Aದೆಗಾರಿಕೆ
ನಮ್ಮ ಕನ್ನಡ ಚಿತ್ರರಂಗದ ಕೆಲ ನಿರ್ಮಾಪಕರಿಗೆ ಕಾಸ್ಟ್ಯೂಮ್ ವೆಚ್ಚ ಉಳಿಯುತ್ತಿದೆ! ಮುಂದೆ ಈ ಉಳಿತಾಯ ಯೋಜನೆ...

ನಮ್ಮ ಕನ್ನಡ ಚಿತ್ರರಂಗದ ಕೆಲ ನಿರ್ಮಾಪಕರಿಗೆ ಕಾಸ್ಟ್ಯೂಮ್ ವೆಚ್ಚ ಉಳಿಯುತ್ತಿದೆ! ಮುಂದೆ ಈ ಉಳಿತಾಯ ಯೋಜನೆ ಯಾವ ಮಟ್ಟಕ್ಕೆ ಪ್ರಭಾವ ಬೀರಲಿದೆ ಎಂದರೆ ನಾಯಕಿ ಯಾವುದೇ ಕಾರಣಕ್ಕೂ ತನಗೆ ಇಂಥ ಬಟ್ಟೆನೇ ಬೇಕು ಅಂಥ ಹಠ ಹಿಡಿದು ವಿವಾದ ಮಾಡಿಕೊಂಡು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಲ್ಲ! ಅಚ್ಚರಿ ಎನ್ನಿಸಿದರೂ ಇದು ನಿಜ. ಇನ್ಮುಂದೆ ರೆಗ್ಯುಲರ್ ಸಿನಿಮಾಗಳ ಕಾಸ್ಟ್ಯೂಮ್ ಡಿಸೈನರ್‌ಗಳಿಗೆ ಹೆಚ್ಚು ಕೆಲಸ ಇರಲ್ಲವೇನೋ? ಇಂಥ ಅನುಮಾನಗಳಿಗೆ ಕಾರಣ ಬೆಳ್ಳಿಪರದೆಯನ್ನು 'ನೀಲಿ'ಮಯವಾಗಿಸುತ್ತಿರುವ ಇತ್ತೀಚಿನ ಚಿತ್ರಗಳು. 'ಕಡ್ಡಾಯವಾಗಿ ವಯಸ್ಕರರಿಗೆ ಮಾತ್ರ' ಎನ್ನುವ ಸೆನ್ಸಾರ್ ಮಂಡಳಿಯ ಟ್ಯಾಗ್‌ಲೈನ್ ಹೊತ್ತು ಬರುತ್ತಿರುವ ಈ 'ನೀಲಿ' ಚಿತ್ರಗಳ ಹಾವಳಿ ಈಗ ವಿಪರೀತ.
ಹಾಗೆ ನೋಡಿದರೆ, ಥರ್ಡ್ ಗ್ರೇಡ್ ಚಿತ್ರಗಳು ತೀರಾ ಅಪರಿಚಿತವೇನಲ್ಲ. ಆದರೆ, ಅವು ಅಧಿಕೃತವಾಗಿ ವಯಸ್ಕರ ಚಿತ್ರಗಳಾಗಿದ್ದವು. ಆ ಸಿನಿಮಾಗಳ ಮಾರುಕಟ್ಟೆಯ ಭಾಷೆಯಲ್ಲೇ ಕರೆಯುವುದಾದರೆ ಸಿಂಗಲ್ 'ಎಕ್ಸ್' ಹಾಗೂ ಡಬಲ್ 'ಎಕ್ಸ್'. 'ರೇವತಿ', 'ರಂಜಿತಾ', 'ಮಾಲಾ', 'ರಾತ್ರಿ', 'ಬ್ಯೂಟಿ ಆಂಟಿ'ಯಂಥ ಈ 'ಎಕ್ಸ್' ಲೇಬಲ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದರೂ ಇವುಗಳನ್ನು ನೋಡುವಂತೆ ಆಯಾ ಚಿತ್ರದ ನಿರ್ದೇಶಕರು, ಕಲಾವಿದರು, ನಿರ್ಮಾಪಕರು ಸಾರ್ವಜನಿಕರಿಗೆ ಅಹ್ವಾನವೇನು ಕೊಡುತ್ತಿರಲಿಲ್ಲ. ಆದರೆ, ನಾವು ಮಾತನಾಡುತ್ತಿರುವುದು ಅಧಿಕೃತ ನೀಲಿ ಚಿತ್ರಗಳ ಬಗ್ಗೆ ಅಲ್ಲ. 'ಕುಟುಂಬ ಸಮೇತರಾಗಿ ಬಂದು ನೋಡಿ. ಪಕ್ಕಾ ಮನರಂಜನೆ ಚಿತ್ರ. ಬಹುಕೋಟಿ ವೆಚ್ಚದಲ್ಲಿ ಈ ಚಿತ್ರ ಮಾಡಿದ್ದೇವೆ. ನಾಯಕಿ ಪರದೇಶದ ನಾರಿ. ಇದೇ ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲ ನಮಗಿರಲಿ' ಎನ್ನುವ ಮಾತಿನ ಸರದಿಯಲ್ಲಿ ತೆರೆ ಕಾಣುತ್ತಿರುವ ರೆಗ್ಯುಲರ್ ಸಿನಿಮಾಗಳ ಲೇಬಲ್ ಹೊತ್ತ 'ಕಾಮ'ನ್ ಚಿತ್ರಗಳ ಕುರಿತು.
ಇತ್ತೀಚೆಗಷ್ಟೆ ಬಿಡುಗಡೆಯಾದ ಅಂಥ 'ಕಾಮ'ಲೆ ಚಿತ್ರ 'ಸಿಲ್ಕ್'. ಈ ಚಿತ್ರ ನೋಡಿದವರಿಗೆ ಅಲ್ಲಿ ವೀಣಾ ಮಲ್ಲಿಕ್‌ಳಿಂದ ನಿರ್ದೇಶಕ ತ್ರಿಶೂಲ್ ಯಾಕೆ ಪದೇ ಪದೇ ಬಟ್ಟೆ ಬಿಚ್ಚಿಸುತ್ತಾರೆ ಎಂದು ನಿರ್ದೇಶಕರೇ ಹೇಳಬೇಕು.
ಇದು ಕೇವಲ 'ಸಿಲ್ಕ್' ಚಿತ್ರದ ಕಥೆಯಲ್ಲ, ಅದೇ ವಾರ ಬಿಡುಗಡೆಯಾದ 'ಅಶೀರ್ವಾದ' ಚಿತ್ರದ್ದೂ ಇದೇ ಕಾಮಪುರಾಣ. ಹಾಗಂತ ಕನ್ನಡ ಚಿತ್ರಗಳಿಗೆ 'ಅಡಲ್ಟ್ಸ್ ಕಾಯಿಲೆ' ಬಂದಿದ್ದು ಹೊಸದಲ್ಲ.
ಎನ್.ಎಸ್. ರಾವ್ ಹಾಗೂ ಉಮಾಶ್ರೀ ಜೋಡಿ ಕಾಲದಿಂದ ಹಿಡಿದು ಕಾಶಿನಾಥರ 'ಅನುಭವ'ದವರೆಗೂ ಪೋಲಿತನ ಸಿನಿಮಾಗಳನ್ನು ಆವರಿಸಿಕೊಂಡಿದೆ. ಆದರೆ ಅದು ಎಂದೂ ತನ್ನ ಮಿತಿ ದಾಟಿಲ್ಲ. ನಟಿ ಉಮಾಶ್ರೀ ಎಳನೀರು ಮಾರುವ ದೃಶ್ಯ. ಫಣಿರಾಮಚಂದ್ರ ಅಲ್ಲಿಗೆ ಬಂದು 'ಒಳ್ಳೆ ಎಳನೀರು ಕೊಡು' ಅಂತಾರೆ. ಕೂಡಲೇ ಉಮಾಶ್ರೀ ಎಳನೀರನ್ನು ತನ್ನೆದೆಯ ಸೀಳು ಹಾದಿಯಲ್ಲಿ ಇಟ್ಟುಕೊಂಡು ಕೊಚ್ಚುತ್ತಾಳೆ. ಆಗ ಕ್ಯಾಮೆರಾ ತನ್ನ ರಸಿಕತನ ತೋರಿಸುತ್ತದೆ. ಫಣಿರಾಮಚಂದ್ರರಿಗೆ ಎಳನೀರಿಗಿಂತ ಅದರ ಅಕ್ಕಪಕ್ಕದ ಉಬ್ಬು ತಗ್ಗುಗಳ ಮೇಲೆಯೇ ಕಣ್ಣು. ಅಲ್ಲಿಗೆ ಸೀನ್ ಕಟ್. ಆಗಿನ ಪೋಲಿತನ ಹೀಗಿತ್ತು. ಆದರೆ ಎಂದೂ ವೀಣಾ ಮಲ್ಲಿಕ್ ಥರ ಕ್ಯಾಮೆರಾ ಮುಂದೆ ವ್ಯಾಯಾಮ ಮಾಡಲಿಲ್ಲ. ಮಾತು ಕೂಡ ಗಡಿ ದಾಟುತ್ತಿರಲಿಲ್ಲ. ಆದರೆ ಈಗ? ಛೇ, ಅದರ ಬಗ್ಗೆ ಇಲ್ಲಿ ಹೇಳೋದೇ ಬೇಡ. 'ಗಾಳಿ' ಎನ್ನುವ ಧರಿದ್ರ ಚಿತ್ರದ ಟ್ರೈಲರ್ ನೋಡಿದರೆ ಗೊತ್ತಾಗುತ್ತದೆ.
ಈ ಚಿತ್ರಗಳಿಗೂ ಮುನ್ನ 'ಕೊಟ್ಲಲ್ಲಪ್ಪೋ ಕೈ' ಚಿತ್ರವಂತೂ ಬಿಡುಗಡೆಗೂ ಮುನ್ನ ದೊಡ್ಡ ಪ್ರಚಾರ ಪಡೆದುಕೊಂಡಿದ್ದು ಅದರ ವಿವಾದದಿಂದ ಮಾತ್ರವಲ್ಲ. ಆ ಚಿತ್ರದಲ್ಲಿ ನಾಯಕಿ ಸಾಧ್ಯವಾದಷ್ಟು ಬಟ್ಟೆ ಕಡಿಮೆ ಹಾಕಿದ್ದಾಳೆ. ಹೀಗಾಗಿ ಚಿತ್ರ ಸೂಪರ್ ಡೂಪರ್ ಹಿಟ್ ಆಗುತ್ತದೆಂಬ ಲೆಕ್ಕಾಚಾರದಲ್ಲಿ ರಗಳೆಯೂ ಹುಟ್ಟಿಕೊಂಡಿತು. ಅದರ ಬೆತ್ತಲೆ ಚಿತ್ರಗಳು ಮಾಧ್ಯಮಗಳಲ್ಲಿ ರಾರಾಜಿಸಿಬಿಟ್ಟವು. 'ದಂಡುಪಾಳ್ಯ'ದಲ್ಲಿ ಪೂಜಾಗಾಂಧಿಯ 'ಟಾಪ್‌ಲೆಸ್' ಬಾಡಿ ಶೋ ಒಂದು ವಾರದ ಮಟ್ಟಿಗೆ ಟಾಪ್‌ಟೆನ್ ಸುದ್ದಿಯಾಗಿತ್ತು. 'ಬೆನ್ನು' ಶೋಗಳಿಂದಲೇ ರಾತ್ರೋ ರಾತ್ರಿ ರಾಣಿಯಾದ ರೂಪಾ ನಟರಾಜ್ ಅಭಿನಯದ 'ಮೈಸೂರು ಮಲ್ಲಿಗೆ' ಚಿತ್ರವನ್ನೇ ತೆಗೆದುಕೊಳ್ಳಿ. ಚಿತ್ರ ಸೆಟ್ಟೇರುವ ಮುನ್ನವೇ ಅದರ ಪೋಸ್ಟರ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ. ಆದರೆ, ರೂಪಾ ನಟರಾಜ್ ಬೆನ್ನು ತೋರಿಸಿರುವ ಪೋಸ್ಟರ್‌ಗಳಿಗೂ ಚಿತ್ರದ ಕಥೆಗೂ ಒಂದೇ ಒಂದು ಕೂದಲೆಳೆಯಷ್ಟು ಸಂಬಂಧ ಇಲ್ಲ. ಆದರೂ ರೂಪಾ ಬೆತ್ತಲಾಗಿ ಎಲ್ಲ ಕಡೆ ಸ್ಕಿನ್ ಶೋ ಮಾಡುತ್ತಿರುವುದರ ಗುಟ್ಟೇನು? ಇನ್ನು ಬಿಡುಗಡೆಯ ಹಾದಿಯಲ್ಲಿರುವ 'ಬ್ಲೂ ಮೂನ್' ಚಿತ್ರದಲ್ಲಿ ನಾಯಕ, ನಾಯಕಿ ಇಬ್ಬರಿಗೂ ಬಟ್ಟೆ ಅಂದ್ರೇನೇ ಅಲರ್ಜಿ ಎನ್ನಿಸಿರಬೇಕು, ಆ ಮಟ್ಟಿಗೆ ಅವರಿಬ್ಬರು ಮೈ ಚಳಿ ಬಿಟ್ಟಿದ್ದಾರೆ. ಈ 'ನೀಲಿ' ಚಿತ್ರಗಳನ್ನು ಪಟ್ಟಿ ಮಾಡುತ್ತ ಹೋದರೆ ಹೊತ್ತು ಮುಳುಗುವುದೇ ಗೊತ್ತಾಗುವುದಿಲ್ಲ ಬಿಡಿ.
ಹೀಗಾಗಿ ಒಂದಲ್ಲ ಒಂದು ಕಾರಣಕ್ಕೆ ಸಾರ್ವಜನಿಕ ಸನ್ಮಾನಕ್ಕೆ ಗುರಿಯಾಗುತ್ತಿರುವ ಕನ್ನಡ ಚಿತ್ರಗಳು, ಇತ್ತೀಚೆಗೆ ಕಾನೂನಿನ ಕಟಕಟೆಯಿಂದಲೂ ಮಂಗಳಾರತಿ ಮಾಡಿಸಿಕೊಳ್ಳುತ್ತಿವೆ. ಅಲ್ಲದೆ, ಇತ್ತೀಚೆಗೆ ಇಂಥ ಚಿತ್ರಗಳ ಮೇಲೆ ಬೆಳಕು ಚೆಲ್ಲುವಂಥ ಸಂಶೋಧನಾ ವರದಿಯೊಂದು ಬಂದಿದೆ. ಕನ್ನಡ ಚಿತ್ರರಂಗ ಮುಖಮುಚ್ಚಿಕೊಂಡು ಆಲಿಸುವಂತೆ ಸಂಶೋಧನೆ ಮಾಡಿದವರು ಖ್ಯಾತ ಸಮಾಜಶಾಸ್ತ್ರಜ್ಞ ಪ್ರೊ.ಜಿ.ಕೆ. ಕಾರಂತ್, ಅವರ ತಂಡ. ಇವರ ಪ್ರಕಾರ, ವಯಸ್ಕರ ('ಎ') ಚಿತ್ರಗಳು ಕನ್ನಡದಲ್ಲೇ ಹೆಚ್ಚಾಗಿವೆ. ರಾಷ್ಟ್ರೀಯ ಚಿತ್ರ ನಿರ್ಮಾಣದ ಸರಾಸರಿಯಲ್ಲಿ ಕನ್ನಡ ಚಿತ್ರರಂಗ ವಯಸ್ಕರ ಚಿತ್ರಗಳನ್ನು ನಿರ್ಮಿಸುವುದರಲ್ಲಿ ಇತರ ಭಾಷೆಗಳಿಗಿಂತ ಮುಂದಿದೆ. ಕೆಲವು ದೃಶ್ಯ, ಡೈಲಾಗುಗಳಿಗೆ ಸೆನ್ಸಾರ್‌ನಲ್ಲಿ ಕತ್ತರಿ ಹಾಕಿಸಿಕೊಳ್ಳುವುದರಲ್ಲಿ ಕನ್ನಡ ಚಿತ್ರಗಳು ಇತರೆ ಭಾಷೆಗಳ ಚಿತ್ರಗಳಿಕ್ಕಿಂತ ಮುಂದಿದೆ ಎನ್ನುತ್ತದೆ ಕಾರಂತ್ ವರದಿ. ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿರುವ ಹಾಗೂ ಚಿತ್ರರಂಗದಲ್ಲಿ ಸೋತ ಕೆಲ ನಿರ್ಮಾಪಕರ ಒಲವು ನೀಲಿ ಚಿತ್ರಗಳ ಪರವಾಗಿದೆಯಂತೆ. ಕನ್ನಡೇತರ ಚಿತ್ರಗಳಲ್ಲಿ ಸೆನ್ಸಾರ್ ಕತ್ತರಿ ಪ್ರಯೋಗಿಸಿದ ಚಿತ್ರಗಳ ಸಂಖ್ಯೆ ಶೇ.48ರಿಂದ ಶೇ.38ಕ್ಕೆ ಇಳಿದಿದೆ. ಆದರೆ 2005ರಿಂದ 10ರ ವೇಳೆ ಸಾಮಾಜಿಕ ಸಂದೇಶವಿರುವ ಕನ್ನಡ ಚಿತ್ರಗಳ ಸಂಖ್ಯೆ ಶೇ.75ರಿಂದ 55ಕ್ಕೆ ಬಂದಿದ್ದು, ಈ ಚಿತ್ರಗಳ ಜಾಗವನ್ನು ನೀಲಿ ಹಾಗೂ ಅಡಲ್ಟ್ಸ್ ಕಾಮಿಡಿ ಚಿತ್ರಗಳು ಆಕ್ರಮಿಸಿಕೊಂಡಿವೆ ಎಂಬುದು ಅಧ್ಯಯನ ತಂಡದ ಮಾತು.
ಹೀಗಾಗಿ 'ಬದುಕಿನಿಂದ ನೇರವಾಗಿ ಹೆಕ್ಕಿ ತೆಗೆದ ಒಂದು ದೃಶ್ಯ ಮಾಧ್ಯಮ ಸಿನಿಮಾ' ಎನ್ನುವ ಚಿತ್ರಪ್ರೇಮಿಗಳ ಮಾತು ಇಲ್ಲಿ ಅರ್ಥ ಕಳೆದುಕೊಳ್ಳುತ್ತಿದೆ. ಪೋಲಿತನ ಗಡಿ ಮೀರಿದೆ. ಅಶ್ಲೀಲತೆ ಅಂಕೆ ಮೀರಿ ನಿಂತಿದೆ. ನಾಯಕಿಯರ ಬಟ್ಟೆಗಳು ದಿನೇ ದಿನೇ ಕಡಿಮೆಯಾಗುತ್ತಿದೆ. ಕೇವಲ ಕಾಸು ಮಾಡುವ ಒಂದೇ ಉದ್ದೇಶ ಇಟ್ಟುಕೊಂಡಿರುವ ನಿರ್ಮಾಪಕರು ಸಿನಿಮಾ ಸಂಸ್ಕೃತಿಯ ಘನತೆಯನ್ನು 'ಗಾಳಿ'ಗೆ ತೂರಿ ಸೌತೆಕಾಯಿ, ಬದನೆ ಕಾಯಿ, ಕಂಬ ನೆಡುವಂಥ ಪೋಲಿ ಮಾತಿನ ಆಟಗಳನ್ನೂ ಮೀರಿದ್ದಾರೆ. ಇದರಿಂದ ಚಿತ್ರರಂಗಕ್ಕೆ ಯಾವ ಲಾಭವೂ ಇಲ್ಲ. ನಿರ್ಮಾಪಕನಿಗೆ ಕಾಸ್ಟ್ಯೂಮ್ ವೆಚ್ಚದ ಉಳಿತಾಯ ಬಿಟ್ಟು!
ಲಾಸ್ಟ್ ಬಾಲ್
ಚಿತ್ರಗಳಲ್ಲಿ ರಕ್ತಪಾತ ಹರಿಸಿ, ನಾಯಕಿಗೆ ಬಟ್ಟೆ ಬಿಚ್ಚಿಸಿ, ಪೋಲಿ ಸೀನುಗಳ್ನು ತುರುಕಿ ಪರ್ವಾಗಿಲ್ಲ. ಯಾಕೆಂದರೆ, ಸೆನ್ಸಾರ್ ಮಂಡಳಿಯ 'A' ಲೇಬಲ್ ನಿಮ್ಮ ನೆರವಿಗಿದೆ!
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


