ಬಾಲಿವುಡ್

ಪ್ರತಿಭಟನಾಕಾರರು ಮಹಿಳೆಯರು, ಮಕ್ಕಳನ್ನು 'ಮಾನವ ಗುರಾಣಿ'ಗಳಾಗಿ ಬಳಸಿಕೊಂಡರೇ? ನಟಿ ಪ್ರಿಯಾಂಕಾ ಚೋಪ್ರಾ ತಾಯಿ ಪ್ರಶ್ನೆ; ಪತ್ರಕರ್ತೆಯ ತಿರುಗೇಟು! Video

ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಜುಲೈ 20 ರಂದು ನಡೆಸಿದ 'ಸಂಸದ್ ಚಲೋ' ವೇಳೆ ವರದಿ ಮಾಡುವಾಗ ತಮಗಾದ ಅನುಭವವನ್ನು ವಿವರಿಸುವ ವೀಡಿಯೊವೊಂದನ್ನು ಪತ್ರಕರ್ತೆಯೊಬ್ಬರು ಹಂಚಿಕೊಂಡಿದ್ದಾರೆ.

ಪ್ರತಿಭಟನಾಕಾರರು ಮಹಿಳೆಯರು, ಮಕ್ಕಳನ್ನು 'ಮಾನವ ಗುರಾಣಿ'ಗಳಾಗಿ ಬಳಸಿಕೊಂಡರೇ? ನಟಿ ಪ್ರಿಯಾಂಕಾ ಚೋಪ್ರಾ ತಾಯಿ ಪ್ರಶ್ನೆ; ಪತ್ರಕರ್ತೆಯ ತಿರುಗೇಟು! Video
ನಟಿ ಪ್ರಿಯಾಂಕಾ ಚೋಪ್ರಾ ತಾಯಿ ಹಾಗೂ ಪ್ರತಿಭಟನೆಯ ಚಿತ್ರ
Published On :

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಜುಲೈ 20 ರಂದು ಆಯೋಜಿಸಿದ್ದ 'ಸಂಸತ್ ಚಲೋ' ಕುರಿತಾದ ಪತ್ರಕರ್ತೆಯೊಬ್ಬರ ಪೋಸ್ಟ್‌ಗೆ ಪ್ರತಿಕ್ರಿಯೆಯ ನಂತರ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ತಾಯಿ ಡಾ. ಮಧು ಅಖೌರಿ ಚೋಪ್ರಾ ಆನ್ ಲೈನ್ ನಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಪೊಲೀಸ್ ಕ್ರಮದ ಕುರಿತು ಪತ್ರಕರ್ತೆ ನೀಡಿದ ವಿವರಣೆಗೆ ಪ್ರತಿಕ್ರಿಯಿಸಿರುವ ಡಾ. ಚೋಪ್ರಾ, ಮಹಿಳೆಯರು, ಮಕ್ಕಳನ್ನು "ಮಾನವ ಗುರಾಣಿ"ಗಳಾಗಿ ಬಳಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ, ಪತ್ರಕರ್ತೆಯು ಈ ಆರೋಪವನ್ನು ಬಲವಾಗಿ ನಿರಾಕರಿಸಿದ್ದು, ಘಟನಾ ಸ್ಥಳದಲ್ಲಿ ತಾವು ಕಂಡಿದ್ದನ್ನು ವಿವರಿಸುತ್ತಾ ದೀರ್ಘವಾದ ಪ್ರತಿಕ್ರಿಯೆನ್ನು ಪೋಸ್ಟ್ ಮಾಡಿದ್ದಾರೆ.

ಅಷ್ಟಕ್ಕೂ ಏನಿದು ವಿವಾದ ಈ ವಿಡಿಯೋ ನೋಡಿ! ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಜುಲೈ 20 ರಂದು ನಡೆಸಿದ 'ಸಂಸದ್ ಚಲೋ' ವೇಳೆ ವರದಿ ಮಾಡುವಾಗ ತಮಗಾದ ಅನುಭವವನ್ನು ವಿವರಿಸುವ ವೀಡಿಯೊವೊಂದನ್ನು ಪತ್ರಕರ್ತೆಯೊಬ್ಬರು ಹಂಚಿಕೊಂಡಿದ್ದಾರೆ. ತಾವು ಬೆಳಿಗ್ಗೆ 6 ಗಂಟೆಯಿಂದಲೇ ಪ್ರತಿಭಟನಾ ಸ್ಥಳದಲ್ಲಿದ್ದೆ ಎಂದು ಹೇಳಿದ ಅವರು, ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ನಾಟಕೀಯವಾಗಿ ಬದಲಾಯಿತು ಮತ್ತು ಪ್ರತಿಭಟನಾಕಾರರ ಮೇಲೆ ಹಲ್ಲೆ, ಅಶ್ರುವಾಯು ಪ್ರಯೋಗ ಹಾಗೂ ಹಲವರ ಬಂಧನದಂತಹ ಘಟನೆಗಳು ವರದಿಯಾದವು ಎಂದು ಅವರು ತಿಳಿಸಿದ್ದಾರೆ.

ಮಧ್ಯಾಹ್ನ 12 ಗಂಟೆಯವರೆಗೆ ನನ್ನ ಆ ನಿರ್ಧಾರದ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ ನಂತರ ಪರಿಸ್ಥಿತಿ ಬದಲಾಯಿತು. ಅಲ್ಲಿನ "ವಾತಾವರಣ ಬದಲಾಯಿತು" ಮತ್ತು "ಜನರ ಮೇಲೆ ಹಲ್ಲೆ, ಅಶ್ರುವಾಯು ಪ್ರಯೋಗ ಹಾಗೂ ಬಂಧನಗಳ" ಬಗ್ಗೆ ವರದಿಗಳು ಕೇಳಿಬರಲಾರಂಭಿಸಿದವು ಎಂದು ಅವರು ಹೇಳಿಕೊಂಡಿದ್ದಾರೆ. ಇಂಟರ್ನೆಟ್ ಸೇವೆಗಳಿಗೆ ಅಡಚಣೆ ಉಂಟಾಗಿದ್ದರಿಂದ, ತಮ್ಮ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯುವುದು ಪ್ರತಿಭಟನಾಕಾರರಿಗೆ ಕಷ್ಟಕರವಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ.

"ಇಂಟರ್ನೆಟ್ ಇಲ್ಲದಿದ್ದಾಗ ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರತಿಭಟನಾಕಾರರಿಗೆ ಯಾವುದೇ ದಾರಿ ಇರಲಿಲ್ಲ. ಕಾನಾಟ್ ಪ್ಲೇಸ್‌ನ ಸುತ್ತಮುತ್ತಲಿನ ಕೆಫೆಗಳಿಂದ ಸ್ವಲ್ಪಮಟ್ಟಿನ ಮಾಹಿತಿಯನ್ನು ಪಡೆಯಲು, ಆ ಪ್ರದೇಶದಿಂದ ಹೊರಹೋಗಿ ಮತ್ತೆ ವಾಪಸ್ ಬರುವಂತಾಗುತ್ತಿತ್ತು. ಇಲ್ಲದಿದ್ದರೆ ಬ್ಯಾರಿಕೇಡ್‌ಗಳ ನಡುವೆ ಬಂಧಿಯಾಗುತ್ತಿದ್ದರು. ಒಮ್ಮೆ ಬ್ಯಾರಿಕೇಡ್ ಹಾಕಿದ ಪ್ರದೇಶದೊಳಗೆ ಪ್ರವೇಶಿಸಿದರೆ, ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಹೊರಬಂದರೆ, ಮತ್ತೆ ಒಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಿಯಾಂಕಾ ಚೋಪ್ರಾ ತಾಯಿ ಪ್ರಶ್ನೆ ಏನು? ಪ್ರತಿಭಟನೆಯಲ್ಲಿ ಭಾಗವಹಿಸಿದವರಲ್ಲಿ ಅನೇಕರು ಹದಿಹರೆಯದವರಾಗಿದ್ದು, ಅವರು "ಸುರಕ್ಷಿತ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಒತ್ತಾಯಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯಿಸಿದ ಡಾ. ಮಧು ಚೋಪ್ರಾ, "ಈ ಪ್ರತಿಭಟನೆಯಲ್ಲಿ 'ಮಹಿಳೆಯರು ಮತ್ತು ಮಕ್ಕಳನ್ನು' ಮಾನವ ಗುರಾಣಿಯನ್ನಾಗಿ ಬಳಸಲಾಗಿದೆಯೇ? ನಿಮ್ಮ ವರದಿಗಾರಿಕೆಯಿಂದ ಆಗುತ್ತಿದ್ದ ಪರಿಣಾಮಗಳೇನು ಎಂಬುದು ನಿಮಗೆ ಅರಿವಾಗಲಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.

ನಿರೀಕ್ಷೆಯಂತೆಯೇ, ಇದು ವ್ಯಾಪಕ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಮಹಿಳೆಯರು, ಮಕ್ಕಳನ್ನು "ಮಾನವ ಗುರಾಣಿ"ಗಳಾಗಿ ಬಳಸಲಾಗಿದೆ ಎಂಬ ಆರೋಪವನ್ನು ಪತ್ರಕರ್ತೆ ಬಲವಾಗಿ ನಿರಾಕರಿಸಿದ್ದಾರೆ. "ಖಂಡಿತವಾಗಿಯೂ ಇಲ್ಲ, ಮೇಡಂ. ನಾನೊಬ್ಬ ಸ್ವತಂತ್ರ ಪತ್ರಕರ್ತೆ. ಸ್ಥಳದಲ್ಲಿ ಖುದ್ದಾಗಿ ವರದಿ ಮಾಡುವಾಗ ನಾನು ಕಂಡುಕೊಂಡ ಸತ್ಯವೇನೆಂದರೆ, ಅತಿಯಾದ ಬ್ಯಾರಿಕೇಡ್‌ಗಳಿಂದಾಗಿ ತೆರಳಲು ಸಾಧ್ಯವಿಲ್ಲದಂತಾಗಿತ್ತು. ಅತ್ಯಂತ ಕಡಿಮೆ ಜಾಗವಿದ್ದಾಗ ಪ್ರತಿಭಟನಾಕಾರರು ಚದುರಿಹೋದರು. ಇದರಿಂದಾಗಿ ಪರಿಸ್ಥಿತಿ ಅಪಾಯಕಾರಿ ಮಟ್ಟದಲ್ಲಿ ನೂಕುನುಗ್ಗಲಿಗೆ (stampede) ತಿರುಗುವಂತಾಯಿತು. ಜನಸಂದಣಿ ಹೆಚ್ಚಾದಂತೆ ಮತ್ತು ಪರಿಸ್ಥಿತಿ ಉಲ್ಬಣಗೊಂಡಾಗ, ಕೆಲ ಮಹಿಳೆಯರು ಸಹಜವಾಗಿಯೇ ಇತರರನ್ನು ರಕ್ಷಿಸಲು ಮುಂದಾದರು ಎಂದು ಅವರು ಪ್ರತಿಪಾದಿಸಿದರು.

ಪ್ರತಿಭಟನಾ ಸ್ಥಳದಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದರು:

"ಆಕ್ರಮಣಗಳು ಆರಂಭವಾದಾಗ ಕೆಲ ಮಹಿಳೆಯರು ಬ್ಯಾರಿಕೇಡ್ ನಿಂದ ಜಂಪ್ ಮಾಡಿ ಇತರರನ್ನು ರಕ್ಷಿಸಲು ಧಾವಿಸಿದರು. ಆದರೆ ಯಾರನ್ನೂ 'ಗುರಾಣಿ'ಯಾಗಿ ಬಳಸಿಕೊಳ್ಳಲಾಗಿಲ್ಲ. ತಮ್ಮನ್ನೂ ಒಳಗೊಂಡಂತೆ ಅನೇಕ ಮಹಿಳೆಯರು ಪ್ರತಿಭಟನಾಕಾರರ ಗುಂಪಿನ ನಡುವೆ "ಅತ್ಯಂತ ಸುರಕ್ಷಿತ" ಭಾವನೆ ಹೊಂದಿದ್ದರು. ಮಕ್ಕಳೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಪೋಷಕರು, ಅವರನ್ನು ಗುರಾಣಿಗಳಾಗಿ ಬಳಸುವ ಉದ್ದೇಶದಿಂದ ಅಲ್ಲಿಗೆ ಬಂದಿರಲಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.