ವೇದಾಂತಿ ಹಾಡಿದನು

ಸುಮಾರು 18 ವರ್ಷದ ಹಿಂದೆ ಅವರಿಂದ ನಮ್ಮ ಪಿ.ಎಚ್.ವಿಶ್ವನಾಥ್ ನಿರ್ದೇಶನದ 'ಶ್ರೀಗಂಧ' ಸಿನಿಮಾಗೊಂದು ಹಾಡು ಹಾಡಿಸಿದ್ದೆ. ಇನ್ನೊಂದಿಷ್ಟು ಚಿತ್ರಗಳಿಗೆ ಹಾಡಿಸುವ ಆಸೆಯಿತ್ತು. ಆದರೆ ಆಗಲಿಲ್ಲ. ಅವರ ಬಗ್ಗೆ ಖುಷಿಯಾಗುವುದು ಎಂದರೆ, ನಮ್ಮ ಚಿತ್ರರಂಗದ ತಂತ್ರಜ್ಞರು ತಮ್ಮ ಕೊನೆಯ ದಿನಗಳಲ್ಲಿ ತುಂಬಾ ಕಷ್ಟಪಡ್ತಾರೆ. ಆದರೆ, ಸದ್ಯ ಪಿಬಿಎಸ್ ಅವರ ಕಥೆ ಹಾಗಾಗಲಿಲ್ಲ. ಅವರು ಯಾವತ್ತೂ ಅಸಹಾಯಕರಾಗಲಿಲ್ಲ. ಯಾರ ಮುಂದೆಯೂ ಕೈಚಾಚಲಿಲ್ಲ. ಇದಕ್ಕೂ ಮೆಚ್ಚಬ ೇಕಾದ ವಿಷಯ. ಈ ಲೆಕ್ಕದಲ್ಲಿ ಪಿ.ಬಿ.ಶ್ರೀನಿವಾಸ್ ಅವರದ್ದು ಪರಿಪೂರ್ಣ ಜೀವನ ಮತ್ತು ಪರಿಪೂರ್ಣ ಗಾಯನ.
ಪಿಬಿಎಸ್ರ ಕಂಠದಲ್ಲೇ ಸಿಹಿ ಇತ್ತು. ರಫ್ ಅಂಡ್ ಅನಿಸುವ ಸಾಹಿತ್ಯವನ್ನು ಕೂಡ ತಮ್ಮ ಕಂಠದಿಂದ ಸುಮಧುರ ಎನಿಸುವಂತೆ ಮಾಡುವ ತಾಕತ್ತು ಅವರಿಗಿತ್ತು. ಹಾಗಾಗಿ, ಟ್ರೈಬಲ್ ಎನಿಸುವಂಥ ಸಾಹಿತ್ಯ ಇರುವ ಹಾಡುಗಳೂ ಕೂಡ ಪಿ ಬಿಎಸ್ ಹಾಡಿದ ಮೇಲೆ ಇಂಪಾದ ಹಾಡುಗಳ ಬೈಬಲ್ಗೆ ಸೇರಿಬಿಡುತ್ತಿದ್ದವು. ಕರ್ನಾಟಕ ಸಂಗೀತದ ವರಸೆಯಲ್ಲಿರುವ ಹಾಡುಗಳನ್ನು ಸಾಮಾನ್ಯವಾಗಿ ಸಿನಿಮಾಗೆ ಹೊಂದಿಸುವುದು ಕಷ್ಟ. ಆದರೆ ಪಿಬಿಎಸ್ ಕಂಠದಲ್ಲಿ ಈ ಕರ್ನಾಟಕ ಸಂಗೀತದ ಗಮಕಗಳು ಯಾವತ್ತೂ ಅತಿರೇಕ ಅನಿಸಲಿಲ್ಲ ಎಂಬುದು ವಿಶೇಷ.
'ವೇದಾಂತಿ ಹೇಳಿದನು' ರೀತಿಯ ವೇದಾಂತದ ಹಾಡುಗಳಿಗೆ ಪಿಬಿಎಸ್ ಕಂಠ ಅದ್ಭುತವಾಗಿ ಹೊಂದಿಕೊಳ್ಳುತ್ತಿತ್ತು. ಅಂಥ ಹಾಡುಗಳನ್ನು ಹಾಡುವ ಕಲೆ ಅವರಿಗೆ ಸಹಜವಾಗಿಯೇ ಬಂದಿತ್ತು. ಕನ್ನಡಕ್ಕಿಂತ ತಮಿಳಿನಲ್ಲಿ ಅಂಥ ಹಾಡುಗಳನ್ನು ಹೆಚ್ಚಾಗಿ ಹಾಡಿದ್ದಾರೆ ಪಿಬಿಎಸ್. ಅಲ್ಲದೆ ಹಿಂದೆಲ್ಲಾ, ತಮಿಳಿನಲ್ಲಿ ಹಾಡುಗಳ ಶೈಲಿಯೇ ಬೇರೆ ಇತ್ತು. ಅಲ್ಲಿ ಉಚ್ಚ ಕಂಠದಲ್ಲಿ ಹಾಡುವ ಗಾಯಕರ ಟ್ರೆಂಡ್ ಇತ್ತು. ಪಿಬಿಎಸ್ ಹಾಡಲು ಶುರುಮಾಡಿದ ಮೇಲೆ ಅಲ್ಲಿ ಮೆಲೋಡಿ ಟ್ರೆಂಡ್ ಶುರುವಾಯ್ತು. ಅವರ ಕಂಠದಲ್ಲಿ ತಮಿಳು ಹಾಡುಗಳನ್ನು ಕೇಳಿದಾಗ, ತಮಿಳಿನಂಥ ಭಾಷೆ ಕೂಡ ಇಷ್ಟೊಂದು ಮಧುರವಾಗಿದೆಯಾ ಎಂದು ಆಶ್ಚರ್ಯವಾಗುತ್ತಿತ್ತು.
'ಲಕ್ಕಿ ನಂಬರ್ 13 ಟೇಕ್' ಎಂಬುದು ಪಿಬಿಎಸ್ಗೆ ಇದ್ದ ಹೆಸರು. ಅವರು ಒಂದು ಹಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದರು ಎಂಬುದು ಇದಕ್ಕೆ ಕಾರಣ. ಒಂದು ಹಾಡನ್ನು ಕೂಲಂಕುಷವಾಗಿ ಗಮನಿಸಿ, ನಿಧಾನವಾಗಿ ಕಲಿತು ಹಾಡುತ್ತಿದ್ದರು, ಆದರೆ ಅವರ ಕಂಠದಲ್ಲಿ ಅದು ಶಾಶ್ವತವಾಗಿರುವಂಥ ಹಾಡಾಗಿಬಿಡುತ್ತಿತ್ತು.
-ಹಂಸಲೇಖ
ರೇಡಿಯೋದಲ್ಲಿ ಪರಿಚಯ
ನಾವು ರೇಡಿಯೋ ಕೇಳಲು ಆರಂಭಿಸಿದಾಗ ಪಿಬಿಎಸ್ ಹಾಡುಗಳೇ ಹೆಚ್ಚಾಗಿ ಬರುತ್ತಿದ್ದವು. ಹಾಗಾಗಿ ಅವರ ಮಧುರ ಭಾವಪೂರ್ಣ ಧ್ವನಿ ನನ್ನನ್ನು ಹಾಡುಗಳ ಲೋಕದತ್ತ ಸೆಳೆದ ಪ್ರಮುಖ ಅಂಶ. ಅದರಿಂದಲೇ ನಾನು ಇವತ್ತು ಗೀತರಚನೆಕಾರನಾಗಲು ಸಾಧ್ಯವಾಗಿರುವುದು. ಈಗ ಒಂದು ಹಾಡು, ಪಲ್ಲವಿ ಒಮ್ಮೆ, ಚರಣ ಒಮ್ಮೆ. ಮೇಲ್, ಫೀಮೇಲ್ ಬೇರೆ ಬೇರೆ ಸಮಯದಲ್ಲಿ, ಇನ್ಯಾವಾಗಲೋ ಮಿಕ್ಸಿಂಗ್, ಹೀಗೆ ಬಿಡಿ ಬಿಡಿಯಾಗಿ ರೆಕಾರ್ಡ್ ಆಗುತ್ತೆ. ಆದರೆ ಅವರ ಕಾಲದಲ್ಲಿ ಹಾಗಿರಲಿಲ್ಲ. ಹಾಡುವವರು ಬಹಳ ಪ್ರತಿಭಾವಂತರಾಗಿರಬೇಕಿತ್ತು. ಅಂಥ ಸಮಯದಲ್ಲಿ ಪಿಬಿಎಸ್ ಅವರು ಸಾವಿರಾರು ಹಾಡು ಹಾಡಿರುವುದು ದೊಡ್ಡ ವಿಷಯ. ಶ್ರದ್ಧೆ, ವಿನಯವಂತಿಕೆ ಸೇರಿದಂತೆ ಇಂದಿನ ಗಾಯಕರು ಅವರಿಂದ ಕಲಿಯಬೇಕಾದುದು ಬಹಳಷ್ಟಿದೆ.
-ಕವಿರಾಜ್
ಅಸಾಮಾನ್ಯ ಗಾಯಕನ ಬಗೆಗಿನ ಶ್ರೀಸಾಮಾನ್ಯ ಪ್ರತಿಕ್ರಿಯೆ
ಅದ್ಯಾಕೋ ಗೊತ್ತಿಲ್ಲ... ಅಂದು ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗಿಂದ ಮನಸಿನ ತುಂಬ ಅದೊಂದೇ ಹಾಡು...ಒಲವಿನ ಪೂಜೆಗೆ ಒಲವೇ ಮಂದಾರ...ಅದೆಷ್ಟು ಸಲ ಹಾಡಿಕೊಂಡೆನೋ ಗೊತ್ತಿಲ್ಲ.. ಆದರೆ, ಮಧ್ಯಾಹ್ನ ಅವರ ನಿಧನದ ಸುದ್ದಿ ಕೇಳಿದಾಗ ಹೀಗೊಂದು ಮುನ್ಸೂಚನೆಗೇ ಆ ಹಾಡು ಬೆಳಗ್ಗಿನಿಂದ ಕಾಡುತ್ತಿತ್ತಾ, ಅಂತ ದುಃಖ ಉಮ್ಮಳಿಸಿದಂತಾಯ್ತು..
-ಅಭಿಷೇಕ್ ಎಸ್.ಎನ್, ಬೆಂಗಳೂರು
ಇದೆಂಥ ಕಾಕತಾಳೀಯವೋ ಗೊತ್ತಿಲ್ಲ... ಅಣ್ಣಾವ್ರ ಶರೀರ ನಮ್ಮೊಂದಿಗಿಲ್ಲವಾಗಿ ಏಳುವರ್ಷ ಆಯ್ತು ಅಂತ ಸ್ಮರಿಸೋ ಹೊತ್ತಿಗೆ ಅಣ್ಣಾವ್ರ ಶಾರೀರವೂ ನಮ್ಮಿಂದ ದೂರವಾಗಿದೆ. ಬ್ಲಾಕ್ ಅಂಡ್ ವೈಟ್ ಕನ್ನಡ ಸಿನಿಮಾ ಹಾಡು ಅಂದ್ರೆ ಅದು ಪಿ.ಬಿ.ಎಸ್. ಆದರೆ ಹಾಡಿರೋ ಒಂದೊಂದು ಹಾಡೂ ಕಲರ್ಫುಲ್.
-ಓಂ ಶಿವಚರಣ್, ಮೈಸೂರು
ವಿಷ್ಣುಗೆ ಎಸ್ಪಿಬಿ ಹೇಗೋ... ಹಾಗೆ ಅಣ್ಣಾವ್ರಿಗೆ ಪೀಬಿ ಶ್ರೀನಿವಾಸ್ ಆಗಿದ್ರು. ಅವರು ಹಾಡೋದನ್ನ ನಿಲ್ಲಿಸಿ ಬಹುಕಾಲವೇ ಆಗಿದ್ರೂ ಕೂಡ ಅವರ ಪ್ರತಿ ಹಳೇ ಹಾಡೂ ಹೊಸತೆಂಬಂತೇ ಅನಿಸುವಂಥದ್ದು.
-ತಿರುಮಲೇಶ್.ಜಿ.ಕೆ. ಮಂಗಳೂರು.
ಅವರು ಹಿನ್ನಲೆ ಸಂಗೀತಗಾರರಲ್ಲ, ಮಾಂತ್ರಿಕರು. ಪವಾಡಗಳನ್ನು ಮಾಡುತ್ತಿದ್ದವರು. ಏಕೆಂದರೆ ಅದೆಂತಹ ಸಾಮಾನ್ಯ ಸಾಹಿತ್ಯವೇ ಇರಲಿ ಅದಕ್ಕೆ ಜೀವ ನೀಡುತ್ತಿದ್ದರು. ನನ್ನಂಥ ಇಪ್ಪತ್ತೊಂದನೇ ಶತಮಾನದ ಹುಡುಗನಿಗೂ ಅವರ ದನಿ ಇಷ್ಟ ಅಂದ್ರೆ ಅದರ ತಾಕತ್ತು ಊಹಿಸಲಸದಳ. ರಫಿ-ಮುಖೇಶ್ ಇಬ್ಬರೂ ಒಬ್ಬರಲ್ಲೇ ಇರಲು ಸಾಧ್ಯ ಅಂತ ಪಿ.ಬಿ.ಎಸ್. ಹಾಡುಗಳನ್ನ ಕೇಳಿದಾಗ ಅನಿಸಿತ್ತು.
-ಪ್ರವೀಣ್ ಧಾನಗೌಡರ್, ಬೆಂಗಳೂರು
ಅವರ ಧ್ವನಿಗೆ ಸೋತು ಹೋದ ಎಷ್ಟೋ ಕೋಟಿ ಅಭಿಮಾನಿಗಳಲ್ಲಿ ನಾನು ಕೂಡ ಒಬ್ಬ. ಮೇರು ನಟ ಡಾ.ರಾಜ್ಕುಮಾರ್ ಕೂಡ ಅವರ ಧ್ವನಿಯ ತುಂಬಾ ಇಷ್ಟ ಪಡುತ್ತಿದ್ದರು. 'ರವಿ ವರ್ಮನ ಕುಂಚದ ಕಲೆ' ಗೀತೆಯ ಬಗ್ಗೆ ಅವರೇ ಒಂದು ಬಾರಿ ದೂರದರ್ಶನದಲ್ಲಿ ಹೇಳಿದ್ದು ನೆನಪಿದೆ. ಅವರ ತಾಯಿ ತೀರಿಕೊಂಡಿದ್ದ ಸಮಯದಲ್ಲಿ ಆ ಗೀತೆಯ ಹಾಡಲು ಅವಕಾಶ ಸಿಕ್ಕಿತಂತೆ. ಆ ದುಃಖದಲ್ಲೂ ಅವರು ಹಾಡಿದ ಅದ್ಭುತ ಹಾಡದು. ಅದಕ್ಕೇ ಏನೋ, ಇಂದಿಗೂ ಆ ಗೀತೆಯ ಕೇಳಿದ ಕೂಡಲೇ ಎಲ್ಲರಿಗೂ ಇಷ್ಟವಾಗಿ ಬಿಡುತ್ತೆ. 'ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ' ಗೀತೆ ಪ್ರತಿ ಬಾರಿ ಕೇಳುವಾಗಲೂ ಎಲ್ಲೋ ಕರೆದುಕೊಂಡು ಹೋಗುತ್ತೆ. ಪಿಬಿಎಸ್ ಹಲವಾರು ಭಾಷೆಯಲ್ಲಿ ಕವಿತೆಯನ್ನೂ ಬರೆಯುತ್ತಿದ್ದರು. ಅವರಿಗೆ ಭಾರತದ ಮುಖ್ಯವಾದ ಎಲ್ಲ ಭಾಷೆಗಳು ಓದಲು ಬರೆಯಲು ಬರುತ್ತಿತ್ತು. ಇನ್ನು ಮೇಲೆ ಅದೆಲ್ಲವೂ ಬರೀ ನೆನಪುಗಳಷ್ಟೇ.
- ಪ್ರಕಾಶ್ ಶ್ರೀನಿವಾಸ್, ಬೆಂಗಳೂರು
'ನಿನದೇ ನೆನಪು' ಹಾಡುವ ಹೊತ್ತಿಗೆ ಅವರ ಅನಿವಾರ್ಯತೆ ಅಣ್ಣಾವ್ರಿಗೆ ಇಲ್ಲದಂತೆ ಎಲ್ಲರೂ ಮಾಡಿದ್ದರು. ಆದ್ರೂ ಆ ಹಾಡು ನನಗೆ ಅತಿ ಇಷ್ಟದ್ದು. ಆ ಹಾಡಿನಲ್ಲಿ ಅವರು ಹಾರಾಡೋ ಹಕ್ಕಿ ಆಗಿದ್ರು. ಮುಖೇಶ್ರ ಹಾಗೆ, ಎಂದೂ ಗರಿ ಬಿಚ್ಚಿ ಹಾಡದ ಅಂತರ್ಮುಖಿ ಶೈಲಿಯ ಪಿಬಿ, ಕಿಶೋರ್ರಂತೆ ನವರಸ ತೋರಿಸ್ತಿದ್ದ ಅಣ್ಣಾವ್ರ ಮುಂದೆ ಕಾಲಕ್ರಮೇಣ ಡಲ್ ಅನಿಸಿದ್ದು ಹೇಗಿತ್ತಂದ್ರೆ ಅದು ಆಸ್ಟ್ರೇಲಿಯ-ಸೌತ್ ಆಫ್ರಿಕಾ ಮ್ಯಾಚ್ನಲ್ಲಿ ಯಾರು ಗೆಲ್ಲಬೇಕು ಅಂತ ಹೇಳಲಾಗದ ಸಂಕಟದ ಪರಮಾವಧಿ.
-ವಿದ್ವತ್, ಮೈಸೂರು
ಶರೀರ ನಶ್ವರ. ಶಾರೀರ ಅಜರಾಮರ. ಕಲೆಗಾರನಿಗೆಲ್ಲಿದೆ ಸಾವು. ನನ್ನ ಕಿವಿಗೆ ಬಹುಶಃ ಅಮ್ಮ ಅಪ್ಪ ಆದ ಮೇಲೆ ಬಿದ್ದಂತ ದನಿ ಪಿಬಿಎಸ್. ಅವರ 'ಹಾಡೊಂದ ಹಾಡುವೆ' ಕೇಳದೇ ನಾ ಮಲಗ್ತಾನೇ ಇರಲಿಲ್ಲ. ಪ್ರೀತಿ ಪ್ರಣಯ ಶಾಂತಿ, ರೋಷ, ಅಭಿಮಾನ, ಹಾಸ್ಯ, ಶೋಕ ಎಲ್ಲ ರಸಗಳನ್ನೂ ಹೊಮ್ಮಿಸುತ್ತಿದ್ದ ದನಿ ಎಂದಿಗೂ ನಮ್ಮ ಜೊತೆಯಿದ್ದೇ ಇದೆ. ಆದರೆ ದನಿಯ ಒಡೆಯ ಇಲ್ಲ ಅನ್ನೋದೊಂದೇ ದುಃಖದ ಸಂಗತಿ. ವಾಹಿನಿಗಾಗಿ ಕಾರ್ಯಕ್ರಮವೊಂದನ್ನು ಮಾಡೋವಾಗ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿತ್ತು. ಭೂಮಿ ತೂಕದ ಮನುಷ್ಯ. ಕಲೆಯಲ್ಲಿ ಮೇರುಪರ್ವತವಾದರೂ ನಡವಳಿಕೆ, ಮಾತುಗಳಲ್ಲಿ ಒಂದಷ್ಟೂ ಅಹಂಕಾರದ ಸುಳಿವಿಲ್ಲ. ಅವರ ಸುಕ್ಕುಗಟ್ಟಿದ ಕೈಗಳನ್ನು ಹಿಡಿದು ಸ್ಟುಡಿಯೋಗೆ ಕರೆತರುವಾಗ ಅನಿರ್ವಚನೀಯ ಆನಂದ. ಮರೆಯಲಾರೆ ಆ ಕ್ಷಣವನ್ನು. ನನ್ನ ಬದುಕಿನ ಅಮೂಲ್ಯ ಕ್ಷಣ.
-ಕುಮುದವಲ್ಲಿ ಅರುಣಮೂರ್ತಿ, ಬೆಂಗಳೂರು
ಪ್ರಾಯಶಃ ಕನ್ನಡ ಚಿತ್ರ ಗೀತೆಗಳು ಆ ಎತ್ತರ ಮತ್ತು ಆ ಗುಣ ಮಟ್ಟ ಕಂಡಿದ್ದು ಈ ಧ್ವನಿಯಿಂದಲೇ. ಸ್ಪಷ್ಟ, ಶುದ್ಧ ಕನ್ನಡದಲ್ಲಿ ಅಣ್ಣಾವ್ರು ಹಾಡೋದಕ್ಕೆ ಪೀಬಿಎಸ್ ಅವರೇ ಮಾದರಿ ಅಂದರೂ ತಪ್ಪಿಲ್ಲ.
-ಎಂ. ಎಸ್. ಪ್ರಸಾದ್, ಬೆಂಗಳೂರು
ನಾನು ಚೆನ್ನೈಲ್ಲಿದ್ದಾಗ ರಾಧಾಕೃಷ್ಣ ಸಲೈಲಿರುವ ವುಡ್ಲ್ಯಾಂಡ್ಸ್ ಗಾರ್ಡನ್ ಹೊಟೇಲ್ಗೆ ಹೋಗುತ್ತಿರುತ್ತಿದ್ದೆ. ಪಿ.ಬಿ.ಶ್ರೀನಿವಾಸ್ ಕೂಡ ಆ ಹೋಟೆಲ್ಗೆ ಕಾಯಂ ಭೇಟಿಕೊಡುವವರಾಗಿದ್ದರು. ನನಗೆ ನೆನಪಿದ್ದ ಹಾಗೆ ಅವರು ಸ್ಕೂಟರಲ್ಲಿ ಬರುತ್ತಿದ್ದರು. ಒಮ್ಮೆ ತುಸು ಗಂಭೀರದ್ದೇ ಅನಿಸುವ ಒಂದು ಅಪಘಾತಕ್ಕೀಡಾದ ನಂತರ ಅವರು ಆಟೋರಿಕ್ಷಾದಲ್ಲಿ ಅಲ್ಲಿಗೆ ಬರುತ್ತಿದ್ದರು. ಯಾರೇ ಸಿಕ್ಕು ಮಾತಾಡಿಸಿದರೂ ಒಂಚೂರೂ ಗರ್ವವಿಲ್ಲದೇ ಎಲ್ಲರನ್ನೂ ಮಾತಾಡಿಸುತ್ತಿದ್ದರು. ಅವರ ಮಾತು, ಹಾಡು ಮತ್ತು ಸಂಗೀತದ ಬಗ್ಗೆಯೇ ಆಗಿರುತ್ತಿತ್ತು. ಸಿಂಗರ್ ಅಂದ್ರೆ ಅವರ ಜೀವನಶೈಲಿಯೇ ಬೇರೆ ಅಂದುಕೊಂಡಿದ್ದ ನನಗೆ ಅವರ ಸರಳತೆ ಬೆರಗುಗೊಳಿಸಿತ್ತು.
-ಪದ್ಯಾಣ ರಾಮಚಂದ್ರ, ದುಬೈ
ಅವರ ನಡುಗುವ ಸ್ವರದಲ್ಲೂ ಕೂಡ 'ಶ್ರೀಗಂಧ'ಚಿತ್ರದ 'ಅಂಧರಮ್ಮ ಅಂಧರು' ಹಾಡಿಗೆ ನೀಡಿದ್ದ ವಿಶೇಷ ಹೊಳಪು ಇಂದಿಗೂ ಜನಮಾನಸದಲ್ಲಿ ಮಿಂಚುತ್ತಿದೆ. ಗದ್ಗದಿತವಾಗುವುದನ್ನು ಓದಿದ್ದೆ ಅಷ್ಟೆ!! ಅವರ ನಿಧನದ ಸುದ್ದಿ ಕೇಳಿದಾಗ ಅದನ್ನು ಅನುಭವಿಸಿದೆ.
-ಸಿದ್ಧಲಿಂಗೇಶ್ವರ ದುರ್ಗದ್, ಶಿರಾಳಕೊಪ್ಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


