ಟು ಸಲ ಕರೆ ಮಾಡಿದರೂ ಸ್ವೀಕರಿಸುವುದೇ ಇಲ್ಲ. ಕೊನೆಗೊಮ್ಮೆ 'ಬ್ಯುಸಿ ಇದ್ದೀನಿ, ಆಮೇಲೆ ನಾನೇ ಮಾಡ್ತೀನಿ' ಎಂದು ಉತ್ತರಿಸಿದರೆ, ಮತ್ತೆ ಅವರಿಂದ ಕಾಲ್ ಬರುವುದಿಲ್ಲ ಎಂದೇ ಲೆಕ್ಕ.
 ಆದರೆ ರಾಧಿಕಾ ಪಂಡಿತ್‌ರಂಥ ನಿಜವಾದ ಅಭಿನಯ ಗೊತ್ತಿರುವ ನಟಿಯರು ಬಂದ ಮೇಲೆ ಗಾಂಧಿನಗರದಲ್ಲಿ 'ರಮ್ಯಾ ಚೈತ್ರಕಾಲ' ಮುಗಿದು ಹೋಗಿದೆ. ಈಕೆಯನ್ನು ಡಿ.ರಾಜೇಂದ್ರ ಬಾಬು ನಿರ್ದೇಶನದ, ನಟ ಶಿವರಾಜ್‌ಕುಮಾರ್ ಅಭಿನಯದ 'ಆರ್ಯನ್‌' ಚಿತ್ರವೂ ಈಕೆಯನ್ನು ಕೈ ಬಿಟ್ಟಿರುವ ಸುದ್ದಿ ಇದೆ. ಒಂದೆರಡು ಚಿತ್ರಗಳ ಹೊರತಾಗಿ ರಮ್ಯಾ ಸದ್ಯಕ್ಕೆ ನಿರುದ್ಯೋಗಿ. ಆದರೂ ರಗಳೆಗಳನ್ನು ಮಾತ್ರ ಈಕೆ ದೂರ ಮಾಡುತ್ತಿಲ್ಲ. ಹೀಗಾಗಿ 'ಸ್ಟಾರ್‌' ನಟಿ ಎನ್ನುವ ಪಟ್ಟದ ಜತೆಗೆ 'ಕಿರಿಕ್‌' ನಟಿ ಎನ್ನುವ ಬಿರುದು ಕೂಡ ಕಾಯಂ ಆಗಿ ರಮ್ಯಾ ಹೆಸರಿಗೆ ಸೇರಿಕೊಂಡಿದೆ. ಸದ್ಯ ಈಕೆಯ ಲೇಟೆಸ್ಟು ರಗಳೆ 'ನೀರ್ ದೋಸೆ' ಚಿತ್ರಕ್ಕೆ ಸಂಬಂಧಿಸಿದ್ದು. ನಿರ್ದೇಶಕ ವಿಜಯ್ ಪ್ರಸಾದ್‌ರ 'ದೋಸೆ'ಗೆ ಎಳ್ಳು ನೀರು ಬಿಡುವ ಮೂಲಕ ನಾಯಕ ಜಗ್ಗೇಶ್ ಕೆಂಗಣ್ಣಿಗೂ ಗುರಿಯಾದ ರಮ್ಯಾ 'ದೋಸೆ' ಹುಯ್ಯಲು ತಾನು ಸೂಕ್ತ ಅಲ್ಲ ಎನ್ನುತ್ತಿದ್ದಾರೆ.
ಹಾಗಾದರೆ ಒಪ್ಪಿಕೊಂಡಿದ್ದು ಯಾಕೆ? ಮುಂಗಡ ಸಂಭಾವನೆ ತೆಗೆದುಕೊಂಡರೂ ಆ ಚಿತ್ರವನ್ನು ಕೈ ಬಿಟ್ಟದ್ದು ಯಾಕೆ? ಎನ್ನುವ ಪ್ರಶ್ನೆಗಳಿಗೆ ತುಂಬಾ ಸ್ಮಾರ್ಟ್ ಆಗಿ ಉತ್ತರ ಕೊಡುವ ಈಕೆಗೆ ಇದೇ ವಿಜಯ್ ಪ್ರಸಾದ್ 'ಸಿದ್ಲಿಂಗು' ಚಿತ್ರದ ಮೂಲಕ ಒಳ್ಳೆಯ ಹೆಸರು ತಂದುಕೊಟ್ಟರು. 'ಸಿದ್ಲಿಂಗು' ಸಿನಿಮಾ ನೋಡಿದವರು ರಮ್ಯಾ ಪಾತ್ರವನ್ನು ಹೊಗಳಿದರು. ಅಷ್ಟರಮಟ್ಟಿಗೆ ಈಕೆಯ ಪಾತ್ರಕ್ಕೆ ವಿಜಯ್ ಪ್ರಸಾದ್ ಸ್ಕೋಪ್ ಕೊಟ್ಟಿದ್ದರು. ಆದರೆ ಅವರದ್ದೇ ನಿರ್ದೇಶದ ಕಥೆ ಕೇಳಿ 'ವ್ಹಾವ್ ಸೂಪರ್‌' ಎಂದ ಈ ನಟಿ ಮುಂಗಡವಾಗಿ 15 ಲಕ್ಷ ಸಂಭಾವನೆಯನ್ನೂ ಪಡೆದುಕೊಂಡು, ಇದ್ದಕ್ಕಿದ್ದ ಹಾಗೆ 'ಈ ಚಿತ್ರದ ಪಾತ್ರಕ್ಕೆ ನ್ಯಾಯ ಒದಗಿಸಲು ನನ್ನಿಂದ ಆಗೋಲ್ಲ' ಎಂದು 'ನೀರ್ ದೋಸೆ'ಯನ್ನು ತಣ್ಣೀರ್ ದೋಸೆ ಮಾಡಿದ್ದಾರೆ. ಈ ಬಗ್ಗೆ ಅಭಿಪ್ರಾಯಕ್ಕಾಗಿ ರಮ್ಯಾರನ್ನು ಸಂಪರ್ಕಿಸಲು ಸತತವಾಗಿ ಯತ್ನಿಸಿದರೂ ಅವರು ಪ್ರತಿಕ್ರಿಯಿಸುವ ಸೌಜನ್ಯ ತೋರಲಿಲ್ಲ. ಜಮಾನ ಬದಲಾಗುತ್ತೆ ಅನ್ನೋ ಸತ್ಯ ತಿಳಿಯುವವರೆಗೂ ರಮ್ಯಾರ ಇಂಥ ಕಿರಿಕ್ಕುಗಳು ಮುಂದುವರಿಯುತ್ತಲೇ ಇರುತ್ತವೆ.
-ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.