ವಿಜಯ್ ಹೋ!

'ನಿಜಕ್ಕೂ ಆ ಹುಡುಗನನ್ನು ನೋಡಿ ಮೆಂಟಲ್ ಅಂದುಕೊಂಡಿದ್ದೆ. ಈ ಹುಡುನ ಮುಂದೆ ಹೇಗಪ್ಪಾ ಅಭಿನಯಿಸೋದು ಅಂತ ಹೆದರಿದ್ದೆ. ಆದರೆ ಆತನ ಅಭಿನಯ ನೋಡಿದ ಮೇಲೆ ಅವನ ಮುಂದೆ ನಾನೇನೂ ಅಲ್ಲವೆನ್ನಿಸಿತು. ಒಬ್ಬ ಭರವಸೆ ಕಲಾವಿದನನ್ನು ನಿರ್ದೇಶಕ ರಮೇಶ್ ಕನ್ನಡಕ್ಕೆ ಪರಿಚಯಿಸಿದ್ದಾರೆ' ಇದು ಹಿರಿಯ ನಟಿ ಹೇಮಾ ಚೌಧರಿಯ ಮಾತು.
'ನನ್ನ ಪ್ರಕಾರ ಈ ಹುಡುಗ ಮುಂದೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ. ಉತ್ತಮ ಕಲಾವಿದನಾಗುತ್ತಾನೆ' ನಟ ಅವಿನಾಶ್‌ರ ತೂಕದ ಮಾತಿದು. 'ನಾನು 'ಧಮ್' ಚಿತ್ರಕ್ಕೆ ಬಂದಾಗ ನಿನ್ನ ಹಾಗೆ ಹೊಸಬ. ನೀನು ಕೂಡ ಈಗ ಹಾಗೆ. ಅಂದ್ರೆ ಮುಂದೆ...?' ಎನ್ನುತ್ತ ಆ ಯುವಕನ ಹೆಗಲ ಮೇಲೆ ಕೈಹಾಕಿದರು ನಟ ರಂಗಾಯಣ ರಘು. ಎಂ.ಎಸ್. ರಮೇಶ್, 'ಜೋಗಿ' ಪ್ರೇಮ್, ಗುರುಕಿರಣ್ ಹೀಗೆ ಒಬ್ಬರ ನಂತರ ಒಬ್ಬರು ಆ ಯುವಕನನ್ನು ಮೆಚ್ಚಿಕೊಳ್ಳುತ್ತಿದ್ದರೇ ಪಕ್ಕದಲ್ಲೇ ಆತ ಕೈ ಕಟ್ಟಿ ನಿಂತಿದ್ದ.
ಅದು ರಮೇಶ್ ನಿರ್ದೇಶನದ 'ದಾಸ್ವಾಳ' ಚಿತ್ರದ ಪತ್ರಿಕಾಗೋಷ್ಠಿ. ವೇದಿಕೆಯಲ್ಲಿದ್ದ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದು ರಂಗಭೂಮಿ ಕಲಾವಿದ ಸಂಚಾರಿ ವಿಜಯ್. ಆದರೆ, ಹೇಮಾ ಚೌಧರಿ ಅಂದುಕೊಂಡಂತೆ ವಿಜಯ್ ಮೆಂಟಲ್ ಅಲ್ಲ. 'ದಾಸ್ವಾಳ' ಚಿತ್ರದಲ್ಲಿ ಆತನ ಪಾತ್ರವೇ ಹಾಗಿತ್ತು. ಸಾಮಾನ್ಯವಾಗಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಪುಟ್ಟ ಕಲಾವಿದರ ದೊಡ್ಡ ಅಭಿನಯವನ್ನು ಹೀಗೆ ಚಿತ್ರತಂಡ ಮೆಚ್ಚಿಕೊಳ್ಳುವುದು ಅಪರೂಪ. ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಆದರೆ, ಅವಿನಾಶ್, ರಂಗಾಯಣ ರಘು ಅವರಂಥ ಹಿರಿಯ ಕಲಾವಿದರಿಂದ 'ಜೈ' ಎನ್ನಿಸಿಕೊಂಡ ವಿಜಯ್ ನಿಜಕ್ಕೂ ಪ್ರತಿಭಾವಂತ ಹುಡುಗ ಎನ್ನುವುದರಲ್ಲಿ ಎರಡು ಮಾತಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯ ವಿಜಯ್, ಓದಿದ್ದು ಎಂಜಿನಿಯರ್. ಪದವಿ ಮುಗಿದ ನಂತರ ಕನಕಪುರ ರಸ್ತೆಯಲ್ಲಿನ ಕೆಐಇಟಿ ಕಾಲೇಜಿನಲ್ಲಿ ಮೇಸ್ಟ್ರಾಗಿ ಪಾಠ ಮಾಡಿದರು. ಆದರೆ ಕಾಲೇಜು ದಿನಗಳಲ್ಲೇ ಬೆನ್ನತ್ತಿದ ಬಣ್ಣದ ಗೀಳು ಶಿಕ್ಷಕನಾದ ಮೇಲೂ ಬಿಡಲಿಲ್ಲ. ಹೀಗಾಗಿ ಮೇಸ್ಟ್ರು ಕೆಲಸಕ್ಕೆ ಕೈ ಕೊಡುವ ಮುನ್ನವೇ ಕಾಲೇಜು ದಿನಗಳಲ್ಲೇ ರಂಗಭೂಮಿಯ ಕೈ ಹಿಡಿದ ವಿಜಯ್‌ಗೆ ಮೊದಲು ನೆರಳಾಗಿದ್ದು 'ದರ್ಪಣ' ರಂಗತಂಡ. ಇಲ್ಲಿ 'ಸಾವು ಜಯಕ್ಕಿಲ್ಲ' ಎಂಬ ನಾಟಕದಲ್ಲಿ ಪಾತ್ರ ಮಾಡಿದರು. ಮಾಲತೇಶ್ ಬಡಿಗೇರ್‌ರಂಥ ರಂಗನಿರ್ದೇಶಕರ ನಂಟು ಸಿಕ್ಕಿತು. ಮುಂದೆ ಏಳೆಂಟು ವರ್ಷ ರಂಗಭೂಮಿಯಲ್ಲೇ ಓಡಾಡಿದ ವಿಜಯ್‌ರನ್ನು ಸಿನಿಮಾ ಲೋಕ 'ಬಾ...' ಎಂದಿತು. 'ನಾಟಕಗಳಲ್ಲಿ ಅಭಿನಯಿಸುತ್ತಲೇ ಅವರಿವರ ಬಳಿ ಹೋಗಿ ಸಿನಿಮಾಗಳಲ್ಲಿ ಅವಕಾಶ ಕೇಳುತ್ತಿದ್ದೆ. ಹಾಗೆ ನನ್ನ ಸಿನಿಮಾ ಅವಕಾಶಗಳ ಸಂಚಾರದಲ್ಲಿ ಮೊದಲು ಸಿಕ್ಕಿದ್ದು ರಮೇಶ್ ಅರವಿಂದ್ ಅಭಿನಯದ 'ರಂಗಪ್ಪ ಹೋಗ್ ಬಿಟ್ನಾ' ಚಿತ್ರ. ಮುಂದೆ 'ರಾಮ ರಾಮ ರಘುರಾಮ' ಚಿತ್ರದಲ್ಲಿ ಸ್ವಾಮೀಜಿ ಪಾತ್ರ ಮಾಡಿದೆ. ಇದರ ನಡುವೆ ನಿರ್ದೇಶಕ ಎಂ.ಎಸ್. ರಮೇಶ್ ಕರೆದು 'ವಿಲನ್' ಚಿತ್ರದಲ್ಲಿ ನಾಯಕಿಯ ತಮ್ಮನ ಪಾತ್ರ ಕೊಟ್ಟರು. ಅಲ್ಲಿಂದ ರಮೇಶ್ ಅವರ ಸಂಪರ್ಕದಲ್ಲಿದ್ದೆ. ಮತ್ತೆ ಅವರು ನನ್ನ ಗುರುತಿಸಿದ್ದು 'ದಾಸ್ವಾಳ' ಚಿತ್ರದ ಸಂದರ್ಭದಲ್ಲಿ. ನಿಜಕ್ಕೂ ಆ ಚಿತ್ರದಲ್ಲಿ ನನ್ನ ಪಾತ್ರ ಸವಾಲಿನದ್ದು. ಮಾನಸಿಕವಾಗಿ ಹಾಗೂ ದೈಹಿಕವಾಗಿ ಸ್ಥಿಮಿತ ಕಳೆದುಕೊಂಡವನ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಎಂದರೇನು? ಮೊದಲು ಹೆದರಿಕೆಯಾಯಿತು. ಆದರೆ, ನಾನೇ ನನ್ನ ಪಾತ್ರವನ್ನು ಡಿಸೈನ್ ಮಾಡಿಕೊಂಡೆ. ಅದನ್ನು ರಮೇಶ್ ಸಾರ್ ಮುಂದೆ ಪ್ರದರ್ಶನ ಮಾಡಿದೆ. ಒಂದೇ ಟೇಕ್‌ನಲ್ಲಿ ಬೆನ್ನು ತಟ್ಟಿದರು' ಎಂದ ವಿಜಯ್, ನಿರ್ದೇಶಕ ಎಂ.ಎಸ್. ರಮೇಶ್ ಹಾಗೂ ರಂಗಾಯಣ ರಘು ಚಿತ್ರರಂಗದಲ್ಲಿ ನನ್ನ ಗುರುಗಳು ಎನ್ನುತ್ತಾರೆ.
ಕಳೆದ ಎರಡ್ಮೂರು ವರ್ಷಗಳಿಂದ 'ಸಂಚಾರಿ' ರಂಗತಂಡದಲ್ಲಿ ಗುರುತಿಸಿಕೊಂಡಿರುವ ವಿಜಯ್, ಒಂದು ನಾಟಕವನ್ನೂ ನಿರ್ದೇಶಿಸಿದ್ದಾರೆ. ನಟನೆಯ ಕನಸು ಕಟ್ಟಿಕೊಂಡು ಶಿಕ್ಷಕನ ಕೆಲಸಕ್ಕೂ ಗುಡ್‌ಬೈ ಹೇಳಿ ಬಂದಿರುವ ಈತನಿಗೆ ಇಲ್ಲಿ ಒಂದಲ್ಲ ಒಂದು ದಿನ ಗೆಲ್ಲುತ್ತೇನೆಂಬ ನಂಬಿಕೆ ಇದೆ. 'ದಾಸ್ವಾಳ' ಚಿತ್ರ ಬಿಡುಗಡೆಯಾದ ನಂತರ ಒಂದಿಷ್ಟು ಅವಕಾಶಗಳು ಹುಡುಕಿಕೊಂಡು ಬರಬಹುದೆಂಬ ನಿರೀಕ್ಷೆಯಲ್ಲಿರುವ ವಿಜಯ್, ಸದ್ಯ ರಂಗಭೂಮಿಯಲ್ಲಿ ಬ್ಯುಸಿ. 'ಒಳ್ಳೆಯ ಪಾತ್ರಕ್ಕಾಗಿ ಎಂಥ ಕಷ್ಟವನ್ನೂ ಬೇಕಾದರೂ ನಿಭಾಯಿಸಬಲ್ಲೆ' ಎನ್ನುವ ಈ ಯುವ ನಟನನ್ನು ಚಿತ್ರರಂಗ ಗುರುತಿಸುತ್ತದೆಂಬುದು 'ದಾಸ್ವಾಳ' ಚಿತ್ರತಂಡದ ಹಾರೈಕೆ.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


