ಗುಬ್ಬಿ ಗೂಡು

ಗುಬ್ಬಿ ಟಾಕೀಸ್ ರೆಡಿಯಾಗಿದೆ. ಆದರೆ ಇದು ಪ್ರೀತಮ್ ಗುಬ್ಬಿಯದ್ದಲ್ಲ. ನನ್ನ ಹಿರಿಯರಾದ ಗುಬ್ಬಿ ವೀರಣ್ಣ ಅವರ ನೆನಪಲ್ಲಿ ಈ ಹೆಸರು ಇಡಲಾಗಿದೆ. ಈ ಬ್ಯಾನರ್ನಿಂದ ಪ್ರತಿವರ್ಷ ನನ್ನ ನಿರ್ದೇಶನದ ಒಂದು ಚಿತ್ರ ಮಾಡುವ ಆಸೆ ಇದೆ. ಅದರ ಜೊತೆಗೆ ಗುಬ್ಬಿ ಟಾಕೀಸ್ನಿಂದ ಹೊಸ ಪ್ರತಿಭೆಗಳಿಗೂ ಅವಕಾಶ ಇದೆ ಎಂದರು 'ನಮ್ ದುನಿಯಾ ನಮ್ ಸ್ಟೈಲ್' ಚಿತ್ರದ ನಿರ್ದೇಶಕ ಪ್ರೀತಮ್ ಗುಬ್ಬಿ.
ಇದು ಗುಬ್ಬಿ ಗೂಡಿನ ಕತೆ. ಹಕ್ಕಿಗೂಡು ಒಂದೇ ಆದರೂ, ಮುದ್ದು ಮರಿಗಳು ಮಾತ್ರ ಹಲವು ಎನ್ನುವಂಥ ಚಿತ್ರ 'ನಮ್ ದುನಿಯಾ ನಮ್ ಸ್ಟೈಲ್'. ಸ್ಟಾರ್ಡಮ್ ಲೆಕ್ಕದಲ್ಲಿ ನಿಜಕ್ಕೂ ಮರಿಗಳೇ ತುಂಬಿರುವ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಅದು. ಪ್ರೀತಮ್ ಗುಬ್ಬಿ ಜೊತೆಗೆ ಚಿತ್ರದ ನಾಯಕರಾದ ಲಿಖಿತ್ ಶೆಟ್ಟಿ, ಕೃಷ್ಣ, ನಾಯಕಿಯರಾದ ಸೋನಿಯಾ ಗೌಡ, ಮಿಲನ, ಕಾವ್ಯಾ ಶೆಟ್ಟಿ, ಸಾಹಿತಿ ಜಯಂತ್ ಕಾಯ್ಕಿಣಿ ಮತ್ತು
ಅಂದಿನ ಸಮಾರಂಭದ ಮುಖ್ಯ ಆಕರ್ಷಣೆಯಾಗಿದ್ದ ಸಂಗೀತ ನಿರ್ದೇಶಕ ಶಾನ್ ರೆಹ್ಮಾನ್ ತಮ್ಮ ದುನಿಯಾದಲ್ಲಿ ತಮ್ಮ ಸ್ಟೈಲ್ನೊಂದಿಗೆ ವೇದಿಕೆಯಲ್ಲಿದ್ದರು. ಚಿತ್ರದ ಇನ್ನೊಬ್ಬ ನಾಯಕ ವಿನಾಯಕ್ ಜೋಷಿ ಬಿಗ್ಬಾಸ್ನಲ್ಲಿ ಬ್ಯುಸಿ ಆಗಿರುವುದರಿಂದ ಅಂದು ಅವರದ್ದು 'ಆ್ಯಬ್ಸೆಂಟ್ ಸಾರ್'.
ಚಿತ್ರಕ್ಕೆ ನಿರ್ದೇಶಕರಾದರೂ ಅಂದಿನ ಪತ್ರಿಕಾಗೋಷ್ಠಿಯಲ್ಲಿ ನಾಯಕನ ಜವಾಬ್ದಾರಿ ಹೊತ್ತಿದ್ದ ಪ್ರೀತಮ್, ಕಾಶ್ಮೀರ, ಮಲೇಶಿಯಾ ಸೇರಿದಂತೆ ತಮ್ಮ ಚಿತ್ರೀಕರಣದ ವಿವರಗಳನ್ನು ನೀಡಿದರು. ಸಿನಿಮಾ ಈಗ ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ ವಿನಾಯಕ್ ಜೋಷಿ ಅವರ ಅಲಭ್ಯತೆಯಿಂದಾಗಿ ಅವರ ಡಬ್ಬಿಂಗ್ ಬಾಕಿ ಉಳಿದಿದ್ದು, ಅವರು ಆದಷ್ಟು ಬೇಗ ಅವರು ಬಿಗ್ಬಾಸ್ ಹೌಸ್ನಿಂದ ಹೊರಬರಲಿ ಎಂದು 'ಹಾರೈಸಿದರು' ಪ್ರೀತಮ್.
ಸಂಗೀತ ನಿರ್ದೇಶಕ ಶಾನ್ ರೆಹ್ಮಾನ್ಗೆ ಇದು ಚೊಚ್ಚಲ ಚಿತ್ರ. ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಸಾಹಿತಿ ಜಯಂತ್ ಕಾಯ್ಕಿಣಿ, ಶಾನ್ ಅವರ ರಾಗಗಳಲ್ಲೇ ಅದಕ್ಕೆ ಬೇಕಾದ ಸಾಹಿತ್ಯ ಇತ್ತು. ಸಂಪೂರ್ಣ ಹೊಸ ಸೌಂಡಿಂಗ್ ಇದ್ದ ಅವರ ಟ್ಯೂನ್ಗಳಿಗೆ ಹಾಡು ಬರೆಯುವುದು ಖುಷಿ ಕೊಟ್ಟಿತು ಎಂದು ಹೇಳಿದರೆ, ನನ್ನ ಹಾಡಿಗೆ ಜಯಂತ್ ಹಾಡು ಬರೆದಿದ್ದು ನೋಡಿ ಥ್ರಿಲ್ ಆದೆ ಎಂದಿದ್ದು ಚಿತ್ರದ ನಾಯಕರಲ್ಲೊಬ್ಬರಾದ ಕೃಷ್ಣ.
ಪ್ರೀತಮ್ ಗುಬ್ಬಿ ಸಿನಿಮಾಗಳೆಂದರೆ ಅವು ಫೀಲ್ ಗುಡ್ ಸಿನಿಮಾಗಳು ಎನ್ನುತ್ತಾ ಜಯಂತ್ ಮಾತು ಮುಗಿಸುವ ಮುನ್ನ ಎಲ್ಲಾ ರೆಕ್ಕೆ ಬಿಚ್ಚಲು ಕಾತುರರಾಗಿದ್ದ ಚಿತ್ರತಂಡದ ಪುಟ್ಟ ಹಕ್ಕಿಗಳು ತಮ್ಮ ತಮ್ಮ ಚುಟುಕು ಮಾತುಗಳನ್ನು ಹಂಚಿಕೊಂಡರು. ಕೊನೆಯಲ್ಲಿ ಬಂದ ಕಿಚ್ಚ ಸುದೀಪ್ ನೆರೆದಿದ್ದ ಮಾಧ್ಯಮದವರನ್ನು ನೋಡಿ, ನನ್ನ ಸಿನಿಮಾಕ್ಕೂ ನೀವು ಇಷ್ಟೊಂದು ಜನ ಬಂದಿರಲಿಲ್ಲ, ಏನೋ ಹೊಸಬರ ಬಗ್ಗೆ ಎಲ್ಲರಿಗೂ ಹೆಚ್ಚು ಪ್ರೀತಿ ಇದ್ದಂತಿದೆ ಎನ್ನುತ್ತಾ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಶಾನ್ ರೆಹಮಾನ್ ಸೇರಿದಂತೆ ಚಿತ್ರತಂಡದ ಎಲ್ಲರಿಗೂ ಶುಭಕೋರಿದರು.
= ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


