ಕಾಡಿಗೆ ಕಣ್ಣವಳು

ಎಸಿ ರೂಮಿನಲ್ಲಿ, ಕಂಪ್ಯೂಟರ್ ಮುಂದೆ ಕುಳಿತು ಲಕ್ಷಾಂತರ ರುಪಾಯಿ ಸಂಬಳ ಎಣಿಸುವ ಕನಸು ಕಂಡವಳು ಕಾಜಲ್ ಅಗರ್‌ವಾಲ್. ಅದು ಸಾಧ್ಯವಾಗದಿದ್ದರೆ ಪರ್ತಕರ್ತೆ ಆಗಿರುತ್ತಿದ್ದಳೇನೋ. 'ಮಗಧೀರ'ನ ಚೆಲುವೆ ಓದಿದ್ದು ಮಾಸ್ ಮೀಡಿಯಾ. ಎಂಬಿಎ ಮಾಡುವ ಪ್ರಯತ್ನದಲ್ಲಿದ್ದಾಗಲೇ ತೆಲುಗು ಚಿತ್ರೋದ್ಯಮ ಕರೆಯಿತು. ಚೊಚ್ಚಲ ಸಿನಿಮಾ ಹೇಳಿಕೊಳ್ಳುವಂಥ ಗೆಲುವು ತಂದುಕೊಡದಿದ್ದರೂ ಅವಕಾಶಗಳು ಬರುತ್ತಲೇ ಹೋದವು. ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
'ಹೀರೋಯಿನ್ ಆಗಬೇಕೆಂದು ಕನಸಿದವಳೂ ನಾನಲ್ಲ. ಮಲ್ಟಿನ್ಯಾಶನಲ್ ಕಂಪನಿಯಲ್ಲಿ ಕೈತುಂಬಾ ಸಂಬಳ ಎಣಿಸಿಕೊಂಡು ಹಾಯಾಗಿರುವ ಆಸೆ ನನ್ನದಾಗಿತ್ತು. ಅಂಥವಳು ನಟಿಯಾದೆ ನೋಡಿ' ಎನ್ನುತ್ತ ನಗುತ್ತಾರೆ ಕಾಜಲ್.
ತೆಲುಗಿನ 'ಲಕ್ಷ್ಮಿ ಕಲ್ಯಾಣಂ'ನಿಂದ (2007) ಮಾರ್ಚ್‌ನಲ್ಲಿ ತೆರೆ ಕಾಣಲಿರುವ 'ಬಾದ್‌ಶಾ' (ತೆಲುಗು)ವರೆಗೆ ಈಕೆ ನಟಿಸಿದ ತೆಲುಗು, ತಮಿಳು, ಹಿಂದಿ ಚಿತ್ರಗಳ ಸಂಖ್ಯೆ 26. ತಲಾ ಒಂದು ತಮಿಳು, ತೆಲುಗು; ಒಂದು ದ್ವಿಭಾಷಾ ಚಿತ್ರ (ತಮಿಳು ಮತ್ತು ಮಲೆಯಾಳ) ಕೈಯ್ಯಲ್ಲಿವೆ. 2004ರಲ್ಲಿ 'ಕ್ಯೂ ಹೋ ಗಯಾ ನಾ..'ದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದವಳು ನಾಯಕಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು ಸ್ವಲ್ಪ ತಡವೇ. ಅದು 2011ರಲ್ಲಿ, ಅಜಯ್ ದೇವಗನ್ ಎದುರು 'ಸಿಂಘಂ' ಮೂಲಕ. ಎರಡನೇ ಸಿನಿಮಾ 'ಸ್ಪೆಶಲ್ ಛಬ್ಬೀಸ್' (ಅಕ್ಷಯ್ ಕುಮಾರ್ ಹೀರೊ) ಫೆ.8ರಂದು ತೆರೆ ಕಾಣುತ್ತಿದೆ.
ಕಾಜಲ್ ಸ್ವಲ್ಪ ಭಿನ್ನ ಹುಡುಗಿ. ಓದು, ಬರಹದ ನಂಟು ಇನ್ನೂ ಇದೆ. ಪ್ರವಾಸಪ್ರಿಯೆ ಬ್ಲಾಗ್‌ನಲ್ಲಿ ನಿಯಮಿತವಾಗಿ ಪ್ರವಾಸ ಕಥನಗಳನ್ನು ಸೊಗಸಾಗಿ ಬರೆಯುತ್ತಾಳೆ. ಕೆಲವು ನಿಯತಕಾಲಿಕಗಳಲ್ಲೂ ಬರಹಗಳು ಪ್ರಕಟವಾಗಿವೆ. ಪುಸ್ತಕ ಪ್ರಕಟಿಸುವ ಇರಾದೆ ಇಲ್ಲವಂತೆ. ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ, ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದರಲ್ಲಿ ಮುಂದು.
ಮುಂಬೈ ಹುಡುಗಿ ಪಕ್ಕಾ ಪ್ರಾಕ್ಟಿಕಲ್. 'ಸಿಂಘಂ'ಗೂ ಮೊದಲೇ ಆಫರ್‌ಗಳು ಬಂದಿದ್ದರೂ ತಿರಸ್ಕರಿಸಿದ್ದಳು. 'ಬಂದಳು ಪುಟ್ಟಿ ಹೋದಳು ಪುಟ್ಟಿ' ಎಂಬಂತಾಗಬಾರದಲ್ಲ! ದಕ್ಷಿಣದಲ್ಲಿ ನೆಲೆ ಕಂಡುಕೊಂಡ ಬಳಿಕವೇ ಹಿಂದಿಯತ್ತ ಮುಖ ಮಾಡಿದ್ದು. ಇಂದಿಗೂ ಅವಳ ಅಚ್ಚುಮೆಚ್ಚು ದಕ್ಷಿಣವೇ.
'ಬಾಲಿವುಡ್‌ನಲ್ಲಿ ಐಟಂ ಸಾಂಗ್ ಏನಾದರೂ ಮಾಡುತ್ತೀರಾ' ಎಂದರೆ, 'ಮಾಡ್ತೀನಿ, ಈಗಲ್ಲ. ಕತ್ರಿನಾ, ಕರೀನಾ, ಪ್ರಿಯಾಂಕಾ ಥರ ಹಿಂದಿ ಪ್ರೇಕ್ಷಕರಿಗೆ ನಾನು ಇನ್ನೂ ಪರಿಚಯವಾಗಿಲ್ಲ. ಐಟಂ ಸಾಂಗ್ ಅಂದ್ರೆ ವಿಶೇಷ ಸ್ಥಾನವಿದೆ. ಅಪರಿಚಿತೆಯೊಬ್ಬಳು ಅಂಥ ಹಾಡಿಗೆ ಕುಣಿದರೆ ಜನರನ್ನು ತಲುಪೋಕೆ ಆಗಲ್ಲ' ಎಂದು ವಾದ ಮುಂದಿಡುತ್ತಾಳೆ!
- ರಾಜೇಶ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


