ನಿಂಬೆ ಹುಳಿಯ ಸಿಹಿಸುದ್ದಿ

ಈಗ ಪ್ರಚಾರದ ವಿಷಯದಲ್ಲಿ ಎಲ್ಲ ಚಿತ್ರಗಳಿಗೂ ಅವರದ್ದೇ ಆದ ಒಂದೊಂದು ದಾರಿ. ಇದನ್ನೂ ಸಿನಿಮಾ ಪ್ರಚಾರದ ಒಂದು ಭಾಗ ಎಂದುಕೊಂಡರೆ ತಪ್ಪಿಲ್ಲ. ಆದರೆ ಇದು ಒಂಥರಾ ಹೆಮ್ಮೆಯ ವಿಷಯವೂ ಹೌದು. ಕೊಂಚ ಆಶ್ಚರ್ಯ ಎನಿಸಿದರೂ ಇದು ಸತ್ಯ. ಜಗತ್ತಿನ ಬೆಸ್ಟ್ ಕಾಮಿಡಿ ಚಿತ್ರಗಳ ಪೋಸ್ಟರ್ಗಳಲ್ಲಿ ನಿಂಬೆಹುಳಿ ಚಿತ್ರದ ಪೋಸ್ಟರ್ಗೆ ಜಾಗ ಸಿಕ್ಕಿದೆ. ಇದು ಯಾವುದೋ ದೊಡ್ಡ ಪ್ರತಿಷ್ಠಿತ ಸಂಸ್ಥೆ ನಡೆಸಿದ ಸ್ಫರ್ಧೆ ಏನಲ್ಲ. ಆದರೂ ಟಾಪ್ 25 ಕಾಮಿಡಿ ಮೂವೀಸ್.ಕಾಮ್ ಎಂಬ ವೆಬ್ಸೈಟ್ನಲ್ಲಿ ನಿಂಬೆಹುಳಿ ಜಾಗ ಪಡೆದಿದೆ. ಇಲ್ಲಿ ಕಾಮಿಡಿ ಚಿತ್ರಗಳ ಪೋಸ್ಟರ್ಗಳಿಗೆ ಮುಕ್ತ ಆಹ್ವಾನ ಇದ್ದ ಕಾರಣ, ನಿಂಬೆಹುಳಿಯ ನಿರ್ದೇಶಕ ಹೇಮಂತ್ ಹೆಗಡೆ ತಮ್ಮ ಚಿತ್ರದ ಪೋಸ್ಟರ್ ಅನ್ನೂ ಕಳಿಸಿಕೊಟ್ಟಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ವೋಟ್ ಮಾಡಿ ನಿರ್ಧರಿಸಿದ ಅಂತಿಮ 25 ಚಿತ್ರಗಳ ಪಟ್ಟಿಯಲ್ಲಿ ನಿಂಬೆಹುಳಿ ಜಾಗ ಪಡೆದಿದೆ ಎನ್ನುವುದು ವಿಶೇಷ. ಇದಕ್ಕಿಂತಲೂ ಹೆಚ್ಚಿನ ವಿಶೇಷ ಎಂದರೆ 3 ಈಡಿಯೆಟ್ಸ್ ಚಿತ್ರ ಬಿಟ್ಟರೆ ಇಲ್ಲಿರುವ ಏಕೈಕ ಭಾರತೀಯ ಚಿತ್ರದ ಪೋಸ್ಟರ್ ಎಂದರೆ ಅದು ನಿಂಬೆಹುಳಿಯದ್ದು ಮಾತ್ರ. ಉಳಿದಂತೆ ಚಾಪ್ಲಿನ್ರ ಒಂದೆರಡು ಚಿತ್ರಗಳು, ಬ್ರೂಸ್ ಆಲ್ಮೈಟಿ, ಸ್ಕೇರಿ ಮೂವಿ, ಹ್ಯಾಂಗೋವರ್, ಮಾಸ್ಕ್, ನಟ್ಟೀ ಪ್ರೊಫೆಸರ್ ಮುಂತಾದ ವರ್ಲ್ಡ್ಸ್ ಬೆಸ್ಟ್ ಎನ್ನುವಂಥ ಚಿತ್ರಗಳೂ ಈ ಪಟ್ಟಿಯಲ್ಲಿವೆ.
ನಿಮ್ ಹೀರೋಯಿನ್ ನಂಗೆ ಇಷ್ಟ ಆಗಿದಾಳೆ...
ಇದು ಎಷ್ಟು ಚಿತ್ರಗಳನ್ನು ಮಾಡಿದ್ದರೂ ಒಂದೂ ಸಕ್ಸಸ್ ಕಾಣದ ನಾಯಕ ನಟನೊಬ್ಬನ ಕಥೆ. ತೆರೆಯ ಮೇಲೆ ಸಕ್ಸಸ್ ಕಾಣದೇ ಇದ್ದುದಕ್ಕೋ ಏನೋ, ಈ ತೆರೆಮರೆಯ ಕೆಲಸದಲ್ಲಿ ಸಕ್ಸಸ್ ಕಾಣುವ ತವಕ ಆತನದ್ದು. ಇತ್ತೀಚೆಗೆ ಅಹೋರಾತ್ರಿ ನಡೆದ ಈತನ ಗುಂಡಿನ ಚಕಮಕಿಯಲ್ಲಿ ನಡೆಸಲಾದ ಈ ಕಾರ್ಯಾಚರಣೆಗೆ ಟಿವಿ ವಾಹಿನಿಯ ವರದಿಗಾರನೊಬ್ಬನ ಕುಮ್ಮಕ್ಕೂ ಇತ್ತು ಎಂಬುದು ವಿಶೇಷ. ಬಾಲಿವುಡ್ನ ಸುಭಾಷ್ ಘಾಯ್ ಅವರನ್ನು ಕನ್ನಡ ಚಿತ್ರ ನಿರ್ಮಾಣಕ್ಕೆ ಕರೆತಂದ ನಿರ್ದೇಶಕ ಹೇಮಂತ್ ಹೆಗಡೆ ಅಂದು ಇವರಿಬ್ಬರ ಟಾರ್ಗೆಟ್ ಆಗಿದ್ದರು. ಹೇಮಂತ್ ಅವರಿಗಿಂತ ಅವರ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ಬೆಡಗಿಯರ ಮೇಲೆ ಇವರ ಕಣ್ಣು ಬಿದ್ದಿತ್ತು ಎಂದರೂ ತಪ್ಪಿಲ್ಲ. ಸಮಯ ಬೆಳಗ್ಗೆ 5.30 ಆದರೂ ಸಮಾರಾಧನೆ ಮುಗಿಯದೆ, ಗುಂಡಿನ ಗಮ್ಮತ್ತಲ್ಲಿ ಟಿವಿ ವಾಹಿನಿಯ ವರದಿಗಾರ ಫೋನೆತ್ತಿಕೊಂಡು ಹೇಮಂತ್ಗೆ ಕರೆ ಮಾಡಿಯೇಬಿಟ್ಟ. ನಿದ್ದೆಗಣ್ಣಲ್ಲಿದ್ದ ಹೇಮಂತ್ಗೆ 'ನಮ್ ಹೀರೋಗೆ ನಿಮ್ ಸಿನಿಮಾ ಹೀರೋಯಿನ್ಗಳು ಇಷ್ಟ ಆಗಿದಾರಂತೆ, ಬೆಳಗ್ಗೆ ಬಂದು ಮಾತಾಡಿ' ಎಂಬ ಮಾತು ಕೇಳಿ ಗಾಬರಿ. ಅವರು ಮಾತಾಡುತ್ತಿದ್ದ ಹಾಗೇ, ಈ ನಾಯಕ ನಟ ಕೂಡ ಫೋನು ಕಿತ್ತುಕೊಂಡು ಅದನ್ನೇ ಬಡಬಡಿಸಿದ್ದಾನೆ. ಒಬ್ಬ ನಿರ್ದೇಶಕನಿಗೆ ಅಷ್ಟೊತ್ತಲ್ಲಿ ಪೋನು ಮಾಡಿ ನಿಮ್ಮ ಹೀರೋಯಿನ್ ಇಷ್ಟ ಆಗಿದ್ದಾಳೆ ಎಂದರೆ ಏನರ್ಥ? ಇವರೆಲ್ಲ ಸಿನಿಮಾ ಎಂದರೆ ಏನಂದುಕೊಂಡಿದ್ದಾರೆ ಎಂದು ಕೇಳುವ ಹೇಮಂತ್ ಇಬ್ಬರಿಗೂ ಸರಿಯಾಗಿ ದಬಾಯಿಸಿ ಫೋನು ಕುಕ್ಕಿದ್ದಾರೆ. ಸೂರ್ಯೋದಯವಾದ ಮೇಲೆ ಜ್ಞಾನೋದಯವಾದ ವರದಿಗಾರ ಮತ್ತೆ ಹೇಮಂತ್ಗೆ ಪೋನು ಮಾಡಿ ಅದು ಹಂಗಲ್ಲ ಎಂದು ಸಮಜಾಯಿಷಿ ಕೊಡಲು ಪ್ರಯತ್ನ ಮಾಡಿದರೂ ಹೇಮಂತ್ ಸರಿಯಾಗಿ ಎಚ್ಚರಿಕೆ ಕೊಟ್ಟು ಸುಮ್ಮನಾಗಿದ್ದಾರೆ ಎಂಬುದು ಗಾಂಧಿನಗರದ ನೈಟ್ಶಿಫ್ಟ್ ವರದಿ.
- ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


