ಕನ್ನಡವೇ ನಮ್ಮಮ್ಮ
ಅಷ್ಟ ಭಾಷಾ ಗಾಯಕರಾದ ಪಿಬಿಶ್ರೀಗೆ ಹೆಸರು ಮತ್ತು ಹಣ ತಂದುಕೊಟ್ಟಿದ್ದು ಕನ್ನಡ ಚಿತ್ರರಂಗ.

ಪ್ರತಿವಾದಿ ಭಯಂಕರ ಶ್ರೀನಿವಾಸ್, ಅನ್ನೋದು ಒಂದರ್ಥದಲ್ಲಿ ಪಿ.ಬಿ. ಶ್ರೀನಿವಾಸ್ ಅವರ ಪೂರ್ಣ ಹೆಸರು. ಹುಟ್ಟಿದ್ದು ಆಂಧ್ರದ ಕಾಕಿನಾಡದಲ್ಲಾದರೂ ಅಪ್ಪಟ ಕನ್ನಡದ ಗಾಯಕರಾಗಿ ನಾಲ್ಕುದಶಕಗಳಿಗೂ ಹೆಚ್ಚು ಕಾಲ ಮೆರೆದವರು. ಅಷ್ಟ ಭಾಷಾ ಗಾಯಕರಾದ ಪಿಬಿಶ್ರೀಗೆ ಹೆಸರು ಮತ್ತು ಹಣ ತಂದುಕೊಟ್ಟಿದ್ದು ಕನ್ನಡ ಚಿತ್ರರಂಗ ಎಂದರೆ ತಪ್ಪಾಗಲಾರದು. ಅವರಿಗೂ ಕೂಡಾ ಕನ್ನಡ ಚಿತ್ರರಂಗದ ಮೇಲೆ ಅಪರಿಮಿತವಾದ ಪ್ರೀತಿ ಇತ್ತು ಎಂಬುದಕ್ಕೆ ಅವರ ಜೀವನದಲ್ಲಿ ನಡೆದ ಕೆಲವು ಘಟನೆಗಳೇ ಸಾಕ್ಷಿ.
ಅವರ ಅನುಪಸ್ಥಿತಿಯ ಕಾಲದಲ್ಲಿ ಅವರ ಜೀವನದಲ್ಲಿ ನಡೆದ ಮಹತ್ತರ ಘಟನೆಗಳನ್ನು ಮೆಲುಕು ಹಾಕಿದರೆ... ಸೊಸೆ ತಂದ ಸೌಭಾಗ್ಯ ಚಿತ್ರದ ಹಾಡು 'ರವಿವರ್ಮನಾ ಕುಂಚದಾ...' ಆಗಿನ ಕಾಲಕ್ಕೆ ಎಷ್ಟೊಂದು ಜನಪ್ರಿಯ ಹಾಡಾಗಿತ್ತು ಎಂಬುದು ಇತಿಹಾಸವಾದರೂ ಆ ಹಾಡು ಇಂದಿಗೂ ಪ್ರಸ್ತುತ. ಇಂತಹ ಹಾಡು ಹಾಡಿದವರು ಪಿಬಿಶ್ರೀ. ಅವರು ಎಂತಹ ಸಂದರ್ಭದಲ್ಲಿ ಹಾಡಿದರು ಗೊತ್ತೇ? ಆಗಿನ್ನೂ ಕರ್ನಾಟಕದಲ್ಲಿ ಸ್ಟುಡಿಯೋಗಳು ಕಾಲಿಡದ ಕಾಲವಾದ ಕಾರಣ ಮದ್ರಾಸ್ನ ಸ್ಟುಡಿಯೋಗಳತ್ತಲೇ ಕನ್ನಡ ಚಿತ್ರರಂಗ ಕೈಚಾಚಿ ನಿಂತಿತ್ತು. ಹಾಗಾಗಿ ಚೆನ್ನೈನ ಸ್ಟುಡಿಯೋ ಒಂದರಲ್ಲಿ ರಾಜೇಶ್ ಅಭಿನಯದ 'ರವಿವರ್ಮನಾ ಕುಂಚದಾ...' ಹಾಡಿನ ರೆಕಾರ್ಡಿಂಗ್ ನಡೆಯುತ್ತಿತ್ತು. ಆಗಿನ ಕಾಲದಲ್ಲಿ ಸಂಗೀತ ವಾದ್ಯಗಳ ಜೊತೆಗೆ ಹಾಡನ್ನು ರೆಕಾರ್ಡಿಂಗ್ ಮಾಡಲಾಗುತ್ತಿತ್ತು. ಅಂದಿನ ಹಾಡಿನ ರೆಕಾರ್ಡಿಂಗ್ಗೆ ಪಿಬಿಶ್ರೀಯವರು ಬಂದರು.
ಸುಮಾರು ಏಳು ಬಾರಿ ಈ ಹಾಡು ಹಾಡಿದ ನಂತರ ಹಾಡು ಓಕೆ ಆಯಿತು. ರೆಕಾರ್ಡಿಂಗ್ ಮುಗಿದ ಕೂಡಲೇ ಪಿಬಿಶ್ರೀ ಹೊರಟು ನಿಂತರು. 'ಸರ್ ಕಾಫಿ ಕುಡಿದು ಹೋಗಿ ಏನಷ್ಟು ಅರ್ಜೆಂಟ್' ಎಂದು ಸಂಗೀತ ನಿರ್ದೇಶಕರು ತಡೆದರು. ಆದರೆ, ಅದಕ್ಕೆ ತುಂಬಾ ಕೂಲಾಗಿ ಪಿಬಿಶ್ರೀ ಹೇಳಿದರು 'ಇಲ್ಲ ಕಣಪ್ಪ ಮನೆಯಲ್ಲಿ ನಮ್ಮ
ತಾಯಿ ತೀರಿಕೊಂಡಿದ್ದಾರೆ. ಅವರ ಅಂತ್ಯಸಂಸ್ಕಾರ ಮಾಡಬೇಕಿದೆ. ಕನ್ನಡ ಚಿತ್ರರಂಗ ನನಗೆ ಬದುಕು ಕಟ್ಟಿಕೊಟ್ಟ ಎರಡನೇ ತಾಯಿ. ಅದಕ್ಕೆ ಹೆತ್ತ ತಾಯಿಯ ಹೆಣ ಮನೆಯಲ್ಲಿ ಬಿಟ್ಟು ಎರಡನೇ ತಾಯಿಯ ಸೇವೆ ಮಾಡಲು ಬಂದೆ. ದಯವಿಟ್ಟು ನನ್ನನ್ನು ಹೊರಡಲು ಬಿಡಿ' ಎಂದು ಭಾವುಕರಾಗಿ ಹೇಳಿದರು. ಈ ಮಾತು ಕೇಳಿದ ಕೂಡಲೇ ಸ್ಟುಡಿಯೋದಲ್ಲಿದ್ದ ಎಲ್ಲ ಕಲಾವಿದರ ಕಣ್ಣಲ್ಲೂ ಕಂಬನಿ ಬಂದಿತ್ತು. ಹೆತ್ತ ತಾಯಿ ತೀರಿಕೊಂಡ ವಿಚಾರ ಪಕ್ಕಕ್ಕಿಟ್ಟು ಬಂದು ತಾಯಿಯಂತೆ ಭಾವಿಸಿದ್ದ ಕನ್ನಡ ಚಿತ್ರರಂಗದ ಸೇವೆ ಮಾಡಿದ ಮಹಾನ್ ವ್ಯಕ್ತಿ ಪಿ.ಬಿ. ಶ್ರೀನಿವಾಸ್ ಮತ್ತು ಅವರು ಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ ಎಷ್ಟೊಂದು ಮಹತ್ವ ನೀಡುತ್ತಿದ್ದರು ಎಂಬುದಕ್ಕೆ ಈ ಘಟನೆ ಸಾಕ್ಷಿ.
ಅವರ ಜೀವನದಲ್ಲಿ ನಡೆದ ಮತ್ತೂಂದು ಘಟನೆ ಕಲಾವಿದರಿಗೆ ಕನ್ನಡ ಚಿತ್ರರಂಗ ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಎತ್ತಿ ತೋರಿಸುತ್ತದೆಯಲ್ಲದೆ ಸಹ ಕಲಾವಿದರು ಪಿಬಿಶ್ರೀಯವರಿಗೆ ಎಷ್ಟೊಂದು ಗೌರವ ನೀಡುತ್ತಿದ್ದರು ಎಂಬುದನ್ನು ಕಟ್ಟಿಕೊಡುತ್ತದೆ. ಅವು ಪಿಬಿಶ್ರೀಯವರಿಗೆ ಕಷ್ಟದ ದಿನಗಳು. ಗಾಯಕರಾಗಿ ಎಸ್.ಪಿ.
ಬಾಲಸುಬ್ರಹ್ಮಣ್ಯಂ ಅವರು ಉತ್ತುಂಗದಲ್ಲಿದ್ದ ಕಾಲ. ಪಿಬಿಶ್ರೀಯವರಿಗೆ ಬೇಡಿಕೆ ತೀರಾ ಕಡಿಮೆಯಾಗಿತ್ತು. ಅದೇ ಸಮಯದಲ್ಲಿ ಕನ್ನಡ ಚಿತ್ರವೊಂದರ ನಿರ್ದೇಶಕ, ನಿರ್ಮಾಪಕರಾಗಿ ಒಬ್ಬರೇ ವ್ಯಕ್ತಿ ಕಾರ್ಯನಿರ್ವಹಿಸುತ್ತಿದ್ದರು. ಆ ಚಿತ್ರದ ಸಂಗೀತ ನಿರ್ದೇಶಕರಾಗಿ ಎಲ್. ವೈದ್ಯನಾಥನ್ ಕಾರ್ಯನಿರ್ವಹಿಸುತ್ತಿದ್ದರು. ಚಿತ್ರದ ಎರಡು ಹಾಡುಗಳನ್ನು ಹಾಡುವಂತೆ ಎಸ್ಪಿಬಿಗೆ ಕೋರಲಾಗಿತ್ತು. ಅದೇ ಚಿತ್ರದಲ್ಲಿ ಮತ್ತೊಂದು ಹಾಡನ್ನು ಪಿಬಿಶ್ರೀಗೆ ನೀಡಲಾಗಿತ್ತು. ಅಂದು ಹಾಡಿನ ರೆಕಾರ್ಡಿಂಗ್ ಚೆನ್ನೈ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ನಿಗದಿತ ಸಮಯಕ್ಕಿಂತ ಮೊದಲೇ ಪಿಬಿಶ್ರೀ ಸ್ಟುಡಿಯೋದಲ್ಲಿ ಬಂದು ಕಾಯುತ್ತಿದ್ದರು. ಆದರೆ ನಿರ್ದೇಶಕ ಕಂ ನಿರ್ಮಾಪಕ ಮಹಾಶಯ ಅವರನ್ನು ಕೇರ್ ಮಾಡಿರಲಿಲ್ಲ. ಅದೇ ಸಮಯಕ್ಕೆ ಎಸ್ಪಿಬಿ ಆಗಮನವಾಯಿತು. ಅವರಿಗೆ ಸಕಲ ಗೌರವದೊಂದಿಗೆ ಸ್ಟುಡಿಯೋಗೆ ಕರೆದೊಯ್ದು ಹಾಡಿನ ರೆಕಾರ್ಡಿಂಗ್ ಮಾಡಲಾಯಿತು. ಮೊದಲು ಹೇಳಿದ ಹಾಗೆ ಎರಡು ಹಾಡುಗಳ ರೆಕಾರ್ಡಿಂಗ್ ಮುಗಿದ ಕೂಡಲೇ ಬಂದ ನಿರ್ಮಾಪಕರು 'ಸರ್ ಈ ಹಾಡೂ ನೀವೇ ಹಾಡಿ' ಎಂದು ಬೇಡಿಕೊಂಡರು. 'ನೀವೇ ಹಾಡಿ ಅಂದ್ರೆ, ಅದು ಯಾರು ಹಾಡಬೇಕಿದ್ದ ಹಾಡು' ಎಂದು ಎಸ್ಪಿಬಿ ಪ್ರಶ್ನಿಸಿದರು. 'ಯಾರೂ ಇಲ್ಲ ನೀವೇ' ಎಂದು ನಿರ್ದೇಶಕರು ತಡಬಡಾಯಿಸುತ್ತಿದ್ದಾಗ ಅಲ್ಲಿಗೆ ಬಂದ ಸಂಗೀತ ನಿರ್ದೇಶಕ ಎಲ್. ವೈದ್ಯನಾಥನ್ 'ಇಲ್ಲ ಸರ್ ಅದು ಪಿಬಿಶ್ರೀಯವರು ಹಾಡಬೇಕಾದ ಹಾಡು. ಅದು ಅವರೇ ಹಾಡಿದರೇ ಚೆನ್ನ. ಹಾಗಾಗಿಯೇ ಅವರಿಗೆ ನೀಡಲಾಗಿತ್ತು' ಎಂದು ಹೇಳಿದರು. ಆ ಮಾತು ಕೇಳಿದ ಎಸ್ಪಿಬಿ ಕೂಡಲೇ 'ಆ ಹಾಡು ಪಿಬಿಶ್ರೀಯವರ ಬಳಿ ಹಾಡಿಸಿ ಇಲ್ಲವೇ ನನ್ನ ಗಾಯನದ ಹಾಡುಗಳನ್ನು ಬಳಸಿಕೊಳ್ಳಲು ನಿಮಗೆ ಅಧಿಕಾರವಿಲ್ಲ' ಎಂದು ಗುಡುಗಿದರು. ಇದರಿಂದ ಮೆತ್ತಗಾದ ನಿರ್ದೇಶಕರು ವಿಧಿ ಇಲ್ಲದೆ ಪಿಬಿಶ್ರೀಯವರಿಂದ ಹಾಡನ್ನು ಹಾಡಿಸಿದರು. ನಂತರ ಅದೇ ಹಾಡು ಕನ್ನಡಿಗರ ಮೆಚ್ಚುಗೆ ಗಳಿಸಿ ಜನಪ್ರಿಯವಾಗಿದ್ದು ಈಗ ಇತಿಹಾಸ.
ಒಬ್ಬ ಸಾಮಾನ್ಯ ಗಾಯಕರಾಗಿದ್ದ ಪಿ.ಬಿ. ಶ್ರೀನಿವಾಸ್ ಅವರು ಅಮೆರಿಕಾದ ಅಧ್ಯಕ್ಷರಿಂದ ಪ್ರಶಂಸೆಗೆ ಪಾತ್ರರಾಗಿದ್ದರು ಎಂಬ ವಿಚಾರ ಬಹುತೇಕ ಜನರಿಗೆ ತಿಳಿದಿರಲು ಸಾಧ್ಯವಿಲ್ಲ. 1969ರಲ್ಲಿ ಚಂದ್ರನ ಮೇಲೆ ಮಾನವ ಕಾಲಿಟ್ಟು ದಾಖಲೆ ನಿರ್ಮಿಸಿದ ವರ್ಷವದು. ಅಮೆರಿಕಾಗೆ ಅದೊಂದು ಮಹತ್ತರ ಸಾಧನೆಯಾಗಿತ್ತು. ಈ ಪ್ರಸಂಗದ ವೇಳೆ ಪಿಬಿಶ್ರೀಯವರು 'ಮ್ಯಾನ್ ಆನ್ ದಿ ಮೂನ್' ಎಂಬ ಒಂದು ಕವನವನ್ನು ಇಂಗ್ಲಿಷ್ನಲ್ಲಿ ಬರೆದು ಅದಕ್ಕೆ ರಾಗಸಂಯೋಜನೆ ಮತ್ತು ಸಂಗೀತ ಸಂಯೋಜನೆಯನ್ನು ತಾವೇ ಸ್ವತಃ ಮಾಡಿ ಅದರ ಗ್ರಾಮಾಫೋನ್ ಕೆಸೆಟ್ ಒಂದನ್ನು ಅಂದಿನ ಅಮೆರಿಕಾ ಅಧ್ಯಕ್ಷರಾಗಿದ್ದ ರಿಚರ್ಡ್ ನಿಕ್ಸನ್ ಅವರಿಗೆ ಕಳುಹಿಸಿದ್ದರು. ಇದನ್ನು ಕೇಳಿದ ನಿಕ್ಸನ್ ಅವರು ಪಿಬಿಶ್ರೀಯವರನ್ನು ಪ್ರಶಂಸಿಸಿ ಪತ್ರ ಬರೆದರು. ಅವರಲ್ಲಿ ಗಾಯಕರು ಮಾತ್ರವಲ್ಲದೆ ಕವಿ, ಸಂಗೀತ ನಿರ್ದೇಕರೂ ಇದ್ದರು ಎಂಬುದಕ್ಕೆ ಈ ಘಟನೆ ಒಂದು ಸಾಕ್ಷಿಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


