Next ಸಿದ್ದು
ಪಕ್ಕನೆ ನೋಡಿದರೆ ಇನ್ನೂ ಹೆಸರಿಡದ ನೆಕ್ಸ್ಟ್ ಫಿಲಂನ ಹೀರೋನಂತೆ ಕಾಣಿಸುವ ಈ ಹುಡುಗ ಗಾಂಧಿನಗರಕ್ಕೆ ಬಂದದ್ದೂ ಸಿನೆಮಾಕ್ಕಾಗಿಯೇ. ನೆಲೆ ಕಂಡುಕೊಂಡಿರುವುದು ಮಾತ್ರ ಟಿವಿ ಸೀರಿಯಲ್ ಲೋಕದಲ್ಲಿ. ಹೆಸರು ಸಿದ್ದು ಪೂರ್ಣಚಂದ್ರ.
ಇವರ ಕತೆಯನ್ನು ಮೊದಲಿನಿಂದ ಹೇಳಿದರೆ, ಅದು ಬಣ್ಣದ ಲೋಕದಲ್ಲಿ ನೆಲೆ ಕಾಣಲು ಹಂಬಲಿಸಿ ಇಲ್ಲಿಗೆ ಆಗಮಿಸುವ ಎಲ್ಲ ಕನಸುಗಂಗಳ ಹುಡುಗರ ಕತೆಯ ಒಂದು ಮಾದರಿ ಸಿಕ್ಕಂತಾಗಬಹುದು. ಹುಟ್ಟಿದ್ದು ಹೊಳೆನರಸೀಪುರದ ಕಬ್ಬೂರು. ಚೆನ್ನರಾಯಪಟ್ಟಣದಲ್ಲಿ ಪದವಿ. ಕನ್ನಡ ಸಾಹಿತ್ಯದಲ್ಲಿ ಎಂಎ. ಕಲಿತದ್ದೆಲ್ಲ ಬಿಟ್ಹಾಕಿ ಬೆಂಗಳೂರು ಬಸ್ ಹತ್ತಿ ಗಾಂಧಿನಗರದಲ್ಲಿ ಇಳಿದಾಗ, ಚಿತ್ರಗೀತಕಾರ ಆಗಬೇಕೆಂಬ ಕನಸು. ದೊಡ್ಡ ದೊಡ್ಡ ನಿರ್ದೇಶಕರ ಗರಡಿಯಲ್ಲಿ ದುಡಿಮೆ. ಹುಡುಗನ ಪ್ರತಿಭೆ ಬಳಸಿಕೊಳ್ಳುವವರೇ ಎಲ್ಲರೂ; ಕ್ರೆಡಿಟ್ ನೀಡಿದವರು ಕಡಿಮೆ. ಕಾಸು ನೀಡಿದವರು ಇನ್ನೂ ಕಡಿಮೆ.
ಬಣ್ಣದ ಲೋಕದ ಬಗ್ಗೆ ರೋಸಿ ಹೋಗಿ ಊರು ಸೇರಿದರು. ಗೀಳು ಎಲ್ಲಿ ಹೋಗುತ್ತದೆ? ಕನಸು ಮತ್ತೆ ಕರೆಯಿತು. ಈ ಸಲ ಸೀರಿಯಲ್ ರೂಪದಲ್ಲಿ. ಮನೆಮಗಳು, ಒಲವೇ ನಮ್ಮ ಬದುಕು, ಮಿ.ಭೂಪತಿ, ಪರಮೇಶಿ ಪರದಾಟ, ಅತ್ತೆ ಸೊಸೆ, ಲಕ್ಷ್ಮಿ, ಅಗ್ನಿಶಿಖೆ, ಗುಪ್ತಗಾಮಿನಿ, ಕಾವ್ಯಾಂಜಲಿ ಧಾರಾವಾಹಿಗಳಲ್ಲಿ ಸಂಚಿಕೆ, ಸಹ ನಿರ್ದೇಶನಗಳಲ್ಲಿ ಸೈ ಎನಿಸಿಕೊಂಡರು. ಇದರ ಮಧ್ಯೆಯೇ ಸಿದ್ದಪ್ಪಾಜಿ ಪವಾಡಗಳು, ಏಳುಮಲೆ ಅಂದಗಾರ, ಭೈರವೇಶ್ವರ ಮುಂತಾದ ಭಕ್ತಿ ಡಾಕ್ಯುಮೆಂಟರಿ ಫಿಲಂಗಳ ತಯಾರಿಕೆ.
ಟ್ವಿಸ್ಟ್ ಸಿಕ್ಕಿದ್ದು ಕಸ್ತೂರಿ ಚಾನೆಲ್‌ನಲ್ಲಿ ಅನಿತಾ ಕುಮಾರಸ್ವಾಮಿ ಸೀರಿಯಲ್ ನಿರ್ದೇಶನಕ್ಕೆ ಕರೆದಾಗ. 'ಯಶೋಧರ ನೆಕ್ಸ್ಟ್ ಸಿಎಂ' ಸೀರಿಯಲ್‌ನ ವಿಶಿಷ್ಟ ಕಥಾಹಂದರವನ್ನು ಬೆಳೆಸಿ ನೋಡುಗರ ಮುಂದಿಡುವ ಸವಾಲು. ನೂರು ಎಪಿಸೋಡ್ ದಾಟುತ್ತಿರುವ ಈ ಧಾರಾವಾಹಿಯ ಯಶಸ್ಸನ್ನು ಅದರ ಟಿಆರ್‌ಪಿಯೇ ಹೇಳುತ್ತಿದೆ. ಟಪೋರಿ ಹುಡುಗಿಯಂತೆ ಕಾಣಿಸುವ ಯಶೋಧರೆ ಮುಂದಿನ ಸಿಎಂ ಹೇಗಾಗ್ತಾಳೆ ಅನ್ನುವುದೇ ಇದರ ಸಸ್ಪೆನ್ಸ್.
'ಕಾವ್ಯಾಂಜಲಿಯ ರಂಗನಾಥ್ ನನ್ನ ಗುರು, ಟಿ.ಎನ್.ಸೀತಾರಾಂ ಆದರ್ಶ' ಅನ್ನುವ ಸಿದ್ದುವಿನ ಕಾಲುಗಳು ಕಿರುತೆರೆಯಲ್ಲಿ ನೆಟ್ಟಿವೆ. ಕಣ್ಣುಗಳು ದೊಡ್ಡತೆರೆಯನ್ನು ಗಮನಿಸುತ್ತಿವೆ. ಸಿನೆಮಾ ಮಾಡಬೇಕೆಂಬ ಹಂಬಲ ಎದೆಯಲ್ಲಿ. ಕತೆ ಸಿದ್ಧವಾಗಿದೆ. ನಿರ್ಮಾಪಕರೂ ಇದ್ದಾರೆ. ಸೀರಿಯಲ್‌ನ ಹೊಣೆ ಮುಗಿದ ಬಳಿಕ ಇದಕ್ಕೆ ಸ್ಟಾರ್ಟ್, ಆ್ಯಕ್ಷನ್.
'ತುಂಬಾ ಮಂದಿ ನನ್ನ ಪ್ರತಿಭೆ ಬಳಸಿಕೊಂಡು ಕೈಬಿಟ್ರು...' ಅನ್ನುವ ಸಿದ್ದು ಮಾತಿನಲ್ಲಿ ರಾಜ್ಯದ ಹಳ್ಳಿ ಮೂಲೆಯಿಂದ ಆಶಾವಾದಿಗಳಾಗಿ ಬೆಂಗಳೂರಿಗೆ ಬರುವ ಎಲ್ಲ ಪ್ರತಿಭಾವಂತ ತರುಣರ ಯಾತನೆ ಕಾಣಿಸುತ್ತದೆ. ಹಾಗೇ ಸಾಧಿಸುವ ಛಲವೂ. ಹಾಸನದಲ್ಲಿ 'ಗಂಧರ್ವ ಫಿಲಂ ಇನ್‌ಸ್ಟಿಟ್ಯೂಟ್' ನಡೆಸುತ್ತಿರುವ ಸಿದ್ದು ಉದ್ದೇಶ ತನ್ನಂಥ ಹೊಸ ಪ್ರತಿಭಾವಂತರನ್ನು ಗುರುತಿಸಿ ತರಬೇತಿ ನೀಡಿ ಬೆಳೆಸುವುದು. ಇವರ ಸೀರಿಯಲ್‌ನ ಮುಕ್ಕಾಲು ಪಾಲು ಇಂಥ ಹೊಸಬರೇ ಇದ್ದಾರೆ.
-ವಿಹಂಗಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

