ಸಿಂಗ್ ಸಿಗ್ನೇಚರ್ ಸಿನಿಮಾ
ಎಸ್.ವಿ. ರಾಜೇಂದ್ರಸಿಂಗ್ ಬಾಬು ಎಂದರೆ ಕನ್ನಡ ಚಿತ್ರಪ್ರೇಮಿಗಳಿಗೆ ಈ ಹೆಸರು 1975ನೇ ಇಸ್ವಿಯಿಂದಲೂ ಗೊತ್ತು.

ಎಸ್.ವಿ. ರಾಜೇಂದ್ರಸಿಂಗ್ ಬಾಬು ಎಂದರೆ ಕನ್ನಡ ಚಿತ್ರಪ್ರೇಮಿಗಳಿಗೆ ಈ ಹೆಸರು 1975ನೇ ಇಸ್ವಿಯಿಂದಲೂ ಗೊತ್ತು. ಯಾವ ಹೀರೋಗೂ ಕಡಿಮೆ ಇಲ್ಲದ ಕಳೆ ಬಾಬು ಅವರ ಮುಖದಲ್ಲಿರುತ್ತದೆ ಎಂಬುದು ಅವರನ್ನು ಬಲ್ಲವರ ಮಾತು. ಅವರ ಹೇರ್ಸ್ಟೈಲ್, ಅವರ ಉಡುಪು ಎಲ್ಲವೂ ಅವರು ನಿರ್ದೇಶಿಸುವ ಚಿತ್ರಗಳಷ್ಟೇ ಸ್ಟೈಲಿಷ್ ಆಗಿರುತ್ತದೆ. ಧರಿಸುವ ಉಡುಪಿನ ವಿಷಯದಲ್ಲಿ ಬಾಬು ಅವರಿಗೆ ಎಷ್ಟು ಟೇಸ್ಟ್ ಇದೆ ಎಂದರೆ ಶೂಟಿಂಗ್ಗೆ ಅಂತ ಫಾರಿನ್ನಿಗೆ ಹೋದಾಗ ಅವರ ಚಿತ್ರಗಳ ನಾಯಕಿಯರು 'ನನ್ನ ಬಾಯ್ಪ್ರೆಂಡ್ಗೆ ನೀವೇ ಬಟ್ಟೆ ಆರಿಸಿಕೊಡಿ' ಎಂದು ದುಂಬಾಲು ಬೀಳುವಷ್ಟು. ಆ ವಿಷಯದಲ್ಲಿ ಸಿನಿಮಾದ ಮೇಕಿಂಗ್ ಇರಲಿ, ವೈಯಕ್ತಿಕ ಚರಿಷ್ಮಾ ಇರಲಿ ಸಿಂಗ್ ಈಸ್ ಕಿಂಗ್.
'ಆರ್' ಫಾರ್ ರಾಜೇಂದ್ರಸಿಂಗ್ಬಾಬು, 'ಆರ್' ಫಾರ್ ರೆಬೆಲ್ ಎನ್ನುವಂಥ 'ಅಂತ' ಚಿತ್ರ ಮಾಡಿದ್ದರೂ, ನಾಗರಹೊಳೆ, ಬಂಧನ, ಮುತ್ತಿನಹಾರ, ಹೂವು ಹಣ್ಣುದಂಥ ಅನೇಕ ಅದ್ಭುತ ಚಿತ್ರಗಳನ್ನೂ ಕೊಟ್ಟು ರಾಷ್ಟ್ರಪತಿಗಳ ರಜತ ಕಮಲ, ರಾಜ್ಯಪ್ರಶಸ್ತಿಗಳ ಸರದಾರ ಎನಿಸಿಕೊಂಡಿರುವ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ತಿಪ್ಪಾರಳ್ಳಿ ತರ್ಲೆಗಲು ಚಿತ್ರದ ನಂತರ ಒಂದಷ್ಟು ದಿನ ನಿರ್ದೇಶನದಿಂದ ಮಿಸ್ಸಿಂಗ್ ಆದಂತಿದ್ದರು. ಆದರೆ, ಈಗ ಮತ್ತೆ ಸಿಂಗ್ ಈಸ್ ಬ್ಯಾಕ್ ವಿತ್ ಎ ಬ್ಯಾಂಗ್. ಹಾಗಂತ ಇದು ಅವರ ಭೀಮೂಸ್ ಬ್ಯಾಂಗ್ ಬ್ಯಾಂಗ್ ಚಿತ್ರದ ಸುದ್ದಿ ಅಲ್ಲ. ಸಿಂಗ್ ಬಾಬು ಅವರ ಟ್ರೇಡ್ ಮಾರ್ಕ್ ಚಿತ್ರ 'ರೆಬೆಲ್'ಗೆ ಸಂಬಂಧಪಟ್ಟ ವಿಷಯ ಇದು. ಇದು ಸಿಂಗ್ ಅವರ ರೆಬೆಲ್ ನೇಚರ್ ಇರುವ ಸಿಗ್ನೇಚರ್ ಸಿನಿಮಾ. ತಮ್ಮ ಪುತ್ರ ಆದಿತ್ಯ ಅವರಿಗೆ ತಮ್ಮದೇ ನಿರ್ದೇಶನದ ಮೊದಲೆರಡು ಚಿತ್ರಗಳಲ್ಲಿ ಸಾಫ್ಟ್ ಪಾತ್ರಗಳನ್ನು ಕೊಟ್ಟಿದ್ದ ಬಾಬು ಈಗ ತಮ್ಮ ಅಭಿರುಚಿಗೆ ತಕ್ಕಂತೆ ಆದಿತ್ಯ ಅವರನ್ನು ಮೌಲ್ಡ್ ಮಾಡಿದ್ದಾರೆ. ಅಂದರೆ ಇದು 'ಅಂತ' ಚಿತ್ರದ ರೆಬೆಲ್ಸ್ಟಾರ್ನನ್ನು ನೆನಪಿಸುವಂಥ ಚಿತ್ರ. ಆದರೆ ಅಲ್ಲಿನ ರೆಬೆಲ್ಸ್ಟಾರ್ನ ಹೋರಾಟ ರಾಜ್ಯಮಟ್ಟದ್ದು, ಈ ರೆಬೆಲ್ಸ್ಟಾರ್ನ ಹೋರಾಟ ರಾಷ್ಟ್ರಮಟ್ಟದ್ದು. 'ನಮ್ ದೇಶದಲ್ಲಿ ಮಿಲ್ಟ್ರಿ ರೂಲ್ ಬರ್ಬೇಕು ಕಣ್ರೀ ಆವಾಗ್ಲೇ ಸರಿ ಹೋಗೋದು' ಎಂಬುದು ಜನಸಾಮಾನ್ಯರು ಸಾಮಾನ್ಯವಾಗಿ ಪ್ರತಿದಿನ ಹೇಳುವ ಮಾತು. ಅದು ಭ್ರಷ್ಟಾಚಾರದಿಂದ ಬೇಸತ್ತವರ ಮಾತು. ಅಂಥವರ ಮನಸ್ಥಿತಿಗೆ ತಕ್ಕಂತೆ ಭ್ರಷ್ಟಾಚಾರದ ವಿರುದ್ಧದ ಹೋರಾಟ ಮತ್ತು ನಮ್ಮ ಯೋಧರ ಬಗೆಗಿನ ಕಾಳಜಿ ಎರಡನ್ನೂ ಸೇರಿಸಿ, ಈ ಬಾರಿ 'ರೆಬೆಲ್' ಎಂಬ ಚಿತ್ರ ಮಾಡಿದ್ದಾರೆ ಬಾಬು. ಚಿತ್ರದ ಕಥೆ ಎಷ್ಟು ಖಾರವಾಗಿದೆ ಎಂದರೆ ಸಿನಿಮಾ ಬಿಡುಗಡೆಗೆ ಮುನ್ನವೇ ಬಾಬು ಕಾನ್ಫಿಡೆಂಟ್ ಆಗಿ ಹೇಳುತ್ತಾರೆ, 'ಸಿನಿಮಾ ತಯಾರಾಗಿದೆ, ನಾನು ಆದಷ್ಟು ಬೇಗ ಬಿಡುಗಡೆಯ ತಯಾರಿ ಮಾಡಿಕೊಳ್ಳಬೇಕಿದೆ. ಸೆನ್ಸಾರ್ನಿಂದ ಸಮಸ್ಯೆಯಾಗುವ ಎಲ್ಲ ಲಕ್ಷಣಗಳೂ ಇವೆ'. ಈಗಾಗಲೇ ಸ್ನೇಹಿತರೂ ಆಗಿರುವ ಸೆನ್ಸಾರ್ ಮಂಡಳಿಯ ಅಧ್ಯಕ್ಷ ನಾಗರಾಜ್ ಅವರ ಕಿವಿಮಾತಿನ ಮೇರೆಗೆ ಈ ಮೊದಲು ಚಿತ್ರೀಕರಿಸಿದ್ದ ಕ್ಲೈಮ್ಯಾಕ್ಸ್ ಅನ್ನು ಬದಲಿಸಿ ರೀ ಶೂಟ್ ಮಾಡಿದ್ದಾರೆ ಬಾಬು. ಇನ್ನೇನು ರೆಬೆಲ್ ಅತಿ ಶೀಘ್ರದಲ್ಲೇ ತೆರೆಯ ಮೇಲೆ ಅಪ್ಪಳಿಸಲಿದ್ದಾನೆ.
ರೆಬೆಲ್ ಚಿತ್ರದ ಫ್ಲೇವರ್ ಏನು?
ಭ್ರಷ್ಟಾಚಾರದ ವಿರುದ್ಧ ದನಿ ಎತ್ತುತ್ತಲೇ ನಮ್ಮ ಸೈನಿಕರ ಜೀವಕ್ಕೆ ಬೆಲೆಯೇ ಇಲ್ಲ ಎಂಬ ಕಾಳಜಿಗೂ ಒತ್ತು ಕೊಟ್ಟಿದ್ದೇನೆ. ದೇಶಪ್ರೇಮಿ ಕುಟುಂಬ ಒಂದರ ಕಥೆಯಿದು. ಅಮ್ಮ ಡಿಫೆನ್ಸ್ ಸೆಕ್ರೆಟರಿ, ಮಗ ಸೈನಿಕ. ಇದೊಂಥರಾ 'ಮದರ್ ಇಂಡಿಯಾ' ಮತ್ತು 'ಸನ್ ಆಫ್ ಇಂಡಿಯಾ' ಜುಗಲ್ಬಂದಿಯ ಕಥೆ. ಅಮ್ಮನ ಪಾತ್ರದಲ್ಲಿ ಸುಹಾಸಿನಿ ಮತ್ತು ಮಗನ ಪಾತ್ರದಲ್ಲಿ ಆದಿತ್ಯ ಅಭಿನಯಿಸಿದ್ದಾರೆ. ಇತ್ತೀಚೆಗೆ ನಮ್ಮ ದೇಶದಲ್ಲಿ ಸೈನಿಕರಿಗೆ ಸೂಕ್ತ ರಕ್ಷಣೆ ಮನ್ನಣೆ ಸಿಗುತ್ತಿಲ್ಲ್ಲ. ಆಧುನಿಕ ಉಪಕರಣಗಳ ಕೊರತೆಯಿಂದಾಗಿ ಸೈನಿಕರ ಜೀವವನ್ನು ಸರ್ಕಾರ ಬಲಿಕೊಡುತ್ತಿದೆ. ಸೈನಿಕರಿರುವುದೇ ಸಾಯಲಿಕ್ಕೆ ಎನ್ನುವ ರಾಜಕಾರಣಿಗಳೂ ಇದ್ದಾರೆ. ಇಂಥದ್ದನ್ನೆಲ್ಲ ನೋಡಿದ ನಮ್ಮ ಚಿತ್ರದ ನಾಯಕ ವ್ಯವಸ್ಥೆಯ ವಿರುದ್ಧ ರೆಬೆಲ್ ಆಗುತ್ತಾನೆ.
ಚಿತ್ರದ ಬಿಡುಗಡೆಗೆ ಮುನ್ನವೇ ಸೆನ್ಸಾರ್ ಬಗ್ಗೆ ಮಾತನಾಡುತ್ತಿದ್ದೀರಿ. ಇದು ಹೇಗೆ?
ರೆಬೆಲ್ ಚಿತ್ರದಲ್ಲಿ ಎಲ್ಲವನ್ನೂ ಖಾರವಾಗಿ ಅಲ್ಲದಿದ್ದರೂ ನೇರವಾಗಿ ಹೇಳಲು ಪ್ರಯತ್ನ ಪಟ್ಟಿದ್ದೇನೆ. ಹಾಗಾಗಿ ಸಮಸ್ಯೆ ಆಗಬಹುದು. ಇಂಥ ಚಿತ್ರ ಈ ಹಿಂದೆ ಬಂದಿಲ್ಲ. ಇದು ಮಾಮೂಲಿ ಆ್ಯಕ್ಷನ್ ಚಿತ್ರ ಅಲ್ಲ. ಇಂಥ ಚಿತ್ರ ಮಾಡಬೇಕು ಎಂಬುದು ನನ್ನ ಬಹಳ ದಿನಗಳ ಆಸೆಯಾಗಿತ್ತು. ಈಗ ಅದು ನೆರವೇರಿದೆ. ಆದರೆ ಚಿತ್ರ ಮಾಡುತ್ತಿರುವಾಗಲೇ ನನಗೆ ಸೆನ್ಸಾರ್ನ ಸಮಸ್ಯೆ ಆಗಬಹುದು ಎಂಬ ಅನುಮಾನಗಳಿದ್ದವು. ಈಗಲೂ ಇದೆ. ನಾಗರಾಜ್ ಅವರು ನನ್ನ ಸ್ನೇಹಿತರಾದ್ದರಿಂದ ಕ್ಲೈಮ್ಯಾಕ್ಸ್ನ ಬಗ್ಗೆ ಹೇಳಿದಾಗ ಈ ಕ್ಲೈಮ್ಯಾಕ್ಸ್ ಆಗೋದೇ ಇಲ್ಲ ಎಂದಿದ್ದಕ್ಕೆ ಕೊಂಚ ಬದಲಾವಣೆ ಮಾಡಿಕೊಂಡಿದ್ದೇನೆ.
'ರೆಬೆಲ್' ಎಂದ ಕೂಡಲೇ ಎಲ್ಲರಿಗೂ ನಿಮ್ಮದೇ 'ಅಂತ' ಚಿತ್ರ ನೆನಪಾಗುತ್ತದೆ. ಇಲ್ಲಿ ಆ ಚಿತ್ರದ ಶೇಡ್ ಇದೆಯಾ?
ಈ ಚಿತ್ರ ನೋಡಿ ಅಂತ ಚಿತ್ರದ ಸಿಂಗ್ ಬಾಬು ಎಲ್ಲರಿಗೂ ಮತ್ತೆ ನೆನಪಾಗಬಹುದು. ಆದರೆ ಆ ರೆಬೆಲ್ನದ್ದು ರಾಜ್ಯಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಇಲ್ಲಿ ರಾಷ್ಟ್ರದ ಸಮಸ್ಯೆಯನ್ನು ತೆಗೆದುಕೊಂಡು ಸಿನಿಮಾ ಮಾಡಿದ್ದೇನೆ.
ಚಿತ್ರದಲ್ಲಿ ಮತ್ತೇನು ವಿಶೇಷ?
ಈ ಚಿತ್ರದ ಸುಮಾರು ಶೇಕಡಾ 60ರಷ್ಟು ಭಾಗವನ್ನು ಸಿಂಗಪೂರ್ನಲ್ಲಿ ಚಿತ್ರೀಕರಿಸಿದ್ದೇನೆ. ಚಿತ್ರದ ಕಥೆಗೆ ಅದರ ಅವಶ್ಯಕತೆ ಇತ್ತು. ಜೆಸ್ಸಿಗಿಫ್ಟ್ ಸಂಗೀತ, ನನ್ನ ಹಳೆಯ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ಪಿ.ಎಸ್.ಪ್ರಕಾಶ್ ಅವರ ಪುತ್ರ ವಂಶಿ ಪ್ರಕಾಶ್ ಛಾಯಾಗ್ರಹಣ ರೆಬೆಲ್ ಚಿತ್ರಕ್ಕಿದೆ. ಅಲ್ಲದೆ ಇಂಥ ಚಿತ್ರಕ್ಕೆ ಹೊಂದಿಕೆಯಾಗುವಂತೆ ಎಂ.ಎಸ್.ರಮೇಶ್ ಅವರಿಂದ ಸಂಭಾಷಣೆ ಬರೆಸಿದ್ದೇನೆ. ದೇಶಪ್ರೇಮದ ಬಗ್ಗೆ ರಮೇಶ್ ಹೇಗೆ ಸಂಭಾಷಣೆ ಬರೆಯುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ರೆಬೆಲ್ ಚಿತ್ರ ನಮ್ಮ ದೇಶದ ಬಗ್ಗೆ ಮತ್ತು ದೇಶದ ಸೈನಿಕರ ಬಗ್ಗೆ ಎಲ್ಲರನ್ನೂ ಯೋಚನೆಗೆ ಹಚ್ಚುವ ಕೆಲಸ ಮಾಡುತ್ತದೆ ಎಂಬುದು ನನ್ನ ನಂಬಿಕೆ.
ರೆಬೆಲ್ನ ನಂತರ ಹೊಸ ರೀತಿಯ ಆಯೋಚನೆಗಳೇನಾದರೂ ಇವೆಯೇ?
ಐಡಿಯಾಗಳು ತುಂಬಾನೇ ಇವೆ. ನಾಗರಹೊಳೆಯಂಥ ಚಿತ್ರವನ್ನು ಮತ್ತೆ ಮಾಡಬೇಕು ಎಂಬ ಆಸೆ ಇದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಪ್ರಾಣಿಗಳನ್ನು ಬಳಸಿ ಸಿನಿಮಾ ಮಾಡುವುದು ಸಾಧ್ಯವೇ ಇಲ್ಲ ಎಂಬಂತಾಗಿದೆ. ಮಕ್ಕಳಿಗೆ ಪ್ರಾಣಿಗಳನ್ನು ಕಂಡರೆ ಇಷ್ಟ. ಆದರೆ ನೋಡಿ ಈಗ ಏನಾಗಿದೆ ಮಕ್ಕಳನ್ನು ಖುಷಿಪಡಿಸಲೂ ನಾವು ಗ್ರಾಫಿಕ್ಸ್ನ ಮೊರೆ ಹೋಗಬೇಕಿದೆ. ಗ್ರಾಫಿಕ್ಸ್ ಮಾಡಿ ನ್ಯಾಚುರಲ್ ಫೀಲ್ ಕೊಡುವುದು ಕಷ್ಟ.
ಒಂದಷ್ಟು ವರ್ಷಗಳಿಂದ ಕಾಮಿಡಿ ಚಿತ್ರಗಳಲ್ಲೇ ಬ್ಯುಸಿಯಾಗಿದ್ದೀರಿ. ಬಂಧನ, ಮುತ್ತಿನ ಹಾರ, ಭೂಮಿ ತಾಯಿಯ ಚೊಚ್ಚಲ ಮಗದಂಥ ಭಾವನಾತ್ಮಕ ಚಿತ್ರಗಳನ್ನು ನಿಮ್ಮಿಂದ ಮತ್ತೆ ನಿರೀಕ್ಷಿಸಬಹುದೇ?
ಅಂಥ ಚಿತ್ರಗಳನ್ನು ಮಾಡುವ ಆಸೆ ನನಗೂ ಇದೆ. ಜೊತೆಗೆ ಕಾದಂಬರಿ ಆಧಾರಿತ ಚಿತ್ರಗಳನ್ನು ಮಾಡುವ ಬಯಕೆಯೂ ಇದೆ. ಅದಲ್ಲದೆ ಮೈಸೂರು ಮಹಾರಾಜರಿಗೂ ಮತ್ತು ಪಿಟೀಲು ಚೌಡಯ್ಯನವರಿಗೂ ಇದ್ದ ಸ್ನೇಹವನ್ನು ತೆರೆಯ ಮೇಲೆ ತೋರಿಸುವ ತಯಾರಿ ಮಾಡಿಕೊಂಡಿದ್ದೆ. ಮಹಾರಾಜರ ಪಾತ್ರದಲ್ಲಿ ವಿಷ್ಣುವರ್ಧನ್, ಚೌಡಯ್ಯನವರ ಪಾತ್ರದಲ್ಲಿ ಅಂಬರೀಶ್ ಎಂದುಕೊಂಡಿದ್ದೆ. ಅದಕ್ಕೆ ಎಲ್ಲ ತಯಾರಿಯೂ ಮುಗಿದಿತ್ತು. ಆದರೆ ಅಷ್ಟರಲ್ಲಿ ನನ್ನ ಆತ್ಮೀಯ ಸ್ನೇಹಿತ ವಿಷ್ಣು ಕಣ್ಮರೆಯಾಗಿದ್ದು ದುರದೃಷ್ಟಕರ.
- ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


