ಸಿನಿಮಾ ಲೇಖನ

ಸ್ವೀಟ್ 6 ಟ್ಯೂನ್

ಚಿತ್ರರಂಗಕ್ಕೆ ಮತ್ತೆ ಬರುವುದಾದರೆ ಗ್ರಾಂಡ್ ಎಂಟ್ರಿ ಕೊಡಬೇಕು ಎನ್ನುವುದು ನಟಿ ರಾಧಿಕಾ ಅಲ್ಲ, ರಾಧಿಕಾ ಕುಮಾರಸ್ವಾಮಿಯ ಯೋಚನೆ. ಅದಕ್ಕೆ ತಕ್ಕಂತೆ ...

ಸ್ವೀಟ್ 6 ಟ್ಯೂನ್
Published On :

ಚಿತ್ರರಂಗಕ್ಕೆ ಮತ್ತೆ ಬರುವುದಾದರೆ ಗ್ರಾಂಡ್ ಎಂಟ್ರಿ ಕೊಡಬೇಕು ಎನ್ನುವುದು ನಟಿ ರಾಧಿಕಾ ಅಲ್ಲ, ರಾಧಿಕಾ ಕುಮಾರಸ್ವಾಮಿಯ ಯೋಚನೆ. ಅದಕ್ಕೆ ತಕ್ಕಂತೆ ತನ್ನ ಈ ರೀ ಎಂಟ್ರಿ ಸಿನಿಮಾ ಆರಂಭವಾದಾಗಿನಿಂದಲೂ ಪ್ರತಿ ಹಂತದಲ್ಲೂ ರಿಚ್‌ನೆಸ್ ಕಾಯ್ದುಕೊಂಡು ಬರುತ್ತಿದೆ. ಹೀಗಾಗಿ ಇತ್ತೀಚೆಗೆ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನೂ ಸಹ ಸಖತ್ ಗ್ರಾಂಡ್ ಆಗಿಯೇ ಸೆಲೆಬ್ರೇಟ್ ಮಾಡಿದರು. ಆ ಮೂಲಕ ಈಗಿನಿಂದಲೇ 'ಸ್ವೀಟಿ' ಚಿತ್ರವನ್ನು ಅದ್ಧೂರಿಯಾಗಿ ಪ್ರೇಕ್ಷಕರಿಗೆ ತಲುಪಿಸಬೇಕೆಂಬುದು ಚಿತ್ರತಂಡದ ಅಲೋಚನೆ. ನಾಯಕ ಆದಿತ್ಯ, ನಾಯಕಿ ಕಂ ನಿರ್ಮಾಪಕಿ ರಾಧಿಕಾ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ 'ಸ್ವೀಟಿ' ಚಿತ್ರದ ಸೂತ್ರಧಾರಿಗಳು. 'ನನ್ನ ಜೋಡಿ' ಎಂಬುದು ಚಿತ್ರದ ಟ್ಯಾಗ್ ಲೈನ್.
ಅಂದಹಾಗೆ 'ಭರ್ಜರಿ ಬೇಟೆ' ಚಿತ್ರದಿಂದ ಸ್ಫೂರ್ತಿಗೊಂಡು ಇದಕ್ಕೆ 'ಸ್ವೀಟಿ' ಎಂದು ನಾಮಕರಣ ಮಾಡಲಾಗಿದೆ. ಇದೇ ಹೆಸರು ಇರಲಿ ಎಂದು ಶೀರ್ಷಿಕೆ ಸೂಚಿಸಿದ್ದು ನಟ ಆದಿತ್ಯ. 'ಮಳೆ ಬರಲಿ ಮಂಜು ಇರಲಿ' ಹಾಗೂ 'ವಾರೆವ್ಹಾ!' ಚಿತ್ರಗಳ ನಂತರ ವಿಜಯಲಕ್ಷ್ಮಿ ಸಿಂಗ್ 'ಸ್ವೀಟಿ'ಗೆ ಆ್ಯಕ್ಷನ್, ಕಟ್ ಹೇಳಿದ್ದಾರೆ. ರಂಗುರಂಗಿನ ಕಾರ್ಯಕ್ರಮದ ನಡುವೆ ನಿರ್ದೇಶಕರು ಮಾತಿಗೆ ನಿಂತರು. 'ಈ ಚಿತ್ರ ಮಾಡಲು ಹೋದಾಗ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆ ಹೊತ್ತಿಕೊಂಡಿದ್ದೆ. ಆದರೆ ರಾಧಿಕಾಗೆ ಕಥೆ ಹೇಳಿದಾಗ ಆಕೆ ತುಂಬಾ ಇಷ್ಟಪಟ್ಟಳು. ನನ್ನ ಬ್ಯಾನರ್‌ನಲ್ಲಿ ಇಂಥ ಕಥೆಯನ್ನು ಚಿತ್ರ ಮಾಡುವುದು ಯಾವಾಗ? ಎಂದಳು. ಅದಕ್ಕೆ ನಾನು ನೀವೇ ನಿರ್ಮಾಣ ಮಾಡಿ. ನಾನು ನಿರ್ದೇಶಕಿಯಾಗುತ್ತೇನೆ ಎಂದೆ. ಒಂದು ಮಾತು ಹೇಳದೆ ಖುಷಿಯಿಂದ ಒಪ್ಪಿಕೊಂಡರು. ಎಲ್ಲರೂ ಇಷ್ಟಪಡುವ ಮನೆ ಮನೆಯ ಕಥೆ ಇಲ್ಲಿದೆ. ಆದಿತ್ಯ ಮತ್ತು ರಾಧಿಕಾ ಜೋಡಿಯನ್ನು ಕಥೆಗೆ ಒಗ್ಗಿಸುವುದು ನನಗೆ ಸವಾಲಿನ ಕೆಲಸವಾಗಿತ್ತು. ಒಂದು ಡೆಡ್ಲಿ ಇಮೇಜ್, ಮತ್ತೊಂದು ತುಂಬಾ ವರ್ಷಗಳ ನಂತರ ಚಿತ್ರರಂಗಕ್ಕೆ ಬರುತ್ತಿರುವುದು. ಈ ಎರಡೂ ಕ್ಯಾರೆಕ್ಟರ್‌ಗಳನ್ನು ಕಥೆಯ ಫೀಲ್‌ಗೆ ಬ್ಲೆಂಡ್ ಮಾಡಿದ್ದೇ ನನ್ನ ಸಾಹಸ' ಎಂದರು ನಿರ್ದೇಶಕಿ. ಚಿತ್ರಕ್ಕೆ ಹಾಡುಗಳೇ ಮೊದಲ ಅಹ್ವಾನ. 6 ಹಾಡುಗಳು ಸೂಪರ್ ಆಗಿ ಮೂಡಿಬಂದಿವೆ ಎಂಬುದು ವಿಜಯಲಕ್ಷ್ಮಿ ಸಿಂಗ್ ಅವರ ಮಾತು.
ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಾಹಿತಿ ದೊಡ್ಡ ರಂಗೇಗೌಡ, ಕವಿರಾಜ್, ವಿ.ನಾಗೇಂದ್ರ ಪ್ರಸಾದ್, ಚಂದನ್ ಶೆಟ್ಟಿ, ಚೇತನ್ ಅವರು ಗೀತೆಗಳಿಗೆ ಸಾಹಿತ್ಯ ಒದಗಿಸಿದ್ದಾರೆ. 'ಸ್ವೀಟಿ ನನ್ನ ಜೋಡಿ... ಎನ್ನುವ ಹಾಡು ಕನ್ನಡ ಚಿತ್ರರಂಗದ ತುಂಬಾ ಪ್ರಸಿದ್ಧವಾದ ಯುಗಳ ಗೀತೆ. ಈ ಹಾಡಿನಷ್ಟೆ ಎಲ್ಲ ಹಾಡುಗಳು ಸ್ವೀಟಾಗಿ ಬಂದಿವೆ. ಇದು ನನ್ನ ಮೆಚ್ಚಿನ ಆಲ್ಬಂ. ಇಲ್ಲಿನ ಹಾಡುಗಳಲ್ಲಿ ನನ್ನದೇ ನೆನಪುಗಳಿವೆ. ನಿರ್ದೇಶಕರಿಗೆ ಸಂಗೀತದ ಅಭಿರುಚಿ ಇದ್ದುದ್ದರಿಂದ ಇಷ್ಟು ಚೆನ್ನಾಗಿ ಹಾಡುಗಳು ಬರಲು ಸಾಧ್ಯವಾಯಿತು. 'ಲಕ್ಕಿ' ಚಿತ್ರದ ನಂತರ ರಾಧಿಕಾ ಅವರು ನನಗೆ ಮತ್ತೊಂದು ಅವಕಾಶ ಕೊಟ್ಟಿದ್ದಾರೆ' ಎಂದರು ಅರ್ಜುನ್ ಜನ್ಯ. ಈ ಚಿತ್ರದ ಮಾಧುರ್ಯದ ಹಾಡನ್ನು ಕವಿರಾಜ್ ಬರೆದಿದ್ದಾರೆ. 'ನನ್ನ ಪಾಲಿಗೆ ಇಂಥ ಹಾಡುಗಳು ಸಾಕಷ್ಟು ಸಿಕ್ಕಿವೆ. ನಾನು ಬರೆದ ಹಾಡನ್ನು ಕಾಶ್ಮಿರದ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಿದ್ದು ಖುಷಿ ಕೊಟ್ಟಿದೆ' ಎಂದರು ಕವಿರಾಜ್. ಚಿತ್ರತಂಡದ ಮಾತಿನ ನಡುವೆ ಸಭಾಂಗಣದಲ್ಲಿ ಬೆಳಕು ಮತ್ತಷ್ಟು ಪ್ರಜ್ವಲಿಸಿತು. ಸಂಗೀತದ ಅಬ್ಬರ ಹೆಚ್ಚಾಗುತ್ತಿದಂತೆಯೇ ರಾಧಿಕಾ ಕುಮಾರಸ್ವಾಮಿ ವೇದಿಕೆಗೆ ಬಂದರು. ಆದಿತ್ಯ ಕೂಡ ಸಪ್ರೈಸ್ ಆಗಿ ಎಂಟ್ರಿಕೊಟ್ಟರು.
ವೇದಿಕೆ ಏರಿದ ರಾಧಿಕಾ ತುಂಬಾ ಎಕ್ಸೈಟ್ ಆಗಿದ್ದರು. ಅದೇ ಖುಷಿಯಲ್ಲಿ ಚಿತ್ರತಂಡದವರನ್ನೂ ವೇದಿಕೆಗೆ ಕರೆದರು. 'ಈ ಚಿತ್ರವನ್ನು ನಾನೇ ನಿರ್ಮಾಣ ಮಾಡಿದ್ದು ನನ್ನ ಪುಣ್ಯ. ನಮ್ಮ ನಿರ್ದೇಶಕಿಯ ಹೆಸರಿನಲ್ಲೇ ವಿಜಯ ಮತ್ತು ಲಕ್ಷ್ಮಿ ಎರಡೂ ಇದೆ. ನಮ್ಮ ಚಿತ್ರಕ್ಕೂ ಆ ಎರಡು ಒಲಿದು ಬರಲಿದೆ. ಈ ಚಿತ್ರದಲ್ಲಿ ನನ್ನ ತುಂಬಾ ಸುಂದರವಾಗಿ ತೋರಿಸಿದ್ದಾರೆ. ಅದಕ್ಕೆ ಕಾರಣ ನಿರ್ದೇಶಕರು ಕೂಡ ಕಲಾವಿದರೇ ಆಗಿದ್ದರಿಂದ. ಮಹಿಳಾ ನಿರ್ದೇಶಕಿ ಜೊತೆ ಕೆಲಸ ಮಾಡಿದ್ದು ಇದೇ ಮೊದಲು. ಆದಿತ್ಯ ಒಳ್ಳೆಯ ನಟ' ಎಂದ ರಾಧಿಕಾ, ಚಿತ್ರಕ್ಕೆ ದುಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇಬ್ಬರು ಲೇಡಿಗಳ ನಡುವೆ ನಾನೊಬ್ಬ ಬಾಯ್ ಎಂದು ಮಾತಿಗೆ ನಿಂತವರು ನಟ ಅದಿತ್ಯ. ಹುಡುಗಿಯರು ಇಷ್ಟಪಡುವಂಥ ಹುಡುಗನಾಗಿ ಆದಿತ್ಯ ಇಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ನಿರ್ದೇಶಕಿಯ ಹೊಗಳಿಕೆ ಮಾತು. 'ರಾಧಿಕಾಗೆ ಇನ್ನು ಮುಂದೆ ಸ್ವೀಟಿ ರಾಧಿಕಾ ಅಂತಲೇ ಫಿಕ್ಸ್. ಈ ಚಿತ್ರದ ಮೂಲಕ ರಾಧಿಕಾಳಿಂದ ತುಂಬಾ ಕಲಿತಿದ್ದೇನೆ. ಇಲ್ಲಿವರೆಗೂ ನನ್ನ ಕೈಗೆ ಮಚ್ಚು ಕೊಟ್ಟವರೇ ಹೆಚ್ಚು. 'ಎದೆಗಾರಿಕೆ' ಚಿತ್ರದ ನಂತರ 20ಕ್ಕೂ ಹೆಚ್ಚು ಭೂಗತ ಲೋಕದ ಕಥೆಗಳನ್ನು ಕೇಳಿ ಬೇಸರವಾಗಿತ್ತು. ಅಂಥ ಸಮಯದಲ್ಲಿ ಸಿಕ್ಕಿದ್ದು 'ಸ್ವೀಟಿ' ಚಿತ್ರ. ಎಲ್ಲರು ಇಷ್ಟಪಡುವ ಚಿತ್ರವಿದು' ಎಂದರು ಆದಿತ್ಯ. ಚಿತ್ರತಂಡದವರು ಯಾರೇ ಮಾತನಾಡಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಮೆಚ್ಚಿ, ಹೊಗಳುವುದರಿಂದಲೇ ಮಾತು ಶುರುಮಾಡುತ್ತಿದ್ದರು. ಒಂದು ರೀತಿ ಯಲ್ಲಿ ಅಲ್ಲಿ ರಾಧಿಕಾ ಆರಾಧನೆ ನಡೆಯಿತು.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.