ಸಿನಿಮಾ ಲೇಖನ

ಸಂಗೀತಮಯ ಚಿತ್ರ

ಸಂಗೀತಮಯ ಚಿತ್ರ
Published On :

ಚಿತ್ರೀಕರಣ ಮುಗಿದು, ಬಿಡುಗಡೆ ಕಾಣದ ಡಬ್ಬದಲ್ಲಿರುವ ಸಿನಿಮಾಗಳಿಗೇನೂ ಕನ್ನಡದಲ್ಲಿ ಕೊರತೆ ಇಲ್ಲ. ಆರಂಭದ ಶೂರತ್ವ ಪ್ರದರ್ಶಿಸಿದ ಅಂಥ ಸಾಕಷ್ಟು ಚಿತ್ರಗಳು ಗಾಂಧಿನಗರದ ಪೆಟ್ಟಿಗೆಯಲ್ಲಿವೆ. 'ಮಂದಹಾಸ' ಚಿತ್ರ ಕೂಡ ಅಂಥ ಸಿನಿಮಾಗಳ ಸಾಲಿಗೆ ಸೇರಬಹುದು ಎಂದುಕೊಳ್ಳುತ್ತಿದ್ದಾಗಲೇ ಅದು ತೆರೆ ಕಾಣುವ ಸಂಭ್ರದಲ್ಲಿದೆ. ಹೀಗಾಗಿ ನಿರ್ಮಾಪಕ ಬಸವರೆಡ್ಡಿ ಮತ್ತವರ ತಂಡಕ್ಕೆ ಬಿಡುಗಡೆಯ 'ಭಾಗ್ಯ' ಸಿಕ್ಕಿದೆ. ಎರಡು, ಎರಡೂವರೆ ವರ್ಷದ ನಂತರ 'ಮಂದಹಾಸ' ಚಿತ್ರ ಪ್ರೇಕ್ಷಕನ ಮುಂದೆ ಪ್ರತ್ಯಕ್ಷವಾಗುತ್ತಿದೆ. ರಾಕೇಶ್ ಅಡಿಗ, ಚೇತನ್ ಚಂದ್ರ ನಾಯಕರಾಗಿ, ನಿಕ್ಕಿ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಹಾಸ್ಯ ನಟ ಮಿತ್ರ,  ವಿಜಯ್ ಸಾರಥಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ರಾಜೇಶ್ ನಿರ್ದೇಶನದ ಈ ಚಿತ್ರಕ್ಕೆ ಬಸವರೆಡ್ಡಿ ನಿರ್ಮಾಪಕರು, ಕೆ.ಎಂ. ವೀರೇಶ್ ಕಾರ್ಯಾಕಾರಿ ನಿರ್ಮಾಪಕರು. ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ, ಶಶಿಧರ ಅಡಪ ಅವರ ಕಲಾ ನಿರ್ದೇಶನ, ವೀರ್ ಸಮರ್ಥ್ ಸಂಗೀತ ಈ ಚಿತ್ರದ ಹೈಲೈಟ್ಸ್.

ಸಾಕಷ್ಟು ಬಾರಿ ಚಿತ್ರವನ್ನು ತೆರೆ ಕಾಣಿಸುವ ಪ್ರಯತ್ನ ಮಾಡಿದರೂ ಕಾರಣಾಂತರಗಳಿಂದ ತಡವಾಯಿತು. ಈಗ ಎನ್. ಕುಮಾರ್ ಅವರ ಸಾರಥ್ಯದಲ್ಲಿ 'ಮಂದಹಾಸ'ಕ್ಕೆ ಬಿಡುಗಡೆಯ ಮುಕ್ತಿ ಸಿಗುತ್ತಿದೆ. ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರ ಸೇರಿದಂತೆ ಪ್ರಮುಖ ಥಿಯೇಟರ್‌ಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. 'ನಾವು ಆರಂಭದಲ್ಲೇ ಚಿತ್ರಕ್ಕೆ ಬೇಕಾದಷ್ಟು ಪ್ರಚಾರ ಮಾಡಿದ್ದೇವೆ. ಪ್ರೇಕ್ಷಕರಿಗೆ ರೀಚ್ ಮಾಡಿಸಲಿಕ್ಕೆ ಎಲ್ಲ ರೀತಿಯ ಕಾರ್ಯಕ್ರಮಗಳನ್ನೂ ಕೈಗೊಂಡಿದ್ದೇವೆ. ತುಂಬಾ ತಡವಾಗಿ ಬಿಡುಗಡೆಯಾಗುತ್ತಿದ್ದರೂ ಜನ ಚಿತ್ರವನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆಂಬ ನಂಬಿಕೆ ಇದೆ' ಎನ್ನುವುದು ಚಿತ್ರತಂಡದ ಅಭಿಪ್ರಾಯ. ನಿರ್ದೇಶಕ ಶಿವಮಣಿಯ 'ಜೋಶ್‌' ಸಿನಿಮಾದ ಮೂಲಕ ಗಾಂಧಿನಗರಕ್ಕೆ ಪರಿಚಯವಾದ ಪ್ರತಿಭೆ ರಾಕೇಶ್ ಅಡಿಗ. 'ಬಂದ ಪುಟ್ಟ ಹೋದ ಪುಟ್ಟ' ಎನ್ನುವಂಥ ಕಳೆದ ವಾರವಷ್ಟೇ ಅವರ ಅಭಿನಯದ 'ನಂದಗೋಕುಲ' ಚಿತ್ರ ತೆರೆ ಕಂಡಿತು. ಈ ನಡುವೆ ಅಡಿಗರಿಗೆ 'ಮಂದಹಾಸ' ಬಿಡುಗಡೆಯಾಗುತ್ತಿರುವುದು ಸಾಕಷ್ಟು ಸಂಭ್ರಮ ತಂದುಕೊಟ್ಟಿದೆ. 'ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ. ಗಾಯಕನ ಪಾತ್ರದಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ. ಇದೇ ಮೊದಲು. ಜೊತೆಗೆ ಹೆಚ್ಚು ಮಾತನಾಡದ, ಹಾಡಿನಲ್ಲೇ ಗಮನ ಸೆಳೆಯುವ ಪಾತ್ರ ಅದು. ತಡವಾಗಿದ್ದಕ್ಕೆ ಬೇಸರವಿಲ್ಲ. ಯಾಕೆಂದರೆ ಅಂಥ ಕಥೆ ಇನ್ನೂ ಬಂದಿಲ್ಲ. ಹೀಗಾಗಿ ನೋಡುಗರಿಗೆ ಫ್ರೆಶ್ ಸಿನಿಮಾ ಎನಿಸುತ್ತದೆ. ಕಥೆಯಲ್ಲಿ ತುಂಬಾ ಮೆಲೊಡಿ ಇದೆ. ತ್ರಿಕೋನ ಪ್ರೇಮಕಥೆಯಾದರೂ ಹೊಸತವಿದೆ' ಎನ್ನುತ್ತಾರೆ ರಾಕೇಶ್.

'ಇದು ಒಂದರ್ಥದಲ್ಲಿ ಸಂಗೀತ ಪ್ರಧಾನ ಚಿತ್ರ. ಇಬ್ಬರು ನಾಯಕರಿದ್ದರೂ ಕಥೆಗೆ ಇಲ್ಲಿ ಮಹತ್ವ ಇರುವುದರಿಂದ ಎಲ್ಲ ಪಾತ್ರಗಳೂ ಪ್ರೇಕ್ಷಕನ ಗಮನ ಸೆಳೆಯುತ್ತವೆ. ಇಬ್ಬರ ನಾಯಕ ಜೊತೆ ಸುಂದರವಾದ ನಾಯಕಿ ಇದ್ದಾಳೆ. ಈ ಚಿತ್ರ ಬಿಡುಗಡೆಯಾದ ಮೇಲೆ ಚಿತ್ರರಂಗದಲ್ಲಿ ನನಗೆ ದೊಡ್ಡ ಹೆಸರು ಬರುತ್ತದೆ' ಎನ್ನುತ್ತಾರೆ ರಾಕೇಶ್. ಸದ್ಯ ರಾಕೇಶ್ ಅಭಿನಯದ 'ಅಯೋಧ್ಯಪುರಂ', 'ನಟೋರಿಯಸ್‌' ಹಾಗೂ 'ಡವ್‌' ಚಿತ್ರಗಳು ಬಿಡುಗಡೆಯಾಗಬೇಕಿದೆ.
'ಮಂದಹಾಸ' ಚಿತ್ರ ನಮ್ಮೆಲ್ಲರ ಮುಖದಲ್ಲೂ ನಗೆ ಮೂಡಿಸಲಿದೆ ಎಂಬುದು ಅಡಿಗರ  ಮಾತು. ಹೊಸಬರ ಚಿತ್ರಗಳಿಗೆ ಚಿತ್ರಮಂದಿರಗಳ ಸಮಸ್ಯೆ ಇದ್ದಿದ್ದೇ. ಸಾಕಷ್ಟು ಕಷ್ಟಪಟ್ಟು ಬಿಡುಗಡೆ ಮಾಡುವ ಹಂತಕ್ಕೆ ಬಂದಾಗ ಈಗ ಕೊನೆ ಘಳಿಗೆಯಲ್ಲಿ ಮತ್ತೆ ಥಿಯೇಟರ್ ಬದಲಾಯಿಸಿ ತ್ರಿವೇಣಿಗೆ ಹೋಗಬೇಕಾಯಿತು. ಒಂಚೂರು ಎಮೋಷನಲ್, ಕೇಳುವಂಥ ಸಂಗೀತ, ಕಣ್ಣಿಗೆ ಹಬ್ಬ ಉಂಟುಮಾಡುವ ಛಾಯಾಗ್ರಹಣ ಚಿತ್ರದ ನಿಜವಾದ ಶಕ್ತಿ. ಶಶಿಧರ ಅಡಪ ಅವರ ಕಲಾ ನಿರ್ದೇಶನ ಕೂಡ ಕಥೆಗೆ ಪೂರಕವಾಗಿದೆ ಎನ್ನುತ್ತಾರೆ ರಾಕೇಶ್.

ಆದರೆ ಎಷ್ಟು ಚಿತ್ರಮಂದಿರಗಳಲ್ಲಿ 'ಮಂದಹಾಸ' ಬಿಡುಗಡೆಯಾಗುತ್ತಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಎರಡೂವರೆ ವರ್ಷದ ನಂತರ ಬಿಡುಗಡೆಯಾಗುತ್ತಿದೆ ಎಂಬುದೇ ಚಿತ್ರತಂಡದ ಪಾಲಿಗೆ ಸಂಭ್ರಮದ ವಿಷಯ. ಅಂದಹಾಗೆ ಈ ಚಿತ್ರದಲ್ಲಿ ಅಭಿನಯಿಸಬೇಕಾದರೆ ಹಿರಿಯ ಪತ್ರಕರ್ತ ವಿಜಯ್ ಸಾರಥಿ ಅವರು, 'ಈ ಚಿತ್ರ ಬಿಡುಗಡೆಯಾದ ನಂತರ ನನಗೆ ಮತ್ತಷ್ಟು ಒಳ್ಳೆಯ ಅವಕಾಶಗಳು ಸಿಗಲಿವೆ. ಅಂಥ ಅಪರೂಪದ ಪಾತ್ರ ಇಲ್ಲಿ ಮಾಡಿದ್ದೇನೆ' ಎಂದಿದ್ದರಂತೆ. ವಿಷಾದದ ಸಂಗತಿ ಎಂದರೆ ಚಿತ್ರ ಬಿಡುಗಡೆಯಾಗುತ್ತಿದೆ. ಆದರೆ ಈಗ ವಿಜಯ್ ಸಾರಥಿ ಅವರೇ ಇಲ್ಲ ಎಂಬುದೇ ಚಿತ್ರತಂಡದ ನೋವು.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.