ಸಿನಿಮಾ ಲೇಖನ

ದಿಲ್‌ವಾಲಾ ಧಮಾಕಾ

ದಿಲ್‌ವಾಲಾ ಧಮಾಕಾ
ರಾಧಿಕಾ ಪಂಡಿತ್ - ಸುಮಂತ್
Published On :

ದಿಲ್‌ವಾಲಾ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಒಂಥರಾ ಮ್ಯಾಜಿಕ್ ಶೋನಂತೆ ಎನ್ನಿಸಿದರೆ ಅದಕ್ಕೆ ಕಾರಣ ಇತ್ತು. ಹಾಕಿದ್ದು  ನಾಲ್ಕೂವರೆ ಕೋಟಿ, ಆದರೆ, ಹತ್ತುಕೋಟಿ ತೆಗೀತೀರಿ ಎಂದು ಕಾರ್ಯಕ್ರಮದ ನಿರೂಪಕಿ ಹೇಳುತ್ತಿದ್ದರೆ, ಮಿನಿಮಮ್ ಹತ್ತು ತೆಗೀತೀನಿ  ಎನ್ನುತ್ತಿದ್ದ ನಿರ್ಮಾಪಕ ಶೈಲೇಂದ್ರ ಬಾಬು ಖಂಡಿತಾ ತಮ್ಮ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಮ್ಯಾಜಿಕ್ ಮಾಡುತ್ತದೆಂಬ ಭರವಸೆ ವ್ಯಕ್ತಪಡಿಸುತ್ತಿದ್ದರು.

ಅರ್ಜುನ್ ಜನ್ಯ ಸಂಗೀತದ ದಿಲ್‌ವಾಲನ ಹಾಡುಗಳ ಸಮಾರಂಭ, ಆನಂದ್ ಆಡಿಯೋದ ಇತ್ತೀಚಿನ ಎಲ್ಲ ಸಮಾರಂಭಗಳಂತೇ ಅಚ್ಚುಕಟ್ಟಾಗಿತ್ತು. ತೆರೆಯ ಮೇಲೆ ಹಾಡುಗಳ ಪ್ರದರ್ಶನ, ಒಂದೊಂದೇ ಹಾಡುಗಳ ನಂತರ ವೇದಿಕೆಯಲ್ಲಿ ಚಿತ್ರತಂಡದ ಸದಸ್ಯರ ದರ್ಶನ. ಅಲ್ಲೊಂದಿಷ್ಟು ಹಾಡು, ಇಲ್ಲೊಂದಿಷ್ಟು ಮಾತುಕತೆ. ಹೀಗೆ ಸಾಗಿದ್ದ ದಿಲ್‌ವಾಲಾ.
ಅಲೆಮಾರಿ ಚಿತ್ರದಲ್ಲಿ ನೀಲಿಯಾಗಿದ್ದ ನಾಯಕಿ ರಾಧಿಕಾ ಪಂಡಿತ್ ಅಂದು ಕೆಂಪು ಬಣ್ಣದ ದಿರಿಸಿನಲ್ಲಿ ಕೆಂಪಿಯಾಗಿದ್ದರು. ಚಿತ್ರದ ನಾಯಕ  ಸುಮಂತ್ ಅವರಲ್ಲೂ ನಾನೀಗ ಆಟದಲ್ಲಿ ಪಳಗಿದ್ದೇನೆ ಎನ್ನುವ ಆತ್ಮವಿಶ್ವಾಸ. ಜೊತೆಗೆ ಅರ್ಜುನ್ ಜನ್ಯ ಸಂಗೀತ ಎಂದಮೇಲೆ ಅಲ್ಲಿ ಧೂಳೆಬ್ಬಿಸಲು ತಕ್ಕ ವೇದಿಕೆ ಸೃಷ್ಟಿಯಾಗಿತ್ತು.

ದಿಲ್‌ವಾಲ ಚಿತ್ರದ 'ಎತ್ತಾಕ್ಕೊಂಡ್ ಹೋಯ್ತಾ ಇರೋದೇ' ಹಾಡು ಅಂದಿನ ಹೈಲೈಟ್. ಚಿತ್ರರಂಗದ ಅನೇಕ ಪ್ರಮುಖ ತಾರೆಯರು ತೆರೆಯ ಮೇಲೆ ಕಾಣಿಸಿಕೊಂಡು ಅಲ್ಲಿಂದಲೇ ಒಂದೊಂದೇ ಹಾಡನ್ನು ಬಿಡುಗಡೆ ಮಾಡಿದ್ದು ಇನ್ನೊಂದು ವಿಶೇಷ. ಪುನೀತ್ ರಾಜ್‌ಕುಮಾರ್, ಸುದೀಪ್, ಉಪೇಂದ್ರ, ದರ್ಶನ್, ಗಣೇಶ್ ಮತ್ತು ಯಶ್ ತಲಾ ಒಂದೊಂದು ಹಾಡಿನ ಬಿಡುಗಡೆಯ ಹೊಣೆ ಹೊತ್ತಿದ್ದರು.

ಆರು ವರ್ಷಗಳ ಹಿಂದೆ ದಿಲ್‌ವಾಲನ ಕಥೆಯನ್ನು ರಾಧಿಕಾ ಪಂಡಿತ್‌ಗೆ ನಿರ್ದೇಶಕ ಅನಿಲ್‌ಕುಮಾರ್ ಹೇಳಿದ್ದರಂತೆ. ಆದರೆ ಆಗ ಸಿನಿಮಾ ಸೆಟ್ಟೇರಿರಲಿಲ್ಲ. ಈಗ ಅವರು ಕಥೆ ಹೇಳುವಾಗ ನನಗೆ ಚಿತ್ರದ ಎಲ್ಲ ದೃಶ್ಯಗಳು ಇನ್ನೂ ನೆನಪಿದ್ದವು. ಅಲ್ಲದೆ ಆ ಸಮಯದಲ್ಲೇ ನನಗೆ ಕಥೆ ಇಷ್ಟವಾಗಿತ್ತು. ಹಾಗಾಗಿ ಈ ಚಿತ್ರವನ್ನು ಒಪ್ಪಿಕೊಂಡೆ. ಎಂದರು ರಾಧಿಕಾ. ನಾನು ಏನೂ ಮಾಡುತ್ತಿಲ್ಲ, ಯಾವುದೋ ಶಕ್ತಿ ನನ್ನ ಎಲ್ಲ ಚಿತ್ರಗಳಿಗೂ ಇಷ್ಟು ಒಳ್ಳೆ ಹಾಡುಗಳನ್ನು ಕೊಡುವಂತೆ ಮಾಡಿದೆ ಎನ್ನುವುದು ಅರ್ಜುನ್ ಜನ್ಯ ಅವರ ಎಂದಿನ ಸೌಜನ್ಯದ ಮಾತು.  ಈ ಮಧ್ಯೆ ನಿರೂಪಕಿಯ ಆಸೆಯಂತೆ ನಾಯಕ ನಟ ಸುಮಂತ್ ಚಿತ್ರದಲ್ಲಿ ರಾಧಿಕಾ ಅವರಿಗೆ ಪ್ರಪೋಸ್ ಮಾಡುವ ದೃಶ್ಯವನ್ನು ಅಂದಿನ ವೇದಿಕೆಯಲ್ಲೂ ಅಭಿನಯಿಸಿ ತೋರಿಸಿ ಸಮಾರಂಭಕ್ಕೆ ಕಳೆತಂದರು.

- ಹ್ಯಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.