ಮನಮೋಹಕ ಸುನಿಮಾ

ಇದು ಗಾಳಿಯಲ್ಲಿ ತೇಲಿ ಬಂದ ಮನಮೋಹಕ ಸುದ್ದಿ. ಆದರೆ ಇದನ್ನು ಗಾಳಿ ಸುದ್ದಿ ಅನ್ನೋ ಹಾಗಿಲ್ಲ.
ಅದು ಭಜರಂಗಿ ಭರ್ಜರಿ ಓಪನಿಂಗ್ ಪಡೆದ ದಿನ. ರೇಡಿಯೋ ಸಿಟಿ ನಿರೂಪಕಿಯೊಡನೆ ಸ್ಟುಡಿಯೋದಲ್ಲಿ ಶಿವಣ್ಣ ಕೂತಿದ್ದರು. ಒಂದು ಸರ್ಪ್ರೈಸ್ ಕರೆ ಬಂತು!
'ಜೈ ಭಜರಂಗಿ ಗಾಂಧಿನಗರದ ಗಾಡ್ ಫಾದರ್ ಗಂಡುಗಲಿ ಹ್ಯಾಟ್ರಿಕ್ಹೀರೋ ಶಿವರಾಜ್ಕುಮಾರ್ಗೆ ಜೈ' ಅಂತ ಬಹುಪರಾಕ್ ಹೇಳುತ್ತಿದ್ದ ಹಾಗೆ ಶಿವಣ್ಣ ಇದು ಸುನಿದನಿ ಅಂತ ಕಂಡುಹಿಡಿದೇಬಿಟ್ಟರು.
ಆಗಲೇ ಈ 'ಮನಮೋಹಕ' ರಹಸ್ಯಕ್ಕೆ ತೆರೆಬಿದ್ದಿದ್ದು.
'ಒಂದು ಹಿಟ್ ಕೊಟ್ಟಿದ್ದಾಯ್ತು. ಎರಡನೇ ಸಿನಿಮಾ ರಿಲೀಸಿಗೆ ರೆಡಿ ಇದೆ. ಮೂರನೇ ಸಿನಿಮಾ ಯಾವಾಗ ಶುರು ಮಾಡ್ತೀಯ' ಅಂತ ಕೇಳಿದ ಶಿವಣ್ಣನಿಗೆ ಸುನಿಯ ಬಳಿ ಉತ್ತರ ರೆಡಿ ಇತ್ತು. 'ನೀವ್ ಯಾವಾಗ ಡೇಟ್ ಕೊಡ್ತೀರೋ ಆಗ ಅಣ್ಣ' ಅಂದರು.
'ನೀನು ಜುಲೈಗೆ ಶುರು ಮಾಡಬೇಕು ಅಂತ ಹೇಳಿದ ನೆನಪು. ನೀ ಯಾವಾಗ ಹೇಳ್ತೀಯೋ, ಆಗ ನಾನು ರೆಡಿ' ಅಂದುಬಿಟ್ಟರು ಶಿವಣ್ಣ.
ಅಲ್ಲಿಗೆ ಈ ಸಿಟಿ'ಗಾಳಿ'ಮಾತು ಅಫಿಷಿಯಲ್ ಆಯಿತು.
ಶಿವಣ್ಣನ ಜನ್ಮದಿನ, ಅಂದರೆ ಜುಲೈ ಹನ್ನೆರಡರಂದು ಸುನಿ ಮುಹೂರ್ತಇಟ್ಟಾಗಿದೆ. ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ.
'ಸುನಿ ಸಿನಿಮಾಗೆ ಎಷ್ಟು ಚೆಂದದ ಟೈಟಲ್ಇಟ್ಟಿದಾರೆ ಅಂದ್ರೆ ಆ ಟೈಟಲ್ ಕೇಳಿಯೇ ಸಿನಿಮಾ ಒಪ್ಕೊಂಡು ಬಿಟ್ಟೆ' ಅನ್ನುವ ಶಿವಣ್ಣ ಅವತ್ತು ಸುನಿ ಬಾಯಲ್ಲೇ ಇಡೀ ಶ್ರೋತೃವೃಂದಕ್ಕೆ ಟೈಟಲ್ ಕೇಳಿಸಿಬಿಟ್ಟರು.
'ಮನಮೋಹಕ'
ಅಣ್ಣಾವ್ರ ಚಿತ್ರಗಳನ್ನು ನೆನಪಿಸುವಂಥ ಅಚ್ಚ ಕನ್ನಡದ ಕಾವ್ಯಗುಣದ ಶೀರ್ಷಿಕೆ ಎಂಥವರಿಗೂ ಇಷ್ಟವೆನಿಸುವಂತಿದೆ.
ಶಿವಣ್ಣ ಇನ್ನೊಂದು ವರ್ಷ ಪೂರ್ತಿ ಬ್ಯುಸಿ ಆಗಿದ್ದಾರೆ. ಭಜರಂಗಿಯ ರೆಕಾರ್ಡ್ ಕಲೆಕ್ಷನ್, ಅವರ ಮುಂದಿನ ಪ್ರಾಜೆಕ್ಟ್ಗಳಿಗೆ ಸ್ಪೂರ್ತಿ ಕೊಟ್ಟಿದೆ. ಆರ್ಯನ್, ಕಬೀರ್, ಸ್ವೀಟಿ ರಾಧಿಕಾರ ಹೊಸ ಚಿತ್ರ, ಇದಿಷ್ಟನ್ನೂ ಜುಲೈಯೊಳಗೆ ಮುಗಿಸಿ ಶಿವಣ್ಣ 'ಮನಮೋಹಕ'ವಾಗಲಿದ್ದಾರೆ.
ಸುನಿಗೆ ಇದು ಸ್ವರ್ಗ ರಪ್ಪಂತ ಪಾಸ್ ಆಗ್ತಿರೋ ಅನುಭವ. ಶಿವಣ್ಣನ ದೊಡ್ಡ ಅಭಿಮಾನಿ ಸುನಿ. ಶಿವಣ್ಣನ ಒಂದು ಸಿನಿಮಾನೂ ಮಿಸ್ ಮಾಡಲ್ಲ. ಮೊನ್ನೆ ಏಳುಗಂಟೆಗೆ ಹೋಗಿ ತ್ರಿವೇಣಿಯಲ್ಲಿ ಮೊದಲ ಷೋ ಭಜರಂಗಿ ನೋಡಿ ಬಂದಿದ್ದಾರೆ. ಶಿವಣ್ಣನ ಸಿನಿಮಾ ಮಾಡೋದು ಅವರ ಅತಿ ದೊಡ್ಡ ಕನಸಂತೆ. ಆದರೆ ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳದೆ ಅವರ ಡೇಟ್ ಹೇಗೆ ಕೇಳೋದೆಂದು ದಿನಕ್ಕಾಗಿ ಕಾಯ್ತಿದ್ದರಂತೆ. 'ಸಿಂಪಲ್ಲಾಗೊಂದ್..' ಚಿತ್ರದ ಯಶಸ್ಸು ಈಗ ಆ ಆತ್ಮವಿಶ್ವಾಸ ಕೊಟ್ಟಿದೆ. ಹಾಗಾಗಿ ಶಿವಣ್ಣನಿಗಾಗಿಯೇ ಮಾಡಿಟ್ಟಿದ್ದ ಕಥೆಗೆ ಈಗ ಜೀವ ಬಂದಿದೆ.
ಇಲ್ಲಿ ಇನ್ನೊಂದು ವಿಶೇಷವಿದೆ. ವಿಶೇಷ ಅನ್ನೋದಕ್ಕಿಂತ ಒಂದು ಸಿಹಿ ಸೆಂಟಿಮೆಂಟು. ಉಪೇಂದ್ರ(ಓಂ), ಪ್ರೇಮ್ (ಜೋಗಿ) , ಆರ್. ಚಂದ್ರು(ಮೈಲಾರಿ) ಈ ಎಲ್ಲರ ಮೂರನೇ ಚಿತ್ರದ ಹೀರೋ ಶಿವಣ್ಣ. ಹಾಗೂ ಆ ಮೂರೂ ಚಿತ್ರಗಳೂ ದೊಡ್ಡ ಹಿಟ್. ಹಾಗಾಗಿ ತಮ್ಮ ಮೂರನೆಯ ಚಿತ್ರವೂ ಶಿವಣ್ಣ ಜೊತೆಯಲ್ಲೇ ಆಗಲಿ ಎಂಬುದು ಸುನಿಯ ಸಿಂಪಲ್ ಸೆಂಟಿಮೆಂಟ್.
ಸುನಿ ಹ್ಯಾಟ್ರಿಕ್ ಹೀರೋ ಮೂಲಕ ಹ್ಯಾಟ್ರಿಕ್ ಸಾಧಿಸಿ ಹ್ಯಾಟ್ರಿಕ್ ನಿರ್ದೇಶಕ ಅನಿಸಿಕೊಂಡರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದೊಂದು ಮಧುರ ಅಂಕಿ ಅಂಶವಾಗಿ ದಾಖಲಾಗಬಹುದು. ಜೊತೆಗೆ ಶಿವಣ್ಣನ ಜೊತೆ ಮೂರನೇ ಚಿತ್ರ ಮಾಡುಬೇಕೆನ್ನುವ ನಿರ್ದೇಶಕರ ಪಟ್ಟಿಯೂ ಉದ್ದವಾಗಬಹುದು.
ಅದೇನೇ ಇರಲಿ ಸದ್ಯಕ್ಕೆ ಈ 'ಮನಮೋಹಕ' ಸುದ್ದಿಗೆ ಭಜರಂಗಿ ದಳದ ಅಭಿಮಾನಿಗಳು ಬಹುಪರಾಕ್ ಹೇಳಬಹುದು.
- ನವೀನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


