ಸಿನಿಮಾ ಲೇಖನ

ಬರ್ಫಿ ಬಂತು!

ಬರ್ಫಿ ಬಂತು!
Published On :

ಒಂದು ಮುದ್ದಾದ ಪ್ರೇಮಕಥೆ... ಹೀಗಂತ ಪದೇಪದೇ ನಿರ್ದೇಶಕ ಶೇಖರ್ ಹೇಳುತ್ತಿದ್ದರೆ ಅವರ ಅಕ್ಕಪಕ್ಕ ಕೂತಿದ್ದ ನಾಯಕ ದಿಗಂತ್ ಹಾಗೂ ಭಾಮಾ ನಾಚಿಕೊಳ್ಳುತ್ತಿದ್ದರು. ಇಷ್ಟು ಸುಂದರವಾಗಿ ಕಾಣುವ ಈ ಜೋಡಿಯೊಂದಿಗೆ ಕ್ಯೂಟ್ ಲವ್ ಸ್ಟೋರಿಯನ್ನೇ ಮಾಡಿರುತ್ತಾರೆ ಬಿಡಿ ಎಂಬುದು ಗಾಂಧಿನಗರದ ನಂಬಿಕೆ. 'ಪೆರೋಲ್‌'ನಂಥ ಭಿನ್ನ ಕಥೆಯುಳ್ಳ ಚಿತ್ರ ನೀಡಿದ್ದ ಶೇಖರ್ ಈ ಬಾರಿ ಎಲ್ಲರೂ ಮೆಚ್ಚಿಕೊಳ್ಳುವಂಥ ಲವ್ ಫಾರ್ಮುಲಾಗೆ ಮನಸ್ಸು ಕೊಟ್ಟಿದ್ದಾರೆ. ಕರ್ನಾಟಕ ಅಲ್ಲದೆ ಉತ್ತರ ಭಾರತದ ರಾಜ್ಯಗಳನ್ನೂ ತಮ್ಮ ಪ್ರೇಮ ಕಥೆಗೆ ಬಳಸಿಕೊಂಡಿರುವ ನಿರ್ದೇಶಕರು, ಪಯಣದಲ್ಲೇ ಕಥೆ ಕಟ್ಟಿಕೊಡುತ್ತಾರೆ.

'ನಾನು ಏನೇ ಮಾಡಿದರೂ ಅದರಲ್ಲಿ ಹೊಸತನವಿರಬೇಕೆಂದು ಬಯಸುವೆ. ತುಂಬಾ ಕನಸು ಕಟ್ಟಿಕೊಂಡು ಬರ್ಫಿ ಚಿತ್ರ ಮಾಡಿದ್ದೇನೆ. ಹೀಗಾಗಿ ಆರಂಭದಿಂದಲೂ ನನ್ನ ಚಿತ್ರ ಪ್ರೇಕ್ಷಕರಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ನನ್ನ ಶ್ರಮ ಚಿತ್ರದ ಪ್ರತಿ ಹಂತದಲ್ಲೂ ಕಾಣಿಸುತ್ತದೆ. ನಿರೂಪಣೆಯಲ್ಲಿ ಹೊಸತವಿದೆ' ಎನ್ನುವ ಶೇಖರ್, ಚಾಕೊಲೇಟ್ ಹೀರೋ ದಿಗಂತ್, ಭಾಮಾ ಜೊತೆಯಾಗಿ ನಟಿಸಿರುವುದು ಹಾಗೂ ಕರ್ನಾಟಕ, ಪಂಜಾಬಿ ಈ ಎರಡೂ ರಾಜ್ಯಗಳ ಸಂಸ್ಕೃತಿಯನ್ನು ಬೆರೆಸಿರುವುದು ಚಿತ್ರದ ವಿಶೇಷತೆ ಎಂದರು.

ತಮ್ಮ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿದ್ದ ನಿರ್ದೇಶಕ ಶೇಖರ್ ಮತ್ತವರ ತಂಡ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಯಿತು. 'ನಾವು ಮೊದಲೇ ಹೇಳಿದಂತೆ ನಿರೀಕ್ಷೆ ಇಟ್ಟುಕೊಂಡು ಬಂದ ಪ್ರೇಕ್ಷಕರಿಗೆ ಬರ್ಫಿ ಖಂಡಿತ ಮೋಸ ಮಾಡಲ್ಲ. ಹಿಂದಿನ ಎರಡೂ ಚಿತ್ರಗಳ ನಿರ್ದೇಶನದಿಂದ ಸಾಕಷ್ಟು ಪಾಠ ಕಲಿತಿದ್ದಲ್ಲದೆ ಪ್ರೇಕ್ಷಕರಿಗೆ ಎಂಥ ಚಿತ್ರ ಬೇಕೆಂಬುದನ್ನು ಅರಿತುಕೊಂಡಿದ್ದೇನೆ' ಎಂದು ಆತ್ಮವಿಮರ್ಶೆಯ ಧಾಟಿಯಲ್ಲಿ ಮಾತನಾಡಿದರು ಶೇಖರ್. ಅಂದಹಾಗೆ ನಟ ದಿಗಂತ್ ಚಿತ್ರಗಳ ಪ್ರಚಾರಕ್ಕೆ ಬರಲ್ಲ ಎಂಬ ಅಪವಾದವನ್ನು ದೂರ ಮಾಡಿಕೊಂಡಿದ್ದಾರೆ. 'ಬರ್ಫಿ' ಚಿತ್ರಕ್ಕೆ ಕರೆದ ಕಡೆಯಲ್ಲೆಲ್ಲ ಹೋಗಿದ್ದಾರೆ. ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಮಾತನಾಡಿದ್ದಾರಂತೆ. ಹೀಗಾಗಿ ಇನ್ನು ಮುಂದೆ ದಿಗಂತ್ ಮೇಲೆ ಯಾರೂ ಅರೋಪಿಸುವಂತಿಲ್ಲ ಎಂಬುದು 'ಬರ್ಫಿ' ತಂಡದ ಸಲಹೆ.

ನಟ ದಿಗಂತ್ ಹಾಗೂ ಭಾಮಾ ಇಬ್ಬರ ಅಭಿನಯ ಚಿತ್ರದ ಹೈಲೈಟ್ ಎಂದು ಮತ್ತೆ ಮತ್ತೆ ಹೇಳಿಕೊಳ್ಳುವುದನ್ನು ನಿರ್ದೇಶಕರು ಮರೆಯಲಿಲ್ಲ. ಪಂಜಾಬ್‌ನ ಅತ್ಯಂತ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದಾರಂತೆ. ನಿರ್ದೇಶಕರ ಹೊಗಳಿಕೆಯಿಂದ ಸಂಭ್ರಮಗೊಂಡಿದ್ದ ನಟ ದಿಗಂತ್ ಮಾತಿಗೆ ನಿಂತುಕೊಂಡರು. 'ತುಂಬಾ ಇಷ್ಟಪಟ್ಟು ಮಾಡಿದ ಚಿತ್ರವಿದು. ಒಳ್ಳೆಯ ತಂಡ ಇದ್ದಿದ್ದಕ್ಕೆ ಚಿತ್ರವನ್ನು ತುಂಬಾ ಚೆನ್ನಾಗಿ ಮಾಡಲು ಆಯಿತು. ಒಳ್ಳೆಯ ಅಭಿರುಚಿ ಇರುವ ಪ್ರೇಕ್ಷಕರಿಗೆ ಮೆಚ್ಚುಗೆಯಾಗುವಂಥ ಸಿನಿಮಾ ಇದು. ನನಗೂ ವೈಯಕ್ತಿಕವಾಗಿ ತುಂಬಾ ಇಷ್ಟವಾಗಿರುವ ಚಿತ್ರವಿದು. ನನ್ನ ಹಿಂದಿನ ಮನಸಾರೆ, ಪಂಚರಂಗಿ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಕೂಡ ಇಷ್ಟವಾಗಲಿದೆ' ಎಂದರು ದಿಗಂತ್.ಕೆ.ಎಂ. ಶಂಕರ್ ಚಿತ್ರದ ನಿರ್ಮಾಪಕರು. ಇವರು ಮತ್ತು ನಿರ್ದೇಶಕರು ಆಪ್ತಮಿತ್ರರು. ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಬಂದಿದ್ದಾರೆ. 'ಗೆಳೆಯ ಶೇಖರ್ ಅವರ ಮೇಲೆ ನಂಬಿಕೆ ಇಟ್ಟು ಈ ಚಿತ್ರಕ್ಕೆ ಹಣ ಹಾಕಿದ್ದೇನೆ. ಒಳ್ಳೆಯ ಸಿನಿಮಾ ಮಾಡಿದ್ದಾರೆ. ಅಂದುಕೊಡ ಬಜೆಟ್ಟಿಗೆ ಸ್ವಲ್ಪ ಜಾಸ್ತಿ ಆದರೂ ನಾವೆಲ್ಲ ಕೂತು ಸಿನಿಮಾ ನೋಡಿದಾಗ ವೆಚ್ಚ ಮಾಡಿದ್ದು ಸಾರ್ಥಕವೆನಿಸಿತು. ನಿರ್ಮಾಪಕ ಸೂರಪ್ಪ ಬಾಬು ನಮ್ಮೊಂದಿಗೆ ಇದ್ದು ಚಿತ್ರ ಬಿಡುಗಡೆಗೆ ಸಹಕಾರ ನೀಡುತ್ತಿದ್ದಾರೆ' ಎಂದು ಹೇಳಿಕೊಂಡರು ಶಂಕರ್.

ಚಿತ್ರವನ್ನು ವಿತರಣೆ ಮಾಡುತ್ತಿರುವವರು ಭಾಷಾ. 'ಶೇಖರ್ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಹಾಗಾಗಿ ಸಾಧ್ಯವಾದಷ್ಟು ಫ್ಯಾಮಿಲಿ ಪ್ರೇಕ್ಷಕರು ಬರುವಂಥ ಚಿತ್ರಮಂದಿರಗಳಲ್ಲೇ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಒಟ್ಟು 70- 80 ಚಿತ್ರಮಂದಿರಗಳಲ್ಲಿ ಬರ್ಫಿ ತೆರೆ ಕಾಣುತ್ತಿದೆ' ಎಂದರು ಭಾಷಾ. ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್, ಸಹ ನಿರ್ದೇಶಕ ಬಾಹುಬಲಿ ಮತ್ತಿತರರು ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಂಡರು. ಶೇಖರ್, ಸಿನಿಮಾ ಗ್ರ್ಯಾಮರ್ ಗೊತ್ತಿರುವ ಒಳ್ಳೆಯ ಚಿತ್ರಕೃಷಿಕ. ಇವರ ನಿರ್ದೇಶನದಲ್ಲಿ ಬರುವ ಸಿನಿಮಾಗಳು ಭಿನ್ನವಾಗಿರುತ್ತವೆ ಎಂಬುದು ಪ್ರೇಕ್ಷಕರ ನಂಬಿಕೆ. ಆ ನಂಬಿಕೆ 'ಬರ್ಫಿ' ಸುಳ್ಳು ಮಾಡದಿರಲಿ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.