ಸಿನಿಮಾ ಲೇಖನ

ಸೂರಿ ಗ್ಯಾಂಗ್

ಕನ್ನಡದ ಮಟ್ಟಿಗೆ ಸ್ವತಃ ಸೂರಿ ಕ್ಯಾರೆಕ್ಟರ್‌ನಲ್ಲೇ ಪೆಕ್ಯೂಲರ್‌ತನ ಇದೆ ಎಂಬುದು ಅವರನ್ನು...

ಸೂರಿ ಗ್ಯಾಂಗ್
Published On :

ಅಡಕೆಮರದಂತೆ ಅತ್ತಿತ್ತ ತೂರಾಡುವ ಸಣಕಲು ಹುಡುಗರು. ಆದರೆ, ಇವರು ಫಿಗರ್ ಮೆಂಟೇನ್ ಮಾಡುತ್ತಿರುವ ಬಾಲಿವುಡ್ ಕಲಿಗಳಲ್ಲ. ಬಿಸಿಲಿಗೆ ಒಣಗಿದಂತೆ ಕಾಣುವ ದೇಹಗಳು, ಕಣ್ಣಲ್ಲಿ ಎಂಥದೋ ಅಫೀಮು ಹತ್ತಿಸಿಕೊಂಡವರಂತೆ. ಕೂಗಾಡಲ್ಲ, ಸಿಕ್ಕಾಪಟ್ಟೆ ಹಾವಳಿ ಮಾಡಲ್ಲ. ಆದರೆ, ಕ್ರೌರ್ಯವನ್ನು ತಣ್ಣಗೆ ಆವಾಹಿಸಿಕೊಂಡ ಕ್ರಿಮಿಗಳು. ಇವರ ನೋಟಕ್ಕೆ ಎದುರಿಗಿದ್ದ ನಾಯಕ ಮಾತ್ರವಲ್ಲ, ಅವರನ್ನು ನೋಡುತ್ತಿರುವ ಪ್ರೇಕ್ಷಕ ಕೂಡ ಒಂದು ಕ್ಷಣ ಬೆಚ್ಚಿ ಬೀಳುತ್ತಾನೆ. ಚಿತ್ರದಲ್ಲಿ ಆಗಾಗ ಬಂದು ಹೋಗುವ ಇವರು ಸಿನಿಮಾ ಮುಗಿದ ಮೇಲೆ ಪ್ರೇಕ್ಷಕರ ಮಾತಿನ ಚಾವಡಿಯ ಕೇಂದ್ರಬಿಂದುಗಳಾಗಿರುತ್ತಾರೆ. ಅಷ್ಟರಮಟ್ಟಿಗೆ ಈ ಪಾತ್ರಗಳು ಚಿತ್ರವನ್ನು ಮತ್ತು ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತವೆ. ಆದರೆ, ಪೆಕ್ಯೂಲರ್ ಮತ್ತು ಟೆರರ್‌ಗಳನ್ನು ಎಲ್ಲ ಚಿತ್ರಗಳಲ್ಲಿ ನೋಡಲಾಗದು.

ಸುಮ್ಮನೆ ಒಮ್ಮೆ 'ದುನಿಯಾ' ಚಿತ್ರವನ್ನು ನೆನಪಿಸಿಕೊಳ್ಳಿ. 'ಪೂರ್ಣಿ ನನ್ನವಳು... ಅಡ್ಡ ಬಂದ್ರೆ ಶಿವಲಿಂಗುನಾ ಎತ್ತಿಬಿಡ್ತಿನಿ, ಬಿಡಲ್ಲ ಮಚ್ಚಾ ಅವ್ನಾ' ಎನ್ನುವ ಲೂಸ್‌ಮಾದನ ಪಾತ್ರವನ್ನೇ

ನೋಡಿ. ಮೈಯಲ್ಲಿ ನೆಟ್ಟಗೆ ಮೂರು ಕೆಜಿ ಮಾಂಸ ಇಲ್ಲ. ಕುಂಟುತ್ತ ಕೈಯಲ್ಲೊಂದು ಲಾಂಗು ಹಿಡಿದು ಓಡಾಡುವ ಈತನಿಗೆ ಜೋರಾಗಿ ಗುದ್ದಿದರೆ ಸ್ಪಾಟ್ ಔಟ್ ಆಗುತ್ತಾನೆ. ಆದರೂ ಚಿತ್ರದ ನಾಯಕ ಶಿವಲಿಂಗುಗೆ ಮೂರು ಕೆರೆ ನೀರು ಕುಡಿಸುತ್ತಾನೆ ಈ ಲೂಸ್‌ಮಾದ.
'ನಾನ್ ಯಾರ್ ಗೊತ್ತಾ? ಬಾಬು ಬಾಬು... ವಾಸನೆ ಬಾಬು. ನೋಡು ನೋಡು ತಲೆ ತುಂಬಾ ಸ್ಟಿಚ್ಚಸ್ ಬಿದ್ದಿವೆ' ಎಂದು ತನ್ನ ಪೆಕ್ಯೂಲರ್‌ತನ ತೋರಿಸುವ 'ಇಂತಿ ನಿನ್ನ ಪ್ರೀತಿಯ' ಚಿತ್ರವನ್ನೇ ನೆನಪಿಸಿಕೊಳ್ಳಿ. ಹೌದು, ನಾವು ಹೇಳಲಿಕ್ಕೆ ಹೊರಟಿರುವುದು ನಿರ್ದೇಶಕ ಸೂರಿ 'ದುನಿಯಾ'ದಲ್ಲಿ ಮೈ ತಳೆದ ಅಂಥ ವಿಕ್ಷಿಪ್ತ ಕ್ಯಾರೆಕ್ಟರ್‌ಗಳ ಬಗ್ಗೆ.

ಕನ್ನಡದ ಮಟ್ಟಿಗೆ ಸ್ವತಃ ಸೂರಿ ಕ್ಯಾರೆಕ್ಟರ್‌ನಲ್ಲೇ ಪೆಕ್ಯೂಲರ್‌ತನ ಇದೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಮಾತು. ಹೀಗಾಗಿ ಇಂಥ ಡಿಫರೆಂಟ್ ಪಾತ್ರಗಳನ್ನು ಕಂಪೋಸ್ ಮಾಡುವುದರಲ್ಲಿ ನಿರ್ದೇಶಕ 'ದುನಿಯಾ' ಸೂರಿ ಅವರದ್ದು ಎತ್ತಿದ ಕೈ. ವಿಶೇಷ ಎಂದರೆ ಇವರ ನಿರ್ದೇಶನದಲ್ಲಿ ಮೂಡಿಬರುವ ಈ ಪಾತ್ರಗಳು ಮುಂದೆ ತಮ್ಮ 'ದುನಿಯಾ'ನೇ ಬದಲಾಗಿದ್ದು ನಮ್ಮ ಮುಂದಿದೆ. ಅದು 'ಸೂರಿ ಗ್ಯಾಂಗ್‌'ನ ಮಹಿಮೆ.

ಸ್ವಯಂವರ ಚಂದ್ರು ನಿರ್ಮಾಣದ, ನಟ ಶಿವರಾಜ್‌ಕುಮಾರ್ ಅಭಿನಯದ 'ಕಡ್ಡಿಪುಡಿ' ಚಿತ್ರದಲ್ಲಿ ತಣ್ಣಗೆ ಕ್ರೌರ್ಯ ಉಂಟುಮಾಡುವ, ಚಿತ್ರದ ನಾಯಕನಿಗೇ ಮುಹೂರ್ತ ಫಿಕ್ಸ್ ಮಾಡುವ ಮಲ್ಲೇಶ್, ಬಾಲುನಾಗೇಂದ್ರ, ಪ್ರದೀಪ್ ಶಿವರಾಜ್‌ಕುಮಾರರ ಕನಸಿನಲ್ಲೂ ಬಂದು ಹೆದರಿಸುತ್ತಾರೆ. ಮೂಳೆಯಂಥ ಅವರ ದೇಹ,  ಮಾತನಾಡದೇ ಮೌನದಲ್ಲೇ ಕೊಲ್ಲುವ ಅವರ ನೋಟಗಳನ್ನು ಕಂಡರೆ ಕತ್ತಲ ಲೋಕದ ನಿಜವಾದ ಕ್ರಿಮಿಗಳು ಇವರೇ ಎನ್ನಿಸುವಷ್ಟು ನೈಜವಾಗಿವೆ ಆ ಪಾತ್ರಗಳು. ಬ್ರೆಜಿಲ್‌ನ 'ಸಿಟಿ ಆಫ್ ಗಾಡ್‌' ಚಿತ್ರದ ತುಂಬಾ ಇಂಥ ಪೆಕ್ಯೂಲರ್, ಹದಿಹರೆಯದ ಕ್ರಿಮಿನಲ್‌ಗಳೇ ಚಿತ್ರದ ನಾಯಕರು. ಹಾಗೆ ನೋಡಿದರೆ ಸೂರಿಗೂ ಇದು ಮೆಚ್ಚಿನ ಚಿತ್ರ. ಹಾಗಾದರೆ ಇಂಥ ಕ್ರಿಮಿನಲ್‌ಗಳು ಸೂರಿ ಚಿತ್ರಗಳಲ್ಲಿ ಮಾತ್ರ ಯಾಕೆ ಇಷ್ಟು ಶಾರ್ಪ್ ಆಗಿರುತ್ತವೆ? 'ಸ್ವತಃ ನಾನು ನೋಡಿದ, ಮಾತನಾಡಿಸಿದ, ಒಮೊಮ್ಮೆ ಕಥೆ, ಕಾದಂಬರಿಯಲ್ಲಿ ಕಂಡ ಕಲ್ಪಿತ ವ್ಯಕ್ತಿಗಳು ನನ್ನ ಸಿನಿಮಾಗಳಲ್ಲಿ ಈ ರೀತಿ ಕಾಣಿಸಿಕೊಳ್ಳುತ್ತಾರೆ. ಸಿಟಿ ಮಾರುಕಟ್ಟೆ, ಅಂಡರ್ ಬ್ರಿಡ್ಜ್‌ಗಳು, ಫುಟ್‌ಪಾತ್‌ಗಳಲ್ಲಿ ಅಡ್ಡಾಡಿ ನೋಡಿ ಇಂಥ ಕ್ಯಾರೆಕ್ಟರ್‌ಗಳು ಕಾಣಿಸುತ್ತವೆ. ಸಾಕಷ್ಟು ಬಾರಿ ಅಂಥವರನ್ನು ನೋಡಿದಾಗ ರಸ್ತೆಯಲ್ಲೇ ನಿಲ್ಲಿಸಿ, ನೀನು ನನ್ನ ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತಿಯೇನಪ್ಪ ಅಂತ ಕೇಳಿದ್ದೇನೆ. 'ಕಡ್ಡಿಪುಡಿ'ಯಲ್ಲಿ ಬರುವ ಮೂರು ಕ್ಯಾರೆಕ್ಟರ್‌ಗಳ ಪೈಕಿ ಅಸಿಸ್ಟೆಂಟ್ ಪ್ರೊಡಕ್ಷನ್ ಮ್ಯಾನೇಜರ್ ಮಗ ಪ್ರದೀಪ್‌ನನ್ನೇ ತೆಗೆದುಕೊಳ್ಳಿ. ಆತ ಸೆಟ್‌ಗೆ ಬಂದಾಗ, ನಿಲ್ಲುವ ಸ್ಟೈಲ್, ನಮಸ್ಕಾರ ಮಾಡುವ ರೀತಿ, ಆತನ ನೋಟವನ್ನು ಗಮನಿಸುತ್ತಿದ್ದೆ. ತೀರಾ ವಿಲಕ್ಷಣ ಆಗಿ ಕಂಡ. ಹೀಗಾಗಿ ಆತನ ಕೈಯಲ್ಲಿ ಪಾತ್ರ ಮಾಡಿಸಿದೆ. ಕೆಲವು ಸಲ ಕಥೆ ಮಾಡಿಕೊಂಡು ಇಂಥವರೇ, ಇದೇ ರೀತಿಯ ಪಾತ್ರ ಮಾಡಿಸಿಬೇಕೆಂದು ಅಂಥವರಿಗಾಗಿ ಹುಡುಕುತ್ತೇನೆ. ಅವರಿಗೆ ಚಿತ್ರದಲ್ಲಿ ಇಡುವ ಹೆಸರು, ಅವರ ವೇಷ ಯಾವುದೂ ಅಪರಿಚಿತ ಎನಿಸಲ್ಲ. ಅವು ನಮ್ಮ ಸುತ್ತಲಿನ ರೂಪಗಳಾಗಿರುತ್ತವೆ. ನಮ್ಮ ಕಣ್ಣು, ಕಿವಿ, ಮನಸ್ಸು ಓಪನ್ ಆಗಿದ್ದರೆ ಇಂಥವರು ಕಾಣಿಸುತ್ತಾರೆ ಅಷ್ಟೇ' ಎನ್ನುತ್ತಾರೆ ನಿರ್ದೇಶಕ ಸೂರಿ. 'ದುನಿಯಾ'ದ ಲೂಸ್‌ಮಾದ, 'ಇಂತಿ ನಿನ್ನ ಪ್ರೀತಿಯ' ವಾಸನೆ ಬಾಬು, 'ಅಣ್ಣಾಬಾಂಡ್‌'ನ ಡ್ರಗ್ ಅಡಿಕ್ಟ್ ಪಾತ್ರ, ಹಾಫ್ ಮೆಂಟ್ ಥರಾ ಆಡುವ 'ಜಾಕಿ'ಯ ಪೆಟ್ರೋಲ್ ಪ್ರಸನ್ನ, 'ಕಡ್ಡಿಪುಡಿ'ಯ ರೆಕ್ಕೆ ವೆಂಕಟೇಶ್ ಮತ್ತವನ ಗ್ಯಾಂಗ್ ಹುಟ್ಟಿಕೊಂಡಿದ್ದು ಸೂರಿ ಕಂಡ ಸುತ್ತಲಿನ ರೂಪಳಿಂದಲೇ.
ಒಬ್ಬ ನಿರ್ದೇಶಕ ಹೀಗೆ ತನ್ನ ಅನುಭವ ಅಥವಾ ತಾನು ಕಂಡ ನೈಜ ವ್ಯಕ್ತಿಗಳನ್ನು ತೆರೆಮೇಲೆ ಕಟ್ಟಿಕೊಡುವುದರಲ್ಲಿ ಬಾಲಿವುಡ್ ನಿರ್ದೇಶಕ ರಾಮ್‌ಗೋಪಾಲ್ ವರ್ಮರದ್ದು ಒಂದು ಹೆಜ್ಜೆ. 'ಶಿವ', 'ಸತ್ಯ', 'ಸರ್ಕಾರ್‌', 'ಕಂಪನಿ' ಚಿತ್ರಗಳನ್ನು ಸೂಕ್ಷ್ಮವಾಗಿ ನೋಡಿದರೆ ವರ್ಮ ಜಗತ್ತಿನ ರಿಯಲ್ ಕ್ಯಾರೆಕ್ಟರ್‌ಗಳು ಕಣ್ಣಿಗೆ ಬೀಳುತ್ತವೆ. ಅದರಲ್ಲೂ ಮೊದಲೆರಡು ಚಿತ್ರಗಳಲ್ಲಿ ಅರ್ಧ ವರ್ಮ ಜಗತ್ತೇ ಇದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇಂಥ ನೈಜ ಪಾತ್ರಗಳನ್ನು ಸೃಷ್ಟಿಸುವ ನಿರ್ದೇಶಕನೆಂದರೆ ಅದು ಸೂರಿ ಮಾತ್ರ. ಇಲ್ಲಿಯವರೆಗೂ ಕೊಟ್ಟಿದ್ದು ಆರು ಚಿತ್ರಗಳಾದರೂ, ತನ್ನ ಖದರ್ ಗಾಂಧಿನಗರದಲ್ಲಿ ಕಾಯಂ ಆಗಿ ನಿಲ್ಲುವಂತೆ ಮಾಡಿದ್ದು ಅವರ ಚಿತ್ರಗಳ ಸಕ್ಸಸ್ ಮಾತ್ರವಲ್ಲ, ಜೊತೆಗೆ ಆ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಈ ವಿಲಕ್ಷಣ ಪಾತ್ರಗಳೂ ಕಾರಣ. ಇನ್ನು ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಎರಡು ಬಾರಿ ರಾಜ್ಯ ಪ್ರಶಸ್ತಿ ಪಡೆದ ಸೂರಿಯ ಚಿತ್ರಕಥೆಗೆ ಈ ಪಾತ್ರಗಳು ವಿಶೇಷ ಮೆರುಗು ನೀಡುತ್ತವೆ ಎಂದರೆ ಅತಿಶಯೋಕ್ತಿಯಲ್ಲ. ಒಂದು ಕಲಾಕೃತಿಯನ್ನು ಮೊದಲು ತಾನು ಅನುಭವಿಸಿದಾಗ ಅದು ಇತರರ ಮೆಚ್ಚಿಗೆಗೆ ಪಾತ್ರವಾಗುತ್ತದೆ. ಒಂದು ವೇಳೆ ಬೇರೆಯವರಿಂದ ಅದು ತಿರಸ್ಕೃತಗೊಂಡರೂ ಆ ಕಲಾಕೃತಿಯನ್ನು ಕೊಟ್ಟ ಸೂತ್ರಧಾರನಿಗೆ ಮಾತ್ರ ಅದು ಮರೆಯಲಾಗದ ಕೃತಿಯಾಗಿ ನಿಲ್ಲುತ್ತದೆ. 'ಇಂತಿ ನಿನ್ನ ಪ್ರೀತಿಯ' ಗಾಂಧಿನಗರದ ಲೆಕ್ಕಾಚಾರಗಳಲ್ಲಿ ಸೋತಿರಬಹುದು. ಆದರೆ, ಅದು ಸೂರಿಗೆ ಕೆಟ್ಟ ಚಿತ್ರವೆಂದು ಇಂದಿಗೂ ಅನಿಸುತ್ತಿಲ್ಲ. ಹೀಗಾಗಿ 'ನನ್ನ ಅಲೆಮಾರಿ ಜೀವನ, ಪೇಂಟಿಂಗ್ ಬದುಕೇ ಸಿನಿಮಾ ಕೃಷಿ ಕಲಿಸಿಕೊಟ್ಟಿತು' ಎನ್ನುವ ಸೂರಿ ಅವರ 'ಇಂತಿ ನಿನ್ನ ಪ್ರೀತಿಯ' ಚಿತ್ರವನ್ನು ಮತ್ತೊಮ್ಮೆ ನೋಡಿದರೆ, ಇದು ಸೂರಿ ಕಂಡ ಬದುಕಾ? ಅಥವಾ ಸ್ವತಃ ಅವರ ಅನುಭವನಾ? ಎನ್ನುವ ಪ್ರಶ್ನೆ ಮೂಡುತ್ತದೆ. ಯಾಕೆಂದರೆ ಆ ಚಿತ್ರದಲ್ಲಿ ಸೂರಿ ಒಬ್ಬ ನಿರ್ದೇಶಕನಾಗಿ ಮಾತ್ರವಲ್ಲ, ಪಾತ್ರಧಾರಿಯಾಗಿ ಮುಳುಗಿದಂತೆ ಕಾಣುತ್ತಾರೆ.
ಅಂದಹಾಗೆ, ಇಲ್ಲಿಯವರೆಗೂ ತನ್ನ ಗರಡಿಯಿಂದ ಬಂದ ಇಂಥ ವಿಕ್ಷಿಪ್ತ ಪಾತ್ರಗಳನ್ನು ಒಟ್ಟಿಗೆ ಸೇರಿಸಿ ಒಂದು ಸಿನಿಮಾ ಮಾಡುವ ಐಡಿಯಾ ಸೂರಿ ಅವರ ತಲೆಯಲ್ಲಿದೆ. ಆದರೆ ಅವರ ಈ ಯೋಚನೆಯ ಜಾರಿ ಯಾವಾಗ? ಎಂಬುದು ಸದ್ಯದ ಪ್ರಶ್ನೆ. ಜೊತೆಗೆ ಮುಂದೆ ಸೆಟ್ಟೇರಲಿರುವ 'ಕೆಂಡಸಂಪಿಗೆ' ಚಿತ್ರದಲ್ಲೂ 'ಕಡ್ಡಿಪುಡಿ'ಯಲ್ಲಿ ಕಾಣಿಸಿಕೊಂಡ ಮೂರು ಪಾತ್ರಗಳ ರೀತಿಯದ್ದೇ ಮುಖ್ಯ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಒಟ್ಟಿನಲ್ಲಿ ಗಾಂಧಿನಗರದಲ್ಲಿ ಸೂರಿ ಇಂಥ ಶಾರ್ಪ್ ಕಿಲ್ಲರ್‌ಗಳ ಗ್ಯಾಂಗ್ ಕಟ್ಟಿಕೊಂಡು ನಿತ್ಯ ಫೀಲ್ಡಿಂಗ್‌ನಲ್ಲಿರುತ್ತಾರೆ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.